ಉತ್ತರ ಪ್ರದೇಶ : ಸೋಲಲೇ ಬೇಕಿದ್ದ ಬಿಜೆಪಿ ಗೆದ್ದಿದ್ದು ಹೇಗೆ ?

4 years ago

ಉತ್ತರ ಪ್ರದೇಶದಲ್ಲಿ 2017ರಲ್ಲಿ ಪೂರ್ಣ ಬಹುಮತದೊಂದಿಗೆ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ 2022ರಲ್ಲಿ ಗೆಲ್ಲಲು ಸಾಧ್ಯವೇ ಇರಲಿಲ್ಲ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಕಾರ್ಮಿಕರು, ಮರಳಿ ಉತ್ತರ ಪ್ರದೇಶಕ್ಕೆ ಬಂದಾಗ ಪ್ರಾಣಿಗಳಿಗಿಂತಲೂ ಕಡೆಯಾಗಿ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರ ನಡೆಸಿಕೊಂಡಿದ್ದನ್ನು ಜನ ಮರೆಯುವ ಹಾಗೇ ಇಲ್ಲ.

ಕಾರ್ಮಿಕರನ್ನು ಮನ ಮನಬಂದಂತೆ ಯುಪಿ ಪೊಲೀಸರು ಥಳಿಸಿದ್ದರು. ಕಾರ್ಮಿಕರ ಮೇಲೆ ಪ್ರಾಣಿಗಳಿಗೆ ಔಷಧಿ ಸಿಂಪಡಿಸುವಂತೆ ಬೀದಿಯಲ್ಲಿ ನಿಲ್ಲಿಸಿ ಸ್ಯಾನಿಟೈಸರ್ ಸಿಂಪಡಿಸಲಾಗಿತ್ತು. ಇನ್ನು ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಂತೂ ಸಾವಿರಾರು ಶವಗಳು ಗಂಗಾನದಿಯಲ್ಲಿ ತೇಲಿಬಂದವು.      ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಜನರು ಜೀವತೆತ್ತರು.

ಜನಸಾಮಾನ್ಯರು ಮತ್ತು ಎಲ್ಲಾ ವರ್ಗದ ಕಾರ್ಮಿಕರು ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದರು. ಎನ್ ಆರ್ ಸಿ, ಸಿಎಎ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದವರನ್ನು ಭಯೋತ್ಪಾದಕರಂತೆ ಹಿಂಸಿಸಲಾಯಿತು. ಮುಸ್ಲಿಮರು ಸಹ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರದ ವಿರುದ್ಧ ಕೆರಳಿದ್ದರು.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಜೀಪನ್ನು ಹತ್ತಿಸಿ, ರೈತರಿಗೆ ಗುಂಡು ಹೊಡೆದು ಕೊಂದು ಜೈಲಿಗೂ ಹೋಗಿ ಬಂದಾಯಿತು. ಹಾಗಾಗಿ ಇಡೀ ರೈತ ಸಮುದಾಯ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರದ ವಿರುದ್ಧ ಗುಟುರು ಹಾಕಿದರು.

ಇನ್ನು ಉನ್ನಾವ್, ಹಾತ್ರಾಸ್ ಸೇರಿದಂತೆ ದಿನನಿತ್ಯ ಅತ್ಯಾಚಾರ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಎಸ್ಸಿಎಸ್ಟಿ ಹಿಂದುಳಿದ ವರ್ಗಗಳು ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು.

NCRB ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಮತ್ತು ಕೊಲೆ-ಸುಲಿಗೆ, ದೌರ್ಜನ್ಯ ನಡೆಯುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿ ಉತ್ತರಪ್ರದೇಶ ಇದೆ.

ಬ್ರಾಹ್ಮಣ ಸಮುದಾಯದ 480ಕ್ಕೂ ಹೆಚ್ಚು ಜನ ಯೋಗಿ ಆದಿತ್ಯನಾಥ್ ಸರ್ಕಾರದ ಕಾಲದಲ್ಲಿ ಕೊಲೆಯಾಗಿದ್ದರಿಂದ , ಇಡೀ ಸಮುದಾಯ ತಿರುಗಿ ಬಿದ್ದಿತ್ತು.

ಇನ್ನು ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಗೌರವವಿಲ್ಲ ಎಂದು ಅನೇಕ ಓಬಿಸಿ ಮಂತ್ರಿಗಳು ಮತ್ತು ಶಾಸಕರು, ನಾಯಕರು  ಇತರೆ ಪಕ್ಷಗಳಿಗೆ ವಲಸೆ ಹೋಗಿದ್ದರು.

ಖಾಸಗಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ sc, st, obcಗಳ ಮೀಸಲಾತಿಯನ್ನು ಯೋಗಿ ಆದಿತ್ಯನಾಥ್ ಸರ್ಕಾರ ರದ್ದುಗೊಳಿಸಿತ್ತು. ವಿದ್ಯಾವಂತ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಹೋರಾಟಕ್ಕಿಳಿದಿದ್ದಾಗ, ಅವರನ್ನು ಪ್ರಾಣಿಗಳಂತೆ ದಂಡಿಸಲಾಗಿತ್ತು.

ಒಟ್ಟಾರೆಯಾಗಿ ರೈತರು, ಕಾರ್ಮಿಕರು, ಹಿಂದುಳಿದವರು, ಅಸಂಖ್ಯಾತರೂ ಸೇರಿದಂತೆ ಬ್ರಾಹ್ಮಣ  ವರ್ಗದವರೂ, ಎಲ್ಲಾ ವರ್ಗದ ನಿರುದ್ಯೋಗಿ ಯುವಕರು ಸಹ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು.

ಇನ್ನು ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಬಡ ಮಧ್ಯಮ ವರ್ಗ ತತ್ತರಿಸಿದೆ. ನಿರುದ್ಯೋಗ ಪ್ರಮಾಣ ಹೆಚ್ಚಾಗಿ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಪಕೋಡ ಮಾರಾಟಮಾಡುವ ಸ್ಥಿತಿಗೆ ತಲುಪಿದೆ. ಹೀಗಿದ್ದರೂ ಇಪ್ಪತ್ತು ಮೂರು  ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರೆ ಅದಕ್ಕೆ ಕಾರಣ ಬೇರೇನೋ ಇರಬೇಕು.

ಬಿಜೆಪಿ ಹೊರತುಪಡಿಸಿ ಎಲ್ಲಾ ವಿರೋಧ ಪಕ್ಷಗಳು ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಮೂಲಕವೇ ಚುನಾವಣೆ ನಡೆಸಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಹಾಗಿದ್ದರೂ ಈವಿಎಂ ಮೂಲಕವೇ ಚುನಾವಣೆ ನಡೆಸಿದ ಚುನಾವಣಾ ಆಯೋಗದ ಉದ್ದೇಶ ಏನಿದೆ?  ಇಷ್ಟೆಲ್ಲ ಜನಬೆಂಬಲವಿದೆ ಎನ್ನುವ  ಬಿಜೆಪಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಲು ಏಕೆ ಒಪ್ಪುತ್ತಿಲ್ಲ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದರೆ ಬಿಜೆಪಿ ಗೆದ್ದಿದ್ದು ಮತ್ತು ಗೆಲ್ಲುತ್ತಿರುವುದು ಹೇಗೆ ಎಂಬುದಕ್ಕೆ ಸೂಕ್ತ ಉತ್ತರ ಸಿಗುತ್ತದೆ.

  • ಎಂ. ಕೃಷ್ಣಮೂರ್ತಿ, ರಾಜ್ಯಾಧ್ಯಕ್ಷ, ಬಹುಜನ ಸಮಾಜ ಪಾರ್ಟಿ – ಕರ್ನಾಟಕ

Leave a Reply