ವಾಲ್ಮೀಕಿ ಸಮುದಾಯಕ್ಕೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಬೇಕು

2 years ago

ಬೆಂಗಳೂರು: ವಾಲ್ಮೀಕಿ ಸಮುದಾಯದಲ್ಲಿ ಅತಿ ಹೆಚ್ಚು ಶಾಸಕರು, ಸಂಸದರಿದ್ದರೂ ಒಬ್ಬರೂ ಸಮುದಾಯದ ಶಿಕ್ಷಣದ ಕಡೆಗೆ ಗಮನಹರಿಸುತ್ತಿಲ್ಲ. ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಹಾಗೂ ಒಂದು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬರುವ ಬಜೆಟ್ ನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ವಾಲ್ಮೀಕಿ ಸಮುದಾಯ ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಇಂದು ಶಾಸಕರ ಭವನದಲ್ಲಿ ವಿಶೇಷ ಸಭೆ ನಡೆಸಿತು. ಈ ಸಭೆಯಲ್ಲಿ ಬುದ್ದಿಜೀವಿಗಳು, ವಿವಿಧ ಪ್ರಾಧ್ಯಾಪಕರು ಸಾಹಿತಿಗಳು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಸಭೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್. ಉಗ್ರಪ್ಪ, ಜಾತಿ ಸಮೀಕ್ಷೆ ಬಿಡುಗಡೆ ದಿನೇ ದಿನೆ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ತಕ್ಷಣ ಜಾತಿ ಸಮೀಕ್ಷೆ ಬಿಡುಗಡೆ ಮಾಡಬೇಕು. ಆ ಮೂಲಕ ಮುಂದಿನ ಬಜೆಟ್ ನಲ್ಲಿ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಬೇಕು. ವಾಲ್ಮೀಕಿ ಸಮುದಾಯ ಲೇಖನಿ ಸಂಸ್ಕೃತಿಯ ಸಮುದಾಯ. ಅನೇಕ ರಾಜಮನೆತನಗಳನ್ನು ಕಟ್ಟಿ ಬೆಳೆಸಿದವರು. ಆದರೆ ಈಗ ಅನೇಕ ವಿಚಾರಗಳಲ್ಲಿ ಹಿಂದುಳಿದಿದೆ. ಇದಕ್ಕೆ ಜನಪ್ರತಿನಿಧಿಗಳೂ ಕಾರಣ. ಆದರೆ ಇನ್ನು ಹಾಗಾಗಬಾರದು. ರಾಮಾಯಣದ ಮೂಲಕ ಇಡೀ ನಾಡಿಗೆ ಸಂಸ್ಕೃತಿ, ಸಂಸ್ಕಾರ ನೀಡಿದವರು ನಾವು. ನಮ್ಮ ವಾಲ್ಮೀಕಿ ಸಮುದಾಯ ಉತ್ತರ ಭಾರತದಲ್ಲಿ ಪರಿಶಿಷ್ಟ ಜಾತಿಯಲ್ಲಿದೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್ಟಿ ಗೆ ಸೇರಿದೆ. ತೆಲಂಗಾಣ, ಆಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿದೆ. ಆದರೆ ಕರ್ನಾಟಕದಲ್ಲಿ ಈಗ ನಾಯಕ ಜನಂಗದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳು ಹೆಚ್ಚಾಗಿವೆ ಎಂದರು.

ಇದಕ್ಕೂ ಮುನ್ನ ನಡೆದ ಸಮುದಾಯದ ಸಭೆಯಲ್ಲಿ ರಾಜಕಾರಣಿಗಳು ಹಾಗೂ ರಾಜನಹಳ್ಳಿ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸನ್ನಾನಂದಪುರಿ ಸ್ವಾಮೀಜಿ ಕೇವಲ ಜನರನ್ನು ದಿಕ್ಕುತಪ್ಪಿಸಿ ಜಾತ್ರಾ ಸಂಸ್ಕೃತಿ ಬಿತ್ತುತ್ತಿದ್ದಾರೆ. ಸಮಾಜದ ಏಳಿಗೆಯ ಬಗ್ಗೆ ಗಮನಹರಿಸುತ್ತಿಲ್ಲ. ರಾಜನಹಳ್ಳಿ ಮಠದಲ್ಲಿ ಇದ್ದ ಕಾಲೇಜುಗಳನ್ನೂ ಮುಚ್ಚಿಕೊಂಡಿದ್ದಾರೆ. ರಾಜನಹಳ್ಳಿ ಮಠದಲ್ಲಿ ಇರುವ ಬೆರಳೆಣಿಕೆಯ ಮಕ್ಕಳಿಗೆ ಸರಿಯಾದ ಶಿಕ್ಷಣ ವ್ಯವಸ್ಥೆಯಿಲ್ಲ. ಅವರಿಗೆ ಮೂಲ ಸೌಲಭ್ಯಗಳನ್ನೂ ಒದಗಿಸುತ್ತಿಲ್ಲ. ಕೇವಲ ಹಣ ಮಾಡುವ ಖಯಾಲಿ ಶುರು ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಅವರ ವಿರುದ್ಧ ಧ್ವನಿ ಎತ್ತಿದರೆ ಯಾರು ಪ್ರಶ್ನಿಸುವರೋ ಅಂತಹವರ ವಿರುದ್ಧ ದೂರು ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಸ್ವಾಮೀಜಿಯ ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಸರ್ಕಾರದಲ್ಲಿ SCP / TSP ಹಣವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದರ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ತೀರಾ ಅಪಾಯಕಾರಿ ಸ್ಥಿತಿ. ಆದ್ದರಿಂದ ಮುಂದಿನ ಬಜೆಟ್ ನಲ್ಲು ವಾಲ್ಮೀಕಿ ಸಮುದಾಯದ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಗಮನಹರಿಸಬೇಕು. ಬೆಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರ ಸ್ಥಾಪಿಸಿ ಮಕ್ಕಳನ್ನು ಉತ್ತೇಜಿಸಬೇಕು. ಸ್ವಸಹಾಯ ಸಂಘಗಳು ಅಥವಾ ಸೊಸೈಟಿಯ ಮೂಲಕ ಸಮುದಾಯದ ಬಡ ಜನರಿಗೆ ಆರ್ಥಿಕ ಸಹಾಯ ಮಾಡಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ಸಭೆಯಲ್ಲಿ ಕೈಗೊಂಡ ಆರು ನಿರ್ಣಯಗಳನ್ನು ಮಾಧ್ಯಮಗಳಿಗೆ ವಿ.ಎಸ್. ಉಗ್ರಪ್ಪ ತಿಳಿಸಿದರು. ಈ ಎಲ್ಲ ನಿರ್ಣಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಸುವ ಕೆಲಸ ಮಾಡಲಾಗುತ್ತದೆ. ವಾಲ್ಮೀಕಿ ಸಮುದಾಯದ ಚಿಂತಕರ ಒಂದು ನಿಯೋಗದ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಎಲ್ಲ ಬೇಡಿಕೆಗಳನ್ನು ಮನವರಿಕೆ ಮಾಡಿಕೊಡಲಾಗುವುದಯ ಎಂದರು.

ಗಣಿಧಣಿಗಳ ಬಗ್ಗೆ ಹಿಂದೆ ನಾನೇ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದೆ. ಈಗ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಇಬ್ಬರೂ ಒಬ್ಬರ ಬಣ್ಣವನ್ನು ಇನ್ನೊಬ್ಬರು ಬಯಲು ಮಾಡುತ್ತಿದ್ದಾರೆ.‌ ಇದು ಒಳ್ಳೆಯ ಬೆಳವಣಿಗೆ. ಜನತೆಗೆ ಸತ್ಯ ಗೊತ್ತಾಗುತ್ತಿದೆ. ಆದರೆ ಇದು ಸಂಪೂರ್ಣ ಬಿಜೆಪಿ ಒಳಗಿನ ಸಮಸ್ಯೆ. ಒಳಗಿನ ಜಗಳ ಈಗ ಹೊರಗೆ ಬಿದ್ದಿದೆ. ಅದರ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಅಗತ್ಯವಿಲ್ಲ ಎಂದು ಉಗ್ರಪ್ಪನವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಮಾನ ಮನಸ್ಕರ ಸಭೆಯಲ್ಲಿ ವಾಲ್ಮೀಕಿ ಮಹಾಸಭಾ ಮಾಜಿ ಅಧ್ಯಕ್ಷ ಎಂ. ನರಸಿಂಹಯ್ಯ, ರಾಜ್ಯದ ವಾಲ್ಮೀಕಿ ಸಮುದಾಯದ ವಿವಿಧ ಮಠಗಳ ಮಠಾಧೀಶರು, ವಿವಿಧ ಸಂಘಟನೆಗಳು ಮುಖಂಡರು, ಬುದ್ಧಿಜೀವಿಗಳು, ಸಾಹಿತಿಗಳು ಹಾಜರಿದ್ದರು.

ವಾಲ್ಮೀಕಿ ಸಮುದಾಯದ ಸಭೆಯ ನಿರ್ಣಯಗಳು

1)  ಜಾತಿ ಸಮೀಕ್ಷೆ ವರದಿ ತಕ್ಷಣ ಬಿಡುಗಡೆ ಮಾಡಬೇಕು.
2) ನಕಲಿ ಜಾತಿ ಪ್ರಮಾಣ ಪತ್ರ ಹಾವಳಿಗೆ ಕಡಿವಾಣ ಹಾಕಬೇಕು. ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
3) ಎಸ್ಸಿ.ಎಸ್ಟಿ. ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ SCP/TSP ಹಣ ಮೀಸಲಿಡಬೇಕು. ಆ ಹಣವನ್ನು ಆಯಾ ಸಮುದಾಯಗಳಿಗೆ ಮಾತ್ರ ಬಳಸಬೇಕು.
4) ಪ್ರತಿವರ್ಷ SCP/TSPಯಲ್ಲಿ 1000 ಕೋಟಿ ರೂ. ಮೀಸಲಿಡಬೇಕು. ಮಹರ್ಷಿ ವಾಲ್ಮೀಕಿ ವಿವಿ ಸ್ಥಾಪಿಸಬೇಕು. ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು.
5) ಎಸ್.ಟಿ‌. ಜನಾಂಗ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಐಎಡಿಬಿಯಿಂದ ವಾಲ್ಮೀಕಿ ಕೈಗಾರಿಕಾ ಪ್ರದೇಶ ನಿರ್ಮಿಸಿ, 50 ಜನಗಳಿಗೆ ತಲಾ 2 ಎಕರೆ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡಿ, 10 ಕೋಟಿ ರೂ. ಶ್ಯೂರಿಟಿಯೊಂದಿಗೆ ನೀಡಬೇಕು.
6) ಎಸ್ಟಿ ಸಮುದಾಯದ ಜನರಿಗೆ ಕನಿಷ್ಠ 50 ಕ್ಷೇತ್ರದಲ್ಲಿ 100 ಎಕರೆ ಕೃಷಿ ಭೂಮಿ ನೀಡಿ, ವಾಲ್ಮೀಕಿ ಕೃಷಿ ಕೇಂದ್ರ ಎಂದು ನಾಮಕರಣ ಮಾಡಬೇಕು.

Leave a Reply