ಮುಡಾ ಅಕ್ರಮ ಆರೋಪ: ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರ ಅನುಮತಿ

2 years ago

ಬೆಂಗಳೂರು: ಮಹತ್ವದ ಹಾಗೂ ಹಠಾತ್ ಬೆಳವಣಿಗೆಯೊಂದರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ.

ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕಾರಿ ವಿದ್ಯಮಾನಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಸಂಪುಟದ ಎಲ್ಲಾ ಸಹೋದ್ಯೋಗಿಗಳು ಧಾವಿಸಿದರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಸ್ವಾಗತಾರ್ಹ ಎಂದು ಪ್ರತಿಪಕ್ಷಗಳು ಬಣ್ಣಿಸಿದರೆ, ಇದೊಂದು ರಾಜಕೀಯ ಪಿತೂರಿ ಹಾಗೂ ರಾಜಭವನದ ದುರ್ಬಳಕೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಕೋರಿ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಕಳೆದ ಕೆಲವು ದಿನಗಳ ಹಿಂದೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಇದನ್ನು ಆಧರಿಸಿ ಇದೀಗ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಕೋರಿ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡಿದ್ದಾರೆ. ರಾಜ್ಯಪಾಲರ ತೀರ್ಮಾನವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಮುಖೇನ ತಿಳಿಸಿದ್ದಾರೆ.

ಸಿಎಂ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಮಿತಿ ಸೆಕ್ಷನ್ 218 ರಡಿ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರು ಹೊರಡಿಸಿರುವ ನೋಟಿಸ್‍ನಲ್ಲಿ ತಿಳಿಸಿದ್ದಾರೆ

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಕೋರಿದ ಮನವಿಗೆ ಪುರಸ್ಕಾರ ನೀಡಿರುವ ರಾಜ್ಯಪಾಲರು ಹಲವು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ತಾವು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಏಕೆ ಅನುಮತಿ ನೀಡುತ್ತಿದ್ದೇನೆ ಎಂಬುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅವರು ಕೆಲವು ಮೂಲಭೂತ ಪ್ರಶ್ನೆಗಳನ್ನು ಸಹ ಕೇಳಿದ್ದಾರೆ.

ಪ್ರಕರಣದಲ್ಲಿ, ಸಿಎಂ ಕುಟುಂಬದ ಪ್ರಭಾವದ ಎರಡು ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ, ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಉಲ್ಲೇಖಿಸಲಾಗಿದೆ. ಸಿದ್ದರಾಮಯ್ಯ ಸಿಎಂ ಆಗುವ ತನಕ ಪಾರ್ವತಿ ಕಾದು, ಆ ಬಳಿಕ ಅರ್ಜಿ ಹಾಕಿದ್ದಾರೆ. 2010 ರಲ್ಲಿ ಪಾರ್ವತಿ ಜಮೀನು ಮಾಲೀಕರಾದರೂ ಪರಿಹಾರಕ್ಕೆ ಅರ್ಜಿ ಹಾಕಲು 4 ವರ್ಷ ಕಾಯುತ್ತಾರೆ. ಸಿದ್ದರಾಮಯ್ಯ ಸಿಎಂ ಆದ ಮೇಲೆ 40:60 ಸೈಟ್ ಪರಿಹಾರ ಅನುಪಾತ, 50:50 ಆಯ್ತು. ಪಾಲಿಸಿ ಬದಲಾವಣೆಗೆ ಆಗಿನ ಸಿದ್ದರಾಮಯ್ಯ ಕ್ಯಾಬಿನೆಟ್ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಪತ್ನಿ ಕೊಟ್ಟ ಅರ್ಜಿಯ ಆಧಾರದ ಮೇಲೆ ಪಾಲಿಸಿ ಬದಲಾವಣೆ ಮಾಡಿದರು. ಆ ನಂತರ ಪರಿಹಾರ ನೀಡುವ ಸಂಬಂಧ ನಡೆದ ಮುಡಾ ಸಭೆಯಲ್ಲಿ ಶಾಸಕರಾಗಿದ್ದ ಯತೀಂದ್ರ ಇದ್ದರು ಎಂದು ಪ್ರಭಾವದ ಬಗ್ಗೆ ಉಲ್ಲೇಖಿಸಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದಿದ್ದಾರೆ. ದು

ತಮ್ಮ ಮನವಿಗೆ ರಾಜ್ಯಪಾಲರು ನೀಡಿರುವ ಪುರಸ್ಕಾರಕ್ಕೆ ಸಂತಸ ವ್ಯಕ್ತಪಡಿಸಿರುವ ಟಿ.ಜೆ.ಅಬ್ರಹಾಂ, ಇದೀಗ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಮುಖ್ಯಮಂತ್ರಿಯವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದಾರೆ. ಅನುಮತಿ ಏಕೆ ಕೊಡಬಾರದು ಎಂದು ನಾನು ವಾದಿಸಲಿದ್ದೇನೆ. ಹೀಗಾಗಿ ಮುಂದಿನ ಯುದ್ಧ ಹೈಕೋರ್ಟ್‌ನಲ್ಲಿ ನಡೆಯಲಿದೆ ಎಂದರು.

ನಾನು ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯ ಸಂಖ್ಯೆ 82ರಲ್ಲಿ ಪ್ರಕರಣ ದಾಖಲಿಸಿದ್ದೇನೆ. ಅದರ ವಿಚಾರಣೆ ಈ ತಿಂಗಳ 21ರಂದು ನಡೆಯಲಿದ್ದು, ರಾಜ್ಯಪಾಲರು ಅನುಮತಿ ನೀಡಿರುವುದನ್ನು ನಾನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇನೆ ಎಂದರು.

ಪ್ರಕರಣದ ತನಿಖೆಯಾಗಬೇಕು ಎಂದು ನ್ಯಾಯಾಲಯದ ಮುಂದೆ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನ್ಯಾಯಾಲಯ ಯಾವ ನಿರ್ದೇಶನ ನೀಡಲಿದೆ ಎಂದು ಕಾದುನೋಡಬೇಕಿದೆ. ಈ ಹಿಂದೆ ಯಡಿಯೂರಪ್ಪ ಪ್ರಕರಣದಲ್ಲಿ ಲೋಕಾಯುಕ್ತ ಮುಂದೆ ದೂರು ದಾಖಲಿಸಿದ ರೀತಿ ಬೇರೆ ಇತ್ತು. ಅದು ವಿಚಾರಣೆಯಾಗಬೇಕು ಎಂಬ ಕಾರಣಕ್ಕೆ ಸಲ್ಲಿಸಿದ್ದ ಅರ್ಜಿ. ಈಗ ನಾನು ತನಿಖೆಗೆ ಮನವಿ ಮಾಡಿದ್ದೇನೆ. ಅದು ನ್ಯಾಯಾಲಯದ ಮುಂದಿದೆ. ರಾಜ್ಯಪಾಲರು ಅನುಮತಿ ನೀಡಿರುವುದರಿಂದ ನ್ಯಾಯಾಲಯದ ನಿರ್ದೇಶನಗಳು ಮಹತ್ವ ಪಡೆದುಕೊಳ್ಳುತ್ತವೆ ಎಂದು ಹೇಳಿದರು.

Leave a Reply