ಕೊನೆಗೂ ಗ್ಯಾರಂಟಿಗಳು ಗೆದ್ದಿವೆ!
ಈ ಮಾತು ಹೇಳಲು ನನ್ನ ಬಳಿ ಯಾವುದೇ ಆರ್ಥಿಕ ಸಮೀಕ್ಷೆಯ ಅಂಕಿಸಂಖಿಗಳಿಲ್ಲ; ಜಿಡಿಪಿ, ಜಿಎಸ್‌ಡಿಪಿ, ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್ ತರಹದ ನಿಖರ ಮಾಹಿತಿಗಳಿಲ್ಲ. ಆದಾಗ್ಯೂ, ಗಟ್ಟಿಯಾದ ದನಿಯಲ್ಲಿ ಹೇಳಬಲ್ಲೆ `ಗ್ಯಾರಂಟಿ ಯೋಜನೆಗಳು ಗೆದ್ದಿವೆ’! ಹಲವು ಆರ್ಥಿಕ ತಜ್ಞರು ಅರ್ಥಶಾಸ್ತ್ರದ ಟರ್ಮಿನಾಲಜಿಗಳ ಪ್ರಕಾರವೇ ಅಧಿಕೃತ ದತ್ತಾಂಶಗಳನ್ನು ಮುಂದಿಟ್ಟು ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಹೇಳುತ್ತಿದ್ದಾರೆ. ಆದರೆ ನಾನು ಆ ಗೋಜಿಗೆ ಹೋಗದೆ, ಗ್ಯಾರಂಟಿ ಯೋಜನೆಗಳ ಗೆಲುವನ್ನು ಮತ್ತೊಂದು ಆಯಾಮದಿಂದ ನಿರೂಪಿಸಲು ಬಯಸುತ್ತೇನೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು ಕೇವಲ ಆರ್ಥಿಕ ಆಯಾಮವನ್ನಷ್ಟೇ ಒಳಗೊಂಡಿರಲಿಲ್ಲ. ಚುನಾವಣಾ ಚರ್ಚೆಯನ್ನೆ ಬದಲಿಸಬಲ್ಲ ಸಾಮಾಜಿಕ-ರಾಜನೀತಿಯ ಆಯಾಮವನ್ನೂ ಅವು ಹೊಂದಿದ್ದವು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ತೊಂಬತ್ತರ ದಶಕದಿಂದೀಚೆಗೆ, ನಿಖರವಾಗಿ ಹೇಳಬೇಕೆಂದರೆ ಬಾಬ್ರೀ ಮಸೀದಿ ಧ್ವಂಸ ಪ್ರಕರಣದ ತರುವಾಯ ಚುನಾವಣೆಗಳಲ್ಲಿ ಧರ್ಮ, ಮತೀಯ ದ್ವೇಷ, ರಾಷ್ಟ್ರಭಕ್ತಿಯಂತಹ ಭಾವನಾತ್ಮಕ ಸಂಗತಿಗಳನ್ನು ವ್ಯವಸ್ಥಿತವಾಗಿ ಬೆರೆಸುತ್ತಾ ಬರಲಾಯ್ತು. ಪಾರದರ್ಶಕ ಮತ್ತು ನ್ಯಾಯಸಮ್ಮತ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕೆಂದರೆ ಯಾವೆಲ್ಲಾ ಸಂಗತಿಗಳನ್ನು ಚುನಾವಣಾ ಪ್ರಕ್ರಿಯೆಯಿಂದ ಕಡ್ಡಾಯವಾಗಿ ದೂರ ಇಡಬೇಕಿತ್ತೋ, ಅಂತಹ ಸಂಗತಿಗಳನ್ನೇ ರಾಜಾರೋಷವಾಗಿ ಚುನಾವಣೆಯ ಚರ್ಚೆಯ ಕೇಂದ್ರ ಬಿಂದುವಾಗಿಸಲಾಯ್ತು. ನಮ್ಮ ಸೈನಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು, ಸರ್ಜಿಕಲ್ ಸ್ಟ್ರೈಕ್ ಅನ್ನು, ಮುಸ್ಲಿಂ ದ್ವೇಷವನ್ನು, ಮಂದಿರ-ಮಸೀದಿ ವಿವಾದಗಳನ್ನು ಭಾವನಾತ್ಮಕವಾಗಿ ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾ ಬರಲಾಯ್ತು. ಅಭಿವೃದ್ಧಿ, ದೇಶದ ಆರ್ಥಿಕ ಪ್ರಗತಿ, ಭ್ರಷ್ಟಾಚಾರ, ಜನರ ಜೀವನಮಟ್ಟ ಸುಧಾರಣೆ, ಸಂವಿಧಾನ ಮೌಲ್ಯಗಳ ಅನುಷ್ಠಾನದಂತಹ ಅತಿಗಂಭೀರ ಚರ್ಚೆಗಳು ಚುನಾವಣೆಯಿಂದ ಹಿಂದೆಸರಿಯಲಾರಂಭಿಸಿದವು. ಬದುಕಿನ ಅನಿವಾರ್ಯತೆಗಿಂತ, ಕ್ಷಣಿಕ ಭಾವೋದ್ವೇಗಗಳೆಡೆಗೆ ಆಕರ್ಷಿತರಾಗುವಂತೆ ಜನರನ್ನು ಪ್ರಚೋದಿಸಲಾಯ್ತು. ಮೀಡಿಯಾ, ಸೋಶಿಯಲ್ ಮೀಡಿಯಾಗಳು ತಮ್ಮ ಹೊಣೆಗಾರಿಕೆಯನ್ನು ಮರೆತು ಇಂಥಾ ಹೀನ ಕೃತ್ಯಕ್ಕೆ ಹೆಗಲು ನೀಡುತ್ತಾ ಬಂದವು.
ಪರಿಣಾಮ… ಬಿಜೆಪಿ ಹಂತಹಂತವಾಗಿ ಚುನಾವಣಾ ರಾಜಕಾರಣದಲ್ಲಿ ಬಲಿಷ್ಠವಾಗುತ್ತಲೇ ಬಂತು. ರೈತರ ಐತಿಹಾಸಿಕ ಪ್ರತಿಭಟನೆ, ಕೊರೊನಾ ಅವಧಿಯ ಮಹಾವೈಫಲ್ಯ, ಪಿಎಂ ಕೇರ್ಸ್ ನಿಧಿಯ ಗುಮಾನಿ, ರಫೇಲ್ ಹಗರಣ, ನೋಟ್‌ಬ್ಯಾನ್ ಅನಾಹುತ, ಲಾಕ್‌ಡೌನ್ ಅವ್ಯವಸ್ಥೆಯ ಹೊರತಾಗಿಯೂ ಬಿಜೆಪಿ ಚುನಾವಣೆಗಳಲ್ಲಿ ಗೆಲ್ಲುತ್ತಾ ಬಂದಿದ್ದಕ್ಕೆ ಚುನಾವಣೆ ಚರ್ಚೆಯ ಈ ಮಿಸ್-ಮ್ಯಾನ್ಯುಪುಲೇಷನ್ ಕೂಡಾ ಒಂದು ಪ್ರಧಾನ ಕಾರಣ. ಲಿಟ್ಮಸ್ ಟೆಸ್ಟ್‌ಗೋಸ್ಕರ ನಮ್ಮ ಕರ್ನಾಟಕದ ವಿದ್ಯಮಾನಗಳನ್ನೇ ಪರಿಗಣಿಸುವುದಾದರೆ, 2013-18ರವರೆಗೆ ಹಲವು ಜನಪರ ಭಾಗ್ಯಗಳ ಯಶಸ್ವಿ ಆಡಳಿತ ನೀಡಿದ ಹೊರತಾಗಿಯೂ ಕಾಂಗ್ರೆಸ್ ಪಕ್ಷ 2018ರ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು `ಧರ್ಮ’ದ ಸಂಗತಿ. ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ, ಹಿಂದೂ ಧರ್ಮವನ್ನು ಒಡೆಯಲು ಸಿದ್ರಾಮಯ್ಯ ಮುಂದಾಗಿದ್ದಾರೆ ಎನ್ನುವ ಸುಳ್ಳಿನ ಆರೋಪವನ್ನೇ ಆ ಸಲದ ಚುನಾವಣೆಯ ಕೇಂದ್ರ ವಿಷಯವನ್ನಾಗಿಸಲಾಗಿತ್ತು. ಇನ್ನು 2019ರ ಲೋಕಸಭಾ ಚುನಾವಣೆಗೆ ಕೆಲವು ದಿನಗಳಿರುವಾಗ ನಮ್ಮ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬೆನ್ನಿಗೇ ಯಡಿಯೂರಪ್ಪನವರು “ಈ ಸಲ ನಾವು ಸರ್ಜಿಕಲ್ ಸ್ಟ್ರೈಕ್ ನಿಂದ 28 ಸ್ಥಾನಗಳ ಪೈಕಿ 21ರಲ್ಲಿ ಗೆಲ್ತೀವಿ” ಎಂದುಬಿಟ್ಟರು. ಅದನ್ನೂ ಮೀರಿ ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದಿತು. ಹೀಗೆ ಧರ್ಮ ಮತ್ತು ದೇಶದ ಭದ್ರತೆಯಂತಹ ಭಾವನಾತ್ಮಕ ಸಂಗತಿಗಳನ್ನೇ ಚುನಾವಣೆಯ ವಿಷಯಗಳನ್ನಾಗಿ ಪರಿವರ್ತಿಸಿ, ಜನರ ಮತ ಸೆಳೆದು ಕಾರ್ಪೊರೇಟ್ ಬಂಡವಾಳಶಾಹಿಗಳ ಪರವಾಗಿ ಆಡಳಿತ ನಡೆಸಲಾಗುತ್ತಿತ್ತು. ಅದರ ಪರಿಣಾಮ, ಜನ ಬೆಲೆಯೇರಿಕೆಯ ಬಿಸಿ, ಜಿಎಸ್‌ಟಿ ಬರೆ, ಅವ್ಯವಸ್ಥೆಯ ಆಡಳಿತಕ್ಕೆ ತತ್ತಾಗಬೇಕಾಯ್ತು. ಆಗಲೂ ಜನರನ್ನು ಒಂದು ಭ್ರಮಾಲೋಕದಲ್ಲಿ ಇರಿಸುವಲ್ಲಿ ಬಿಜೆಪಿ ಯಶಸ್ವಿಯಾಗುತ್ತಲೇ ಬಂತು.
ಯಾವಾಗ, ಚುನಾವಣೆಗಳು ಭಾವನಾತ್ಮಕ ಸಂಗತಿಗಳ ಮೇಲೆ ನಡೆಯಲಾರಂಭಿಸಿದವೋ, ಆಗ ಆಡಳಿತದಲ್ಲಿ ಜನಕಲ್ಯಾಣ ಕಾರ್ಯಕ್ರಮಗಳೂ ಕುಂಠಿತವಾಗತೊಡಗಿದವು. ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯದಂತಹ ಗ್ರಾಮೀಣಕೇಂದ್ರಿತ ಕ್ಷೇತ್ರಗಳಿಗೆ ನಿರಂತರವಾಗಿ ಅನುದಾನ ಕಡಿಮೆ ಮಾಡುತ್ತಾ ಬರಲಾಯ್ತು. ಇದಕ್ಕೆ ಪ್ರತಿಯಾಗಿ, ಕಾರ್ಪೊರೇಟ್ ಉದ್ಯಮಪತಿಗಳಿಗೆ ಅನುಕೂಲವಾಗುವಂತೆ ಅವರ ಸಾಲ ಮನ್ನಾ, ಸ್ಮಾರ್ಟ್‌ಸಿಟಿ-ಬುಲೆಟ್ ಟ್ರೈನ್, ಪ್ರೈವಟೈಸೇಷನ್ ತರಹದ ಬಂಡವಾಳಸ್ನೇಹಿ ಚಟುವಟಿಕೆಗಳ ಹೆಸರಲ್ಲಿ ಹಣವನ್ನು ಹರಿಸಲಾಯ್ತು.
ಆದರೆ ಈ ಟ್ರೆಂಡ್‌ಗೆ ಬ್ರೇಕ್ ಹಾಕಿದ್ದು ಗ್ಯಾರಂಟಿ ಯೋಜನೆಗಳು. ಜನರಿಗೆ ಆರ್ಥಿಕ ಆಸರೆ ಒದಗಿಸುವ ಎಕಾನಮಿಯ ಆಯಾಮವಲ್ಲದೇ, ಹಳಿ ತಪ್ಪಿದ್ದ ಚುನಾವಣೆಯ ಚರ್ಚೆಗಳನ್ನು ಭಾವನಾತ್ಮಕ ಸಂಗತಿಗಳಿಂದ ಬದುಕಿನ ವಾಸ್ತವಕ್ಕೆ ಮರಳುವಂತೆ ಮಾಡುವ ಹೊಣೆಗಾರಿಕೆಯೂ ಈ ಗ್ಯಾರಂಟಿ ಯೋಜನೆಗಳಿಗಿದ್ದವು. ಬಹುಶಃ ಕಾಂಗ್ರೆಸ್ ಪಕ್ಷ, ಇದನ್ನೆಲ್ಲವನ್ನು ಆಲೋಚಿಸಿ ಈ ಯೋಜನೆಗಳನ್ನು ರೂಪಿಸಿತ್ತೋ ಇಲ್ಲವೋ ಗೊತ್ತಿಲ್ಲ; ಆದರೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ನ ಸೀಮಿತ ಚುನಾವಣೆಯ ಚೌಕಟ್ಟನ್ನೂ ಮೀರಿ ಈ ಹೊಣೆಗಾರಿಕೆವರೆಗೆ ವ್ಯಾಪಿಸಿದ್ದವು. ಹಾಗಾಗಿಯೇ ಬಿಜೆಪಿ ತುಂಬಾ ಅಗ್ರೆಸಿವ್ ಆಗಿ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದು. ಈ ಯೋಜನೆಗಳು ಜನರನ್ನು ಸೋಮಾರಿಯಾಗಿಸುತ್ತವೆ, ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುತ್ತವೆ, ಆರ್ಥಿಕತೆಯ ಚಕ್ರವನ್ನು ಹೂತು ಹಾಕುತ್ತವೆ, ದೇಶದ ಪ್ರಗತಿಗೆ ಅಡ್ಡಿಯಾಗುತ್ತವೆ ಅಂತೆಲ್ಲಾ illogical ಥಿಯರಿಗಳನ್ನು ಹರಿಬಿಟ್ಟಿತು. ಸ್ವತಃ ಪ್ರಧಾನಿ ಮೋದಿಯೇ ಇವುಗಳನ್ನು ರೇವ್ಡಿ ಯೋಜನೆಗಳೆಂದು ಲೇವಡಿ ಮಾಡಿದರು. ಯಾಕೆಂದರೆ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಸ್ಪಷ್ಟವಾಗಿ ಗೊತ್ತಿತ್ತು; ಗ್ಯಾರಂಟಿಗಳು ಕೇವಲ ಒಂದು ಚುನಾವಣೆಗೆ ಮಾತ್ರ ಸೀಮಿತವಾದವಲ್ಲ…. ಹಲವು ದಶಕಗಳಿಂದ ತಾವು ಶ್ರಮವಹಿಸಿದ ಕಟ್ಟಿದ ಎಲೆಕ್ಟೋರಲ್ ಡಿಸ್ಕೋರ್ಸ್ ಅನ್ನು ಧರ್ಮ, ಮತೀಯ ದ್ವೇಷದಂತಹ ಭಾವನಾತ್ಮಕ ಸಂಗತಿಗಳಿಂದ ಜನರ ಬದುಕಿನ ಅನಿವಾರ್ಯತೆಯೆಡೆಗೆ ತಿರುಗಿಸುವ ಸಾಮರ್ಥ್ಯ ಇವುಗಳಿಗಿದೆ ಎಂಬುದು ಬಿಜೆಪಿಯ ಐಡಿಯಾಲಜಿಕಲ್-ಕಾರ್ಪೊರೇಟ್ ಕೂಟಕ್ಕೆ ಅರ್ಥವಾಗಿತ್ತು. ಗ್ಯಾರಂಟಿ ಯೋಜನೆಗಳನ್ನು demonize ಮಾಡುವ ಬಿಜೆಪಿ ಮತ್ತು ಕಾರ್ಪೊರೇಟ್ ಮೀಡಿಯಾಗಳು ಅಷ್ಟೆಲ್ಲ ಹರಸಾಹಸ ಪಟ್ಟಿದ್ದು ಇದೇ ಕಾರಣಕ್ಕೆ.
ಕೊನೆಗೂ, ಗ್ಯಾರಂಟಿಗಳ ವಿಚಾರದಲ್ಲಿ ಬಿಜೆಪಿಯ ಆತಂಕ ನಿಜವಾಗಿದೆ. ಅಂದರೆ, ಚುನಾವಣೆಯ ಚರ್ಚೆಗಳನ್ನು ಎಮೋಷನಲ್ ಇಶ್ಯೂಗಳಿಂದ ಬದುಕಿನ ಅನಿವಾರ್ಯತೆಯತ್ತ ಹೊರಳಿಸುವಲ್ಲಿ ಗ್ಯಾರಂಟಿಗಳು ಗೆದ್ದಿವೆ. ಯಾವ ಬಿಜೆಪಿ, ಗ್ಯಾರಂಟಿ ಜನಕಲ್ಯಾಣ ಯೋಜನೆಗಳ ವಿರುದ್ಧ ಅಪಪ್ರಚಾರ ನಡೆಸಿತ್ತೋ, ಅದೇ ಬಿಜೆಪಿ ಇದೀಗ ಚುನಾವಣೆಗಳಲ್ಲಿ ಗೆಲ್ಲಲು ಉಚಿತ ಯೋಜನೆಗಳ ಮೊರೆ ಹೋಗುತ್ತಿದೆ. ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಮಾಸಾಶನ ನೀಡುವ ಲಾಡ್ಲಿ ಬೆಹನ್ ಯೋಜನೆ; ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ `ಮುಖ್ಯಮಂತ್ರಿ ಮಾಝಿ ಮಹಿಳಾ ಲಡ್ಕಿ ಬೆಹನ್ ಯೋಜನಾ’, ಉಚಿತ ಸಿಲಿಂಡರ್ ಆಶ್ವಾಸನೆ; ದಿಲ್ಲಿಯಲ್ಲಿ ಮಹಿಳೆಯರಿಗೆ ಮಾಸಿಕ 1500 ನೀಡುವ ಯೋಜನೆ, ಉಚಿತ ಶಿಕ್ಷಣದ ಭರವಸೆ…. ಹೀಗೆ ಚುನಾವಣೆಯಲ್ಲಿ ಜನರ ಬದುಕುಗಳ ಬಗ್ಗೆ ಯೋಚಿಸುವಂತೆ ಮಾಡುವಲ್ಲಿ ಗ್ಯಾರಂಟಿ ಯೋಜನೆಗಳು ಬಿಜೆಪಿಯನ್ನೂ ಮಣಿಸಿವೆ. ಈ ಲೆಕ್ಕದಲ್ಲಿ ನಾನು ಗ್ಯಾರಂಟಿ ಯೋಜನೆಗಳು ಗೆದ್ದಿವೆ ಅಂತ ಹೇಳಿದ್ದು.
ಹೌದು, ಯಾವ ಗೆಲುವಾಗಲಿ ಅಥವಾ ಯಾವುದೇ ಸೋಲಾಗಲಿ ನಮಗೆ ಗೋಚರಿಸುವಂತೆ ಏಕಾಏಕಿ ಸಂಭವಿಸುವಂತದ್ದಲ್ಲ. ಅದೊಂದು ಹಂತಹಂತವಾದ, ನಿರಂತರ ಪ್ರಕ್ರಿಯೆಯ ಮೊತ್ತವಾಗಿರುತ್ತದೆ. ಬಿಜೆಪಿ ಉಚಿತ ಜನಕಲ್ಯಾಣ ಯೋಜನೆಗಳ ಮೊರೆ ಹೋಗಿದೆಯೆಂದರೆ, ಅದು ತನ್ನ ಕೋಮುವಾದಿ ಭಾವನಾತ್ಮಕ ತಂತ್ರವನ್ನು ಸಂಪೂರ್ಣ ಮರೆತುಬಿಟ್ಟಿದೆ ಎಂದರ್ಥವಲ್ಲ. ಸಾಧ್ಯವಾದಷ್ಟು ತನ್ನ ಲಯಕ್ಕೆ ಚುನಾವಣೆಯ ಚರ್ಚೆಯನ್ನು ಎಳೆಯಲು ಅದು ಯತ್ನಿಸುತ್ತಲೇ ಇರುತ್ತೆ. ಈಗಲೂ ಅದನ್ನು ಮಾಡುತ್ತಿದೆ. ಆದರೆ ವ್ಯವಸ್ಥಿತ, ವ್ಯಾಪಕ ಕೂಟವೊಂದು ಹಲವು ದಶಕಗಳ ಶ್ರಮದಿಂದ ರೂಪಿಸಿದ ಚುನಾವಣಾ ಸಂರಚನೆಯನ್ನು, ಅಚಾನಕ್ಕಾಗಿ ಅವತರಿಸಿದ ಗ್ಯಾರಂಟಿ ಯೋಜನೆಗಳು ಎದುರುಹಾಕಿಕೊಳ್ಳುವ ಸಾಹಸ ಮಾಡುತ್ತಿವೆಯಲ್ಲ, ಅದೇ ಅವುಗಳ ನಿಜವಾದ ಗೆಲುವು. ಆ ಗೆಲುವನ್ನು ಅಂತಿಮ ಗುರಿ ಮುಟ್ಟಿಸುವಂತೆ ನೋಡಿಕೊಳ್ಳುವುದು ಕೇವಲ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆಯಷ್ಟೇ ಅಲ್ಲ, ಈ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ. ಯಾಕೆಂದರೆ, ಅಭಿವೃದ್ಧಿಯ ವ್ಯಾಖ್ಯಾನದಿಂದ ಜನರ ಜೀವನವನ್ನು ಎಷ್ಟರಮಟ್ಟಿಗೆ ಪ್ರತ್ಯೇಕಿಸಿ, ಅದನ್ನೊಂದು ಕಾಮಗಾರಿ-ಕೇಂದ್ರಿತ ವ್ಯಾಖ್ಯಾನವಾಗಿಸಲಾಗಿದೆ ಎಂದರೆ, ಗ್ಯಾರಂಟಿ ಯೋಜನೆಗಳಿಂದ ಚುನಾವಣಾ ಲಾಭ ಮಾಡಿಕೊಂಡ ಕಾಂಗ್ರೆಸಿನ ಕೆಲವು ಜನಪ್ರತಿನಿಧಿಗಳೇ, `ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಆಗಾಗ್ಗೆ ಹೇಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಂತಹ ಸಮಯದಲ್ಲಿ ಗ್ಯಾರಂಟಿಗಳ ಸಾಮರ್ಥ್ಯ, ಕೋಮುವಾದಿ ರಾಜಕಾರಣಕ್ಕೆ ಹಿನ್ನೆಡೆ ತಂದಿರುವ ಅವುಗಳ ಕೊಡುಗೆಯನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಿದೆ.
ಕೊನೆಯದಾಗಿ, ಜನಸಾಮಾನ್ಯರೆನಿಸಿಕೊಂಡ ನಾವೆಲ್ಲ ಒಂದು ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಗ್ಯಾರಂಟಿ ರೂಪದ ಜನಕಲ್ಯಾಣ ಉಚಿತ ಯೋಜನೆಗಳು ಬೊಕ್ಕಸದ ದುಡ್ಡನ್ನು ಖಾಲಿ ಮಾಡಿ ಸರ್ಕಾರವನ್ನು ದಿವಾಳಿ ಮಾಡುವುದಿಲ್ಲ. ಹೆಚ್ಚೆಂದರೆ, ಕಾರ್ಪೊರೇಟ್ ಉದ್ಯಮಪತಿಗಳ ಜೇಬು ಸೇರುತ್ತಿದ್ದ ನಮ್ಮ ತೆರಿಗೆ ಹಣವನ್ನು ವಾಪಾಸು ನಮಗೇ ತಂದುಕೊಡುತ್ತಿವೆ ಅಷ್ಟೆ. ಜನ ಅಭಿವೃದ್ಧಿಯಾದರೆ, ದೇಶ ಅಭಿವೃದ್ಧಿಯಾಗುತ್ತದೆ. ಜನರನ್ನು ಹಾಳುಮಾಡಿ, ಯಾವ ದೇಶವನ್ನೂ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ!
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




