ಬೆಂಗಳೂರು: ಸಾವರ್ಕರ್ ಸೇರಿದಂತೆ ಆರ್.ಎಸ್.ಎಸ್ ನ ಯಾವ ನಾಯಕನೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲ. ಬಿಜೆಪಿ ನಾಯಕರಿಗೆ ಸ್ವಾತಂತ್ರ್ಯ ಹೋರಾಟದ ಮಹತ್ವ ತಿಳಿದಿಲ್ಲ ಮತ್ತು ಹೋರಾಟಗಾರರ ಬಗ್ಗೆ ಗೌರವವೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕ್ವಿಟ್ ಇಂಡಿಯಾ ಚಳುವಳಿ ದಿನದ ಸ್ಮರಣಾರ್ಥ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಅಂಗವಾಗಿ ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು, ನಾವು ಯಾರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಲ್ಲ, ನಾವೆಲ್ಲಾ ಸ್ವಾತಂತ್ರ್ಯದ ಫಲಾನುಭವಿಗಳು ಮಹಾನ್ ನಾಯಕರ ತ್ಯಾಗ, ಬಲಿದಾನದ ಮೇಲೆ ನಮಗೆ ದೊರೆತಿರುವ ಈ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕಾದ ಹೊಣೆ ನಮ್ಮದು ಎಂದರು.
2014ರಲ್ಲಿ ನರೇಂದ್ರ ಮೋದಿ “ಕಾಂಗ್ರೆಸ್ ಗೆ 60 ವರ್ಷ ಅಧಿಕಾರ ನೀಡಿದ್ದೀರಿ, ನಮಗೆ 60 ತಿಂಗಳು ಕೊಡಿ ದೇಶದ ಚಿತ್ರವನ್ನೇ ಬದಲಾಯಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಅವರು ಅಧಿಕಾರಕ್ಕೆ ಬರುವ ಮೊದಲಿನ ಸ್ಥಿತಿಗಿಂತ ವಿರುದ್ಧವಾದ ಬದಲಾವಣೆ ನಡೆದು ದೇಶ ಸಂಕಷ್ಟಕ್ಕೆ ಸಿಲುಕಿದೆ” ಎಂದರು.
ಪ್ರಧಾನಿ ಮೋದಿಯವರ ಏಳು ವರ್ಷಗಳ ಆಡಳಿತದಲ್ಲಿ ದೇಶದ 23% ಜನ ಬಡತನ ರೇಖೆಗಿಂತ ಕೆಳಗೆ ಹೋಗಿದ್ದಾರೆ. ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ, ದೇಶದ ಜಿ.ಡಿ.ಪಿ -7.7 ಕ್ಕೆ ಬಂದಿದೆ. ಜನರ ಜೀವನ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ. ಸುಳ್ಳು ಹೇಳಿರುವುದೊಂದೆ ಅವರ ಒಟ್ಟು ಸಾಧನೆ ಎಂದು ಕಿಡಿಕಾರಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಆಶಯಗಳಾದ ಸಾಮಾಜಿಕ ಬದಲಾವಣೆ, ಸಮಾನ ಅವಕಾಶ, ಸಂಪತ್ತಿನ ಸಮಾನ ಹಂಚಿಕೆಯ ಬಗ್ಗೆ ಬಿಜೆಪಿಗೆ ನಂಬಿಕೆಯಿಲ್ಲ. ಬಿಜೆಪಿ ನಂಬಿಕೆ ಹೊಂದಿರುವುದು ಚಾತುರ್ವಣ ವ್ಯವಸ್ಥೆಯ ಬಗ್ಗೆ ಮಾತ್ರ ಎಂದರು.
ಸಮಾಜವನ್ನು ಒಡೆದು, ಪರಸ್ಪರ ದ್ವೇಷ ಮತ್ತು ಭಯದ ವಾತಾವರಣ ಸೃಷ್ಟಿಸಿ, ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಎಲ್ಲಿಯವರೆಗೂ ಜಾತಿ ವ್ಯವಸ್ಥೆ, ತಾರತಮ್ಯ ಭಾವನೆ ಸಮಾಜದಲ್ಲಿ ನೆಲೆಸಿರುತ್ತದೋ ಅಲ್ಲಿಯವರೆಗೆ ಮತ ಗಳಿಕೆ ಸಾಧ್ಯ ಎಂಬುದು ಬಿಜೆಪಿಯವರ ಭಾವನೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದರು. ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನವರು ಯಾವ ಜಾತಿ? ಹಣಕಾಸು ಮಂತ್ರಿಯಾಗಿದ್ದ ಕೃಷ್ಣಸ್ವಾಮಿ ಅವರು ಯಾವ ಜಾತಿ? ಇವರ ಬಗ್ಗೆ ಬಿಜೆಪಿಗೆ ಅಸಹನೆ ಇಲ್ಲವೇ? ಎಂದು ಪ್ರಶ್ನಿಸಿದರು.
ಮೊಘಲರ ಆಳ್ವಿಕೆಯಲ್ಲಿ ಅವರ ಆಸ್ಥಾನದಲ್ಲಿ ಉನ್ನತ ಹುದ್ದೆಯಲ್ಲಿದ್ದ ಸಮುದಾಯದ ಜನರೇ ಇಂದು ಆರ್.ಎಸ್.ಎಸ್ ಸ್ಥಾಪಿಸಿ, ಅದರ ಉನ್ನತ ಸ್ಥಾನದಲ್ಲಿದ್ದಾರೆ. ಇಂಥವರು ಮಾಡುವ ದೇಶಭಕ್ತಿಯ ಪಾಠ ಯಾರಿಗೆ ಬೇಕು? ಎಂದು ಪ್ರಶ್ನಿಸಿದರು.
ಬ್ರಿಟಿಷರ ವಿರುದ್ಧ ಹೈದರಾಲಿ ಮತ್ತು ಟಿಪ್ಪು 4 ಮಹಾಯುದ್ಧಗಳನ್ನು ಮಾಡಿದ್ದರು. ಟಿಪ್ಪು ಜಯಂತಿ ಮಾಡಿದರೆ ಬಿಜೆಪಿಯವರಿಗೆ ಕೋಪ ಬರುತ್ತೆ. ಬಿಜೆಪಿಯವರಿಗೆ ಟಿಪ್ಪು ಮೇಲಿರುವ ಕೋಪ ಟಿಪ್ಪುವಿನ ದಿವಾನರಾಗಿದ್ದ ಪೂರ್ಣಯ್ಯನ ಮೇಲೆ ಏಕಿಲ್ಲ? ಎಂದು ಪ್ರಶ್ನಿಸಿದರು.
ಬ್ರಿಟಿಷರು ಬರುವ ಮೊದಲು ಭಾರತ ಸಮೃದ್ಧವಾಗಿತ್ತು. ನಮ್ಮ ಜಿ.ಡಿ.ಪಿ 23% ಇತ್ತು, ಬ್ರಿಟಿಷರು ಕೊಳ್ಳೆ ಹೊಡೆದ ಪರಿಣಾಮ ಭಾರತ ಬಡದೇಶವಾಯಿತು. ಇವತ್ತು ಮತ್ತೆ ಭಾರತ ಬಡದೇಶವಾಗುತ್ತಿದ್ದರೆ ಅದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದರು.
ಬ್ರಿಟಿಷರು ದೇಶದ ಸಂಪತ್ತನ್ನು ಲೂಟಿ ಮಾಡಿದರೆ, ಬಿಜೆಪಿಯವರು ದೇಶದ ಸಂಪತ್ತನ್ನು ಖಾಸಗಿಯವರಿಗೆ ಮಾರುತ್ತಿದ್ದಾರೆ. ಹೀಗಾಗಿ ಹಿಂದೆ ಬ್ರಿಟಿಷರ ವಿರುದ್ಧ ಮಾಡಿದ ಹೋರಾಟದ ಮಾದರಿಯಲ್ಲೆ ಈಗ ಮತ್ತೊಂದು ಸ್ವಾತಂತ್ರ್ಯ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಕ್ವಿಟ್ ಇಂಡಿಯಾ ಚಳವಳಿ ದಿನ, ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ಪ್ರಮುಖ ದಿನಗಳಂದು ನಾವೆಲ್ಲ ತ್ಯಾಗ ಬಲಿದಾನದ ಮನಸ್ಥಿತಿ ಬೆಳೆಸಿಕೊಳ್ಳುವ ಹಾಗೂ ಬಿಜೆಪಿಯನ್ನು ತೊಲಗಿಸುವ ಕೆಲಸಕ್ಕೆ ಒಂದಾಗಿ ಶ್ರಮಿಸುವ ಪ್ರತಿಜ್ಞೆ ಮಾಡಬೇಕು ಎಂದರು.



