ಸಿದ್ದರಾಮಯ್ಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗುವುದಿಲ್ಲ: ಸ್ನೇಹಮಯಿ ಕೃಷ್ಣ

1 year ago

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ಸಮರ ಸಾರಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧದ ಅಧಿಕಾರ ದುರ್ಬಳಕೆ ಮತ್ತು ಅಕ್ರಮ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸ್ನೇಹ ಮಯಿ ಕೃಷ್ಣ ಇನ್ನು ಮುಂದೆ ಈ ಪ್ರಕರಣದಲ್ಲಿ ತಾವೇ ನ್ಯಾಯಾಲಯದ ಮುಂದೆ ವಾದ ಮಂಡಿಸುವ ತೀರ್ಮಾನಕ್ಕೆ ಬಂದಿದ್ದಾರೆ.

ಸಿಬಿಐ ತನಿಖೆ ಕೋರಿ ತಾವು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಆದೇಶದ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮಮನವಿ ಸಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ತಮ್ಮ ಅರ್ಜಿ ಕುರಿತು ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ಎರಡು ದಿನಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿದ್ದೇನೆ. ತಮ್ಮ ವಕೀಲರು ಹಾಗೂ ಹಿತೈಷಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ. 

ಈ ಕುರಿತು ತಮ್ಮ ಫೇಸ್ ಬುಕ್  ಖಾತೆಯಲ್ಲಿ ಸುದೀರ್ಘ ಹೇಳಿಕೆ ನೀಡಿರುವ ಅವರು, ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸಿದರೆ ತನಿಖೆ ಮತ್ತಷ್ಟು ವಿಳಂಬವಾಗಲಿದೆ. ಇದರ ಬದಲಿಗೆ ತಮ್ಮ ಬಳಿ ಇರುವ ದಾಖಲೆಗಳ ಮೂಲಕ ಲೋಕಾಯುಕ್ತರ ತನಿಖೆಗೆ ನೆರವು ನೀಡುವುದು, ಆ ಮೂಲಕ ತಪ್ಪಿತಸ್ಥರಿಗೆ ಆದಷ್ಟು ಶೀಘ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ತಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

ಲೋಕಾಯುಕ್ತ ತನಿಖೆ ಮುಗಿದ ನಂತರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ಯಾವುದೇ ವಕೀಲರನ್ನು ನೇಮಕ ಮಾಡಿಕೊಳ್ಳದೆ ತಮ್ಮ ಬಳಿ ಇರುವ ದಾಖಲೆಗಳ ಮೂಲಕ ತಾವೇ ವಾದ ಮಂಡಿಸಲು ತೀರ್ಮಾನಿಸಿದ್ದೇನೆ. ತಮ್ಮ ಈ ನಿಲುವಿನ ಬಗ್ಗೆ ಪರ -ವಿರೋಧದ ಅಭಿಪ್ರಾಯಗಳು ಕೇಳಿಬರಬಹುದು. ಆದರೆ, ಈ ಬಗ್ಗೆ ಗಮನ ಹರಿಸದೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಕಡೆ ಗಮನ ಹರಿಸುತ್ತೇನೆ ಎಂದಿದ್ದಾರೆ.

Leave a Reply