5 ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸುತ್ತೇನೆ: ಸಿದ್ದರಾಮಯ್ಯ

10 months ago

ದೆಹಲಿ: ಅಧಿಕಾರ ಹಸ್ತಾಂತರ ಕುರಿತು ರಾಜ್ಯ ಕಾಂಗ್ರೆಸ್ಸಿನಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಆಗಿರುವ ತಾವು 5 ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸುತ್ತೇನೆ. ಅಷ್ಟೇ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಯನ್ನು ನನ್ನ ನೇತೃತ್ವದಲ್ಲಿ ಎದುರಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಒಬ್ಬಿಬ್ಬರು ಶಾಸಕರ ಬೆಂಬಲ ನೀಡಿರಬಹುದು. ಹಾಗೆಂದ ಮಾತ್ರಕ್ಕೆ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದರು.

ನಾನು 5 ವರ್ಷಗಳ ಅವಧಿ ಮುಖ್ಯಮಂತ್ರಿಯಾಗಿ ಪೂರ್ಣಗೊಳಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಜುಲೈ ಎರಡರಂದು ನಾನು ಈ ಹೇಳಿಕೆ ನೀಡಿದಾಗ ಡಿ.ಕೆ.ಶಿವಕುಮಾರ್‌ ಕೂಡ ಜೊತೆಯಲ್ಲೇ ಇದ್ದರು. ಮುಂದಿನ 2028ರ ವಿಧಾನಸಭೆ ಚುನಾವಣೆಗೂ ನನ್ನದೇ ನಾಯಕತ್ವ ಇರುತ್ತದೆ ಎಂದರು.

ಡಿ.ಕೆ.ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ಶ್ರಮ ವಹಿಸಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರೇ ಆ ಸ್ಥಾನದಲ್ಲಿದ್ದರೂ ಅದೇ ರೀತಿ ಕೆಲಸ ಮಾಡಬೇಕು. ಡಿ.ಕೆ.ಶಿವಕುಮಾರ್‌ ಕೂಡ ತಮ್ಮ ಕರ್ತವ್ಯ ಮಾಡಿದ್ದಾರೆ ಎಂದರು.

ಕಾಂಗ್ರೆಸ್‌‍ ಶಾಸಕರ ಜೊತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಭೆ ನಡೆಸಿದ ವೇಳೆ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಶ್ನೆ ಕೇಳಲಾಗಿಲ್ಲ, ಯಾವ ಶಾಸಕರೂ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ಹೇಳಿಲ್ಲ. ಕೆಲ ಶಾಸಕರು ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಆದರೆ ಅದು ಹೆಚ್ಚಿನ ಸಂಖ್ಯೆಯಲ್ಲಿಲ್ಲ ಎಂದರು.

ಎರಡೂವರೆ ವರ್ಷಗಳ ಅವಧಿಗೆ ಸೀಮಿತವಾಗಿ ಅಧಿಕಾರ ಹಂಚಿಕೆಯಾಗಿದೆ ಎಂಬುದು ಸರಿಯಲ್ಲ. ಹೈಕಮಾಂಡ್‌ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು, ಡಿ.ಕೆ.ಶಿವಕುಮಾರ್‌ ಮತ್ತು ಎಲ್ಲರೂ ಅದನ್ನು ಅನುಸರಿಸುತ್ತೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಈ ವಿಚಾರವಾಗಿ ತಮ್ಮ ಬಳಿ ಏನನ್ನೂ ಹೇಳಿಲ್ಲ ಎಂದರು.

ಸುರ್ಜೇವಾಲ ಸಭೆ ನಡೆಸಿದ ವೇಳೆ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳು ಯಾವ ರೀತಿ ಅನುಷ್ಠಾನಗೊಂಡಿವೆ, ಏನೆಲ್ಲಾ ಅಭಿವೃದ್ಧಿ ಕೆಲಸಗಳಾಗಿವೆ, ಸರ್ಕಾರದಿಂದ ಮತ್ಯಾವ ರೀತಿಯ ಕೆಲಸಗಳಾಗಬೇಕು ಎಂಬ ಪ್ರಶ್ನೆಗಳನ್ನಷ್ಟೇ ಕೇಳಿದ್ದಾರೆ. ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಹೀಗಾಗಿ ತಾವು ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ. ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ ಎಂದರು.

ಸದ್ಯಕ್ಕೆ ಮಂತ್ರಿಮಂಡಲ ಪುನರ್ ರಚನೆ ಅಥವಾ ವಿಸ್ತರಣೆಯ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಆ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿಲ್ಲ. ಇದಕ್ಕೆ ಹಣಕಾಸಿನ ಕೊರತೆಯೂ ಇಲ್ಲ. ಒಂದೆರಡು ಪ್ರಕರಣಗಳಲ್ಲಿ ವೇತನ ಪಾವತಿಯಾಗಿಲ್ಲ ಎಂದಾಕ್ಷಣ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರ್ಥವಲ್ಲ ಎಂದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂಬುದು ಸರಿಯಲ್ಲ. ಬಜೆಟ್‌ನಲ್ಲಿ ಘೋಷಿಸಿದ ಎಲ್ಲಾ ಕಾಮಗಾರಿಗಳು, ಯೋಜನೆಗಳು ಜಾರಿಯಲ್ಲಿವೆ. ಶಾಸಕರು ವಿಶೇಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆ ವಿಚಾರವಾಗಿ ಚರ್ಚೆ ನಡೆಯುತ್ತಿವೆ ಎಂದರು.

ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಸಂಪೂರ್ಣವಾಗಿ ಕರ್ನಾಟಕ ಸರ್ಕಾರದ ಶಾಸಕರು, ಸಚಿವರನ್ನು ಗುರಿಯಾಗಿಸಿಕೊಂಡೇ ಬಳಕೆ ಮಾಡಿಕೊಳ್ಳುತ್ತಿದೆ. ಗೃಹಸಚಿವ ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಯಾಯಿತು. ಈಗ ಶಾಸಕರುಗಳ ಮನೆ ಮೇಲೆ ದಾಳಿಯಾಗಿದೆ. ನನ್ನನ್ನೂ ಸೇರಿದಂತೆ ಎಲ್ಲರ ವಿರುದ್ಧವೂ ಇ.ಡಿ. ನಿಗಾ ಇರಿಸಿದೆ ಎಂದರು.

ಬಿಜೆಪಿಯ ವಿರುದ್ಧ ಶೇ.40 ರಷ್ಟು ಕಮಿಷನ್‌ ಆರೋಪ ಮಾಡಿದ್ದು ನಾವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು. ನಾವು ಅದನ್ನು ಪುನರುಚ್ಚರಿಸಿದ್ದೇವೆ.
ನಮ್ಮ ಸರ್ಕಾರದ ವಿರುದ್ಧ ಶೇ.60 ರಷ್ಟು ಕಮಿಷನ್‌ ಆರೋಪವನ್ನು ಯಾರೂ ಮಾಡಿಲ್ಲ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್‌‍ ಸರ್ಕಾರದ ಲೋಪವಾಗಲಿ, ವೈಫಲ್ಯವಾಗಲೀ ಇಲ್ಲ. ಆರ್‌ಸಿಬಿ ಮತ್ತು ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದ್ದವು. ಅವರ ಮನವಿಯ ಮೇರೆಗೆ ವಿಧಾನಸೌಧದ ಬಳಿ ಅಭಿನಂದನಾ ಸಮಾರಂಭ ನಡೆಸಲಾಯಿತು. ಸಂಜೆ 4.15 ಕ್ಕೆ ಕಾಲ್ತುಳಿತವಾಗಿದೆ. ಈ ವಿಚಾರವನ್ನು ಪೊಲೀಸ್‌‍ ಅಧಿಕಾರಿಗಳು ನನಗೆ ಮಾಹಿತಿ ನೀಡಲಿಲ್ಲ ಮತ್ತು ಸರಿಯಾದ ಭದ್ರತೆ ಒದಗಿಸಲಿಲ್ಲ. ಈ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದರು.

ರಾಜ್ಯದಲ್ಲಿ ಜಾತಿ ಜನಗಣತಿಯ 2ನೇ ಸಮೀಕ್ಷೆಯನ್ನು ಮೂರ್ನಾಲ್ಕು ತಿಂಗಳಲ್ಲೇ ಪೂರ್ಣಗೊಳಿಸಲಾಗುವುದು ಎಂದರು.

Leave a Reply