ನಮ್ಮ ನಡಿಗೆ ಬೆಳಗಾವಿ ಕಡೆಗೆ

4 years ago

ಬೆಂಗಳೂರು: ಕರುನಾಡಿನ ಆದರ್ಶ ಪುರುಷ, ಸ್ವಾತಂತ್ರ್ಯ ಹೋರಾಟಗಾರ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಹುತಾತ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಎಂಇಎಸ್, ಶಿವಸೇನೆ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಕನ್ನಡ ರಕ್ಷಣಾ ವೇದಿಕೆ ಸಜ್ಜಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕರೆಯನ್ವಯ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಹಸ್ರಾರು ಕರವೇ ಸೇನಾನಿಗಳು ಕಾರು, ಬಸ್ಸು, ರೈಲುಗಳ ಮೂಲಕ ಬೆಳಗಾವಿಯತ್ತ ಧಾವಿಸುತ್ತಿದ್ದಾರೆ.

ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಸುಮಾರು 50 ವಾಹನಗಳ ಮೂಲಕ ನೂರಾರು ಕರವೇ ಸೇನಾನಿಗಳು ರಾತ್ರಿ 8-30ಕ್ಕೆ ಬೆಂಗಳೂರಿನ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ಹೊರಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಸರ್ಕಾರ ಕುತಂತ್ರ ನಡೆಸಿ ನಮ್ಮ ಕಾರ್ಯಕರ್ತರನ್ನು ತಡೆಯದೆ ಇದ್ದಲ್ಲಿ ನಾಳೆ ಬೆಳಿಗ್ಗೆ ಹೊತ್ತಿಗೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕರವೇ ಸೇನಾನಿಗಳು ಬೆಳಗಾವಿ ತಲುಪಲಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಹಸ್ರಾರು ಕರವೇ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದಿದ್ದಾರೆ.

ಕರವೇ ಹಕ್ಕೊತ್ತಾಯಗಳು:

  1. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಎಲ್ಲ ಭಯೋತ್ಪಾದಕರ ಮೇಲೂ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಬೇಕು. ಎಲ್ಲರನ್ನೂ ಮಹಾರಾಷ್ಟ್ರಕ್ಕೆ ಗಡೀಪಾರು ಮಾಡಬೇಕು.
  2. ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ಈ ಕೂಡಲೇ ಕರ್ನಾಟಕದಲ್ಲಿ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಗಡೀಪಾರು ಮಾಡಬೇಕು.
  3. ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ ಎಲ್ಲ ಕನ್ನಡಪರ ಕಾರ್ಯಕರ್ತರನ್ನೂ ಕೂಡಲೇ ಬಿಡುಗಡೆ ಮಾಡಬೇಕು.
  4. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ, ಕನ್ನಡಿಗರ ಮೇಲೆ, ಕನ್ನಡಿಗರ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು.

ಬನ್ನಿ, ಎಲ್ಲರೂ ಜತೆಯಾಗಿ. ನಾಡದ್ರೋಹಿ‌, ದೇಶದ್ರೋಹಿ, ಸಮಾಜಘಾತಕ ಶಕ್ತಿಗಳ‌ ವಿರುದ್ಧ ನಿರ್ಣಾಯಕ ಹೋರಾಟ ನಡೆಸೋಣ. ಇಂದಲ್ಲದಿದ್ದರೆ ಇನ್ನೆಂದು? ನಮ್ಮ ನಾಡು ಭಯೋತ್ಪಾದಕರ ಬೀಡಾಗುವುದನ್ನು ತಪ್ಪಿಸೋಣ ಎಂದು ಕರವೇ ಕರೆ ನೀಡಿದೆ.

Leave a Reply