ಸ್ಯಾಮ್ ಪಿತ್ರೋಡಾ ವಿರುದ್ಧ ಭೂ ಕಬಳಿಕೆ ಆರೋಪ

1 year ago

ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಪ್ತ ಹಾಗೂ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ.

ಸ್ಯಾಮ್ ಪಿತ್ರೋಡಾ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿರುವ ಬಿಜೆಪಿ ನಾಯಕ ಎನ್ ಆರ್ ರಮೇಶ್, ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿ 12.35 ಎಕರೆ ಜಮೀನನ್ನು ಪಿತ್ರೋಡಾ ಅವರಿಗೆ 2001 ರಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ಭೂಮಿಯನ್ನು ಸ್ಯಾಮ್ ಪಿತ್ರೋಡಾ ಕಬಳಿಸಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ನೇತೃತ್ವದ ಸಂಸ್ಥೆಗೆ ಔಷಧೀಯ ಗಿಡಮೂಲಿಕೆಗಳನ್ನು ಬೆಳೆಸುವ ಉದ್ದೇಶದಿಂದ ಅಂದಿನ ಸರ್ಕಾರ 10 ವರ್ಷಗಳ ಅವಧಿಗೆ ಈ ಜಮೀನನ್ನು ಗುತ್ತಿಗೆಗೆ ನೀಡಿತ್ತು. 2011ರಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡರೂ ಪಿತ್ರೋಡಾ ಜಮೀನನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಜಮೀನಿನಲ್ಲಿ ಬೆಳೆದ ಗಿಡಮೂಲಿಕೆಗಳಿಂದ ಪಿತ್ರೋಡಾ ಅವರಿಗೆ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ ಎಂದು ಹೇಳಲಾಗಿದೆ. ಕಳೆದ 15 ವರ್ಷಗಳಿಂದ ಮೀಸಲು ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪಿತ್ರೋಡಾ ಅವರು ಸ್ವಾಧೀನ ಪಡಿಸಿಕೊಂಡಿದ್ದಾರೆ ಮತ್ತು ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯ 400 ಕೋಟಿ ರೂಪಾಯಿಗೂ ಹೆಚ್ಚು ಎಂದು ರಮೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಅಕ್ರಮಕ್ಕೆ ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳು ಮತ್ತು ಕಾಂಗ್ರೆಸ್ ನಾಯಕರು ಕುಮ್ಮಕ್ಕು ನೀಡಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ಮಾಡಬೇಕು ಹಾಗೆಯೇ ಅವರಿಗೆ ನೀಡಲಾಗಿರುವ ಜಮೀನು, ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

Leave a Reply