ಸಂವಿಧಾನದ ಆಶಯಗಳಿಗೆ ಧಕ್ಕೆ ಆಗದೆ,ಸಾಮಾಜಿಕ ನ್ಯಾಯ ನಿರ್ಮಾಣವಾಗಬೇಕೆಂದರೆ ನಿಸ್ವಾರ್ಥ, ಕಟಿಬದ್ಧ, ಆದರ್ಶಪ್ರಾಯ ಎಸ್ಡಿಪಿಐಯಿಂದ ಮಾತ್ರ ಸಾಧ್ಯ: ಅಪ್ಸರ್ ಕೊಡ್ಲಿಪೇಟೆ
ಚಿಕ್ಕಬಳ್ಳಾಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಅನ್ಸಾರ್ ಪಾಷ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಎಂ ಡಿ ಫರೀದುದ್ದೀನ್ ಮತ್ತು ಖಲೀದುಲ್ಲಾ ಷರೀಫ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಅಜ್ಘರ್ ಖಾನ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯದರ್ಶಿಯಾಗಿ ಖಾಜಾ ಷರೀಫ್ ಮತ್ತು ಕೋಶಾಧಿಕಾರಿಯಾಗಿ ಯಾರಬ್ ಜಿ ಎಂ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಶಂಶುದ್ದಿನ್, ಮುಸ್ತಾಫ ಮತ್ತು ಸುಹೈಲ್ ಆಯ್ಕೆಯಾಗಿದ್ದಾರೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಶಿಡ್ಲಘಟ್ಟ ತಾಲ್ಲೂಕಿನ ಪಕ್ಷದ ಕಚೇರಿಯಲ್ಲಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಪ್ರತಿನಿಧಿ ಸಭೆಯನ್ನು, ಎಸ್ ಡಿ ಪಿ ಐ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಉದ್ಘಾಟಿಸಿದರು. ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಂದು ಪ್ರಬಲವಾಗಿರುವ ಎರಡು ರಾಜಕೀಯ ಪಕ್ಷಗಳೆಂದರೆ ಬಿಜೆಪಿ ಮತ್ತು ಕಾಂಗ್ರೆಸ್. ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ನಡೆಸಿದ ಮೈತ್ರಿಯಿಂದಾಗಿ ತನ್ನ ಅಸ್ತಿತ್ವವನ್ನೇ ನಿಧಾನವಾಗಿ ಕಳೆದುಕೊಳ್ಳುತ್ತಾ ಬರುತ್ತಿದೆ. ಮತ್ತು ಎಸ್ ಡಿ ಪಿ ಐ ಮೂರನೇ ಸ್ಥಾನವನ್ನು ತುಂಬುತ್ತಿದೆ ಎಂದರು.
ಬಿಜೆಪಿಯು ಕೋಮುವಾದಿ, ದ್ವೇಷ ರಾಜಕಾರಣವನ್ನು ಹೊಂದಿರುವ ಪಕ್ಷವಾಗಿರುವುದರಿಂದ ಜಾತ್ಯತೀತವಾದಿಗಳು ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಸ್ವಯಂಘೋಷಿತ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಜಾತ್ಯತೀತವಾಗಿ ನಡೆದುಕೊಂಡಿದೆಯೇ ಎಂಬುದು ಅವಲೋಕನ ಮಾಡಬೇಕಾದ ವಿಷಯವಾಗಿದೆ ಎಂದರು.
ಸ್ವಜನ ಪಕ್ಷಪಾತ, ಜಾತಿವಾದ, ಭ್ರಷ್ಟಾಚಾರ ಮುಂತಾದ ಎಲ್ಲ ಬಗೆಯ ಪಿಡುಗುಗಳೂ ಇಲ್ಲಿ ನಡೆಯುತ್ತಿದೆ. ಮೃದು ಹಿಂದುತ್ವದೊಂದಿಗೆ ಕೋಮುವಾದವೂ ಇಲ್ಲಿ ಇದೆ. ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸಂವಿಧಾನದ ಆಶಯಗಳ ಮೇಲಾಗುವ ,ಅಲ್ಪಸಂಖ್ಯಾತ- ಹಿಂದುಳಿದ ವರ್ಗಗಳ ಮೇಲೆ ಆಗುತ್ತಿರುವ ರಾಜಕೀಯ -ಆರ್ಥಿಕ- ಸಾಂಸ್ಕೃತಿಕ ದಾಳಿಗಳ ಸಂದರ್ಭದಲ್ಲಿ ಕಾಂಗ್ರೆಸ್ ಜಾಣ ಮೌನ ವಹಿಸಿದೆ ಎಂದರು.
ಸಂವಿಧಾನದ ಆಶಯಗಳಿಗೆ ಎಳ್ಳಷ್ಟೂ ಧಕ್ಕೆ ಆಗಬಾರದು. ಸಾಮಾಜಿಕ ನ್ಯಾಯ ನಿರ್ಮಾಣವಾಗಬೇಕೆಂದರೆ ನಿಸ್ವಾರ್ಥ, ಕಟಿಬದ್ಧ, ಆದರ್ಶಪ್ರಾಯ ಎಸ್ಡಿಪಿಐಯಿಂದ ಮಾತ್ರ ಸಾಧ್ಯ. ಆದ್ದರಿಂದ ಪರ್ಯಾಯ ರಾಜಕೀಯದ ಸ್ಥಾನದಲ್ಲಿ ಎಸ್ಡಿಪಿಐ ಏಕೈಕ ಪಕ್ಷವಾಗಿ ಉಳಿಯಲಿದೆ ಎಂದರು.
ಸಂಭಾವ್ಯ ಚುನಾವಣೆಗಳು ಇಲ್ಲದ ಕಾರಣ ಅತ್ಯಂತ ಬೇಜವಾಬ್ದಾರಿಯುತವಾಗಿ (ಪೆಟ್ರೋಲ್ ಬೆಲೆ ಏರಿಕೆಯಂತಹ ಸೂಕ್ತ ಕಾರಣಗಳಿಲ್ಲದೆಯೇ) ರಾಜ್ಯ ಸರಕಾರವು ಬಸ್ ಪ್ರಯಾಣದರವನ್ನು 15% ಏರಿಕೆ ಮಾಡಿದೆ. ಬಿಜೆಪಿ ಸರಕಾರ ನಡೆಸುತ್ತಿದ್ದಾಗ ಏರಿದ ಬೆಲೆಗಳ ಪಟ್ಟಿಯನ್ನು ಇದೀಗ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಸಿದ್ದರಿಂದ ನಾವು ಕೂಡ ಬೆಲೆ ಏರಿಸಿದ್ದೇವೆ ಎಂದು ಉತ್ತರಿಸಿದಂತಾಗಿದೆ. ಜನಸಾಮಾನ್ಯರ ಬವಣೆಯ ಬಗ್ಗೆ ಪರಿವೆ ಇಲ್ಲದ ಸರಕಾರಗಳಿಂದ ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ ಎಂದರು
ಕೊಡಗು ಜಿಲ್ಲೆಯಲ್ಲಿ ಹಲಸು ಕಿತ್ತದ್ದಕ್ಕಾಗಿ ಕೊರವ ಸಮುದಾಯದ ಯುವಕನೋರ್ವನನ್ನು ಗುಂಡಿಕ್ಕಿ ಕೊಂದ ಘಟನೆ ಹಸಿರುವಾಗಲೇ, ಜೈ ಭೀಮ್ ಹಾಡು ಹಾಕಿದ ದಲಿತ ಯುವಕನುಬ್ಬನನ್ನು ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ ಎಂದರು.
ನಾಡಿನ ಹೆಮ್ಮೆಯ ಚಿಂತಕ, ಪ್ರಸಿದ್ಧ ವಿದ್ವಾಂಸ ಸಿ.ಎಂ.ಸಿದ್ದರಾಮಯ್ಯ ಆವರ ಆಪ್ತ ಮುಝಫ್ಫರ್ ಅಸಾದಿಯವರ ಹೆಸರನ್ನು ವಿ.ವಿ.ಉಪಕುಲಪತಿಯ ಶಿಫಾರಸ್ಸಿಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅತ್ಯಂತ ಅರ್ಹವಾದ ಈ ಶಿಫಾರಸ್ಸನ್ನು ಕೋಮುವಾದಿ ರಾಜ್ಯಪಾಲರು ವಾಪಸ್ ಕಳುಹಿಸಿದಾಗ ಅದೇ ಕಡತವನ್ನು ಪುನಃ ಕಳುಹಿಸಿದರೆ ನೇಮಕವಾಗುವ ಎಲ್ಲ ಅವಕಾಶಗಳು ಇದ್ದವು. ಆದರೆ ಜಾತಿವಾದಿ ಸಿ.ಎಂ.ಸಿದ್ದರಾಮಯ್ಯರವರು ರಾಜ್ಯಪಾಲರ “ಇನ್ನೊಮ್ಮೆ ಕಳುಹಿಸಿದರೆ ಬಿಜೆಪಿಯ ಮಿತ್ರರ ಮುಂದೆ ನನಗೆ ಮುಜುಗರ ವಾಗುತ್ತದೆ “ಎಂಬ ಕೋರಿಕೆಯನ್ನು ಮಾನ್ಯ ಮಾಡಿ ಆ ಕಡತವನ್ನು ಪುನಃ ಕಳುಹಿಸದೆ ನಾಡಿಗೆ, ಮುಸ್ಲಿಮರಿಗೆ, ವಿಶೇಷತಃ ಮುಝಫ್ಫರ್ ಅಸಾದಿ ಅವರಿಗೆ ವಂಚಿಸಿದ್ದಾರೆ ಎಂದರು.
ಬಜೆಟ್ ನಲ್ಲಿ 10,000 ಕೋಟಿ ಅನುದಾನ ಮುಸ್ಲಿಂ ಸಮುದಾಯಕ್ಕೆ ಮೀಸಲಿಡುವುದಾಗಿ ಭರವಸೆ ಕೊಟ್ಟು ಇದೀಗ ಇದ್ದ ಅನುದಾನವನ್ನು ಕಡಿತಗೊಳಿಸಿದ ನಮ್ಮ ಸರಕಾರಕ್ಕೆ ಬಿಜೆಪಿಯ ಐ ಟಿ ಸೆಲ್ ಎಂದರೆ ವಿಪರೀತ ಭಯ. ಅಲ್ಪಸಂಖ್ಯಾತ ವಿದ್ಯಾರ್ಥಿವೇತನದಲ್ಲಿ ಕಡಿತ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಲಾಗುವ ಗೌರವ ಧನದಲ್ಲಿ ಕಡಿತ ಹೀಗೆ ಅಲ್ಪಸಂಖ್ಯಾತ ವಿರೋಧಿ ಧೋರಣೆ ತಳೆಯುತ್ತಲೇ ಬಂದಿದೆ ಎಂದರು.
2ಬಿ ಮೀಸಲಾತಿಯಿಂದಾಗಿ ಪ್ರತಿ ವರ್ಷ ಒಂದು ಲಕ್ಷ ಪದವೀಧರರ ಪೈಕಿ 4000 ಪದವೀಧರರು ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದರು. ಆದರೆ ಪ್ರಥಮ ಸಂಪುಟ ಸಭೆಯಲ್ಲಿ ಮರುಸ್ಥಾಪಿಸುತ್ತೇವೆ ಎಂದ 2ಬಿ ಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟ್ ಗೆ ಒಂದು ಅಫಿಡವಿಟ್ ಸಲ್ಲಿಸಲು ಬಿಜೆಪಿಯ ಐಟಿ ಸೆಲ್ ಗೆ ಹೆದರುತ್ತಿದ್ದಾರೆ ಎಂದರು.
ಎಸ್ಡಿಪಿಐಯು ಸಂವಿಧಾನದ ಆದರ್ಶ ಸಮಾಜದ ಕಟ್ಟಕಡೆಯ ವ್ಯಕ್ತಿಯೊಂದಿಗೆ ಜೋಡಿಸಲು ಬಯಸುತ್ತದೆ. ಮಹಿಳೆಯರ ಬಡವರ ದಲಿತರ ಆದಿವಾಸಿಗಳ ರೈತರ ಕಾರ್ಮಿಕರ ಅಲ್ಪಸಂಖ್ಯಾತರ ಅಶೋತ್ತರಗಳೊಂದಿಗೆ ಜೋಡಿಸಲು ಬಯಸುತ್ತದೆ. ಏಕೆಂದರೆ ಸಂವಿಧಾನವು ಭವಿಷ್ಯ ಭಾರತದ ನೀಲ ನಕ್ಷೆಯಾಗಿದೆ. ಆದ್ದರಿಂದ ಸಂವಿಧಾನ ಉಳಿಸುವ ಮತ್ತು ನಮ್ಮ ಹೋರಾಟವು ಭಾರತದ ಸ್ವಾಭಿಮಾನವನ್ನು ಉಳಿಸುವ ಹೋರಾಟವಾಗಿದೆ. ಆದ್ದರಿಂದಲೇ ಎಸ್ಡಿಪಿಐ ಮಾತ್ರ ಪರ್ಯಾಯ ರಾಜಕೀಯವಾಗಿದೆ ಎಂದರು.
ನಮ್ಮ ನಾಯಕರ ತ್ಯಾಗ -ಬಲಿದಾನಗಳು ವ್ಯರ್ಥವಾಗದಂತೆ ನೋಡುವ ಜವಾಬ್ದಾರಿ ನಮ್ಮದಾಗಿದೆ. ಈ ವಿಚಾರದಲ್ಲಿ ನಮ್ಮೆದೆಯ ನೋವಿನ-ಸಂಕಟದ-ದುಖಃದ, ಆಕ್ರೋಶದ ಜ್ವಾಲೆಯನ್ನು ಸವಾಲಾಗಿ ಪರಿವರ್ತಿಸಬೇಕಿದೆ. ಅದು ಪಕ್ಷದ ಸಧೃಡ ಸಂಘಟನೆ ಮತ್ತು ಚುನಾವಣಾ ಗೆಲುವಾಗಿ ಹೊರ ಹೊಮ್ಮಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾ ಪ್ರತಿನಿಧಿ ಸಭೆಯಲ್ಲಿ ಪಕ್ಷದ ಕಳೆದ ಒಂದೂವರೆ ವರ್ಷಗಳ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅಗತ್ಯ ಸಲಹೆಗಳನ್ನು ಪರಿಗಣಿಸಿ ಅನುಮೋದನೆ ನೀಡಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿ ಮುಂಬರಲಿರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು.
ಜಿಲ್ಲಾ ಸಮಿತಿಯ ಆಯ್ಕೆ ಚುನಾವಣಾ ಪ್ರಕ್ರಿಯೆಯನ್ನು, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಇಲ್ಯಾಸ್ ಬೆಂಗಳೂರು ನಡೆಸಿಕೊಟ್ಟರು. ನಿರ್ಗಮಿತ ಜಿಲ್ಲಾಧ್ಯಕ್ಷರು ಪಕ್ಷದ ಕಡತಗಳನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.



