ಬೆಂಗಳೂರು: ರಾಜ್ಯ ಸರ್ಕಾರವು ಕರೋನಾ ಲಸಿಕೆಯನ್ನು ಎಲ್ಲರಿಗೂ ನೀಡುತ್ತೇವೆ ಎಂದು ಸುಳ್ಳು ಹೇಳಿ ಇದೀಗ ಕರೋನಾ ಪ್ರಕರಣ ಜಾಸ್ತಿ ಆಗಿದೆ ಎಂದು ಹೇಳಿಕೆ ನೀಡಿ, ಇದೀಗ ಕರ್ಫ್ಯೂ ಹೆಸರಲ್ಲಿ ಸಾರ್ವಜನಿಕರ ಬದುಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟಿರುವುದು ಇವರ ತಲೆಯಿಲ್ಲದ ತೊಘಲಕ್ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ, ಒಮಿಕ್ರಾನ್ ಏರಿಕೆ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್ಡೌನ್, ಬೆಂಗಳೂರಿನ ಶಾಲಾಕಾಲೇಜು ಬಂದ್ ಮತ್ತು ಇತರೆ ಕಟ್ಟುನಿಟ್ಟಿನ ಕ್ರಮಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ, ಒಮೈಕ್ರಾನ್ ಎಂಬುದು ಹೆಚ್ಚು ಹರಡಿದರೂ ಕೂಡಾ ಅಪಾಯಕಾರಿ ಅಲ್ಲ ಎಂಬ ಸಂಗತಿಯನ್ನು ವೈದ್ಯಕೀಯ ತಜ್ಞರೇ, ಹೇಳುತ್ತಿರುವಾಗ ಎಲ್ಲ ಜನರಿಗೆ ಲಸಿಕೆಯನ್ನು ನೀಡಬೇಕಾದ ಸ್ಥಳದಲ್ಲಿ ಕರ್ಫ್ಯೂ, ಲಾಕ್ ಡೌನ್ ಎಂದು ಹುಚ್ಚಾಟ ಆಡುತ್ತಿರುವ ಸರ್ಕಾರವು ಮಾನಸಿಕ ಸ್ಥಿಮಿತದ ಜೊತೆಗೆ ಮನುಷ್ಯತ್ವವನ್ನೂ ಕಳೆದುಕೊಂಡಿದೆ ಎಂದಿದ್ದಾರೆ.
ಇವರು ಮಾಡುತ್ತಿರುವ ಲಾಕ್ ಡೌನ್ ಅಥವಾ ಕರ್ಫ್ಯೂನಲ್ಲಿ ಯಾವುದೇ ಅರ್ಥವಿಲ್ಲ, ಇದು ರೋಗದ ಹೆಸರಲ್ಲಿ ಸರ್ಕಾರವು ಜನರನ್ನು ದೋಚಲು ಮಾಡಿರುವ ವೈದ್ಯಕೀಯ ಹಗರಣದ ತಂತ್ರ ಎಂಬ ಸಂಗತಿಯನ್ನು ಜನ ಸಾಮಾನ್ಯರೇ ಮಾತಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ಸರ್ಕಾರವು ಕರ್ಫ್ಯೂ ಹೆಸರಲ್ಲಿ ಮಾಡುತ್ತಿರುವ ಹುಚ್ಚಾಟಗಳನ್ನು ಕೂಡಲೇ ನಿಲ್ಲಿಸಿ, ಲಸಿಕಾ ಅಭಿಯಾನವನ್ನು ಹೆಚ್ಚುಗೊಳಿಸಿ, ಜನ ಸಾಮಾನ್ಯರ ಬದುಕಲ್ಲಿ ಆಟ ಆಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದ್ದಾರೆ.




