ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ನಾಗರಿಕರ ಜೀವಕ್ಕೆ ಸಂಚಾಕಾರವಾಗಿರುವ ಕಾರಣ ಮಲ್ಲೇಶ್ವರಂ ನಿವಾಸಿಗಳಿಂದ ಕ್ಲೌಡ್ ನೈನ್ ಆಸ್ಪತ್ರೆ ಬಳಿ ಗುಂಡಿಬಿದ್ದ ರಸ್ತೆಗಳಿಗೆ ಪೂಜೆ ಮಾಡಿ,ಗುಂಡಿಯಲ್ಲಿ ಕುಳಿತು ಪ್ರತಿಭಟನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಸೇವಾ ಕಾರ್ಯಕರ್ತ ಅನೂಪ್ ಆಯ್ಯಂಗಾರ್ ರವರ ನೇತೃತ್ವದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ವಿಮಲ ವೆಂಕಟ್, ಸೋಮಶೇಖರ್, ಪೂರ್ಣಚಂದ್ರ ಚಂದ್ರು, ಹೆಚ್.ಸಿ.ಚಂದ್ರಶೇಖರ್, ಹೇಮಂತ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ಅನೂಪ್ ಅಯ್ಯಂಗಾರ್ ಮಾತನಾಡಿ, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ, ಸಚಿವರಾದ ಡಾ. ಸಿ.ಎನ್.ಅಶ್ವಥ್ ನಾರಾಯಣರವರ ದೂರದೃಷ್ಟಿ ಚಿಂತನೆ ಇಲ್ಲದೇ, ಸರ್ವಾಧಿಕಾರಿ ಧೋರಣೆ, ದುರಾಡಳಿತ ಪ್ರತಿಫಲದಿಂದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ರಸ್ತೆಗಳು ಗುಂಡಿಮಯವಾಗಿವೆ ಮತ್ತು ಕಳಪೆ ಕಾಮಗಾರಿಯಿಂದ ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿ ಸರ್ಕಲ್ ಮಾರಮ್ಮ ದೇವಸ್ಥಾನ ಬಳಿ ರಸ್ತೆ ಅಪಘಾತದಿಂದ ಯುವಕ ಮೃತಪಟ್ಟ, ಸ್ಯಾಂಕಿ ಕರೆಯಲ್ಲಿ 12 ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಆದರು ಪೂರ್ಣಗೊಂಡಿಲ್ಲ. ಬೀಗಲ್ಸ್ ಬ್ಯಾಸ್ಕೆಟ್ ಬಾಲ್ ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರಿಗೆ ಉಪಯೋಗಕ್ಕೆ ಅವಕಾಶ ನೀಡದೇ ಬೀಗ ಜಡಿಯಲಾಗಿದೆ ಎಂದು ಆರೋಪಿಸಿದರು.
ಟೆಂಡರ್, ಮರು ಟೆಂಡರ್ ಗಳ ಡೊಡ್ಡ ಹಗರಣಗಳ ಸರಮಾಲೆಯಾಗಿದೆ. ಕಾಮಗಾರಿಗಳು ನಡೆಯುತ್ತಿರುವ ಜಾಗದಲ್ಲಿ ಗುತ್ತಿದಾರರ ಹೆಸರು, ಇಂಜಿನಿಯರ್ ಗಳ ಬಗ್ಗೆ ಮಾಹಿತಿ ಹಾಗೂ ನಿಗದಿ ಮಾಡಿದ ಸಮಯ, ಹಣದ ವೆಚ್ಚ, ಕಾಲಮಿತಿ ವಿವರವುಳ್ಳ ಫಲಕಗಳನ್ನು ಹಾಕಿಲ್ಲ ಎಂದರು.
ಅವೈಜ್ಞಾನಿಕವಾಗಿ ರಸ್ತೆಗಳನ್ನು ಅಗೆಯಲಾಗಿದೆ ಇದರಿಂದ ಮಕ್ಕಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ನಡೆದಾಡಲು ಕಷ್ಟವಾಗಿದೆ ಮತ್ತು ವಾಹನ ಸಂಚಾರಕ್ಕೆ ಅನಾನುಕೂವಾಗಿದೆ. 145 ವರ್ಷಗಳ ಇತಿಹಾಸವಿರುವ ಪಾರಂಪರಿಕ, ಸಾಂಸ್ಕೃತಿಕ ಪ್ರದೇಶ ಮಲ್ಲೇಶ್ವರಂ ವಿಧಾನಸಭಾ ರಕ್ಷಣೆ ಮತ್ತು ಸುರಕ್ಷತೆಗಾಗಿ ನಮ್ಮ ಪ್ರತಿಭಟನೆ ಎಂದರು.



