ಉದ್ಯಮಗಳ ಸ್ಥಾಪನೆ, ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಿ

1 year ago

ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದಲ್ಲಿ  ಆಗ್ರಹ

ಮಂಗಳೂರು: ವಿಫುಲ ನೈಸರ್ಗಿಕ ಸಂಪನ್ಮೂಲ, ರಸ್ತೆ,  ವಾಯು, ಜಲಮಾರ್ಗಗಳ ಅತ್ಯುತ್ತಮ ಸಾರಿಗೆ ಸಾರಿಗೆ ಸಾಧ್ಯತೆಗಳುಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವುಗಳನ್ನು ಸಮರ್ಪಕವಾಗಿ ಬಳಸಿ ಜನ ಸ್ನೇಹಿ ಅಭಿವೃದ್ದಿಯನ್ನು ಸಾಧಿಸಲು ಈವರಗೆ ಸಾಧ್ಯವಾಗಿಲ್ಲ. ಅರವತ್ತು ಎಪ್ಪತ್ತರ ದಶಕಗಳಲ್ಲಿ ನವಮಂಗಳೂರು ಬಂದರು, ಕುದುರೆಮುಖ, ಎಮ್ ಸಿ ಎಫ್, ಬೈಕಂಪಾಡಿ ಕೈಗಾರಿಕಾ ವಲಯ ಮುಂತಾದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯ ಕೈಗಾರಿಕೆಗಳು ಸ್ಥಾಪನೆಗೊಂಡರೂ ಜಿಲ್ಲೆಯ ಯುವಜನತೆಗೆ ಉದ್ಯೋಗಾವಕಾಶ ಒದಗಿಸಿದ್ದು ಕಡಿಮೆ ಎಂದು ಸಿಪಿಐಎಂ ಹೇಳಿದೆ.

ಸಿಪಿಐಎಂ 24 ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ, ಕಾಮ್ರೇಡ್ ಸೀತಾರಾಮ ಯೆಚೂರಿ ವೇದಿಕೆ, ಡಾನ್ ಬಾಸ್ಕೊ ಹಾಲ್, ಮಂಗಳೂರು ಇಲ್ಲಿ ನಡೆದ ಸಮಾವೇಶದಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಮಂಗಳೂರು ತೈಲಾಗಾರ, ಎಮ್ ಎಸ್ ಇ ಝಡ್ ಸೇರಿದಂತೆ ಹಲವು ಉದ್ಯಮ, ಕೈಗಾರಿಕೆಗಳು ಸ್ಥಾಪನೆಗೊಂಡರೂ ಉದ್ಯೋಗಗಳನ್ನು ಸೃಷ್ಟಿಸಿದ್ದು ಕಡಿಮೆ. ಸೃಷ್ಟಿಯಾದ ಉದ್ಯೋಗವಕಾಶಗಳಲ್ಲಿ ಸ್ಥಳೀಯ ಯುವಜನತೆಯನ್ನು ಪ್ರಜ್ಞಾಪೂರ್ವಕವಾಗಿಯೇ ಈ ಉದ್ಯಮಗಳು ಹೊರಗಿಟ್ಟವು. ಗುತ್ತಿಗೆ ಆಧಾರಿತ ನೇಮಕಾತಿಗಳಿಗೆ ಹೆಚ್ಚಿನ ಒತ್ತುಕೊಟ್ಟು ಉತ್ತರ ಭಾರತೀಯ ವಲಸೆ ಕಾರ್ಮಿಕರನ್ನು ನೇಮಕ ಮಾಡಿಕೊಂಡವು. ನೇರ ಉದ್ಯೋಗಗಳಲ್ಲಿಯೂ ಹೊರ ರಾಜ್ಯದವರನ್ನೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡಿಕೊಂಡವು ಎಂದಿದೆ.

ಇದರಿಂದಾಗಿ, ಇರುವ ಅವಕಾಶಗಳೂ ಸ್ಥಳೀಯ ಯುವಜನರಿಗೆ ತಪ್ಪಿವೆ. ಅತ್ಯುತ್ತಮ ಶಿಕ್ಷಣ ಪಡೆದೂ ನಿರುದ್ಯೋಗಿಗಳಾಗಿ, ಅರೆ ಉದ್ಯೋಗಿಗಳಾಗಿ ಪರದಾಡುವಂತಾಗಿದೆ. ಬೆಂಗಳೂರು, ಮುಂಬೈ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಹೊರ ರಾಜ್ಯ, ಹೊರ ದೇಶದ ನಗರಗಳಿಗೆ ಉದ್ಯೋಗ ಅರಸಿಕೊಂಡು ವಲಸೆ ಹೋಗುವಂತಾಗಿದೆ. ಬಹುತೇಕರು ಉತ್ತಮ ಬದುಕು ಕಟ್ಟಲು ಸಾಧ್ಯವಾಗದೆ ಪರಿತಪಿಸುವಂತಾಗಿದೆ ಎಂದಿದೆ.

ಇದು, ಜಿಲ್ಲೆಯ ರಾಜಕಾರಣರ ದೊಡ್ಡ ವೈಫಲ್ಯ. ಇಲ್ಲಿನ ಮೀನುಗಾರಿಕೆ, ಅಡಿಕೆ, ತೆಂಗು, ರಬ್ಬರ್ ಮುಂತಾದ ವಾಣಿಜ್ಯ ಬೆಳೆಗಳು, ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಉದ್ಯಮಗಳನ್ನು ಸ್ಥಾಪಿಸುವುದು, ಪ್ರವಾಸೋದ್ಯಮವನ್ನು ಬೆಳೆಸುವ ಅವಕಾಶ ಇದ್ದರೂ ದೂರದೃಷ್ಟಿಯ, ಪ್ರಜ್ಞಾವಂತಿಕೆಯ ಕೊರತೆಯ ರಾಜಕಾರಣದಿಂದ ಸಾಧ್ಯತೆಗಳನ್ನು ಕೈ ಚೆಲ್ಲಲಾಗಿದೆ ಎಂದಿದೆ.

ಈಗಲಾದರು ಎಚ್ಚೆತ್ತುಕೊಂಡು ಉದ್ಯೋಗ ಸೃಷ್ಟಿಸುವ ಉದ್ಯಮಗಳನ್ನು ಸ್ಥಾಪಿಸುವುದು, ಸ್ಥಳೀಯ ಯುವಜನರಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ದೊಡ್ಡ ಪಾಲು ದೊರಕುವಂತೆ ಮಾಡುವುದು ಸಾಧ್ಯವಾಗಬೇಕು, ಆ ಕುರಿತು ಸರಕಾರ ನಿಯಮಗಳನ್ನು  ರೂಪಿಸಬೇಕು ಎಂದು ಸಿಪಿಐಎಂ ಪಕ್ಷದ 24 ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.

Leave a Reply