ಮುಡಾ ಅಕ್ರಮ ಕುರಿತು ಸಿಬಿಐ ತನಿಖೆಗೆ ವಹಿಸಲು ಕೋರಿದ್ದ ಅರ್ಜಿ ವಜಾ

1 year ago

ಬೆಂಗಳೂರು: ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದಲ್ಲಿ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ನಿರಾಳರಾಗಿದ್ದಾರೆ. 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಪರ್ಯಾಯ ನಿವೇಶನ ದೊರಕಿಸಿ ಕೊಡುವಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಲಾಗಿತ್ತು.

ಇದೊಂದು ಬಹುಕೋಟಿ ಕರ್ಮಕಾಂಡವಾಗಿದೆ ಎಂಬ ಆರೋಪ ಕೇಳಿ ಬಂದ ಬೆನ್ನೆಲ್ಲೇ, ರಾಜ್ಯ ಸರ್ಕಾರ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ಆದರೆ ಇದಕ್ಕೆ ತಕರಾರು ಸಲ್ಲಿಸಿದ್ದ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವವರು ಹಗರಣ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಯನ್ನು 2025ರ ಜನವರಿ 27ರಂದು ಪೂರ್ಣಗೊಳಿಸಿ, ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಶುಕ್ರವಾರ ಪ್ರಕಟಿಸಿತು.

ಆರೋಪದ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಲೋಕಾಯುಕ್ತ ಪೊಲೀಸರ ತನಿಖೆ ಅಸಮರ್ಪಕ ಎನ್ನುವುದಕ್ಕೆ ಕಾರಣಗಳಿಲ್ಲ, ಜೊತೆಗೆ ಲೋಕಾಯುಕ್ತ ತನಿಖೆ ತಾರತಮ್ಯಪೂರಿತ ಎಂಬುದಕ್ಕೆ ಆಧಾರಗಳಿಲ್ಲ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ ಎಂದು ಹೇಳಿದ ನ್ಯಾಯಪೀಠ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಮಣೀಂದ್ರ್ ಸಿಂಗ್, ರಾಜ್ಯ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಸಿದ್ದರಾಮಯ್ಯ ಪತ್ನಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರೊ.ರವಿವರ್ಮ ಕುಮಾರ್ ವಾದ ಮಂಡಿಸಿದ್ದರು.

ತೀರ್ಪು ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಭ್ರಮ: ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರದ ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣ ತೀವ್ರ ಸಂತಸ ವ್ಯಕ್ತಪಡಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು

ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ನಾವು ಕಾನೂನನನ್ನು ಗೌರವಿಸುತ್ತೇವೆ. ಆದರೆ, ಈ ಪ್ರಕರಣದಲ್ಲಿ ರಾಜಕೀಯ ಮಾಡುವುದೇ ಪ್ರತಿಪಕ್ಷಗಳ ಗುರಿಯಾಗಿತ್ತು ಎಂದರು.

ಆದರೆ ಈಗ ಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾಗೊಳಿಸಿದೆ. ನಾವು ಲೋಕಾಯುಕ್ತಕ್ಕೆ ಗೌರವ ನೀಡಬೇಕು. ಅದೊಂದು ಸ್ವತಂತ್ರ ಸಂಸ್ಥೆ. ಇದನ್ನು ರಾಜಕೀಯ ಉದ್ದೇಶದಿಂದ ವಿರೋಧ ಮಾಡುತ್ತಲೇ ಬಂದಿದ್ದಾರೆ ಎಂದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಬಂದಿದೆ. ಪ್ರಕರಣದಲ್ಲಿ ಸಿಬಿಐ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಲಾಗಿತ್ತು. ಇದು ದ್ವೇಷದ ರಾಜಕಾರಣ. ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದನ್ನು ನಾವು ಮೊದಲಿನಿಂದಲೂ ನೋಡ್ತಿದ್ದೇವೆ ಎಂದರು.

ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಇದನ್ನು ನಿರೀಕ್ಷೆ ಮಾಡಿದ್ದೆವು. ಸಿಬಿಐಗೆ ಕೊಡುವ ಅಂಶ ಇಲ್ಲ ಅಂತ ಲೋಕಾಯುಕ್ತದ ಮೇಲೆ ವಿಶ್ವಾಸವಿಟ್ಟು ಕೋರ್ಟ್ ಆದೇಶಿಸಿದೆ. ಲೋಕಾಯುಕ್ತ ವರದಿ ಸರಿಯಲ್ಲ ಅಂತ ಹೇಳಲು ಬರಲ್ಲ. ಅದಕ್ಕಾಗಿ ಪೀಠ ಈ ಆದೇಶ ಮಾಡಿದೆ. ಇ.ಡಿ ತನಿಖೆ ಬಗ್ಗೆ ಮುಂದೆ ನೋಡೋಣ ಎಂದರು.

ಮೇಲ್ಮನವಿ ಸಲ್ಲಿಸಲು ಸಿದ್ಧತೆ: ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೂರುದಾರ ಸ್ನೇಹಮಯಿ ಕೃಷ್ಣ, ಈ ವಿಷಯದಲ್ಲಿ ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ. ಹೋರಾಟದಲ್ಲಿ ಸೋಲು-ಗೆಲುವು ಸಹಜ. ವಿಚಲಿತರಾಗುವ ಅಗತ್ಯವಿಲ್ಲ. ಹೈಕೋರ್ಟ್ ತೀರ್ಪು ಹಿನ್ನಡೆ ಎಂದು ಭಾವಿಸಬೇಕಿಲ್ಲ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಘೋಷಣೆ ಮಾಡಿದರು.

ಸಿಬಿಐ ತನಿಖೆಗೆ ನಿರಾಕರಿಸಿರುವ ಹೈಕೋರ್ಟ್ ತೀರ್ಪಿಗೆ ಯಾವೆಲ್ಲ ಅಂಶಗಳು ಪರಿಗಣಿಸಲ್ಪಟ್ಟಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ಅನಂತರ ಸುಪ್ರೀಂಕೋರ್ಟ್ ಗೆ ಮೇಲನವಿ ಸಲ್ಲಿಸುತ್ತೇವೆ. ಸಿಬಿಐ ತನಿಖೆಗೆ ಪೂರಕವಾದಂತಹ ದಾಖಲಾತಿಗಳು ನನ್ನ ಬಳಿ ಇವೆ ಎಂದರು.

Leave a Reply