ಅಕ್ರಮ ಟೋಲ್ ಗೇಟ್ ತೆರವಿಗಾಗಿ ಪಾದಯಾತ್ರೆ: CITU ಸಂಪೂರ್ಣ ಬೆಂಬಲ

4 years ago

ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗಾಗಿ ಒತ್ತಾಯಿಸಿ ಮಾರ್ಚ್ 15ರಂದು ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ವರೆಗೆ ನಡೆಯುವ ಬ್ರಹತ್ ಪಾದಯಾತ್ರೆಗೆ ಕೇಂದ್ರ ಕಾರ್ಮಿಕ ಸಂಘಟನೆಯಾದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ದ.ಕ.ಜಿಲ್ಲಾ ಸಮಿತಿಯು ಬೆಂಬಲ ವ್ಯಕ್ತಪಡಿಸಿದೆ.

ತಾತ್ಕಾಲಿಕ ನೆಲೆಯಲ್ಲಿ ಪ್ರಾರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಕಳೆದ 6 ವರ್ಷಗಳಿಂದಲೂ ಅಕ್ರಮವಾಗಿ ಜನತೆಯನ್ನು ಸುಲಿಗೆ ಮಾಡುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಹೆದ್ದಾರಿ ಪ್ರಾಧಿಕಾರಗಳು ಕೂಡಲೇ ತೆರವುಗೊಳಿಸಲಾಗುವುದೆಂದು ಭರವಸೆ ನೀಡಿದ್ದರೂ ಇಂದಿನವರೆಗೂ ಈ ಬಗ್ಗೆ ಎಳ್ಳಷ್ಟೂ ಗಮನ ಹರಿಸದೆ ಇರುವುದು ಬೇಜವಾಬ್ದಾರಿಯ ಪರಮಾವಧಿಯಾಗಿದೆ. ಮಾತ್ರವಲ್ಲದೆ ಸ್ಥಳೀಯ ಜನತೆ ಕಳೆದ 6 ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಜನತೆಯ ಸಂಕಷ್ಟವನ್ನು ಕೇಳುವ ವ್ಯವಧಾನ ಸ್ಥಳೀಯ ಸಂಸದರಿಗೆ, ಶಾಸಕರಿಗೆ ಇಲ್ಲವಾಗಿದೆ. ಟೋಲ್ ಗೇಟ್ ಹೆಸರಿನಲ್ಲಿ ದಿನವೊಂದಕ್ಕೆ ಲಕ್ಷಾಂತರ ರೂ. ಹಣವನ್ನು ಅಕ್ರಮವಾಗಿ ಜನಸಾಮಾನ್ಯರಿಂದ ಹಗಲು ದರೋಡೆ ನಡೆಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದು CITU ಟೀಕಿಸಿದೆ.

ಇಂತಹ ಅಕ್ರಮಗಳ ವಿರುದ್ಧ ಅವಿಭಜಿತ ದ.ಕ.ಜಿಲ್ಲೆಗಳ 60ಕ್ಕೂ ಮಿಕ್ಕಿದ ಸಂಘಟನೆಗಳು ಪಕ್ಷಭೇಧ ಮರೆತು ಈ ನ್ಯಾಯಯುತ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ವಿವಿಧ ವಿಭಾಗದ ಕಾರ್ಮಿಕರೂ ಕೂಡ ಸ್ವಯಂಸ್ಪೂರ್ತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು CITU ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply