ಸಂವಿಧಾನದ 75 ವರ್ಷದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ ವಿಚಾರದಲ್ಲಿ ನಡೆಯುತ್ತಿರುವುದು ಚರ್ಚೆಯಲ್ಲ, ಕೇವಲ ವಾಗ್ವಾದ ಎಂಬುದನ್ನ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನ ಗಮನಿಸಿದಾಗ ತಿಳಿದು ಬರುತ್ತದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಕಳೆದ 75 ವರ್ಷದ ಅವಧಿಯಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ತೆಗೆದುಕೊಂಡ ಕ್ರಮಗಳು, ಈ ನಿಟ್ಟಿನಲ್ಲಿ ಆಗಿರುವಂತಹ ಲೋಪಗಳು, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಸಂವಿಧಾನದ ಆಶಯಗಳನ್ನ ಅನುಷ್ಠಾನಗೊಳಿಸಲು ಅನುಸರಿಸಬೇಕಾದ ಮಾರ್ಗೋಪಾಯಗಳು, ಇವುಗಳ ಬಗ್ಗೆ ಎಲ್ಲಿಯೂ ಚರ್ಚೆಯಾಗುತ್ತಿಲ್ಲ. ಕೇವಲ ವಿರೋಧ ಪಕ್ಷದವರು ಆಡಳಿತ ಪಕ್ಷದವರನ್ನ ಟೀಕಿಸುವುದು, ಆಡಳಿತ ಪಕ್ಷದವರು ವಿರೋಧ ಪಕ್ಷದಲ್ಲಿ ಸತ್ತು ಸ್ವರ್ಗ ಸೇರಿರುವ ಎಲ್ಲಾ ನಾಯಕರನ್ನು ಕೀಳು ಮಟ್ಟದಲ್ಲಿ ಮಾತನಾಡಿ ಹಂಗಿಸುವುದು ಇಷ್ಟಕ್ಕೆ ಮಾತ್ರ ಈ ಚರ್ಚೆ ಸೀಮಿತವಾಗಿದೆ. ಇದರಿಂದ ಮೂರು ಕಾಸಿನ ಪ್ರಯೋಜನವು ಆಗುವುದಿಲ್ಲ.
ಬಿಜೆಪಿಯ ಸದಸ್ಯರು ಅದರಲ್ಲೂ ಕೆಲವರು ಇನ್ನೂ ಈಗಷ್ಟೇ ಸದನವನ್ನ ಪ್ರವೇಶಿಸಿರುವವರು ಚರಿತ್ರೆಯನ್ನು ಸರಿಯಾಗಿ ಓದದೆ ಕಲಾಪದ ವಿವರಗಳನ್ನು ಅಧ್ಯಯನ ಮಾಡದೆ, ಕೇವಲ ಪೂರ್ವಗ್ರಹಪೀಡಿತರಾಗಿ ನೆಹರುರವರನ್ನ, ಶ್ರೀಮತಿ ಇಂದಿರಾಗಾಂಧಿರವರನ್ನ ಹಾಗೂ ರಾಜೀವ್ ಗಾಂಧಿ ಅವರನ್ನು ಟೀಕಿಸುವುದಕ್ಕೆ ತಮ್ಮ ಮಾತುಗಳನ್ನ ಸೀಮಿತ ಮಾಡಿಕೊಂಡಿದ್ದಾರೆ.
ಸಮಾಜವಾದದ ವಿಚಾರದಲ್ಲಿ ಕವಡೆ ಕಾಸಿನ ಮಾಹಿತಿಯೂ ಇಲ್ಲದೆ ಸಮಾಜವಾದದ ಬಗ್ಗೆ ಹಗುರವಾಗಿ ಮಾತನಾಡುವುದು ಅವರ ಬುದ್ಧಿಮಟ್ಟವನ್ನು ತೋರಿಸುತ್ತದೆ. ಲೋಹಿಯಾರವರು, ಜೆ ಪಿ ರವರು, ಆಚಾರ್ಯ ನರೇಂದ್ರ ದೇವ ಇವರುಗಳು, ಸಮಾಜವಾದವನ್ನ ಸ್ಥಾಪಿಸಿದ್ದು ಮತ್ತು ಆ ವಿಚಾರಗಳನ್ನ ಮುಂದೆ ಮಾಡಿಕೊಂಡು ಹೋರಾಟವನ್ನು ಮಾಡಿದ್ದು, ಭಾರತ ದೇಶದ ಚರಿತ್ರೆಯಲ್ಲಿ ದೊಡ್ಡದಾದಂತಹ ಪರಿವರ್ತನೆಗೆ ಕಾರಣವಾಗಿದೆ. ಸರ್ಕಾರಗಳು ಸಮಾಜವಾದದ ಅನೇಕ ವಿಚಾರಗಳನ್ನ ಕಾರ್ಯಕ್ರಮಗಳಲ್ಲಿ ಅನುಷ್ಠಾನಗೊಳಿಸಿದೆ.
ಜಾತ್ಯತೀತತೆಯ ಬಗ್ಗೆ ಕುರುಡರು ಆನೆಯನ್ನ ವರ್ಣಿಸಿದಂತೆ ಅಲ್ಪ ಜ್ಞಾನಿಗಳು ತಮಗಿಷ್ಟ ಬಂದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವುದು ನೋಡಬಹುದಾಗಿದೆ.
ನರೇಂದ್ರ ಮೋದಿರವರು ಬರುವ ಮೊದಲು ದೇಶದ ಜನತೆ ಬ್ಯಾಂಕುಗಳಲ್ಲಿ ಖಾತೆಯನ್ನೇ ತೆರೆದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡುವುದು ಬಾಲಿಶವಾಗುತ್ತದೆ. ಶ್ರೀಮತಿ ಇಂದಿರಾಗಾಂಧಿರವರು ಬ್ಯಾಂಕುಗಳನ್ನ ರಾಷ್ಟ್ರೀಕರಣ ಮಾಡಿದ ನಂತರ ಸಾಮಾನ್ಯ ಜನರು ಬ್ಯಾಂಕುಗಳ ಕಡೆಗೆ ತಿರುಗಿ ನೋಡುವಂತಾಯಿತು. ಭಾರತ ದೇಶದಲ್ಲಿ ಬಡವರ ಪಾಲಿಗೆ ಬ್ಯಾಂಕಿನ ಬಾಗಿಲು ತೆರೆದದ್ದು ಈ ಕಾರಣದಿಂದ, ಇದು ನೆನಪಿರಲಿ ಜನಾರ್ಧನ ಪೂಜಾರಿರವರು ಹಲವಾರು ದಶಕಗಳ ಹಿಂದೆಯೇ ಸಣ್ಣ ಪ್ರಮಾಣದಲ್ಲಿ ಸಾಲವನ್ನು ನೀಡಿ ಲಕ್ಷಾಂತರ ಮಂದಿಗೆ ಸ್ವಯಂ ಉದ್ಯೋಗಕ್ಕೆ ಚಾಲನೆಯನ್ನು ನೀಡಿರುತ್ತಾರೆ. ಆ ಸಾಲಗಳಿಗೆ ಯಾವುದೇ ಜಾಮೀನು ಇರಲಿಲ್ಲ.
ಅದೇ ರೀತಿಯಲ್ಲಿ ರಾಜೀವ್ ಗಾಂಧಿರವರು ಪ್ರಧಾನ ಮಂತ್ರಿ ಆದಾಗ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ ಎಂಬ ಕಾರ್ಯಕ್ರಮ ಕೊಟ್ಟು ಕೋಟ್ಯಾಂತರ ನಿರುದ್ಯೋಗಿಗಳಿಗೆ ಒಂದು ಲಕ್ಷ ರೂಪಾಯಿಗಳ ಬ್ಯಾಂಕಿನ ಸಾಲವನ್ನು ನೀಡಿರುತ್ತಾರೆ.
ಡಾ.ಮನಮೋಹನ್ ಸಿಂಗ್ ರವರು 1991ರಲ್ಲಿ ಶ್ರೀ ನರಸಿಂಹರಾಯರ ಸಂಪುಟದಲ್ಲಿ ಅರ್ಥ ಸಚಿವರಾದ ಸಂದರ್ಭದಲ್ಲಿ ಮಂಡಿಸಿದಂತಹ ಮುಂಗಡಪತ್ರ ಭಾರತ ದೇಶದ ಆರ್ಥಿಕ ಪ್ರಗತಿಗೆ ನಾಂದಿ ಆಯಿತು. ಅವರು ಜಾರಿಗೆ ತಂದ ಕ್ರಾಂತಿಕಾರಿ ಕಾರ್ಯಕ್ರಮಗಳು ಅನುಸರಿಸಿದ ಕಠಿಣ ಮಾರ್ಗಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಇಂದು ಭಾರತ ದೇಶ ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದ್ದರೆ ಅದಕ್ಕೆ ಕಾರಣ ಡಾ. ಮನಮೋಹನ್ ಸಿಂಗ್ ಎಂಬುದನ್ನ ಆರ್ಥಿಕತೆಯ ಸಾಮಾನ್ಯ ಜ್ಞಾನ ಇರುವವರು ಹೇಳುತ್ತಾರೆ.
ಭಾರತ ದೇಶದಲ್ಲಿ 2014ರ ಮುನ್ನ ಶೇಕಡ 82ರಷ್ಟು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿತ್ತು. ಕೇವಲ ಕೆಲವೇ, ಕೆಲವು ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟು ಮೋದಿ ಅವರು ಭಾರತ ದೇಶದ ಎಲ್ಲಾ ಹಳ್ಳಿಗೆ ವಿದ್ಯುತ್ ಸಂಪರ್ಕವನ್ನು ಕೊಟ್ಟರು ಎಂದು ಹೇಳುವ ಮಾತು ಯಾರು ಒಪ್ಪುವಂತದ್ದಲ್ಲ.
ಬಡತನವನ್ನ ನಿರ್ಮೂಲದ ಮಾಡುವ ಸಲುವಾಗಿ ಶ್ರೀಮತಿ ಇಂದಿರಾ ಗಾಂಧಿರವರು ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದರು. ಪಿಂಚಣಿ ಯೋಜನೆಗಳನ್ನು ಜಾರಿಗೆ ತಂದರು. ಇವುಗಳ ಕಾರಣದಿಂದಾಗಿ ದಿನದಿಂದ, ದಿನಕ್ಕೆ ಬಡತನದ ರೇಖೆಯಿಂದ ಕೋಟಿ, ಕೋಟಿ ಭಾರತೀಯರು ಹೊರಬರಲು ಸಾಧ್ಯವಾಯಿತು. ಆದರೆ ಮೋದಿರವರು ಬಂದಮೇಲೆ ಬಡತನ ನಿವಾರಣೆ ಯಾಗುತ್ತಿದೆ ಎಂಬ ಹಸಿ ಸುಳ್ಳುಗಳನ್ನು ಹೇಳಬಾರದು.
ಭಾರತ ದೇಶದಲ್ಲಿ ಸ್ವಾತಂತ್ರ ಬಂದ ಆರಂಭದಲ್ಲಿಯೇ ನೆಹರೂರವರು ರೂಪಿಸಿದ ಪಂಚವಾರ್ಷಿಕ ಯೋಜನೆಗಳು, ಅವರು ನಿರ್ಮಿಸಿದ ಅಣೆಕಟ್ಟುಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಭಾರತ ದೇಶದ ಬೆಳವಣಿಗೆಗೆ ನಾಂದಿಯಾಗಿದೆ.
ಸಾಕ್ಷರತೆಯ ಪ್ರಮಾಣ ದೇಶದಲ್ಲಿ ಹೆಚ್ಚಲು ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ಸ್ಥಾಪಿಸಿದಂತಹ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು, ಉನ್ನತ ಅಧ್ಯಯನದ ಶಿಕ್ಷಣಕ್ಕಾಗಿ ಸ್ಥಾಪಿಸಿದ ಸಂಸ್ಥೆಗಳು, ನಿರ್ಮಿಸಿದಂತಹ ಶಾಲೆಗಳು, ಕಾಲೇಜುಗಳು ಕಾರಣವಾಗಿವೆ. ಕೇವಲ ಕಳೆದ ಹತ್ತು ವರ್ಷದಲ್ಲಿ ದೇಶದ ಸಾಕ್ಷರತೆ ಪ್ರಮಾಣ ಹೆಚ್ಚಾಗಲಿಲ್ಲ.
ಭಾರತದ ರಕ್ಷಣೆಯ ವಿಚಾರದಲ್ಲಿ ಶ್ರೀಮತಿ ಇಂದಿರಾ ಗಾಂಧಿರವರಷ್ಟು ಕಠಿಣವಾದಂತಹ ನಿರ್ಧಾರಗಳನ್ನು ಯಾವ ಪ್ರಧಾನಿಯು ತೆಗೆದುಕೊಳ್ಳಲು ಸಾಧ್ಯವಿಲ್ಲ. 1971 ರಲ್ಲಿ ಚೀನಾ ದೇಶದ ಒತ್ತಡವನ್ನು ಲೆಕ್ಕಿಸದೆ ಸಿಕ್ಕಿಂ ಪ್ರದೇಶವನ್ನು ಭಾರತದ ರಾಜ್ಯವೆಂದು ಘೋಷಿಸಿದ್ದು ಸಾಮಾನ್ಯ ಸಂಗತಿಯಲ್ಲ.
ಸಂವಿಧಾನದ ನಿಜವಾದ ಆಶಯಗಳು ಎಂದರೆ ಅಸ್ಪೃಶ್ಯತೆಯನ್ನ ವಿರೋಧಿಸುವುದು, ಆದರೆ ಭಾಷಣ ಮಾಡುವ ಬಹಳಷ್ಟು ಮಂದಿಯ ಬದುಕಿನಲ್ಲಿ ಇಂದಿಗೂ ಸಹ ಶ್ರೇಷ್ಠತೆಯ ಅಹಂಕಾರ ತುಂಬಿದೆ, ಅವರು ಆರಾಧಿಸುವ ಸಂಸ್ಥೆಗಳು, ಅವರು ಗೌರವಿಸುವ ಧಾರ್ಮಿಕ ನಾಯಕರುಗಳು, ಅಸ್ಪೃಶ್ಯತೆಯ ವಿಚಾರದಲ್ಲಿ ಒಂದು ದಿನವೂ ಸಹ ಬಾಯಿ ಬಿಡುತ್ತಿಲ್ಲ. ಸಮಾನತೆ ಸಾಮಾಜಿಕ ನ್ಯಾಯ, ಇವರಿಗೆ ಇಷ್ಟವಾಗುವ ಸಂಗತಿಯಲ್ಲ. ಆದರೂ ಸಹ ಸಂವಿಧಾನದ ಬಗ್ಗೆ ಮಾತನಾಡಿದ್ದೇ ಹೆಚ್ಚು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪ್ರಸಂಗವನ್ನೇ ಮತ್ತೆ ಪ್ರಸ್ತಾಪ ಮಾಡುತ್ತಾ ಅಂಬೇಡ್ಕರ್ ಅವರ ಬಗ್ಗೆ ತಮಗೆ ಮಾತ್ರ ಪ್ರೀತಿ ಇದೆ ಎಂಬ ರೀತಿಯಲ್ಲಿ ಭಾಷಣಗಳು ಬೇಕಿಲ್ಲ. ಅಂಬೇಡ್ಕರ್ ರವರು ಚುನಾವಣೆಯಲ್ಲಿ ಸೋತಿರಬಹುದು ಅಂದು. ಆದರೆ ಭಾರತ ದೇಶದ ಜನತೆಯ ಹೃದಯದಲ್ಲಿ ಅವರು ಗಳಿಸಿರುವ ಪ್ರೀತಿಗೆ ಸೂರ್ಯ ಚಂದ್ರರು ಇರುವ ತನಕ ಸೋಲಾಗುವುದಿಲ್ಲ.
ಮುಂದಿನ ದಿನಗಳಲ್ಲಾದರೂ ಯಾವುದಾದರೂ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯುವ ಸಂದರ್ಭದಲ್ಲಿ ಗಂಭೀರತೆ ಇರಲಿ, ಅರ್ಥಪೂರ್ಣವಾಗಿರಲಿ, ಕೇವಲ ಚಪ್ಪಾಳೆ ಗಿಟ್ಟಿಸಿಕೊಳ್ಳಲು, ತಮ್ಮ ತಮ್ಮ ಬೆಂಬಲಿಗರಿಂದ ಬೆಂಚು ತಟ್ಟಿಸಿಕೊಳ್ಳಲು ಮಾತುಗಳನ್ನಾಡುವುದರಿಂದ ಯಾವ ಪ್ರಯೋಜನವಾಗುವುದಿಲ್ಲ ಯಾವ ಬದಲಾವಣೆ ಆಗುವುದಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




