ಸಾವಳಗಿ: ಉನ್ನತ ವೈದ್ಯಕೀಯ ವ್ಯಾಸಂಗದ ಸಲುವಾಗಿ ಉಕ್ರೇನ್ ಗೆ ತೆರಳಿದ್ದ ತೊದಲಬಾಗಿ ಗ್ರಾಮದ ನಿವಾಸಿಗಳು ಉಕ್ರೇನ್-ರಷ್ಯಾದ ಮಧ್ಯೆ ನಡೆಯುತ್ತಿರುವ ಭೀಕರ ಯುದ್ದದಿಂದ ಪಾರಾಗಿ ತಾಯ್ನಾಡಿಗೆ ಮರಳಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲಿ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅಶ್ವಿನಿ ಯಾದವಾಡ ಹಾಗೂ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ರೋಹಿತ್ ಹಿಪ್ಪರಗಿ ಸುರಕ್ಷಿತವಾಗಿ ಮನೆಗೆ ಸೇರಿದ್ದಾರೆ.
ಜಮಖಂಡಿ ತಾಲ್ಲೂಕಿನ ತಹಶಿಲ್ದಾರ ಪ್ರಶಾಂತ ಚನಗೊಂಡ ಹಾಗೂ ತೊದಲಬಾಗಿ ಗ್ರಾಮ ಪಂಚಾಯತಿ ಮತ್ತು ಊರಿನ ಹಿರಿಯರ ವತಿಯಿಂದ ಸನ್ಮಾನಿಸಿ ಸ್ವಾಗತ ಮಾಡಿಕೊಂಡು ಸಿಹಿ ಹಂಚಿದರು.
ಇದೇ ವೇಳೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ಯುದ್ದ ಪ್ರಾರಂಭವಾಗುವ ಮೊದಲ ದಿನವೇ ಉಕ್ರೇನದಿಂದ ಹೊರಡಲು ಸಜ್ಜಾಗಿದ್ದೆವು. ಅಲ್ಲಿನ ಯೋಧರು ನಮಗೆ ತುಂಬಾ ಸಹಾಯ ಮಾಡಿದರು. ಭಾರತೀಯ ವಿದೇಶಾಂಗ ಹಾಗೂ ರಾಯಭಾರಿ ಕಚೇರಿಯಿಂದ ಮಾಹಿತಿ ಪಡೆದು ಅಲ್ಲಿಂದ 3 ದಿನಗಳ ಕಾಲ ರೈಲ್ ಪ್ರಯಾಣದಿಂದ ಪೋಲೆಂಡ್ ಬಾರ್ಡರಿಗೆ ಬಂದು ಅಲ್ಲಿಂದ ನಮ್ಮ ಹೆಮ್ಮೆಯ ಭಾರತೀಯ ಸೇನೆಯ ವಿಮಾನದ ಮೂಲಕ ಭಾರತಕ್ಕೆ ಆಗಮಿಸಿದೆವು ಎಂದರು.
ಇನ್ನೂ ಮೊದಲು ವರ್ಷ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ರೋಹಿತ ಹಿಪ್ಪರಗಿ ಪ್ರತಿಕ್ರಿಯಿಸಿ, 4-5 ದಿನ ಉಕ್ರೇನಲ್ಲಿ ಇದ್ದು ಯುದ್ದದ ಭೀಕರತೆಯನ್ನು ಕಣ್ಣಾರೆ ಕಂಡಿದ್ದೇವೆ. ಭಯಭೀತರಾಗಿ ನಾವು ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೆವು. ಕಾರಣ ಮೊದಲು ದಿನವೇ ರೈಲು ನಿಲ್ದಾಣಕ್ಕೆ ಹೋದಾಗ ರೈಲಿನಲ್ಲಿ ವಿಧ್ಯಾರ್ಥಿನಿಯರಿಗೆ ಮೊದಲು ಆದ್ಯತೆ ನೀಡಿದ್ದರು. ಇದರಿಂದ ಎರಡು ದಿನಗಳ ಕಾಲ ರೈಲು ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕಾಯಿತು. ಆದರೆ ಆ ಹೊತ್ತಿಗೆ ಯುದ್ಧ ಭೀಕರತೆ ಹೆಚ್ಚಾಗಿದ್ದರಿಂದ ರೈಲು ನಿಲ್ದಾಣ ಕೆಳ ಭಾಗದ ಕಂಟೈನರನಲ್ಲಿ ನಾಲ್ಕು ದಿನ ಕಾಲ ಕಳೆಯಬೇಕಾಯಿತು ಎಂದರು.
ಆದರೆ ಮೊದಲೆರಡು ದಿನ ತಿನ್ನಲು ಏನೂ ತೊಂದರೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಹಸಿವಿನಿಂದ ಇದ್ದು ಕೇವಲ ನೀರು ಮಾತ್ರ ಸೇವಿಸುತ್ತಿದ್ದೆವು. ಕೊನೆಗೆ ನಮಗೆ ಹೋಗಲು ಅಲ್ಲಿನ ಸೇನಾಧಿಕಾರಿಗಳು ಅನುವು ಮಾಡಿಕೊಟ್ಟಾಗ ಅಲ್ಲಿಂದ 10 ಕೀ.ಮಿ ವರೆಗೆ ಕಾಲ್ನಡಿಗೆ ಮುಖಾಂತರ ಪಕ್ಕದ ಸಿಟಿಗೆ ಬಂದು, ಅಲ್ಲಿಂದ ಖಾಸಗಿ ವಾಹನದ ಮೂಲಕ ಪೋಲೆಂಡ್ ತಲುಪಿ ವಿಮಾನದ ಮೂಲಕ ನವದೆಹಲಿಗೆ ಬಂದು ಕನ್ನಡ ಭವನದಲ್ಲಿ ವಿಶ್ರಾಂತಿ ಪಡೆದು ನಂತರ ವಿಮಾನದ ಮೂಲಕ ಬೆಂಗಳೂರಿಗೆ ಬಂದೆವು ಎಂದರು.
ನಮ್ಮ ಊರಿಗೆ ಹೋಗಲು ಕರ್ನಾಟಕ ಸರ್ಕಾರವೇ ಪ್ರಯಾಣ ಟಿಕೇಟಗಳನ್ನು ಭರಿಸಿ ನಮ್ಮೂರಿಗೆ ಸುರಕ್ಷಿತವಾಗಿ ಕಳಿಸಿಕೊಟ್ಟಿದೆ ಎಂದರು. ಆದರೆ ಇಬ್ಬರು ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿನಯ್ ತೀರಿಕೊಂಡ ವಿಷಯ ಕೇಳಿ ತುಂಬಾ ಶಾಕ್ ಆಗಿದ್ದರು. ಉಕ್ರೇನ್ ಸೈನಿಕರಿಗೆ ಭಾರತೀಯ ಹಾಗೂ ಕರ್ನಾಟಕ ಸರ್ಕಾರಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಸಾಲದು ಎಂದರು.
ಇನ್ನೂ ತೊದಲಬಾಗಿ ಗ್ರಾಮದ ಹಿರಿಯರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ಭಾರತ ಹಾಗೂ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು ಮತ್ತು ಭಾರತದಲ್ಲಿ ವೈದ್ಯಕೀಯ ಶಿಕ್ಷಣ ವೆಚ್ಚ ಬಹಳ ದುಬಾರಿಯಾಗಿದ್ದು ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಕೈಗೊಂಡು ಬಡ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ಶುಲ್ಕ ನಿಗದಿಮಾಡಬೇಕು ಮತ್ತು ಉಕ್ರೇನ ನಿಂದ ಹಿಂದುರಿಗಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ವ್ಯವಸ್ಥೆಯನ್ನು ಭಾರತದಲ್ಲಿಯೇ ಮಾಡಬೇಕೆಂದು ಜಮಖಂಡಿಯ ತಹಶಿಲ್ದಾರ ಪ್ರಶಾಂತ ಚನಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಉತ್ತರವಾಗಿ ಅವರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದಕ್ಕೆ ಕೃತಜ್ಞತೆ ಸಲ್ಲಿಸಿ ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನ ತರುವುದಾಗಿ ತಿಳಿಸಿದರು ಮತ್ತು ಜಮಖಂಡಿ ತಾಲ್ಲೂಕಿನ ಮೂರು ವಿದ್ಯಾರ್ಥಿಗಳು ಸುರಕ್ಷಿತವಾಗ ತಮ್ಮ ಮನೆಗಳಿಗೆ ಸೇರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ವೃತ್ತ ನೀರಿಕ್ಷಕ ಪ್ರಕಾಶ ಪವಾರ ಸ್ಥಳೀಯರಾದ ಭೀಮಶಿ ಕದಂ, ವಿಜಯಕುಮಾರ ಹಿಪ್ಪರಗಿ, ಸಿದ್ದರಾಯ ಸಾಯಗೊಂಡ, ಸಹದೇವ ಕದಂ, ಶರಣಪ್ಪ ಕರ್ಜಗಿ, ವಿಷ್ಣು ಮಾದ , ಗುರಪ್ಪ ಚೌರಿ ಹಾಗೂ ತೊದಲಬಾಗಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು




