ಬೆಂಗಳೂರು: ಕಾವ್ಯಾನಂದ ಕಾವ್ಯನಾಮದಿಂದ ಪ್ರಸಿದ್ಧರಾದ ಡಾ. ಸಿದ್ದಯ್ಯ ಪುರಾಣಿಕರು ಐಎಎಸ್ ಅಧಿಕಾರಿಯಾಗಿ ಸ್ವಾತಂತ್ರೋತ್ತರ ಮತ್ತು ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಉತ್ತಮ ಕೆಲಸವನ್ನು ಮಾಡಿದ್ದಾರಲ್ಲದೆ ಕವಿಗಳಾಗಿಯೂ ಉತ್ತಮ ಕಾವ್ಯ, ನಾಟಕ, ಮಕ್ಕಳ ಸಾಹಿತ್ಯವನ್ನು ಬರೆದಿದ್ದು ಎರಡು ಕ್ಷೇತ್ರಗಳಲ್ಲಿಯೂ ಗಾಂಡೀವಿಯಂತಿದ್ದಾರೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಕ್ಕಳ ಲೇಖಕಿ ಡಾ. ಲಲಿತಾ ಹೊಸಪ್ಯಾಟೆ ಅವರಿಗೆ ಕಾವ್ಯಾನಂದ ಪುರಸ್ಕಾರವನ್ನು (ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ) ಪ್ರದಾನ ಮಾಡಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು ಭಾಷಾವಾರು ರಾಜ್ಯಗಳು ರಚನೆಯಾಗುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳಾಗಿ ಮಾನವೀಯತೆಗೆ ಸ್ಪಂದಿಸಿದವರು ಪುರಾಣಿಕರು ಎಂದರು.
ಹರಿದುಹಂಚಿಹೋಗಿದ್ದ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಅಖಂಡ ಕರ್ನಾಟಕ ನಿರ್ಮಾಣದಲ್ಲಿ ಅಧಿಕಾರಿಗಳಾಗಲ್ಲದೆ ಕನ್ನಡಪರವಾಗಿ ಧ್ವನಿಯೆತ್ತಿದರು. ಅವರ “ಹೊತ್ತಿತೊ ಹೊತ್ತಿತು ಕನ್ನಡದ ದೀಪ” ಕವನದಲ್ಲಿ ಸಮಗ್ರ ಕರ್ನಾಟಕದ ಆಶಯ ಹಾಗೂ ಭಾವನಾತ್ಮಕತೆಯನ್ನು ಗಮನಿಸಬಹುದಾಗಿದೆಯೆಂದು ಉದಾಹರಿಸಿದರು.
ಕಾವ್ಯಾನಂದ ಅವರು ಬರೆದ ಆಧುನಿಕ ವಚನ ಸಂಕಲನಗಳಲ್ಲಿ ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸಿರುವುದಲ್ಲದೆ ಮಾರ್ಗೋಪಾಯಗಳನ್ನು ಸೂಚಿಸಿದ್ದಾರೆ. ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ಸಾರಿರುವ ಪುರಾಣಿಕರ ಕಾವ್ಯದ ಕೇಂದ್ರ ಮತ್ತು ತಾತ್ವಿಕತೆ ಮಾನವೀಯತೆಯಾಗಿದೆಯೆಂದು ಪ್ರಶಂಸಿಸಿದರು.
ಇತ್ತೀಚೆಗೆ ದೊಡ್ಡ ಕವಿಗಳೇ ಮಕ್ಕಳ ಸಾಹಿತ್ಯವನ್ನು ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲಿ ಶ್ರೇಷ್ಠ ಮಕ್ಕಳ ಸಾಹಿತ್ಯವನ್ನು ಬರೆದ ಕಾವ್ಯಾನಂದರ ಹೆಸರಿನಲ್ಲಿ ಕೊಡಮಾಡುವ ಪುರಸ್ಕಾರವನ್ನು ಮಕ್ಕಳ ಲೇಖಕಿ ಲಲಿತಾ ಹೊಸಪ್ಯಾಟೆಯವರ ‘ಬ್ಯೂಟಿ ಬೆಳ್ಳಕ್ಕಿ’ ಮಕ್ಕಳ ಕಥಾಸಂಕಲನಕ್ಕೆ ಕೊಟ್ಟಿರುವುದು ಸೂಕ್ತ ಮತ್ತು ಸಮಂಜಸವಾಗಿದೆಯೆಂದು ಅಭಿನಂದಿಸಿದರು.
ಲಲಿತಾ ಹೊಸಪ್ಯಾಟೆಯವರ ‘ಬ್ಯೂಟಿ ಬೆಳ್ಳಕ್ಕಿ’ ಕಥಾಸಂಕಲನವನ್ನು ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ. ಸಂಗಮೇಶ ಗಣಿ, ಮಕ್ಕಳನ್ನು ಸಂವೇದನಾಶೀಲರನ್ನಾಗಿಸುವುದಲ್ಲದೆ ಮಾನವೀಯಗೊಳಿಸಬೇಕಾದ ಬಹುದೊಡ್ಡ ಹೊಣೆಗಾರಿಕೆ ಮಕ್ಕಳ ಸಾಹಿತಿಗಳ ಮೇಲಿದೆಯೆಂದು ಅಭಿಪ್ರಾಯಪಟ್ಟರು.

ಆಧುನಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಮಕ್ಕಳು ಸಹಜ ಬಾಲ್ಯದ ಆನಂದವನ್ನು ಕಳದುಕೊಳ್ಳುತ್ತಿದ್ದಾರೆ. ಮೊಬೈಲ್ ಮೋಹದ ಬಲೆಯೊಳಗೆ ಸಿಕ್ಕು ಕಳೆದುಹೋಗುತ್ತಿದ್ದಾರೆ. ಸಾಹಿತ್ಯ ಮಕ್ಕಳ ಸೃಜನಶೀಲತೆಯನ್ನು ಉದ್ದೀಪಿಸುವ ದಿವ್ಯ ಔಷಧಿಯಾಗಿದೆ. ಕಥೆ, ಕವನಗಳ ಮೂಲಕ ಮಕ್ಕಳನ್ನು ಸೃಜನಶೀಲರನ್ನಾಗಿ ಮತ್ತು ಸಂವೇಧನಾಶೀಲರನ್ನಾಗಿ ರೂಪಿಸಲು ‘ಬ್ಯೂಟಿ ಬೆಳ್ಳಕ್ಕಿ’ ಕಥಾಸಂಕಲನ ಗುಣಾತ್ಮಕವಾದುದಾಗಿದೆಯೆಂದು ಕಥೆಗಳ ಉದಾಹರಣೆಗಳ ಮೂಲಕ ಉದಾಹರಿಸಿದರು.
ಕಾವ್ಯಾನಂದ ಪುರಸ್ಕೃತ ಲಲಿತಾ ಹೊಸಪ್ಯಾಟೆಯವರು ಮಕ್ಕಳ ಸಾಹಿತ್ಯದಲ್ಲಿ ಅಖಂಡ ಕರ್ನಾಟಕದಲ್ಲಿ ಛಾಪನ್ನು ಮೂಡಿಸಿರುವ ಕಾವ್ಯಾನಂದ ಹೆಸರಿನಲ್ಲಿ ತನ್ನ ಮಕ್ಕಳ ಸಾಹಿತ್ಯ ಕೃತಿಗೆ ನೀಡುತ್ತಿರುವ ಬಗೆಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ಅಧ್ಯಕ್ಷರಾದ ವಿಜಯಾ ನಂದೀಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಪ್ರಸನ್ನಕುಮಾರ ಪುರಾಣಿಕ ವಂದಿಸಿದರು. ಕಾರ್ಯದರ್ಶಿ ಡಾ. ರುದ್ರೇಶ್ ಅದರಂಗಿ ನಿರೂಪಿಸಿದರು. ಟ್ರಸ್ಟಿನ ಸದಸ್ಯರಾದ ಡಾ. ಬಸವರಾಜ ಕಲ್ಗುಡಿ ಹಾಗೂ ಭಾರತಿ ಮೃತ್ಯುಂಜಯ ಉಪಸ್ಥಿತರಿದ್ದರು.




