ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ದೊಡ್ಡ ಪ್ರಮಾಣದ ಸಂಚು ರೂಪಿಸಲಾಗಿದೆ: ಕಾಂಗ್ರೆಸ್

2 years ago

ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣಕಾಸು ವರ್ಗಾವಣೆ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ದೊಡ್ಡ ಪ್ರಮಾಣದ ಸಂಚು ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಮುಖ ಸಚಿವರು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಸಚಿವರಾದ ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಮತ್ತು ಕೃಷ್ಣಬೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದ ಹಿನ್ನೆಲೆಯಲ್ಲಿ ಹಲವು ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ಇದೀಗ ಅವರನ್ನು ಬಳಸಿಕೊಂಡು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಲುಕಿಸಲು ಕೇಂದ್ರ ಸರ್ಕಾರ ತಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಬಂಧಿತ ಅಧಿಕಾರಿಗಳಿಗೆ, ನೀವು ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಶಾಮೀಲಾಗಿದ್ದಾರೆ  ಎಂಬ ಹೇಳಿಕೆ ನೀಡಿ. ನಾವು ನಿಮ್ಮನ್ನು ಕಾನೂನಾತ್ಮಕವಾಗಿ ರಕ್ಷಿಸುತ್ತೇವೆ ಎಂದು ಇಡಿ ಅಧಿಕಾರಿಗಳ ಮೂಲಕ ಒತ್ತಡ ಹೇರಲಾಗುತ್ತಿದೆ. ಈ ಮೂಲಕ ವಿರೋಧ ಪಕ್ಷಗಳ ಮೇಲೆ ಕೇಂದ್ರ ಸರ್ಕಾರ ದಾಳಿಗೆ ಸಂಚು ರೂಪಿಸಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಇಡಿ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಶಾಮೀಲಾದ ಆರೋಪದ ಮೇಲೆ ಬಂಧಿತರಾಗಿರುವವರ ಮೇಲೆ ಒತ್ತಡ ತಂದು ಸರ್ಕಾರದ ಪ್ರಮುಖರನ್ನು ಸೇರ್ಪಡೆ ಮಾಡುವ ಪ್ರಯತ್ನ ನಡೆದಿದೆ ಎಂದರು.

ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸ್ಥೆ ಕೆಲವು ಮಾಹಿತಿಗಳನ್ನು ‌ಸೋರಿಕೆ ಮಾಡುತ್ತಿದೆ. ತನಿಖೆ ಪೂರ್ಣಗೊಳ್ಳುವ ಮೊದಲೇ ಅಕ್ರಮಗಳ ವಿವರಗಳು ಹೇಗೆ ಬಹಿರಂಗಗೊಳ್ಳುತ್ತಿವೆ ಎಂದು ಪ್ರಶ್ನಿಸಿದರು. ಜೊತೆಗೆ ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಈ ಪ್ರಕರಣ ಬಳಕೆಯಾಗುತ್ತಿದೆ ಎಂದರು.

ಪ್ರತಿಪಕ್ಷಗಳು ಮತ್ತು ಪ್ರತಿ ಪಕ್ಷಗಳ ಸರ್ಕಾರಗಳನ್ನು ಹಣಿಯಲು ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ. ಮಹಾರಾಷ್ಟ್ರ ಗೋವಾ, ಮಣಿಪುರ, ಉತ್ತರಖಾಂಡ, ಮಧ್ಯಪ್ರದೇಶದಲ್ಲಿ ಇದೇ ಮಾದರಿ ಅನುಸರಿಸಿ ಚುನಾಯಿತ ಸರ್ಕಾರಗಳನ್ನು ಅತಂತ್ರ ಮಾಡಲಾಯಿತು. ಅದೇ ತಂತ್ರವನ್ನು ಇದೀಗ ಕರ್ನಾಟಕದಲ್ಲೂ ಪ್ರಯೋಗಿಸಲು ಮುಂದಾಗಿದೆ ಎಂದರು.

ಕೇಂದ್ರ ಸರ್ಕಾರದ ಇಂತಹ ತಂತ್ರ ಪಿತೂರಿಗಳಿಂದ ನಾವು ಹೆದರುವುದಿಲ್ಲ. ಆಯ್ದ ಪ್ರಕರಣಗಳಲ್ಲಿ ಮಾತ್ರ ಇಡಿ ತನಿಖೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಪಿತೂರಿ ಮಾಡಿರುವ ಕ್ರಮದ ಬಗ್ಗೆ ರಾಜಕೀಯ ಮತ್ತು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Leave a Reply