ಆಯವ್ಯಯದಲ್ಲಿ ಘೋಷಿಸಿರುವಂತೆ ಸಮಗ್ರ ಮರಳು ನೀತಿ ಅನುಷ್ಠಾನ: ಎಸ್ ಎಸ್ ಮಲ್ಲಿಕಾರ್ಜುನ್

1 year ago

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೆಲವು ಕಠಿಣ ಕ್ರಮಗಳಿಂದ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಬಿದ್ದಿದೆ. ಇದರ ಜೊತೆಗೆ ನಿರ್ಮಾಣ ಚಟುವಟಿಕೆಗಳಿಗೆ ಸಾಕಷ್ಟು ಮರಳು ಸಿಗದೆ ತೊಂದರೆಯಾಗಿದೆ ಎಂಬ ಅಳಲು ಕೂಡ ಜೋರಾಗಿದೆ.

ಈ ಸಮಸ್ಯೆ ಕುರಿತು ಸ್ಪಂದಿಸಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಮರಳು ಸಿಗಲಿ ಎಂಬ ಉದ್ದೇಶದಿಂದ ಮರಳು ನೀತಿ ಜಾರಿಗೊಳಿಸಿದೆ. ಆಯವ್ಯಯದಲ್ಲಿ ಘೋಷಿಸಿರುವಂತೆ ಸಮಗ್ರ ಮರಳು ನೀತಿಯನ್ನು ಗಣಿ ಇಲಾಖೆ ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮರಳು ನೀತಿಯಂತೆ ಈಗಾಗಲೇ ಸಾರ್ವಜನಿಕ ಹಾಗೂ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ನಿಗದಿತ ಕಡಿಮೆ ಬೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮರಳು ಪೂರೈಸಲು 1, 2 ಮತ್ತು 3ನೇ ಶ್ರೇಣಿಯ ಹಳ್ಳ ಪಾತ್ರಗಳಲ್ಲಿ ಲಭ್ಯವಿರುವ ಮರಳನ್ನು ತೆಗೆದು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದರು.

ಪ್ರತಿ ಮೆಟ್ರಿಕ್ ಟನ್ ಮರಳಿನ ಮಾರಾಟ ಬೆಲೆಯನ್ನು 300 ರೂ.ಗೆ ನಿಗದಿಪಡಿಸಲಾಗಿದೆ ಮತ್ತು ಸದರಿ ವ್ಯವಸ್ಥೆಯು ಪ್ರಸ್ತುತ ಜಾರಿಯಲ್ಲಿರುತ್ತದೆ. 4, 5 ಮತ್ತು ಉನ್ನತ ಶ್ರೇಣಿಗಳ ಹಳ್ಳ ಮತ್ತು ನದಿ ಪಾತ್ರಗಳಲ್ಲಿ ಲಭ್ಯವಿರುವ ಮರಳು ಬ್ಲಾಕ್ಗಳಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಟೆಂಡರ್ ಮೂಲಕ ಮರಳು ಬ್ಲಾಕ್ಗಳನ್ನು ವಿಲೇವಾರಿ ಮಾಡುವ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು.

ಮರಳು ಬ್ಲಾಕ್ಗಳ ಟೆಂಡರ್ ಅನ್ನು ಆಯಾ ಜಿಲ್ಲಾ ಮರಳು ಸಮಿತಿಯಿಂದ ನಡೆಸಲಾಗುವುದು. ಜಿಲ್ಲಾವಾರು ಗುರುತಿಸಲಾಗುವ ಮರಳು ಬ್ಲಾಕ್ಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಇತರೆ ಸಾಮಾನ್ಯ ವರ್ಗದವರಿಗೆ ರೋಸ್ಟರ್ ಪದ್ಧತಿಯಡಿಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ ಎಂದರು.

ಪ್ರತಿ ಮೆಟ್ರಿಕ್ ಟನ್ ಮರಳು ಏಕರೂಪ ಮಾರಾಟ ದರ 850 ರೂ. ನಿಗದಿಪಡಿಸಲಾಗಿದೆ. ಸರ್ಕಾರ ನಿಗದಿಪಡಿಸುವ ಮಾರಾಟ ಬೆಲೆಯ ಮೊತ್ತದ ಶೇ.50ರಷ್ಟನ್ನು ಮೂಲ ದರ ಎಂದು ಹಾಗೂ ಮೂಲ ದರದ ಶೇ.60ರಷ್ಟನ್ನು Cut-off Price ಎಂದು ನಿಗದಿಪಡಿಸಲಾಗಿರುತ್ತದೆ. Ceiling Price ಮತ್ತು Cut-off Priceಗೆ ಸಮನಾದ ಅಥವಾ ನಡುವೆ ಸಲ್ಲಿಸುವ ಕಡಿಮೆ ಟೆಂಡರ್ ಮೊತ್ತವನ್ನು ನಮೂದಿಸಿದವರನ್ನು ಯಶಸ್ವಿ ಬಿಡ್ಡುದಾರರೆಂದು ಪರಿಗಣಿಸಲಾಗುವುದು. ಒಂದಕ್ಕಿಂತ ಹೆಚ್ಚು ಟೆಂಡರ್ದಾರರು ಏಕರೂಪ ಟೆಂಡರ್ ದರವನ್ನು ನಮೂದಿಸಿದಲ್ಲಿ ಲಾಟರಿ ಮೂಲಕ ಯಶಸ್ವಿ ಬಿಡ್ಡುದಾರರನ್ನು ಆಯ್ಕೆ ಮಾಡಲಾಗುವುದು. ಟೆಂಡರ್ ಪ್ರಕ್ರಿಯೆಯನ್ನು e-Portalನಲ್ಲಿ ನಡೆಸಲಾಗುತ್ತಿದ್ದು, ಸದರಿ Portal ಮೂಲಕ ಆಸಕ್ತ ವ್ಯಕ್ತಿ/ಖಾಸಗಿ ಕಂಪನಿ/ಸಂಸ್ಥೆಯವರು ಅರ್ಜಿ ಸಲ್ಲಿಸಲು ಜಿಲ್ಲಾವಾರು ಅಧಿಸೂಚನೆ ಜಾರಿ ಮಾಡಲಾಗುವುದು ಎಂದಿದ್ದಾರೆ.

Leave a Reply