ಸಾವಳಗಿ: ರಾಜ್ಯ ಸರ್ಕಾರ ಮಹತ್ತರ ಯೋಜನೆಯಾದ ರೈತಾಪಿ ಜನರ ಮನೆ ಬಾಗಿಲಿಗೆ ನಿಮ್ಮ ದಾಖಲೆ ಎಂಬ ಯೋಜನೆಗೆ ಜಮಖಂಡಿ ತಾಲ್ಲೂಕು ಶಿರೇಸ್ತೇದಾರ ಆರ್. ಎ.ನಾಯಕ ಹಾಗೂ ಸಾವಳಗಿ ಉಪ ತಹಶೀಲ್ದಾರ ಇ.ಕೆ.ಇಂಡಿಕರ್ ಚಾಲನೆ ನೀಡಿದರು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಇ.ಕೆ. ಇಂಡಿಕರ್, ರೈತರು ಕಂದಾಯ ಇಲಾಖೆಗೆ ತಮ್ಮ ದಾಖಲೆಗಳನ್ನು ತೆಗೆದುಕೊಳ್ಳಲು ಪದೇ ಪದೇ ಕಚೇರಿಗೆ ಇಂದು ನಾಳೆ ಎಂದು ಅಲೆದಾಡುವದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ರಾಜ್ಯದ ಪ್ರತಿಯೊಂದು ರೈತನ ಮನೆಗೆ ಪಹಣಿ ಪತ್ರ, ಖಾತಾ ನಕ್ಷೆ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ರೈತರಿಗೆ ಸಂಬಂಧಿಸಿದ ದಾಖಲೆಗಳನ್ನು ರೈತರ ಮನೆಗೆ ತಲುಪಿಸುವ ಯೋಜನೆಯ ಉದ್ದೇಶವಾಗಿದೆ ಎಂದರು.
ಸದ್ಯದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡುತ್ತಿದ್ದು ಮುಂದಿನ ದಿನಮಾನಗಳಲ್ಲಿ ಪ್ರತಿಯೊಂದು ರೈತರ ಮನೆ ಮನೆಗೆ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಮುಟ್ಟಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೆವೆ. “ನಿಮ್ಮ ದಾಖಲೆ ನಿಮ್ಮ ಹಕ್ಕು ಮನೆ ಬಾಗಿಲಿಗೆ ತಲುಪಿಸುವದು ನಮ್ಮ ಕರ್ತವ್ಯ” ಎಂದರು.
ಈ ಯೋಜನೆ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ರಾಜುಗೌಡ ಪಾಟೀಲ, ಸರ್ಕಾರದ ಯೋಜನೆ ಬಹಳ ಮಹತ್ತರವಾಗಿದ್ದು, ರೈತರು ಕಚೇರಿಗೆ ಅಲೆದಾಡುವದನ್ನು ನಿಲ್ಲಿಸುವ ಸಲುವಾಗಿ ಈ ಯೋಜನೆ ಜಾರಿಗೊಳಿಸಿದ್ದು ರೈತರ ಅಗತ್ಯ ದಾಖಲೆಗಳು ಎಲ್ಲೂ ಅಲೆದಾಡದೇ ಮನೆ ಬಾಗಿಲಿಗೆ ಸಿಗುತ್ತವೆ ಎಂದರೇ ಇದು ಸಂತೋಷದ ವಿಷಯ. ಇದರಿಂದ ಅತ್ಯಮೂಲ್ಯವಾದ ಸಮಯ ಉಳಿತಾಯವಾಗುತ್ತದೆ. ಇದರಿಂದ ರೈತರು ಹೆಚ್ಚಿನ ಸಮಯ ಕೃಷಿಯಲ್ಲಿ ತೊಡಗಿಸಲು ಸಹಕಾರವಾಗುತ್ತದೆ ಎಂದರು.
ಯೋಜನೆಗೆ ಜಾರಿ ಗೊಳಿಸಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರಿಗೆ ಗ್ರಾಮದ ಹಾಗೂ ರೈತರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಪ್ರಕಾಶ ಪವಾರ, ಗ್ರಾಮ ಲೆಕ್ಕಾಧಿಕಾರಿ ಆನಂದ ರಾಠೋಡ, ಭೂ ನ್ಯಾಯ ಮಂಡಳಿಯ ಸದಸ್ಯ ಉಮೇಶ ಜಾಧವ, ಬಸವರಾಜ ಮಾಳಿ, ಸಾಬು ಶೆಟ್ಟೆಣ್ಣನವರ, ಲಕ್ಷ್ಮಣ ಕುಂಬಾರ, ಧೂಮಕೇತು ನಾಂದ್ರೇಕರ, ಅಮೀತ ಸೂರಗೋಂಡ ಹಾಗೂ ಸ್ಥಳೀಯ ಸಿಬ್ಬಂದಿ ಹಾಗೂ ಅನೇಕ ಮುಖಂಡರು ಹಾಜರಿದ್ದರು.



