ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ತಡೆಹಿಡಿವ ನಿರ್ಧಾರ ಕನ್ನಡಿಗರ ಪಾಲಿಗೆ ಅತ್ಯಂತ ಕರಾಳ ಮತ್ತು ಆತ್ಮಘಾತಕ: ಟಿ.ಎ.ನಾರಾಯಣಗೌಡ

2 years ago


ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಕಳೆದ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಈಗ ಕಾರ್ಪೊರೇಟ್ ಲಾಬಿಯ ಒತ್ತಡಕ್ಕೆ ಮಣಿದು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ. ಈ ನಿರ್ಧಾರ ಕನ್ನಡಿಗರ ಪಾಲಿಗೆ ಅತ್ಯಂತ ಕರಾಳ ಮತ್ತು ಆತ್ಮಘಾತಕತನದ ನಿರ್ಧಾರವಾಗಿದೆ.

ಸೋಮವಾರವಷ್ಟೆ ಸಂಪುಟ‌ ಸಭೆಯ ಅನುಮೋದನೆ ಪಡೆದಿದ್ದ ವಿಧೇಯಕವನ್ನು ಈಗ ತಡೆಹಿಡಿದಿರುವುದಕ್ಕೆ ಕರ್ನಾಟಕದಲ್ಲಿ ನೆಲೆನಿಂತಿರುವ ಕಾರ್ಪೊರೇಟ್ ಶಕ್ತಿಗಳು ಕಾರಣ ಎಂಬುದು ಈಗ ಸ್ಪಷ್ಟವಾಗಿದೆ. ಸರ್ಕಾರ ವಿಧೇಯಕ ತರುತ್ತಿರುವುದು ಗೊತ್ತಾಗುತ್ತಿದ್ದಂತೆ ಹಲವಾರು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಾಡಿನ ಮಕ್ಕಳು ಕನ್ನಡದ ನೆಲದಲ್ಲೇ ಉದ್ಯೋಗ ವಂಚಿತರಾಗುವುದನ್ನು ತಡೆಯುವ ಪ್ರಯತ್ನವನ್ನು ಈ ಪಟ್ಟಭದ್ರ ಹಿತಾಸಕ್ತಿಗಳು ತಡೆದಿವೆ.

ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಿರುವುದು ಕೋಟ್ಯಂತರ ಸಂಖ್ಯೆಯ ಸಾಮಾನ್ಯ ಜನರೇ ಹೊರತು ಈಗ ವಿಧೇಯಕವನ್ನು ವಿರೋಧಿಸುತ್ತಿರುವ ಬೆರಳೆಣಿಕೆಯಷ್ಟು ಸ್ವಾರ್ಥ ಉದ್ಯಮಿಗಳಲ್ಲ. ರಾಜ್ಯ ಸರ್ಕಾರ ತಮ್ಮನ್ನು ಕಾಪಾಡುತ್ತದೆ‌ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿತ್ತೇ ಹೊರತು, ಸರ್ಕಾರವನ್ನು ಬೆದರಿಸುವ ಕುತಂತ್ರ ಮಾಡುತ್ತಿರುವ ಉದ್ಯಮಿಗಳ ಪರವಾಗಿ ಅಲ್ಲ. ಎಂಥದ್ದೇ ಒತ್ತಡ ಬಂದರೂ ಅದನ್ನು ಎದುರಿಸಿ ನಿಲ್ಲುವ ಬದಲು ಸರ್ಕಾರ ಇಂಥ ಶಕ್ತಿಗಳ ಎದುರು ಮಂಡಿಯೂರಿ ನಿಲ್ಲುವುದು ಶೋಚನೀಯವಾಗಿದೆ, ದುರದೃಷ್ಟಕರವಾಗಿದೆ. ಇದನ್ನು ನಾವು ಯಾರೂ ನಿರೀಕ್ಷಿಸಿರಲಿಲ್ಲ.

ಇದೇ ವಿಷಯ ಸಂಬಂಧ ಮುಖ್ಯಮಂತ್ರಿ‌ ಸಿದ್ಧರಾಮಯ್ಯನವರನ್ನು ಎರಡು ಬಾರಿ ಭೇಟಿ ಮಾಡಿದಾಗಲೂ ಕನ್ನಡಿಗರ ಹಿತರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ‌ ಇಲ್ಲ ಎಂದೇ ಅವರು ಹೇಳಿದ್ದರು. ಆದರೆ ಪಟ್ಟಭದ್ರ ಹಿತಾಸಕ್ತಿಗಳು ಅವರ ಕೈಕಟ್ಟಿಹಾಕಿರುವಂತೆ ಕಂಡುಬರುತ್ತಿದೆ. ಇಂಥ ಶಕ್ತಿಗಳಿಗೆ ಮುಖ್ಯಮಂತ್ರಿಗಳು ಅಂಜಬಾರದು, ಇಟ್ಟ‌ಹೆಜ್ಜೆಯನ್ನು ಹಿಂದಕ್ಕೆ ಇಡಬಾರದು ಎಂದು ಆಗ್ರಹಿಸುತ್ತೇನೆ.

ಕನ್ನಡಿಗರು ಯಾವ ತಪ್ಪು ಮಾಡಿದ್ದರು ಎಂದು ಈ ಶಿಕ್ಷೆ? ನಾವು ಭಾರತ ಒಕ್ಕೂಟದಲ್ಲಿ ಸೇರಿ, ದೇಶದ ಪ್ರಗತಿಗೆ ಕಾರಣರಾಗಿರುವುದೇ ನಾವು ಮಾಡಿದ ತಪ್ಪೇ? ನಮ್ಮ ನೆಲದಲ್ಲಿ‌ ನಮ್ಮ ಮಕ್ಕಳಿಗೆ ಉದ್ಯೋಗ ಸಿಗಬೇಕು ಎಂದು 40 ವರ್ಷಗಳಿಂದ ಹೋರಾಡುತ್ತ ಬಂದರೂ‌ ನಮ್ಮ ಬೇಡಿಕೆ ಈಡೇರುತ್ತಿಲ್ಲ. ಇದೆಂಥ ದುಸ್ಥಿತಿ? ನಮ್ಮ ನೆಲದಲ್ಲೇ ನಮ್ಮ ಮಕ್ಕಳಿಗೆ‌ ಉದ್ಯೋಗವಿಲ್ಲದಿದ್ದರೆ ಅವರು ಎಲ್ಲಿಗೆ ಹೋಗಬೇಕು?

ಮಹಾರಾಷ್ಟ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಇದೇ ರೀತಿಯ ಕಾನೂನು ಜಾರಿಯಾಗಿ ಅಲ್ಲಿನ ಯುವಜನತೆಗೆ ಉದ್ಯೋಗ ದೊರೆಯುತ್ತಿದೆ. ಇದೇ ರೀತಿ ಹಲವು ರಾಜ್ಯಗಳಲ್ಲಿ ಆಗಿದೆ. ಅಲ್ಲಿ ಇಂಥ ಕಾನೂನುಗಳಿಗೆ ಯಾವುದೇ ವಿರೋಧ ವ್ಯಕ್ತಪಡಿಸದ ಉದ್ಯಮಿಗಳು, ಉದ್ಯಮಿಗಳ ಸಂಘಟನೆಗಳು ಕರ್ನಾಟಕದಲ್ಲಿ ಮಾತ್ರ ಯಾಕೆ ವಿರೋಧ ವ್ಯಕ್ತಪಡಿಸುತ್ತವೆ? ಮಹಾರಾಷ್ಟ್ರದ ಜನರನ್ನು ಎದುರುಹಾಕಿಕೊಂಡು ಅಲ್ಲಿ ಉದ್ಯಮ ನಡೆಸುವ ಶಕ್ತಿ ಅವರಿಗಿಲ್ಲ. ಆದರೆ ಕರ್ನಾಟಕದ ಕನ್ನಡಿಗರು ಎಂದರೆ ಇವರಿಗೆ ಯಾವ ಭಯವೂ ಇಲ್ಲ.

ಕರ್ನಾಟಕ ರಕ್ಷಣಾ‌ ವೇದಿಕೆ‌ ಯಾವುದೇ ಉದ್ಯಮಿಗಳು, ಉದ್ಯಮಗಳ‌ ವಿರುದ್ಧ ಇಲ್ಲ. ಅವರು ಉದ್ಯಮ ನಡೆಸಲು ಯಾವ ತಕರಾರೂ ಇಲ್ಲ. ನಾವು ಅವರ ಬಳಿ ಯಾವ ಪಾಲೂ ಕೇಳುತ್ತಿಲ್ಲ. ಕೇಳುತ್ತಿರುವುದು ಕೇವಲ ಉದ್ಯೋಗವನ್ನಷ್ಟೆ. ಕರ್ನಾಟಕದ ನೆಲ ಬೇಕು, ಜಲ ಬೇಕು, ಸಂಪನ್ಮೂಲಗಳೆಲ್ಲ ಬೇಕು, ಸರ್ಕಾರ ನೀಡುವ ವಿನಾಯಿತಿಗಳೆಲ್ಲ ಬೇಕು, ಆದರೆ ಇಲ್ಲಿನ ಜನರು ಬೇಡವೆಂದರೆ ಹೇಗೆ? ಈ ಜನರಿಗೆ ಕನಿಷ್ಠ ನಿಯತ್ತಾದರೂ ಬೇಡವೇ?

ಕರ್ನಾಟಕದಲ್ಲಿ ಉದ್ಯಮ ನಡೆಸುತ್ತಿರುವ ಹಲವಾರು ಉದ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡರಿಗೆ‌ ಉದ್ಯೋಗ ನೀಡುತ್ತಿಲ್ಲ. ಇತರ ರಾಜ್ಯಗಳಿಂದ (ವಿಶೇಷವಾಗಿ ಉತ್ತರ ಭಾರತದಿಂದ) ಅಭ್ಯರ್ಥಿಗಳನ್ನು ಕರೆತಂದು ತುಂಬಿಕೊಳ್ಳಲಾಗುತ್ತಿದೆ. ಇದರಿಂದಾಗಿ ಬೆಂಗಳೂರು ಮತ್ತು‌ ಪ್ರಮುಖ ನಗರಗಳು ವಲಸಿಗರಿಂದ ತುಂಬಿ ತುಳುಕುವಂತಾಗಿದ್ದು‌ ಮೂಲನಿವಾಸಿಗಳ ಪಾಡು ಹೇಳತೀರದಂತಾಗಿದೆ. ಇಂಥ ಸಂಸ್ಥೆಗಳಿಗೆ ಕಡಿವಾಣ ಹಾಕದೇ‌ ಹೋದರೆ ಉದ್ಯೋಗ ಮಾತ್ರವಲ್ಲ, ಕರ್ನಾಟಕವೂ ಕನ್ನಡಿಗರ ಪಾಲಿಗೆ ಉಳಿಯುವುದಿಲ್ಲ.

ರಾಜ್ಯ ಸಚಿವ ಸಂಪುಟದ ಕೆಲವು ಸಚಿವರುಗಳೇ ವಿಧೇಯಕದ ಕುರಿತು ಅಪಸ್ವರ ಎತ್ತಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಈ ಸಚಿವರುಗಳು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬೆನ್ನಿಗೆ ನಿಂತು ವಿಧೇಯಕವನ್ನು ಸಮರ್ಥಿಸಿಕೊಳ್ಳಬೇಕಿತ್ತು. ಇಂಥವರು ನಿಜವಾಗಿಯೂ ಕನ್ನಡದ ಹಿತಶತ್ರುಗಳು. ಕನ್ನಡದ ಜನತೆ ಅವರಿಗೆ ತಕ್ಕಪಾಠ ಕಲಿಸುತ್ತಾರೆ. ಹೇಡಿಗಳಂತೆ ಹಿಂದಿನಿಂದ ಸಂಚು ನಡೆಸುವ ಬದಲು ನೇರವಾಗಿ ಕನ್ನಡಿಗರನ್ನು ಎದುರುಹಾಕಿಕೊಂಡು ರಾಜಕಾರಣ ನಡೆಸಲಿ.

ವಿಧೇಯಕವನ್ನು‌ ವಿರೋಧಿಸುವ ನೆಪದಲ್ಲಿ ಕೆಲ ಉದ್ಯಮಿಗಳು ಕನ್ನಡಿಗರಿಗೆ ಕೌಶಲ್ಯ ಇಲ್ಲ, ಉದ್ಯೋಗಗಳಿಗೆ ಅರ್ಹತೆ ಇಲ್ಲ, ಕರ್ನಾಟಕ ಭ್ರಷ್ಟ ರಾಜ್ಯ ಎಂದೆಲ್ಲ ಹೇಳಿಕೆ ನೀಡಿದ್ದಾರೆ. ಇಂಥವರು ತಮ್ಮ ನಾಲಿಗೆ ಬಿಗಿಹಿಡಿದು ಮಾತಾಡುವುದು ಒಳ್ಳೆಯದು. ಕನ್ನಡಿಗರನ್ನು ಹೀಗೆ ಪ್ರಚೋದಿಸಿದರೆ ಏನಾಗುತ್ತದೆ ಎಂಬ ಇತಿಹಾಸವನ್ನು ಅವರು ಮರೆಯಬಾರದು. ಕನ್ನಡಿಗರನ್ನು‌ ನಿಂದಿಸುವವರಿಗೆ ಕರ್ನಾಟಕದಲ್ಲಿ ಇರುವ ಯೋಗ್ಯತೆಯೂ ಇಲ್ಲ, ಅರ್ಹತೆಯೂ ಇಲ್ಲ. ಅಂಥವರು ಕರ್ನಾಟಕ ಬಿಟ್ಟು ತೊಲಗಲಿ.

ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರಿಗೆ ದಕ್ಕಲೇಬೇಕಾದ ಉದ್ಯೋಗ ಮೀಸಲಾತಿಯ ಚಳವಳಿಯನ್ನು ಜಾರಿಯಲ್ಲಿಡುತ್ತದೆ. ಭಿನ್ನ ಭಿನ್ನ‌ ರೀತಿಯ ಪ್ರತಿಭಟನೆಗಳನ್ನು ನಾವು ಮುಂದುವರೆಸಿಕೊಂಡು‌ ಹೋಗುತ್ತೇವೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಮುಂದಿನ ಕ್ಯಾಬಿನೆಟ್ ಸಭೆಯಲ್ಲೇ ಈ ವಿಧೇಯಕ ಕುರಿತು ಕೂಲಂಕಶ ಚರ್ಚೆ ನಡೆಸಿ ನಂತರ ಜಾರಿಗೆ ತರುವುದಾಗಿ ಹೇಳಿದ್ದಾರೆ. ಹೀಗಾಗಿ ಮುಂದಿನ ಸಂಪುಟ ಸಭೆಯವರೆಗೆ ನಾವು ಕಾಯುತ್ತೇವೆ. ಕಾಯ್ದೆ ಮತ್ತೆ‌ ನೆನೆಗುದಿಗೆ ಬಿದ್ದರೆ ರಾಜ್ಯಸರ್ಕಾರ ಮತ್ತು ಕಾಯ್ದೆಗೆ‌ ಅಡ್ಡಿಯಾಗಿರುವ ದುಷ್ಟಶಕ್ತಿಗಳ ವಿರುದ್ಧ ತೀವ್ರ ಸ್ವರೂಪದ ಹೋರಾಟ ಸಂಘಟಿಸುತ್ತಿವೆ. ಈ ಸಂಬಂಧ ಹೋರಾಟದ ರೂಪುರೇಷೆ ತೀರ್ಮಾನಿಸಲು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪದಾಧಿಕಾರಿಗಳು, ಜಿಲ್ಲಾ-ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳ ಸಭೆ ಕರೆಯಲಿದ್ದೇವೆ.

ಕರ್ನಾಟಕದ ಉದ್ಯೋಗಗಳು ಕನ್ನಡಿಗರ ಹಕ್ಕು, ನಾವು ಕೇಳುತ್ತಿರುವ ಭಿಕ್ಷೆಯಲ್ಲ. ನಮ್ಮ ಹಕ್ಕನ್ನು ಕಸಿಯಲು‌ ಯಾರಿಗೂ ಬಿಡುವುದಿಲ್ಲ. ಈ ಹಾದಿಯಲ್ಲಿ ಅಡ್ಡ ಬರುವ ಶಕ್ತಿಗಳು ಎಷ್ಟೇ ಪ್ರಬಲವಾಗಿದ್ದರೂ ನಾವು ಹೋರಾಟ ಕೈಬಿಡುವುದಿಲ್ಲ.

– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

Leave a Reply