ಹುಲಿಕಲ್ ನಟರಾಜ್ ಹುಸಿ ವಿಜ್ಞಾನ ಪ್ರಚಾರ ಮಾಡುತ್ತಾ ಜನರನ್ನು ಮತ್ತಶ್ಟು ಮೌಡ್ಯಕ್ಕೆ ತಳ್ಳುತ್ತಿದ್ದಾರೆ

1 year ago

ಹುಲಿಕಲ್ ನಟರಾಜ್ ಅನ್ನೋರು ಒಂದು ಕಡೆ ಪವಾಡ ಬಯಲು ಮಾಡುತ್ತಲೇ ಮತ್ತೊಂದು ಕಡೆ ಹುಸಿ ವಿಜ್ಞಾನ (ಸ್ಯೂಡೊ ಸೈನ್ಸ್) ಪ್ರಚಾರ ಮಾಡುತ್ತಾ ಜನರನ್ನು ಮತ್ತಶ್ಟು ಮೌಡ್ಯಕ್ಕೆ ತಳ್ಳುತ್ತಿದ್ದಾರೆ…

ಸಮಾಜದ ಪರಂಪರೆಯಲ್ಲಿ ನಡೆದುಕೊಂಡು ಬಂದ ಆಚರಣೆಗಳು, ಕುಲಾಚಾರಗಳು ಜನರ ನಂಬಿಕೆ, ಕಲ್ಪನೆ, ಪ್ರಕೃತಿ ಮತ್ತು ಮನುಶ್ಯರ ಸಂಬಂದಗಳ ಬಗೆಗಿನ ಸರಳ ಆದಿಮ ತರ್ಕ (simple primitive logic)ಗಳ ಮೂಲಕ ಬಂದವೇ ಹೊರತು ಇವತ್ತು ಅವುಗಳಿಗೆ ವೈಜ್ಞಾನಿಕ ಸಮರ್ತನೆ ನೀಡಲು ಹೋಗುವುದೇ ಅಸಂಬದ್ದ ಮತ್ತು nonsensical.

ಸಮಾಜದ ಸಮುದಾಯಗಳ ಆಚರಣೆಗಳನ್ನು anthropology ಮತ್ತು ಸಂಸ್ಕೃತಿ ಚಿಂತನೆಗಳ ಮೂಲಕ ಅರ್ತ ಮಾಡಿಕೊಳ್ಳಬೇಕು. ಬದಲಿಗೆ ಹಿಂದಿನ ಆಚರಣೆಗಳೆಲ್ಲಾ ವಿಜ್ಞಾನವಾಗಿತ್ತು ಎಂದು ಹೇಳುವುದು ಮುಟ್ಟಾಳತನವಾಗುತ್ತದೆ. ತಾಮ್ರದ ಗಿಂಡಿಯನ್ನು ಹಿಂದಿನವರು ಯಾಕೆ ಬಳಸುತ್ತಿದ್ದರು ಎಂದರೆ ಆಗ ಸ್ಟೀಲ್ ಬಳಕೆ ಬಂದಿರಲಿಲ್ಲ. ಇತಿಹಾಸದಲ್ಲಿ ಲೋಹದ ಬಳಕೆಯಲ್ಲಿ ಮನುಶ್ಯ ಮೊದಲು ಕಂಡುಕೊಂಡಿದ್ದು ತಾಮ್ರ. ನಂತರ ಹಿತ್ತಾಳೆ, ನಂತರ ಕಬ್ಬಿಣ. ಸ್ಟೀಲ್, ಅಲ್ಯುಮಿನಿಯಂ ಎಲ್ಲಾ ತಡವಾಗಿ ಕಂಡುಕೊಂಡು ಬಳಕೆಗೆ ಬಂದಂತವು.. ಹೀಗೆ ಚಾರಿತ್ರಿಕವಾಗಿ ನೋಡುವ ಬದಲಿಗೆ ತಾಮ್ರದ ಗಿಂಡಿಯಲ್ಲಿ ಇಟ್ಟ ನೀರು ರೋಗನಿರೋದಕ, ಇದು ಪ್ರಾಚೀನ ಬಾರತೀಯರಿಗೆ ಮೊದಲೇ ಗೊತ್ತಿತ್ತು ಎಂದರೆ ಅದಕ್ಕೆ ಪ್ರಯೋಗಾತ್ಮಕವಾಗಿ ಸಾಬೀತು ಮಾಡಬೇಕೆಂದು ವಿಜ್ಞಾನ ಕೇಳುತ್ತದೆ.

ಹೀಗೆ ಪ್ರಾಯೋಗಿಕವಾಗಿ ಸಾಬೀತು ಮಾಡಲಾಗದ ಯಾವುದೇ ಕ್ಲೇಮಿದ್ದರೂ ಅದನ್ನು ವಿಜ್ಞಾನ ಒಪ್ಪಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಸ್ಟೀಪನ್ ಹಾಕಿಂಗ್ ಕೂಡಾ ತಮ್ಮ ಬ್ಲಾಕ್ ಹೋಲ್ ಕುರಿತ ಹೈಪೊತಿಸೀಸ್ ಗೆ ನೊಬೆಲ್ ಪಡೆಯಲು ಆಗಲಿಲ್ಲ ಎಂಬುದು ನೆನಪಿಡಿ. ಅವರ ಪ್ರಮೇಯಕ್ಕೆ ಪ್ರಾಯೋಗಿಕ ಆದಾರ ಸಿಕ್ಕ ನಂತರವೇ ಮರಣೋತ್ತರ ನೊಬೆಲ್ ಸಿಗಬಹುದೇನೋ ಗೊತ್ತಿಲ್ಲ.

ತನ್ನ ಪಾಡಿಗೆ ಒಂದು ಮೂಡನಂಬಿಕೆಯನ್ನು ಪಾಲಿಸುವ ಒಬ್ಬ ಸಾಮಾನ್ಯ ವ್ಯಕ್ತಿಗಿಂತ ಈ ಹುಲಿಕಲ್ ನಟರಾಜ್ ತರದ ಎಜುಕೇಟೆಡ್ ಸ್ಯುಡೊಸೈನ್ಸ್ ಪ್ರಚಾರಕರು ಸಮಾಜಕ್ಕೆ ಹೆಚ್ಚು ಅಪಾಯಕಾರಿಗಳಾಗಿಬಿಡುವ ಸಂಬವ ಇರುತ್ತದೆ.

ಬೇಕಾದರೆ ಒಂದು ಸಂಪ್ರದಾಯವನ್ನು ನಂಬಿಕೆ ಅಂತ ಹೇಳಿ. ಅದನ್ನು ಓಕೆ ಅನ್ನಬಹುದು. ಆದರೆ ಅದು ವಿಜ್ಞಾನ ಅಂದಾಗ ಯಾವ ವಿಜ್ಞಾನ ಮೌಡ್ಯತೆಯನ್ನು ಮುರಿದು ನಿಲ್ಲಬೇಕೋ ಅದೇ ವಿಜ್ಞಾನವನ್ನು ಮೌಡ್ಯತೆಯ ಸಮರ್ತನೆಗೆ ಬಳಸಿಕೊಳ್ಳುತ್ತಿದ್ದೀರಿ ಎಂದಾಗುತ್ತದೆ.

ಹೆಣ್ಮಕ್ಕಳ ಹಣೆ ಕುಂಕುಮಕ್ಕ ಅದೆಂತದೋ ಪವರ್ ಇದೆ, ಜನಿವಾರಕ್ಕೆ ಅದೇನೋ ಕಾಸ್ಮಿಕ್ ಪವರ್ ಇದೆ, ಉಡುದಾರಕ್ಕೆ ಬಯಂಕರ ಸೈಂಟಿಪಿಕ್ ಪವರ್ ಇದೆ, ಕಚ್ಚೆ ಒಳಗೆ ಅಲ್ಟ್ರಾ ವಯಲೆಟ್ ಕಿರಣಗಳು ಬರಲ್ಲ, ಬುರ್ಕಾದೊಳಗೆ ಇನ್ ಪ್ರಾರೆಡ್ ಕಿರಣಗಳು ಬರಲ್ಲ, ಅರಳಿ ಮರದ ಕೆಳಗೆ ಇನ್ನೇನೋ ಹೀಲಿಂಗ್ ಪವರ್ ಇದೆ, ಹುಣಸೆ ಮರದಲ್ಲಿ dark energy ಇದೆ… ತುಳಸಿಯಿಂದ 18 ಕಾಯಿಲೆ ತಡಿಬಹುದು….  ಹೀಗೆಲ್ಲಾ ಎಲ್ಲವಕ್ಕೂ science ತಂದು ನಿಲ್ಲಿಸುವವರಿಗಿಂತ ದೊಡ್ಡ ವಿಜ್ಞಾನ ದ್ರೋಹಿಗಳು ಇರಲು ಸಾದ್ಯವಿಲ್ಲ.

ಇವತ್ತಿನ ಎಲ್ಲಾ ವಿಜ್ಞಾನದ ಸೂತ್ರಗಳೂ ನಮ್ಮ ಪ್ರಾಚೀನ ಜನರಿಗೇ ತಿಳಿದಿದ್ದರೆ ಹರಪ್ಪಾ ನಾಗರಿಕತೆಯ ಸೈಟುಗಳಲ್ಲಿ ಸುಟ್ಟ ಇಟ್ಟಿಗೆಗಳ ಜೊತೆಜೊತೆಗೆ ಸಾವಿರಾರು ಲ್ಯಾಪ್ ಟಾಪುಗಳು ಸಿಕ್ಕಿರುತ್ತಿದ್ದವು, ಅಪಗಾನಿಸ್ತಾನದಲ್ಲಿ ಸೆಂಟ್ರಲ್ ಏಶಿಯಾದಿಂದ ಆರ್ಯರು ಬರುವಾಗ ಬಳಸಿದ್ದ smart phone ಗಳು ಸೋಮರಸದ ಸಸ್ಯಗಳಿರುವ ಮುಜಾವತ್ ಬೆಟ್ಟ ತಪ್ಪಲಲ್ಲಿ  ಸಿಗಬೇಕಿತ್ತು… ಅಜಂತಾ ಎಲ್ಲೋರಗಳಲ್ಲಿ ಜೆಸಿಬಿ ಯಂತ್ರಗಳ ಪಳೆಯುಳಿಕೆಗಳು ದೊರೆಯಬೇಕಿತ್ತು…  ಮತ್ತೆ ಆರ್ಯಬಟನ ಕಾಲದಲ್ಲೇ ಬಾರತದಲ್ಲಿ ಒಂದು ಹಬಲ್ ಟೆಲಿಸ್ಕೋಪ್ ತರದ್ದು ಬರಬೇಕಿತ್ತು.. ಶುಶ್ರುತ ಒಂದಾದರೂ ಅಲ್ಟ್ರಾ ಸಾನಿಕ್ ಮಶೀನ್ ಬಳಸಿರಬೇಕಿತ್ತು.. ಕನಿಷ್ಟ ಎಕ್ಸ್ ರೆ ಮಶೀನ್ ಬಳಸಿರಬೇಕಿತ್ತು.

ಇದೆಲ್ಲಾ ಯಾಕೆ ಆಗಿಲ್ಲ ಅಂದರೆ ವಿಜ್ಞಾನದ ಅರಿವು ಅನ್ನುವುದು ಏಕಾ ಏಕಿ ಆಗುವಂತದ್ದಲ್ಲ, ಮನುಶ್ಯನ ಪ್ರಯೋಗಾತ್ಮಕ ಅನುಬವಗಳು ಕ್ರೂಡೀಕರಣಗೊಂಡು ಹಂತಹಂತವಾಗಿ ಮುಂದೆ ಬೆಳೆಯುತ್ತಾ ಹೋಗುವಂತದು. ನ್ಯೂಟನ್ ಚಲನೆಯ ನಿಯಮಗಳನ್ನು ಹೇಳಿದ ನಂತರವೇ ಐನ್ ಸ್ಟೀನ್ ಗೆ ಜನರಲ್ ರಿಲೇಟಿವಿಟಿ ಕುರಿತು ಹೇಳಿ ಹೇಗೆ ಗುರುತ್ವ ಬಲವು ಸ್ಪೇಸ್ ಟೈಮ್ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾದ್ಯವಾಗಿದ್ದು ತನ್ಮೂಲಕ ನ್ಯೂಟನ್ ನೀಡಿದ್ದ ಅರಿವನ್ನು ಉತ್ತಮಪಡಿಸಲು ಸಾದ್ಯವಾಗಿದ್ದು. ಅಂತೆಯೇ ಐನ್ ಸ್ಟೀನ್ ರಿಲೇಟಿವಿಟಿ ಕುರಿತು ಹೇಳದಿದ್ದರೆ ಕ್ವಾಂಟಂ ಸೈನ್ಸ್ ಇಷ್ಟರ ಮಟ್ಟಿಗೆ ಬೆಳೆಯಲು ಸಾದ್ಯವಿರುತ್ತಿರಲಿಲ್ಲ. ವಿಜ್ಞಾನ ಕೂಡಾ ದೇಶಕಾಲದ ಪರಿಮಿತಿಗೆ ಒಳಪಟ್ಟಿರುತ್ತದೆ. ಹೀಗಾಗಿ ಸುಶಿಕ್ಷಿತರ ಮೂಲಕವೇ ಜನರನ್ನು ದಾರಿತಪ್ಪಿಸುವ ಸ್ಯೂಡೋ ಸೈನ್ಸ್ ಪ್ರಚಾರಕರ ಕುರಿತು ಎಚ್ಚರ ಇರಲಿ.

– ಹರ್ಶಕುಮಾರ್ ಕುಗ್ವೆ, ಸಾಮಾಜಿಕ ಹೋರಾಟಗಾರರು

(ಹುಲಿಕಲ್ ನಟರಾಜ್ ಅವರಿಗೆ ಈ ಸಲ ರಾಜ್ಯೋತ್ಸವ ಪ್ರಶಸ್ತಿ ಲಬಿಸಿದೆ. ಅವರು ನಡೆಸಿಕೊಡುವ ಪವಾಡ ಬಯಲು ಕಾರ್ಯಕ್ರಮಗಳನ್ನು ನೋಡಿ ಬಹಳ ಜನರು ತ್ರಿಲ್ ಆಗಿ ಶಬಾಶ್ ಅನ್ನೋದಿದೆ. ಆದರೆ ಅವರ ಯಾವುದೇ ಕಾರ್ಯಕ್ರಮದ ಮಾತುಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಸನಾತನವಾದ ಹೊಗೆಯಾಡುತ್ತಿರುತ್ತದೆ. ವಾಸ್ತವವಾಗಿ ಅವರಿಗೆ ವೈಜ್ಞಾನಿಕ ಚಿಂತನೆಯೇ ಇಲ್ಲ. ಈ ಕುರಿತು ಹಿಂದೆಯೇ ಇಲ್ಲೇ ಬರೆದಿದ್ದ ಒಂದು ಬರೆಹವನ್ನು ನಿಮ್ಮ ಮರು ಓದಿಗಾಗಿ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.)

Leave a Reply