ಮುಂಬಡ್ತಿ ವೇತನ ಹೆಚ್ಚಳ ಸೇವಾ ಜೇಷ್ಠತೆ ಸೇರಿದಂತೆ ಹಲವು ವಿಷಯಗಳಲ್ಲಿ ತಮಗೆ ಅನ್ಯಾಯ: ಶಿಕ್ಷಕರಿಂದ ಮುಷ್ಕರ

2 years ago

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಬಂಡಾಯ ಸಾರಿದ್ದಾರೆ. ಮುಂಬಡ್ತಿ ವೇತನ ಹೆಚ್ಚಳ ಸೇವಾ ಜೇಷ್ಠತೆ ಸೇರಿದಂತೆ ಹಲವು ವಿಷಯಗಳಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಶಾಲೆಗಳನ್ನು ಬಹಿಷ್ಕರಿಸಿ ಬೆಂಗಳೂರಿಗೆ ಆಗಮಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರು ಫ್ರೀಡಂಪಾರ್ಕ್ನಲ್ಲಿ ಸಮಾವೇಶಗೊಂಡು ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ಶಿಕ್ಷಕರ ಹಲವು ಬೇಡಿಕೆಗಳ ಸಂಬಂಧ ಶಿಕ್ಷಕ ಕ್ಷೇತ್ರದ ಪ್ರತಿನಿಧಿಗಳು ಮತ್ತು ಸಂಘಟನೆಯ ಮುಖ್ಯಸ್ಥರೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಬೇಡಿಕೆಗಳ ಕುರಿತು ನಡೆಸಿದ ಸಭೆ ವಿಫಲವಾದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಶಿಕ್ಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯ ಸರ್ಕಾರ 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮೊದಲು ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ ಮೂಲತಃ 1ರಿಂದ 7 ಮತ್ತು 8ನೇ ತರಗತಿಗೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‍ಟಿ ಎಂದು ಪದನಾಮ ಮಾಡಿ 1ರಿಂದ 5ಕ್ಕೆ ಹಿಂಬಡ್ತಿ ನೀಡಿದೆ.

ಇದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನಾನಿರತ ಶಿಕ್ಷಕರು ಆಗ್ರಹಿಸಿದ್ದಾರೆ. 2016ಕ್ಕಿಂತ ಮೊದಲು ನೇಮಕ ಹೊಂದಿದ ಶಿಕ್ಷಕರನ್ನು ಎನ್ಸಿಟಿ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲಾ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜ್ಯೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು.

ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016ರ ಮೊದಲು ನೇಮಕಾತಿ ಹೊಂದಿದ ಹಾಗೂ ಬಿಎಡ್ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ”(ರಿ)ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಮಸ್ಯೆಗಳನ್ನು ಹಾಗೂ ವಿವಿಧ ಬೇಡಿಕೆಗಳನ್ನು ಆಲಿಸಿ, ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಈಗಾಗಲೇ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನೌಕರರಿಗೆ 7ನೇ ವೇತನ ಜಾರಿಮಾಡಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವಲ್ಲಿ ಚಿಂತನೆ ನಡೆಸುತ್ತಿದೆ. ಕೆಲವು ಕಾನೂನಾತ್ಮಕ ಅಡೆತಡೆಗಳು ಎದುರಾಗಿರುವುದರಿಂದ ತಡವಾಗುತ್ತಿದ್ದು, ಸಮಸ್ಯೆಯ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಶೀಘ್ರವಾಗಿ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ರಾಮೋಜಿಗೌಡ, ಸಿ.ಟಿ ರವಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಸಂಘದ ಅಧ್ಯಕ್ಷ ಕೆ. ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply