ಬೆಂಗಳೂರು: ತುಂಗಭದ್ರಾ ಜಲಾಶಯದ ಗೇಟ್ ಹೊಡೆದು ಅಪಾರ ಪ್ರಮಾಣದ ನೀರು ಪೋಲಾದ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಇತರೆ ಜಲಾಶಯಗಳ ಸುರಕ್ಷತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಲಾಶಯಗಳ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ಪ್ರಕಟಿಸಿದ ಜಲಸಂಪನ್ಮೂಲ ಖಾತೆಯ ಉಸ್ತುವಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ತುರ್ತಾಗಿ ಈ ಸಮಿತಿ ತನ್ನ ವರದಿ ನೀಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದರು.
ಕೃಷ್ಣರಾಜಸಾಗರ, ಕಬಿನಿ, ಭದ್ರಾ ಸೇರಿದಂತೆ ಹಲವು ಜಲಾಶಯಗಳ ಕ್ರಸ್ಟ್ ಗೇಟ್ ಗಳ ಭದ್ರತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇದೀಗ ಚರ್ಚೆಯಾಗುತ್ತದೆ. ಈ ಎಲ್ಲವನ್ನು ಗಮನಿಸಿದ್ದೇನೆ. ಇವುಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುತ್ತಿದ್ದು ಎರಡು ದಿನಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದರು.
ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಒಡೆದುಹೋಗಿರುವ ಬಗ್ಗೆ ತುರ್ತು ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆದಾರರ ಜೊತೆ ಚರ್ಚೆ ಮಾಡಿದ್ದೇವೆ. ವಿನ್ಯಾಸವನ್ನು ಕಳುಹಿಸಿಕೊಡಲಾಗಿದೆ. ನಾಲ್ಕೈದು ದಿನಗಳಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದರು.
ತುಂಗಭದ್ರಾ ಜಲಾಶಯದಲ್ಲಿ ನಡೆದ ಘಟನೆಗೆ ಅಧಿಕಾರಿಗಳು ಸೇರಿದಂತೆ ಯಾರನ್ನು ಹೊಣೆ ಮಾಡುವುದಿಲ್ಲ. ಆರೋಪ ಮಾಡುವವರು, ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ ಎಂದರು.
ಡ್ಯಾಂನಲ್ಲಿ ಒಂದೇ ಹಂತದ ಸರಪಳಿ ಇದ್ದು, ಅದು ತುಂಡಾಗಿದೆ. ಅಲ್ಲಿನ ಪರಿಸ್ಥಿತಿ ನೋಡಿ, ಆಗ ನೀರಿನ ರಭಸ ಕಂಡು ನನಗೂ ಆತಂಕವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನೀರನ್ನು ಉಳಿಸಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಲು ಆದೇಶಿಸಲಾಗಿದೆ ಎಂದರು.
ಉತ್ತಮ ಗುಣಮಟ್ಟದ ಕಬ್ಬಿಣ ನೀಡಲು ಜೆಎಸ್ ಡಬ್ಲ್ಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಈ ಮೊದಲು ಕ್ರಸ್ಟ್ ಗೇಟ್ ಮಾಡಿದವರಿಗೆ ವಿನ್ಯಾಸ ಹಾಗೂ ಆದೇಶ ನೀಡಲಾಗಿದೆ. ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸದ್ಯ ಗೇಟ್ ದುರಸ್ತಿ ಕಾರ್ಯ ನಮ್ಮ ಆದ್ಯತೆಯಾಗಿದ್ದು ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಜಲಾಶಯದಲ್ಲಿ 50 ರಿಂದ 60 ಟಿಎಂಸಿ ನೀರನ್ನು ಉಳಿಸಿ ರೈತರಿಗೆ ಒಂದು ಬೆಳೆಗೆ ನೀರು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಹಾಗೂ ತಂತ್ರಜ್ಞರ ಜೊತೆ ತಾವು ಚರ್ಚೆ ಮಾಡಿದ್ದು, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಅಣೆಕಟ್ಟೆ ಪರಿಸ್ಥಿತಿ ಅಪಾಯದಲ್ಲಂತೂ ಇತ್ತು ಎಂದರು.
ತುಂಗಭದ್ರಾ ಅಣೆಕಟ್ಟು ರಾಜ್ಯಸರ್ಕಾರದ ನಿಯಂತ್ರಣದಲ್ಲಿಲ್ಲ. ನಾವು ನಿಯಂತ್ರಣ ಸಮಿತಿಯ ಸದಸ್ಯರಷ್ಟೇ. ಬೀಗ ಅವರ ಕೈಯಲ್ಲೇ ಇದೆ. ಆದರೂ ಡ್ಯಾಂ ನಮ್ಮದೇ. ನೆರೆಯ ಆಂಧ್ರಪ್ರದೇಶಕ್ಕೆ ಮೂರು ಲಕ್ಷ ಹೆಕ್ಟೇರ್ ಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಅತೀ ಹೆಚ್ಚು ನೀರಾವರಿಯನ್ನು ನಾವು ಬಳಸಿಕೊಳ್ಳುತ್ತೇವೆ. ಹೀಗಾಗಿ ತಮ ಜವಾಬ್ದಾರಿ ಇದೆ. ಕ್ರಸ್ಟ್ ಗೇಟ್ ಅನ್ನು ದುರಸ್ತಿ ಮಾಡಿಸುತ್ತೇವೆ ಎಂದರು.




