ಕೆಪಿಎಸ್ ಸಿಗೆ ಸಾವಿರಾರು ಕರವೇ ಕಾರ್ಯಕರ್ತರಿಂದ ಮುತ್ತಿಗೆಗೆ ತೀರ್ಮಾನ: ಟಿ.ಎ.ನಾರಾಯಣಗೌಡ

1 year ago

ಇಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮುಖಂಡರು, ಬೆಂಗಳೂರು ನಗರ ಪದಾಧಿಕಾರಿಗಳ ತುರ್ತು ಸಭೆ ಇಂದು ನಡೆಯಿತು. ಬಹಳ ಮುಖ್ಯವಾಗಿ ಕೆಪಿಎಸ್ ಸಿ ನಡೆಸಿದ  ಕೆಎಎಸ್ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಕರವೇ ಸಂಘಟಿಸಿರುವ ಚಳವಳಿಯನ್ನು ತೀವ್ರಗೊಳಿಸುವ ಕುರಿತು ಚರ್ಚೆ ನಡೆಯಿತು.

ಫೆ.18ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಹೋರಾಟ ನಡೆಸಿದ್ದೆವು. ಚಳವಳಿಯ ಸಂದರ್ಭದಲ್ಲಿ ಮಾನ್ಯ‌ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕರವೇ ನಿಯೋಗ ಭೇಟಿ ನೀಡಿ ಆಗಿರುವ ಅನ್ಯಾಯವನ್ನು ಬಿಡಿಸಿ ಹೇಳಿತ್ತು. ಈ ಸಂದರ್ಭದಲ್ಲಿ ನಮ್ಮ ಚಳವಳಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಕೆಪಿಎಸ್ ಸಿ ಅಧ್ಯಕ್ಷರ ಮತ್ತು ಅಧಿಕಾರಿಗಳನ್ನು ಕರೆಯಿಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು.

ಆದರೆ ನಾಲ್ಕು ದಿನಗಳು ಕಳೆದರೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವ ಕುರಿತು ಸ್ವತಃ ಮುಖ್ಯಮಂತ್ರಿಗಳಾಗಲೀ, ಕೆಪಿಎಸ್ ಸಿಯಾಗಲೇ ಒಂದೇ ಒಂದು ಮಾತು ಹೇಳಿಲ್ಲ. ಕನ್ನಡ ಮಾಧ್ಯಮ‌ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ಯಾರೂ ಸ್ಪಂದಿಸುವ ಹಾಗೆ ಕಾಣುತ್ತಿಲ್ಲ.

ನಮ್ಮ ಶಾಂತಿಯುತ ಹೋರಾಟಕ್ಕೆ ಸರ್ಕಾರ, ಕೆಪಿಎಸ್ ಸಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗಿದೆ. ಚಳವಳಿಯ ಸ್ವರೂಪದ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಚರ್ಚೆಯ ನಂತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಕರವೇ ಕಾರ್ಯಕರ್ತರು ಮತ್ತು  ಸಾವಿರಾರು ವಿದ್ಯಾರ್ಥಿಗಳು ಕೆ.ಪಿ.ಎಸ್.ಸಿ. ಕಚೇರಿಗೆ‌ ಮುತ್ತಿಗೆ ಹಾಕುವ ನಿರ್ಧಾರ  ಕೈಗೊಳ್ಳಲಾಯಿತು.  ಸರ್ಕಾರ ಮತ್ತು ಕೆಪಿಎಸ್ ಸಿ ನಮ್ಮ ಮುಂದಿನ ಹೋರಾಟಗಳ ಆಗುಹೋಗುಗಳಿಗೆ ಜವಾಬ್ದಾರಿ ಹೊರಬೇಕು. ನಾವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ.

ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ‌ ವೇದಿಕೆ

Leave a Reply