ವಿಶ್ವಾಸಕ್ಕೆ ಪಡೆಯದಿರುವುದರಿಂದ ಮನಸ್ಸಿಗೆ ತುಂಬ ನೋವಾಗಿದೆ: ಎಚ್.ಡಿ.ಕುಮಾರಸ್ವಾಮಿ

2 years ago

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡದ ವಿರುದ್ಧ ಜನಾಂದೋಲನಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿರುವ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಬಿಕ್ಕಟ್ಟು ಬಹಿರಂಗಗೊಂಡಿದೆ.

ರಾಜ್ಯ ಬಿಜೆಪಿ ನಾಯಕರ ಕಾರ್ಯವೈಖರಿ ಬಗ್ಗೆ ಆರಂಭದಿಂದಲೂ ಅಸಮಾಧಾನ ಹೊಂದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇದೀಗ ರಾಜ್ಯ ನಾಯಕರ ಕಾರ್ಯ ವೈಖರಿ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ಬೀದಿಯಲ್ಲಿ ಪೆನ್ಡ್ರೈವ್ ಹಂಚಲು ಯಾರು ಕಾರಣ? ಅಂಥವರನ್ನು ಜೊತೆಯಲ್ಲಿ ಕೂರಿಸಿಕೊಂಡು ನಮ್ಮನ್ನು ಸಭೆಗೆ ಕರೆಯುತ್ತಾರೆ. ನಮ್ಮ ಕುಟುಂಬಕ್ಕೆ ವಿಷ ಹಾಕಿದವರನ್ನು ಸಭೆಗೆ ಕೂರಿಸಿಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಪಾದಯಾತ್ರೆ ಮಾಡಬೇಕೆಂಬ ನಿರ್ಧಾರ ಮಾಡಿದ್ದಾರೆ. ನಮಗೆ ಮಾಹಿತಿಗಾಗಿ ಹೇಳಿದ್ದಾರೆ ಅಷ್ಟೇ. ಪಾದಯಾತ್ರೆ ವಿಚಾರದಲ್ಲಿ ಸರಿಯಾದ ರೀತಿ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮೇಲೆ ನಾವು ಏಕೆ ಬೆಂಬಲ ಕೊಡಬೇಕು ಎಂದು ಅವರು ಪ್ರಶ್ನಿಸಿದರು.

ಪಾದಯಾತ್ರೆ ಕಾರ್ಯಕ್ರಮದ ಮುಖ್ಯಸ್ಥರಾಗಿ ಮಾಜಿ ಶಾಸಕ ಪ್ರೀತಂ ಗೌಡರನ್ನು ಬಿಂಬಿಸಲಾಗುತ್ತಿದೆ. ಆ ಪ್ರೀತಂಗೌಡ ಯಾರು? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸರ್ವನಾಶ ಮಾಡಲು ಹೊರಟವರನ್ನು ಸಭೆಗೆ ಕರೆದು ಕೂರಿಸುತ್ತಾರೆ. ನನ್ನನ್ನು ಆಹ್ವಾನಿಸುತ್ತಾರೆ. ನನಗೂ ಸಹಿಸಿಕೊಳ್ಳಲು ಇತಿಮಿತಿ ಇದೆ ಎಂದು ಅಸಮಾಧಾನ ಹೊರಹಾಕಿದರು. 

ಬೆಂಗಳೂರಿನಿಂದ ಮೈಸೂರಿನವರೆಗೆ ನಮ್ಮ ಶಕ್ತಿ ಪ್ರಬಲವಾಗಿದೆ. ರಾಜಕಾರಣವೇ ಬೇರೆ, ಚುನಾವಣೆ ಬಂದಾಗ ಒಟ್ಟಿಗೆ ಹೋಗುವುದು ಬೇರೆ. ಆದರೆ ಇಂತಹ ಹೋರಾಟದ ವಿಚಾರದಲ್ಲಿ ವಿಶ್ವಾಸಕ್ಕೆ ಪಡೆಯದಿರುವುದರಿಂದ ಮನಸ್ಸಿಗೆ ತುಂಬ ನೋವಾಗಿದೆ ಎಂದರು.

ಬಿಜೆಪಿ ನಾಯಕರು ತೀರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಆದರೆ ನಾವು ಪಾದಯಾತ್ರೆಗೆ ಸೂಕ್ತ ಸಂದರ್ಭವಲ್ಲ ಎಂದು ಹಿಂದೆ ಸರಿದಿದ್ದೇವೆ. ನಮಗೆ ಜನರ ಸಮಸ್ಯೆ ಬಗೆಹರಿಸುವುದು ಮುಖ್ಯ ಎಂದರು.

ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಒಂದು ಕುಟುಂಬವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡುವುದು ಬೇಡ. ಈ ಸಂದರ್ಭದಲ್ಲಿ ಜನರ ನೋವಿಗೆ ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಕೇವಲ ರಾಜಕೀಯವೇ ಮುಖ್ಯವಲ್ಲ. ಉತ್ತರ ಕರ್ನಾಟಕದ ನೂರಾರು ಗ್ರಾಮಗಳು ಜಲಾವೃತ್ತವಾಗಿವೆ. ಹಲವು ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ. ಹೀಗಾಗಿ ನಿನ್ನೆ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

Leave a Reply