ಬೆಂಗಳೂರು: ವಿಧಾನ ಪರಿಷತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಸಿಲುಕಿರುವ ಬಿಜೆಪಿ ಸದಸ್ಯ ಸಿ.ಟಿ.ರವಿ ಇಡೀ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನಿಂದಿಸಿದ್ದೇನೆ ಎಂಬ ಆರೋಪದಡಿ ನನ್ನನ್ನು ಬಂಧನ ಮಾಡಿರುವುದು ಮತ್ತು ನಂತರದಲ್ಲಿ ನಿಗೂಢವಾಗಿ ನಡೆದುಕೊಂಡಿರುವ ಪೊಲೀಸರ ನಡವಳಿಕೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸದನದ ಒಳಗೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸಭಾಪತಿಯವರ ಅನುಮತಿ ಇಲ್ಲದೇ ಪ್ರಕರಣ ದಾಖಲಿಸಿರುವುದು ಮತ್ತು ಬಂಧಿಸಿರುವುದು ಅಪರಾಧ. ಬಂಧನದ ಬಳಿಕ 15 ಗಂಟೆಗಳ ಕಾಲ ಪೊಲೀಸರು ನನ್ನನ್ನು ಸುತ್ತಾಡಿಸಿದರು. ಆ ಸಂದರ್ಭದಲ್ಲಿ ಅವರು ನಿಗೂಢವಾಗಿ ನಡೆದುಕೊಂಡರು. ಪ್ರಭಾವಿ ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡಿ ನಿರ್ದೇಶನ ನೀಡುತ್ತಿದ್ದರು. ನನ್ನ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಎಂಬ ಅನುಮಾನ ಮೂಡಿತ್ತು ಎಂದರು.
ಈ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಪೊಲೀಸರ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಗೃಹ ಇಲಾಖೆ ಯಾರ ಹಿಡಿತದಲ್ಲಿದೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉತ್ತರ ನೀಡಬೇಕು. ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿರುವ ಅನುಮಾನ ಇದೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದರು.
ಬೆಳಗಾವಿ ಲಕ್ಷ್ಮೀ ಅವರ ಪ್ರದೇಶ. ಅಲ್ಲಿಂದ ರವಿ ಬದುಕಿ ಬಂದದ್ದೇ ಅದೃಷ್ಟ ಎಂಬಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿ ಮತ್ತು ಕನಕಪುರಗಳು ನಾನಾ ರಿಪಬ್ಲಿಕ್‌ಗಳಾ ಎಂದು ಪ್ರಶ್ನಿಸಿದರು.
ನನ್ನ ರಕ್ಷಣೆಯ ಹೊಣೆ ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಶಿವಕುಮಾರ್ ಮಾತನಾಡಿದ್ದಾರೆ. ನಮ್ಮ ಸಂಸ್ಕೃತಿ, ಶಿವಕುಮಾರ್ ಸಂಸ್ಕೃತಿ ಎರಡೂ ಜನರಿಗೆ ಗೊತ್ತು. ಜನರೇ ನಿರ್ಧಾರ ಮಾಡುತ್ತಾರೆ. ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದರು.
ಇದಕ್ಕೂ ಮುನ್ನ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ ಸಿಟಿ ರವಿ ಅವರಿಗೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಹಾರ ಹಾಕಿ ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಸಿ.ಟಿ.ರವಿ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ್ದಾರೆ. ಇದೇ ವೇಳೆ ಕೈ ಮುಗಿದು ಧನ್ಯವಾದ ಹೇಳಿರುವ ಸಿ.ಟಿ.ರವಿಗೆ, ನಿಮೊಂದಿಗೆ ನಾವಿದ್ದೇವೆ, ಹೆದರಬೇಡಿ ಎಂದು ಧೈರ್ಯ ತುಂಬಿದರು.


