ರಾಯಚೂರು: ಬ್ರಿಟಿಷರು ದೇಶದಲ್ಲಿ ವಿಷ ಬೀಜ ಬಿತ್ತಿ ಜನರನ್ನು ಛಿದ್ರಗೊಳಿಸಿ 200 ವರ್ಷ ಆಳ್ವಿಕೆ ನಡೆಸಿದರು. RSS, BJP ದ್ವೇಷದ ರಾಜಕಾರಣ ಮಾಡುತ್ತ ಬ್ರಿಟಿಷರು ಬಿಟ್ಟು ಹೋಗಿರುವ ಹೊಡೆದು ಆಳುವ ರಾಜಕೀಯವನ್ನು ಮುಂದುವರೆಸಿವೆ ಎಂದು ಸಿಪಿಐ(ಎಂಎಲ್) ಮಾಸ್ ಲೈನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂ.ಪ್ರದೀಪ್ ಸಿಂಗ್ ಠಾಕೂರ್ ಹೇಳಿದರು.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಸಿಂಧನೂರಿನಲ್ಲಿ ನಡೆದ ‘ದ್ವೇಷ ರಾಜಕಾರಣದ ಹಿನ್ನೆಲೆ ಮತ್ತು ಜನತೆಯ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ಒಂದು ಸುಳ್ಳನ್ನು ನೂರಾರು ಬಾರಿ ಹೇಳಿ ಜನರು ಸತ್ಯವೆಂದು ಒಪ್ಪಿಕೊಳ್ಳುವಂತೆ ಮಾಡಲಾಗುತ್ತದೆ. ಮುಸ್ಲೀಂರಿಂದ ದೇಶಕ್ಕೆ ಅಪಾಯ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಅದಾನಿ, ಅಂಬಾನಿ, ಕಾರ್ಪೋರೇಟ್ ಕಂಪನಿಗಳಿಂದ ದೇಶಕ್ಕೆ ಅಪಾಯವಿದೆ ಎನ್ನುವ ಸತ್ಯವನ್ನು ಮರೆಮಾಚಲು ಈ ರೀತಿ ಮಾಡಲಾಗುತ್ತಿದೆ. ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಿರುದ್ಯೋಗ, ಬಡತನ, ತಾಂಡವಾಡುತ್ತಿದೆ. ಹಸಿನಿಂದ ಜನರು ಸಾಯುತ್ತಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅಂಬಾನಿ ತನ್ನ ಮಗನ ಮದುವೆಗೆ 5 ಸಾವಿರ ಕೋಟಿ ಖರ್ಚು ಮಾಡಿ ತನ್ನ ಶ್ರೀಮಂತಿಕೆಯನ್ನು ಜಗತ್ತಿಗೆ ಬಿತ್ತರಿಸಿದರು ಎಂದರು.
ನಾಥೂರಾಮ್ ಗೋಡ್ಸೆ ಗಾಂಧೀಜಿಯನ್ನು ಕೊಂದ ನಂತರ RSS ಅನ್ನು ನಿಷೇಧಿಸಲಾಗಿತ್ತು. ಸರ್ಕಾರಿ ನೌಕರರು ಕೂಡ RSS ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದೆಂದು ಮೋದಿ ಸರ್ಕಾರ ಇತ್ತೀಚೆಗೆ ಆದೇಶ ಮಾಡಿದೆ. ಸರ್ಕಾರಿ ಯಂತ್ರಾಂಗದ ಮೂಲಕ ದ್ವೇಷದ ರಾಜಕಾರಣ ಮಾಡಲು ಹೊರಟಿರುವುದು ಅತ್ಯಂತ ಅಪಾಯಕಾರಿಯಾಗಿದೆ ಎಂದರು.
ಜನರಿಂದ ಆಯ್ಕೆಯಾದ ಕರ್ನಾಟಕದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯ ಮುಂದುವರೆದಿದೆ. ಒಬ್ಬ ಶಾಸಕನಿಗೆ 100 ಕೋಟಿ ಆಮಿಶ ಒಡ್ಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಉರುಳಿಸುವ ಕುತಂತ್ರದ ರಾಜಕೀಯ ಪ್ರಜಾತಂತ್ರಕ್ಕೆ ಮಾರಕ ಎಂದರು.
ಸಂವಿಧಾನ, ಪ್ರಜಾತಂತ್ರದ ಹಕ್ಕುಗಳನ್ನು ಸರ್ವನಾಶ ಮಾಡುವ ಸರ್ವಾಧಿಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮತ್ತು ದ್ವೇಷದ ರಾಜಕಾರಣವನ್ನು ಸೋಲಿಸಲು ವಿವಿಧ ವಿಚಾರಧಾರೆಯ ಎಲ್ಲಾ ಸಂಘಟನೆಗಳು ಐಕ್ಯತೆಯಿಂದ ಹೋರಾಡಬೇಕು ಎಂದು ಕರೆನೀಡಿದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ ಪ್ರಸ್ತಾವಿಕವಾಗಿ ಮಾತನಾಡಿ, ತಲೆಯಲ್ಲಿ ದ್ವೇಷವನ್ನು ಎದೆಯಲ್ಲಿ ವಿಷವನ್ನು ತುಂಬಿ ಕೈಯಲ್ಲಿ ಬಂದೂಕು ಕೊಟ್ಟು ಒಬ್ಫ ಗೋಡ್ಸೆಯನ್ನು ತಯಾರಿ ಮಾಡುವುದು ಅತ್ಯಂತ ಸುಲಭ ಮತ್ತು ಬೇಗ ಸಾಧ್ಯ. ಆದರೆ ದೇಶ ಕಟ್ಟುವ, ಪ್ರೀತಿ ಬಿತ್ತುವ ಮಾನವೀಯತೆಯನ್ನು ಬೆಸೆಯುವ, ದೇಶಪ್ರೇಮಿಗಳನ್ನು, ಹೋರಾಟಗಾರರನ್ನು ತಯಾರಿಸುವ ಕಾರ್ಯ ಅತ್ಯಂತ ಕಠಿಣ, ಅಷ್ಟೇ ಅಲ್ಲ ಸುದೀರ್ಘವಾದ ಜನ ಚಳುವಳಿಯಿಂದ ಮಾತ್ರ ಸಾಧ್ಯ ಎಂದರು.
ದ್ವೇಷದ ರಾಜಕೀಯ ಕೇವಲ ಮುಸ್ಲೀಂರನ್ನಷ್ಟೆ ಅಲ್ಲ, ದೇಶದ ಬಹುಸಂಖ್ಯಾತ ದುಡಿಯುವ ಜನರನ್ನು ಬಲಿಪಡೆಯುತ್ತಿದೆ. ಹಾಗಾಗಿ ಸ್ವಾತಂತ್ರ್ಯ ಮಾದರಿಯ ಬಲಿಷ್ಠ ಚಳುವಳಿ ರೂಪಿಸುವ ಕಾರ್ಯಕ್ಕೆ ಹೆಗಲೊಡ್ಡಬೆಕಾಗಿದೆ ಎಂದರು.
ಉಪನ್ಯಾಸಕ ಚಂದ್ರಶೇಖರ ಗೊರಬಾಳ ಮಾತನಾಡಿ, ಜೈಲಲ್ಲಿರುವ ದರ್ಶನ್ ಕುರಿತು ಹಗಲು ರಾತ್ರಿ ಪ್ರಚಾರ ಮಾಡುವ ದೃಶ್ಯ ಮಾಧ್ಯಮಗಳು, ರಾಜ್ಯದ ಅನೇಕ ಜೈಲುಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಕಳಪೆ ಊಟದ ಕುರಿತು ಧ್ವನಿ ಎತ್ತುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಮಾತ್ ಇಸ್ಲಾಂ ಹಿಂದ್ ಅಧ್ಯಕ್ಷ ಹುಸೇನಸಾಬ್, ಬಸವ ಕೆಂದ್ರದ ರುದ್ರಗೌಡ, DSSನ ಅಶೋಕ ನಂಜಲದಿನ್ನಿ, TUCI ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ, ಮಹಿಳಾ ಸಂಘದ ರೇಣುಕಮ್ಮ, TUCI ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಉಪನ್ಯಾಸಕ ಶಂಕರ್ ಗುರಿಕಾರ, KRS ತಾಲೂಕು ಅಧ್ಯಕ್ಷ ರಮೇಶ ಪಾಟಿಲ್, ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಬಿ.ಲಿಂಗಪ್ಪ, KPRS ನ ಬಸವಂತರಾಯ ಕಲ್ಲೂರ, AICCTU ನ ನಾಗರಾಜ್ ಪೂಜಾರ್, ರಾಜ್ಯ ರೈತ ಸಂಘ ಹಸಿರು ಸೇನೆಯ ಬಸವರಾಜ ಹಂಚಿನಾಳ, KRSನ ವಿರೇಶ ನಾಯಕ, CPIML ಮಾಸ್ ಲೈನ್ ಶಿವರಾಜ್ ಮಾನ್ವಿ, ವಿರುಪಮ್ಮ, ದಲಿತ ವಿದ್ಯಾರ್ಥಿ ಪರಿಷತ್ ನ ಮೌನೇಶ ಜಾಲವಾಡ್ಗಿ, ಶಿವರಾಜ್ ಉಪ್ಪಲದೊಡ್ಡಿ, ಅಂಬೇಡ್ಕರ ಯುವಕ ಸಂಘದ ಹನುಮಂತಪ್ಪ ಕರ್ನಿ, RH ಕಲ್ಮಂಗಿ, ಪರಶುರಾಮ ತಿಡಿಗೋಳ, ಬಸರಾಜ ಬೆಳಗುರ್ಕಿ ಮತ್ತು ಇತರರು ಹಾಜರಿದ್ದರು. ಬಸವರಾಜ ಬಾಗಲವಾಡ, ಶರಣು ಮುದ್ದನಗುಡ್ಡಿ ಇತರರು ಕ್ರಾಂತಿಗೀತೆಗಳನ್ನು ಹಾಡಿದರು.




