ಮಂಗಳೂರು: ಪ್ರಜಾಪ್ರಭುತ್ವ ಆಶಯದಲ್ಲಿ ಎಲ್ಲರೂ ಸಮಾನರಾಗಿ, ಎಲ್ಲರೂ ಸಮತತ್ವ ನ್ಯಾಯದಲ್ಲಿ ಸಾಗುವುದಕ್ಕೆ ಸಾಧ್ಯವಾಗಬೇಕು ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಎರ್ಮಾಳು ಇಲ್ಲಿನ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ ಚೇಳ್ಯಾರು ಅವರು ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ 111 ವರುಷಗಳ ಸಂಭ್ರಮದ ನೆನಪಿನಲ್ಲಿ ಸಮಾನ ಮನಸ್ಕ ಸಂಘಟನೆಯು ಮಂಗಳೂರಿನಲ್ಲಿ ಆಯೋಜಿಸಿದ “ಮಹಿಳಾ ಸಮಾನತೆ ಹಾಗೂ ಪ್ರಜಾಪ್ರಭುತ್ವ” ಎಂಬ ವಿಷಯದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಎಲ್ಲರೂ ತಾಯ್ತನದ ಭಾವ, ಮಾತೃತ್ವದ ಭಾವವನ್ನು ಹೊಂದಿಕೊಂಡಿರಬೇಕು. ಮಾತೃತ್ವ ಅನ್ನೋದು ಅದು ಕೇವಲ ಹೆಣ್ಣಿಗೆ ಮಾತ್ರ ಮೀಸಲಲ್ಲ ಅದು ಗಂಡು ಹಾಗೂ ಇಡೀ ಸಮಾಜ ಅಳವಡಿಸಿಕೊಳ್ಳಬೇಕು ಎಂದರು.
ಇಡೀ ಜಗತ್ತಿನಲ್ಲಿ ಇರುವ ಕೆಲವೇ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಮಾತೃಮೂಲ ಕುಟುಂಬ ಇರುವುದು ಕರಾವಳಿಯಲ್ಲಿ ಮಾತ್ರ. ನಮ್ಮ ಕರಾವಳಿಯಲ್ಲಿ ಮಾತೃ ಮೂಲ ಕುಟುಂಬ ವ್ಯವಸ್ಥೆ ಇದ್ದ ಕಾರಣ ಹೆಣ್ಣಿಗೆ ಆಸ್ತಿಯ ಒಡೆತನದ ಹಕ್ಕು ಸಿಕ್ಕಿತ್ತು. ಉಳಿದ ಎಲ್ಲಾ ಪ್ರದೇಶಗಳಲ್ಲಿ ಗಮನಿಸಿದರೆ ಹೆಣ್ಣಿಗೆ ಸಿಗುವ ಸ್ಥಾನಮಾನಗಳು, ಆಸ್ತಿಯ ಹಕ್ಕುಗಳು ಕುಟುಂಬದ ಒಳಗೆ ಮತ್ತು ಹೊರಗೆ ನಮ್ಮ ಮಾತೃ ಕೇಂದ್ರಿತ ಕರಾವಳಿಯೂ ಸೇರಿ ಹೆಣ್ಣನ್ನು ಮೂಲೆಗೆ ಕೂರಿಸುವಂತಹ ಕೆಲಸಗಳು ಆಗುತ್ತಿವೆ ಎಂದರು.
ಹೆಣ್ಣಿನ ಕೈಗೆ ಭೂಮಿ, ಆಸ್ತಿ, ಕುಟುಂಬದ ಯಜಮಾನಿಕೆಯನ್ನು ಕೊಡುವಂತಹ ವ್ಯವಸ್ಥೆ ಇದ್ದ ಈ ಕರಾವಳಿಯಲ್ಲೇ ಈಗಿನ ಆಧುನಿಕ ಯುಗದಲ್ಲಿ ಮಾತೃಮೂಲ ಕುಟುಂಬ ವ್ಯವಸ್ಥೆ ನಾಜೂಕಾಗಿ ಪಿತೃ ಪ್ರಧಾನದ ಕಡೆಗೆ ಬದಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರೂ ಮೊನ್ನೆ ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಗಮನಿಸಿರಬಹುದು. ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಂದರೆ ಒಂದು ಪರಸ್ಪರ ಯುದ್ದವೇ ನಡೆದಂತೆ. ಭಾರತ ಪಾಕಿಸ್ತಾನ ಮಹಿಳಾ ತಂಡದ ಕ್ರಿಕೆಟ್ ನಲ್ಲಿ ಭಾರತ ಮಹಿಳಾ ತಂಡ ಗೆದ್ದು ಪಾಕಿಸ್ತಾನದ ತಂಡ ಸೋಲನ್ನಪ್ಪಿತು. ಅಂಗಳದಲ್ಲಿ ಆಟ ಮುಗಿದ ನಂತರ ಪಾಕಿಸ್ತಾನ ತಂಡದ ಹೆಣ್ಣೊಬ್ಬಳ ಪುಟ್ಟ ಮಗುವನ್ನು ಭಾರತ ತಂಡದ ಆಟಗಾರರು ಎತ್ತಿಕೊಂಡು ಸಂಭ್ರಮಿಸಿ ತಾಯ್ತನದ ಸವಿಯನ್ನು ಹಂಚಿಕೊಂಡ ಚಿತ್ರ ಅಂತರಾಷ್ಟ್ರೀಯ ಮಹಿಳಾ ದಿನಕ್ಕೊಂದು ಒಳ್ಳೆಯ ಸಂದೇಶ. ಯಾಕೆಂದರೆ ಇಲ್ಲಿ ದೇಶಗಳ ಗಡಿಯಿಲ್ಲ, ಭಾಷೆಗಳ ಗಡಿಯಿಲ್ಲ ಮತ್ತು ಭಾವಕ್ಕೆ ಯಾವ ಗಡಿಗಳೂ ಇಲ್ಲ ಅನ್ನೋದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತಾಡಿದ ಫ್ರೌಢಶಾಲಾ ಶಿಕ್ಷಕರಾದ ಡಾ.ಪೌಲಿ ಎನ್.ವಿ., ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲಿಕ್ಕಾಗಿ ಸಮರಧೀರ ಹೋರಾಟ ನಡೆಸಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಚಾಲ್ತಿಗೆ ಬಂದ ವಿಶ್ವ ಮಹಿಳಾ ದಿನಾಚರಣೆಯ ಹಿಂದೆ ತ್ಯಾಗ ಬಲಿದಾನಗಳ ಇತಿಹಾಸವಿದೆ. 111 ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದರೂ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ಬದುಕು ತೀರಾ ಸಂಕಷ್ಟದಲ್ಲಿದೆ ಎಂದರು.
ಫ್ರೌಢಶಾಲಾ ಶಿಕ್ಷಕರಾದ ಚಂಚಲಾಕ್ಷಿ ಮಾತನಾಡಿ, ಮಹಿಳಾ ಸಮುದಾಯ ಉತ್ತಮ ಬದುಕನ್ನು ಪಡೆದುಕೊಂಡರೆ ಅದು ಇಡೀ ಸಮಾಜಕ್ಕೆ ಪ್ರಭಾವ ಬೀರುತ್ತದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ಮುನ್ನಡೆ ಸಾಧಿಸುವಂತಹ ಜನಪರ ಮಾನವೀಯ ಚಿಂತನೆಯ ವ್ಯವಸ್ಥೆ ಸಮಾಜದಲ್ಲಿ ಮೂಡುವಂತಾಗಬೇಕು. ಆ ಮೂಲಕ ಇಡೀ ಜಗತ್ತನ್ನು ಮಹಿಳೆಯ ದೃಷ್ಟಿಯಿಂದ ನೋಡುವಂತಾಗಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜರ ವಹಿಸಿದ್ದರೆ, ವೇದಿಕೆಯಲ್ಲಿ LIC ಅಭಿವೃದ್ದಿ ಅಧಿಕಾರಿ ಲತಾ ಕಿಣಿ, ಯುವ ವಕೀಲರಾದ ಸುನಂದಾ ಕೊಂಚಾಡಿ, ಆಶಾ ಬೋಳೂರು, ಪ್ರಮೀಳಾ ಶಕ್ತಿನಗರರ ಉಪಸ್ಥಿತರಿದ್ದರು.




