2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆರ್.ಸಹನಾ ಹೇಳಿಕೆ
ಎರಡು ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಚಿತ್ರದುರ್ಗ: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತು ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾ ನ್ಯಾಯಾಲಯದ ಜೆಎಂಎಫ್ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆರ್.ಸಹನ ಕರೆ ನೀಡಿದರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನುಷ್ಠಾನದಲ್ಲಿ ಭಾಗೀದಾರ ಇಲಾಖೆಗಳ ಪಾತ್ರದ ಕುರಿತು ಎರಡು ದಿನಗಳ ಓರಿಯಂಟೇಷನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಸಾಕಷ್ಟು ಪ್ರಕರಣಗಳು ವರದಿಯಾಗುವುದಿಲ್ಲ. ಕಾರಣ ಈ ಕಾಯ್ದೆ ಕುರಿತು ಮಹಿಳೆಯರಿಗೆ ಹೆಚ್ಚಿನ ಅರಿವು ಇರುವುದಿಲ್ಲ. ಹಾಗಾಗಿ ನಾವೆಲ್ಲರೂ ಸೇರಿ ಅರಿವು ಮೂಡಿಸಿದಾಗ ಮಾತ್ರ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಿದೆ ಎಂದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ ಸಮಿತಿ ಅಧ್ಯಕ್ಷೆ ಹಾಗೂ ವಕೀಲೆ ಡಿ.ಕೆ. ಶೀಲಾ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ಜಾರಿಗೆ ಬಂದಿದೆ. ಮಹಿಳೆ ಯಾವುದೇ ಧರ್ಮಕ್ಕೆ ಸೇರಿರಲಿ ಅಥವಾ ಯಾವುದೇ ಸಾಮಾಜಿಕ ಹಿನ್ನಲೆ ಹೊಂದಿರಲಿ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯ ಸಂರಕ್ಷಣೆ ಕಾಯ್ದೆ ಆಕೆಗೆ ಅನ್ವಯವಾಗಲಿದೆ ಎಂದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದರೆ ಪ್ರಕರಣವನ್ನು 60 ದಿನದೊಳಗೆ ಮುಕ್ತಾಯಗೊಳಿಸಬೇಕು. ಮಹಿಳೆಯರ ಮೇಲಿನ ದೈಹಿಕ ಹಲ್ಲೆ, ನಿಂದನೆ, ಮಾನಸಿಕ, ಭಾವನಾತ್ಮಕ ಹಾಗೂ ಕೌಟುಂಬಿಕ ಹಿಂಸೆಗಳು ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದ ಅವರು, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆಯ ಬಲ ಇದ್ದರೂ ಹಿಂಸೆಯ ಪ್ರಕರಣಗಳು ಕಡಿಮೆಯಾಗಿಲ್ಲ ಎಂದರು.
ಮಹಿಳೆಯರಿಗೆ ಮನೆಯ ಒಳಗೆಯೇ ಗೌರವ, ರಕ್ಷಣೆ ಇಲ್ಲದಿದ್ದರೆ ಮನೆಯ ಹೊರಗಡೆ ಹೋಗಿ ಯಾವ ರೀತಿಯಾಗಿ ದುಡಿಮೆ ಮಾಡಲು ಸಾಧ್ಯ. ಮಹಿಳೆಯರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಮನೆಯಲ್ಲಿ ಉತ್ತಮ ವಾತಾವರಣ ಹಾಗೂ ಕುಟುಂಬದ ಸದಸ್ಯರು ಸಹಕಾರ ಅಗತ್ಯವಾಗಿದೆ. ಇದರಿಂದ ಮಹಿಳೆಯು ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಅನ್ವಯ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಎಲ್ಲ ತಾಲ್ಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಂರಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಮಹಿಳೆಯರಿಗೆ ನೆರವು ನೀಡಲು ಸಾಂತ್ವಾನ ಕೇಂದ್ರಗಳು, ಸ್ವ-ಆಧಾರ್ ಕೇಂದ್ರ ಈ ಕಾಯ್ದೆಯಡಿಯಲ್ಲಿ ರಕ್ಷಣಾ ಗೃಹಗಳೆಂದು ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ವಕೀಲ ಹಾಗೂ ವರದಕ್ಷಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜ್ ಕುಮಾರ್ ಅವರು, ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಸ್ವರೂಪ, ಕಾಯ್ದೆ ಅನುಷ್ಠಾನಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳು, ಲಿಂಗತಾರತಮ್ಯ, ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರಿಗೆ ಸಮಾಲೋಚನೆ ಮತ್ತು ಪರಿಣಾಮಗಳು, ಕಾಯ್ದೆ ಜಾರಿ ಮಾಡುವಾಗ ಎದುರಿಸುವ ಸಮಸ್ಯೆಗಳು ಮತ್ತು ಸವಾಲುಗಳು ಮತ್ತು ಡಿ.ಐ.ಆರ್ ತಯಾರಿಸುವುದು ಕುರಿತು ಉಪನ್ಯಾಸ ನೀಡಿದರು.
ಮೊಳಕಾಲ್ಮುರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ವಸಂತ್ ಅಸೂಡೆ ಅವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕಾನೂನು ಹಾಗೂ ಕಾರ್ಯವಿಧಾನದ ವಿಷಯಗಳು-ಕಾನೂನಿನಡಿ ಮಹಿಳೆಯರಿಗೆ ಲಭ್ಯವಿರುವ ಪರಿಹಾರಗಳು, ಇ-ಕೋರ್ಟ್ ಫೋರ್ಟ್ಲ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಅಭಿವನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಎಸ್.ವಿಜಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.




