ಸ್ಥಳೀಯರಿಗೆ ಉದ್ಯೋಗವಕಾಶ ಒದಗಿಸುವ ಕೋರ್ಸ್ ಗಳಿಗೆ ಆದ್ಯತೆ ನೀಡಿ: ಡಾ.ಶರಣ ಪ್ರಕಾಶ ಪಾಟೀಲ

1 year ago

ಕಾರವಾರ: ಜಿಲ್ಲೆಯ ಯುವ ಜನತೆಗೆ ಸ್ಥಳೀಯವಾಗಿ ಉದ್ಯೋಗ ದೊರೆಯಲು ಅಗತ್ಯವಿರುವ ಕೋರ್ಸ್ ಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಹಾಗೂ ಪಠ್ಯಕ್ರಮದಲ್ಲಿ ಈ ಕೋರ್ಸ್ಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ, ಕೌಶಲ್ಯಾಭಿವವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸೀಬರ್ಡ್ ನೌಕಾನೆಲೆ, ಕೈಗಾ ಸೇರಿದಂತೆ ಪ್ರಮುಖ ಉದ್ಯಮಗಳಲ್ಲಿ ಉದ್ಯೋಗ ಪಡೆಯಲು ಅಗತ್ಯವಿರುವ ಕೋರ್ಸ್ಗಳ ಬಗ್ಗೆ ಇಲ್ಲಿನ ಯುವ ಜನತೆಗೆ ತರಬೇತಿ ನೀಡುವುದರ ಮೂಲಕ ಅವರು ಸ್ಥಳೀಯವಾಗಿ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಐಟಿಐ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿದ ಸಚಿವರು, ಕಾಲೇಜುಗಳಲ್ಲಿ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ ಎಂದರು.

ಜಿಲ್ಲೆಯಲ್ಲಿ ಎನ್.ಆರ್.ಎಲ್.ಎಂ ಕಾರ್ಯಕ್ರಮಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದ ಅವರು ಡಮಾಮಿ ಸಿದ್ದಿ ಟೂರಿಸಂ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಎನ್.ಆರ್.ಎಲ್.ಎಂ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸುವಂತೆ ತಿಳಿಸಿದರು.

ಮೈಕ್ರೋ ಫೈನಾನ್ಸ್ ಹಾವಳಿ ತಡೆಯುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಫೈನಾನ್ಸ್ ಗಳು ಆರ್.ಬಿ.ಐ. ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಲ್ಲಿ ನಿಯಮಾನುಸಾರ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಸತೀಶ ಕೆ. ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply