ಭಾರತದ ಸಂವಿಧಾನ – ಭಾಗ V – ಒಕ್ಕೂಟ

2 years ago

ಭಾರತದ ಸಂವಿಧಾನ – ಭಾಗ V – ಒಕ್ಕೂಟ

ಅಧ್ಯಾಯ I ಕಾರ್ಯಾಂಗ – ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ

52. ಭಾರತದ ರಾಷ್ಟ್ರಪತಿ: ಭಾರತಕ್ಕೆ ಒಬ್ಬ ರಾಷ್ಟ್ರಪತಿಯಿರತಕ್ಕದ್ದು.

53. ಒಕ್ಕೂಟದ ಕಾರ್ಯಾಂಗ ಅಧಿಕಾರ: (1) ಒಕ್ಕೂಟದ ಕಾರ್ಯಾಂಗ ಅಧಿಕಾರವು ರಾಷ್ಟ್ರಪತಿಯಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅಂಥ ಅಧಿಕಾರವನ್ನು ಈ ಸಂವಿಧಾನಕ್ಕನುಸಾರವಾಗಿ ರಾಷ್ಟ್ರಪತಿಯು ನೇರವಾಗಿಯಾಗಲಿ ಅಥವಾ ತನಗೆ ಅಧೀನರಾದ ಅಧಿಕಾರಿಗಳ ಮೂಲಕವಾಗಿಯಾಗಲಿ ಚಲಾಯಿಸತಕ್ಕದ್ದು. (2) ಮೇಲೆ ಹೇಳಿದ ಉಪಬಂಧದ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ, ಒಕ್ಕೂಟದ ರಕ್ಷಣಾ ಬಲಗಳ ಸರ್ವೋಚ್ಛ ಆಧಿಪತ್ಯವು ರಾಷ್ಟ್ರಪತಿಯಲ್ಲಿ ನಿಹಿತವಾಗಿರತಕ್ಕದ್ದು ಮತ್ತು ಅದರ ಚಲಾವಣೆಯು ಕಾನೂನಿನ ಮೂಲಕ ವಿನಿಯಮಿತವಾಗತಕ್ಕದ್ದು. (3) ಈ ಅನುಚ್ಫೇದದಲ್ಲಿರುವುದು ಯಾವುದೂ, -(ಎ) ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನಿಂದ ಯಾವುದೇ ರಾಜ್ಯದ ಸರ್ಕಾರಕ್ಕೆ ಅಥವಾ ಇತರ ಪ್ರಾಧಿಕಾರಕ್ಕೆ ಪ್ರದತ್ತವಾದ ಯಾವುವೇ ಪ್ರಕಾರ್ಯಗಳನ್ನು ರಾಷ್ಟ್ರಪತಿಗೆ ವರ್ಗಾಯಿಸುವುದಾಗಿ ಭಾವಿಸತಕ್ಕದ್ದಲ್ಲ; ಅಥವಾ (ಬಿ) ರಾಷ್ಟ್ರಪತಿಯನ್ನು ಹೊರತುಪಡಿಸಿ ಇತರ ಪ್ರಾಧಿಕಾರಗಳಿಗೆ, ಕಾನೂನಿನ ಮೂಲಕ ಪ್ರಕಾರ್ಯಗಳನ್ನು ಪ್ರದಾನ ಮಾಡದಂತೆ ಸಂಸತ್ತನ್ನು ಪ್ರತಿಬಂಧಿಸತಕ್ಕದ್ದಲ್ಲ.

54. ರಾಷ್ಟ್ರಪತಿಯ ಚುನಾವಣೆ: ರಾಷ್ಟ್ರಪತಿಯು,- (ಎ) ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರಿಂದ; ಮತ್ತು (ಬಿ) ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರಿಂದ – ಕೂಡಿದ ಚುನಾಯಕ ಗಣದ ಸದಸ್ಯರಿಂದ ಚುನಾಯಿತನಾಗತಕ್ಕದ್ದು.

[ವಿವರಣೆ.- ಈ ಅನುಚ್ಫೇದದಲ್ಲಿ ಮತ್ತು 55ನೇ ಅನುಚ್ಫೇದದಲ್ಲಿನ “ರಾಜ್ಯ” ಎಂಬ ಪದವು ದೆಹಲಿ ರಾಷ್ಟ್ರೀಯ ರಾಜಧಾನಿ ರಾಜ್ಯಕ್ಷೇತ್ರವನ್ನು (1. 1992ನೇ ಇಸವಿಯ ಸಂವಿಧಾನ (ಎಪ್ಪತ್ತನೇ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ (1.6.1995 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) ಮತ್ತು ಪಾಂಡಿಚೆರಿ (ಈಗ ಪುದುಚೆರಿಯಾಗಿದೆ. 2006 ನೇ ಇಸವಿಯ ಪಾಂಡಿಚೆರಿ (ಹೆಸರು ಬದಲಾವಣೆ) ಅಧಿನಿಯಮದ 3ನೇ ಪ್ರಕರಣವನ್ನು ನೋಡಿ. (1.10.2006 ರಿಂದ ಜಾರಿಗೆ ಬಂದಿದೆ) ಒಕ್ಕೂಟ ರಾಜ್ಯಕ್ಷೇತ್ರವನ್ನು ಒಳಗೊಳ್ಳುತ್ತದೆ.]

55. ರಾಷ್ಟ್ರಪತಿಯ ಚುನಾವಣೆಯ ರೀತಿ: (1) ರಾಷ್ಟ್ರಪತಿಯ ಚುನಾವಣೆಯಲ್ಲಿ ವಿವಿಧ ರಾಜ್ಯಗಳ ಪ್ರಾತಿನಿಧ್ಯದ ಪ್ರಮಾಣದಲ್ಲಿ ಕಾರ್ಯಸಾಧ್ಯವಾಗುವಷ್ಟರ ಮಟ್ಟಿಗೆ ಏಕರೂಪತೆ ಇರತಕ್ಕದ್ದು. (2) ರಾಜ್ಯಗಳಲ್ಲಿ ಪರಸ್ಪರ ಅಂಥ ಏಕರೂಪತೆಯನ್ನು ಮತ್ತು ಸಮಸ್ತ ರಾಜ್ಯಗಳ ಮತ್ತು ಒಕ್ಕೂಟದ ನಡುವೆ ಸಮತೆಯನ್ನುಂಟು ಮಾಡುವ ಉದ್ದೇಶಕ್ಕಾಗಿ, ಅಂಥ ಚುನಾವಣೆಯಲ್ಲಿ, ಸಂಸತ್ತಿನ ಪ್ರತಿಯೊಬ್ಬ ಚುನಾಯಿತ ಸದಸ್ಯನು ಮತ್ತು ಪ್ರತಿಯೊಂದು ರಾಜ್ಯದ ವಿಧಾನಸಭೆಯ ಪ್ರತಿಯೊಬ್ಬ ಚುನಾಯಿತ ಸದಸ್ಯನು ಎಷ್ಟು ಮತಗಳನ್ನು ಕೊಡಲು ಹಕ್ಕುಳ್ಳವನಾಗಿರುತ್ತಾನೆಂಬುದನ್ನು ಕೆಳಕಂಡ ರೀತಿಯಲ್ಲಿ ನಿರ್ಧರಿಸತಕ್ಕದ್ದು, – (ಎ) ಒಂದು ರಾಜ್ಯದ ವಿಧಾನಸಭೆಯ ಪ್ರತಿಯೊಬ್ಬ ಚುನಾಯಿತ ಸದಸ್ಯನಿಗೆ, ಆ ರಾಜ್ಯದ ಜನಸಂಖ್ಯೆಯನ್ನು ಆ ಸಭೆಯ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಿದರೆ ಬರುವ ಭಾಗಲಬ್ಧದಲ್ಲಿ ಒಂದು ಸಾವಿರದ ಗುಣಕಗಳು ಎಷ್ಟಿವೆಯೋ ಅಷ್ಟು ಮತಗಳಿರತಕ್ಕದ್ದು; (ಬಿ) ಸದರಿ ಒಂದು ಸಾವಿರದ ಗುಣಕಗಳನ್ನು ತೆಗೆದುಕೊಂಡ ಮೇಲೆ, ಶೇಷವು ಐನೂರಕ್ಕಿಂತಲೂ ಕಡಿಮೆಯಿಲ್ಲದಿದ್ದರೆ, (ಎ) ಉಪಖಂಡದಲ್ಲಿ ಉಲ್ಲೇಖಿತವಾಗಿರುವ ಪ್ರತಿಯೊಬ್ಬ ಸದಸ್ಯನ ಮತಗಳ ಸಂಖ್ಯೆಗೆ ಇನ್ನೂ ಒಂದು ಮತವನ್ನು ಸೇರಿಸತಕ್ಕದ್ದು; (ಸಿ) ಸಂಸತ್ತಿನ ಪ್ರತಿಯೊಂದು ಸದನದ ಪ್ರತಿಯೊಬ್ಬ ಚುನಾಯಿತ ಸದಸ್ಯನು, (ಎ) ಮತ್ತು (ಬಿ) ಉಪಖಂಡಗಳ ಮೇರೆಗೆ ರಾಜ್ಯಗಳ ವಿಧಾನಸಭೆಗಳ ಸದಸ್ಯರಿಗೆ ನಿಗದಿಪಡಿಸಿರುವ ಮತಗಳ ಒಟ್ಟು ಸಂಖ್ಯೆಯನ್ನು, ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಿದರೆ ಬರುವ ಸಂಖ್ಯೆಯಷ್ಟು ಮತಗಳನ್ನು ಹೊಂದಿರತಕ್ಕದ್ದು; ಅರ್ಧಕ್ಕಿಂತ ಹೆಚ್ಚಾಗಿರುವ ಭಿನ್ನಾಂಕವನ್ನು ಒಂದು ಎಂದು ಎಣಿಸತಕ್ಕದ್ದು ಮತ್ತು ಇತರ ಭಿನ್ನಾಂಕಗಳನ್ನು ಎಣಿಸದೆ ಬಿಟ್ಟುಬಿಡತಕ್ಕದ್ದು. (3) ರಾಷ್ಟ್ರಪತಿಯ ಚುನಾವಣೆಯನ್ನು ಏಕವರ್ಗಾವಣೀಯ ಮತದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರ ನಡೆಸತಕ್ಕದ್ದು ಮತ್ತು ಅಂಥ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯತಕ್ಕದ್ದು.

[ವಿವರಣೆ.- ಈ ಅನುಚ್ಫೇದದಲ್ಲಿ “ಜನಸಂಖ್ಯೆ” ಎಂದರೆ, ಯಾವ ಹಿಂದಿನ ಕೊನೆಯ ಸಲದ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಯಲ್ಲಿ ಖಚಿತಪಡಿಸಿಕೊಂಡ ಜನಸಂಖ್ಯೆ: ಪರಂತು, ಈ ವಿವರಣೆಯಲ್ಲಿ, ಯಾವ ಈ ಹಿಂದಿನ ಕೊನೆಯ ಜನಗಣತಿಯ ಸುಸಂಗತ ಅಂಕಿಗಳನ್ನು ಪ್ರಕಟಿಸಲಾಗಿದೆಯೋ ಆ ಜನಗಣತಿಗೆ ಮಾಡಿದ ಉಲ್ಲೇಖವನ್ನು, (1976ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 12ನೇ ಪ್ರಕರಣದ ಮೂಲಕ ವಿವರಣೆಗೆ ಬದಲಾಗಿ (3.1.1977ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) [2026 ನೆಯ] (2001 ನೇ ಇಸವಿಯ ಸಂವಿಧಾನ (ಎಂಬತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ `2000 ದ’ ಎಂಬ ಅಂಕಿಗಳಿಗೆ ಮತ್ತು ಅಕ್ಷರಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಇಸವಿಯ ತರುವಾಯ ಮೊದಲನೇ ಸಲ ನಡೆಸಲಾಗುವ ಜನಗಣತಿಯ ಸುಸಂಗತ ಅಂಕಿಗಳು ಪ್ರಕಟವಾಗುವವರೆಗೆ, 1971ರ ಜನಗಣತಿಗೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.]

56. ರಾಷ್ಟ್ರಪತಿಯ ಪದಾವಧಿ: (1) ರಾಷ್ಟ್ರಪತಿಯು ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಆ ಪದವನ್ನು ಧಾರಣಮಾಡತಕ್ಕದ್ದು: ಪರಂತು – (ಎ) ರಾಷ್ಟ್ರಪತಿಯು, ತಾನು ಸಹಿ ಮಾಡಿದ ಪತ್ರವನ್ನು ಉಪರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; (ಬಿ) ರಾಷ್ಟ್ರಪತಿಯು ಈ ಸಂವಿಧಾನವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ಅವನನ್ನು 61ನೆಯ ಅನುಚ್ಫೇದದಲ್ಲಿ ಉಪಬಂಧಿಸಿರುವ ರೀತಿಯಲ್ಲಿ ಮಹಾಭಿಯೋಗದ ಮೂಲಕ ಪದದಿಂದ ತೆಗೆದುಹಾಕಬಹುದು; (ಸಿ) ರಾಷ್ಟ್ರಪತಿಯ ಪದಾವಧಿಯು ಮುಕ್ತಾಯವಾಗಿದ್ದಾಗ್ಯೂ ಅವನ ಉತ್ತರಾಧಿಕಾರಿಯು ಆ ಪದವನ್ನು ವಹಿಸಿಕೊಳ್ಳುವವರೆಗೆ ಅವನು ತನ್ನ ಪದದಲ್ಲಿ ಮುಂದುವರಿಯತಕ್ಕದ್ದು. (2) ಉಪರಾಷ್ಟ್ರಪತಿಯು, (1)ನೆಯ ಖಂಡದ ಪರಂತುಕದ (ಎ) ಖಂಡದ ಮೇÃರೆಗೆ ತನಗೆ ಬರೆಯಲಾದ ಯಾವುದೇ ರಾಜೀನಾಮೆ ಬಗ್ಗೆ ತಕ್ಷಣವೇ ಲೋಕಸಭೆಯ ಅಧ್ಯಕ್ಷನಿಗೆ ತಿಳಿಸತಕ್ಕದ್ದು.

57. ಮರು ಚುನಾವಣೆಗೆ ಅರ್ಹತೆ: ರಾಷ್ಟ್ರಪತಿಯಾಗಿ ಪದಧಾರಣ ಮಾಡಿರುವ ಅಥವಾ ಮಾಡಿದ್ದ ವ್ಯಕ್ತಿಯು ಈ ಸಂವಿಧಾನದ ಇತರ ಉಪಬಂಧಗಳಿಗೆ ಒಳಪಟ್ಟು, ಆ ಪದಕ್ಕೆ ಮರುಚುನಾಯಿತನಾಗಲು ಅರ್ಹನಾಗಿರತಕ್ಕದ್ದು.

58. ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹತೆಗಳು: (1) ಯಾರೇ ವ್ಯಕ್ತಿಯು, – (ಎ) ಅವನು ಭಾರತದ ನಾಗರಿಕನಾಗಿರುವ ಹೊರತು, (ಬಿ) ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು, ಮತ್ತು (ಸಿ) ಲೋಕಸಭೆಯ ಸದಸ್ಯನಾಗಿ ಚುನಾಯಿತನಾಗಲು ಅವನಿಗೆ ಅರ್ಹತೆಯಿರುವ ಹೊರತು – ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗತಕ್ಕದ್ದಲ್ಲ. (2) ಯಾರೇ ವ್ಯಕ್ತಿಯು, ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯಸರ್ಕಾರದ ಅಧೀನದಲ್ಲಿ ಅಥವಾ ಆ ಯಾವುದೇ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಪ್ರಾಧಿಕಾರದ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿ ಯಾವುದೇ ಲಾಭದಾಯಕ ಪದವನ್ನು ಧಾರಣಮಾಡಿದ್ದರೆ ಅವನು ರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗಿರತಕ್ಕದ್ದಲ್ಲ.

ವಿವರಣೆ. ಈ ಅನುಚ್ಫೇದದ ಉದ್ದೇಶಗಳಿಗಾಗಿ, ಯಾರೇ ವ್ಯಕ್ತಿಯು ಒಕ್ಕೂಟದ ರಾಷ್ಟ್ರಪತಿಯಾಗಿ ಅಥವಾ

ಉಪರಾಷ್ಟ್ರಪತಿಯಾಗಿ ಅಥವಾ ಯಾವುದೇ ರಾಜ್ಯದ ರಾಜ್ಯಪಾಲನಾಗಿ [(1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಮೂಲಕ ಹಾಗೂ ಅನುಸೂಚಿಯ ಮೂಲಕ “ಅಥವಾ ರಾಜಪ್ರಮುಖನಾಗಿ ಅಥವಾ ಉಪರಾಜಪ್ರಮುಖನಾಗಿ” ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.)] ಅಥವಾ ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿ ಇರುವ ಕಾರಣ ಮಾತ್ರದಿಂದಲೇ ಅವನು ಲಾಭದಾಯಕ ಪದವನ್ನು ಧಾರಣ ಮಾಡಿರುವುದಾಗಿ ಭಾವಿಸತಕ್ಕದ್ದಲ್ಲ.

59. ರಾಷ್ಟ್ರಪತಿಯ ಪದದ ಷರತ್ತುಗಳು: (1) ರಾಷ್ಟ್ರಪತಿಯು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಸಂಸತ್ತಿನ ಯಾವುದೇ ಒಂದು ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಒಂದು ಸದನದ ಸದಸ್ಯನೊಬ್ಬನು ರಾಷ್ಟ್ರಪತಿಯಾಗಿ ಚುನಾಯಿತನಾದರೆ, ಅವನು ರಾಷ್ಟ್ರಪತಿಯಾಗಿ ಪದವನ್ನು ವಹಿಸಿಕೊಂಡ ದಿನಾಂಕದAದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು. (2) ರಾಷ್ಟ್ರಪತಿಯು ಇತರ ಯಾವುದೇ ಲಾಭದಾಯಕ ಪದವನ್ನು ಧಾರಣ ಮಾಡತಕ್ಕದ್ದಲ್ಲ. (3) ರಾಷ್ಟ್ರಪತಿಯು ಬಾಡಿಗೆಯನ್ನು ಸಂದಾಯ ಮಾಡದೆ ತನ್ನ ಅಧಿಕೃತ ನಿವಾಸಗಳ ಉಪಯೋಗಕ್ಕೆ ಹಕ್ಕುಳ್ಳವನಾಗಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಧಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ, ಅವನು ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಧಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಸಹ ಹಕ್ಕುಳ್ಳವನಾಗಿರತಕ್ಕದ್ದು. (4) ರಾಷ್ಟ್ರಪತಿಯ ಪದಾವಧಿಯಲ್ಲಿ ಅವನ ಉಪಲಬ್ಧಿಗಳನ್ನು ಮತ್ತು ಭತ್ಯೆಗಳನ್ನು ಕಡಿಮೆ ಮಾಡತಕ್ಕದ್ದಲ್ಲ.

60. ರಾಷ್ಟ್ರಪತಿಯಿಂದ ಪ್ರಮಾಣವಚನ ಅಥವಾ ಪ್ರತಿಜ್ಞಾ ವಚನ: ಪ್ರತಿಯೊಬ್ಬ ರಾಷ್ಟ್ರಪತಿಯು ಮತ್ತು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ಭಾರತದ ಮುಖ್ಯ ನ್ಯಾಯಾಧೀಶನ ಸಮಕ್ಷಮದಲ್ಲಿ ಅಥವಾ ಅವನ ಗೈರುಹಾಜರಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳ ಪೈಕಿ ಲಭ್ಯವಿರುವ ಜ್ಯೇಷ್ಠತಮ ನ್ಯಾಯಾಧೀಶನ ಸಮಕ್ಷಮದಲ್ಲಿ, ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ಅದಕ್ಕೆ ತನ್ನ ರುಜು ಹಾಕತಕ್ಕದ್ದು; ಎಂದರೆ,- “………… ಎಂಬ ಹೆಸರಿನ ನಾನು, ಭಾರತದ ರಾಷ್ಟ್ರಪತಿ ಪದದ ಕಾರ್ಯಪಾಲನೆಯನ್ನು (ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆಯನ್ನು) ನಿಷ್ಠಾಪೂರ್ವಕವಾಗಿ ಮಾಡುತ್ತೇನೆಂದು ಮತ್ತು ನನಗೆ ಸಾಮರ್ಥ್ಯವಿದ್ದಷ್ಟೂ ಭಾರತದ ಸಂವಿಧಾನದ ಮತ್ತು ಕಾನೂನಿನ ಪರಿರಕ್ಷಣೆ, ಸಂರಕ್ಷಣೆ ಮತ್ತು ಪ್ರತಿರಕ್ಷಣೆ ಮಾಡುತ್ತೇನೆಂದು ಮತ್ತು ಭಾರತದ ಜನತೆಯ ಸೇವೆಯಲ್ಲಿ ಮತ್ತು ಯೋಗಕ್ಷೇಮ ಸಾಧನೆಯಲ್ಲಿ ನಿರತನಾಗಿರುತ್ತೇನೆಂದೂ, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.”

61. ರಾಷ್ಟ್ರಪತಿಯ ಮಹಾಭಿಯೋಗದ ಬಗ್ಗೆ ಕಾರ್ಯವಿಧಾನ: (1) ರಾಷ್ಟ್ರಪತಿಯು ಈ ಸಂವಿಧಾನವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಅವನನ್ನು ಮಹಾಭಿಯೋಗಕ್ಕೆ ಗುರಿಪಡಿಸಬೇಕಾದಾಗ, ಸಂಸತ್ತಿನ ಯಾವುದೇ ಒಂದು ಸದನವು ದೋಷಾರೋಪವನ್ನು ಮಾಡತಕ್ಕದ್ದು. (2) ಅಂಥ ಯಾವುದೇ ದೋಷಾರೋಪವನ್ನು – (ಎ) ಅಂಥ ದೋಷಾರೋಪವನ್ನು ಮಾಡುವ ಪ್ರಸ್ತಾವವು ಒಂದು ನಿರ್ಣಯದಲ್ಲಿ ಅಡಕವಾಗಿದ್ದು ಅದನ್ನು ಮಂಡಿಸುವ ತಮ್ಮ ಉದ್ದೇಶವನ್ನು ತಿಳಿಸಿ ಆ ಸದನದ ಒಟ್ಟು ಸದಸ್ಯರ ಪೈಕಿ ನಾಲ್ಕನೆಯ ಒಂದು ಭಾಗಕ್ಕೆ ಕಡಮೆಯಿಲ್ಲದಷ್ಟು ಸದಸ್ಯರು ರುಜು ಹಾಕಿರುವ ಲಿಖಿತ ನೋಟೀಸನ್ನು ಕನಿಷ್ಠಪಕ್ಷ ಹದಿನಾಲ್ಕು ದಿನಗಳ ಮೊದಲು ಕೊಟ್ಟ ತರುವಾಯ ಆ ನಿರ್ಣಯವನ್ನು ಮಂಡಿಸಿದ್ದ ಹೊರತು; ಮತ್ತು (ಬಿ) ಆ ಸದನದ ಒಟ್ಟು ಸದಸ್ಯರಲ್ಲಿ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದಷ್ಟು ಸದಸ್ಯರ ಬಹುಮತದಿಂದ ಅಂಥ ನಿರ್ಣಯವು ಅಂಗೀಕೃತವಾದ ಹೊರತು – ಮಾಡತಕ್ಕದ್ದಲ್ಲ. (3) ಸಂಸತ್ತಿನ ಯಾವುದೇ ಒಂದು ಸದನವು ಹಾಗೆ ದೋಷಾರೋಪವನ್ನು ಮಾಡಿರುವಾಗ, ಇನ್ನೊಂದು ಸದನವು ಆ ದೋಷಾರೋಪದ ಬಗ್ಗೆ ತನಿಖೆಯನ್ನು ಮಾಡತಕ್ಕದ್ದು ಅಥವಾ ಮಾಡಿಸತಕ್ಕದ್ದು ಮತ್ತು ಅಂಥ ತನಿಖೆಯಲ್ಲಿ ರಾಷ್ಟ್ರಪತಿಯು ಹಾಜರಾಗಲು ಮತ್ತು ತನ್ನನ್ನು ಪ್ರತಿನಿಧಿಸಲು ಹಕ್ಕು ಹೊಂದಿರತಕ್ಕದ್ದು. (4) ತನಿಖೆಯ ಪರಿಣಾಮವಾಗಿ, ದೋಷಾರೋಪದ ತನಿಖೆಯನ್ನು ಮಾಡಿದ ಅಥವಾ ಮಾಡಿಸಿದ ಸದನದ ಒಟ್ಟು ಸದಸ್ಯರ ಮೂರನೆಯ ಎರಡು ಭಾಗಕ್ಕೆ ಕಡಿಮೆಯಿಲ್ಲದಷ್ಟು ಬಹುಮತದಿಂದ ರಾಷ್ಟ್ರಪತಿಯ ವಿರುದ್ಧ ಮಾಡಿದ ದೋಷಾರೋಪವು ಸಮರ್ಥಿತವಾಗಿದೆಯೆಂದು ಘೋಷಿಸುವ ನಿರ್ಣಯವು ಅಂಗೀಕೃತವಾದರೆ, ಆ ನಿರ್ಣಯವು ಹಾಗೆ ಅಂಗೀಕೃತವಾದ ದಿನಾಂಕದಿಂದ ರಾಷ್ಟ್ರಪತಿಯನ್ನು ಅವನ ಪದದಿಂದ ತೆಗೆದು ಹಾಕುವಂಥ ಪರಿಣಾಮವುಳ್ಳದ್ದಾಗಿರತಕ್ಕದ್ದು.

62. ರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ: (1) ರಾಷ್ಟ್ರಪತಿಯ ಪದಾವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ನಡೆಸಬೇಕಾದ ಚುನಾವಣೆಯು ಆ ಅವಧಿಯು ಕೊನೆಗೊಳ್ಳುವುದರೊಳಗಾಗಿ ಪೂರ್ತಿಯಾಗತಕ್ಕದ್ದು. (2) ರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ ಅಥವಾ ಅವನನ್ನು ತೆಗೆದುಹಾಕುವುದರಿಂದ ಅಥವಾ ಅನ್ಯಥಾ ಉಂಟಾಗುವ ರಾಷ್ಟ್ರಪತಿಯ ಪದದಲ್ಲಿನ ಖಾಲಿಸ್ಥಾನವನ್ನು ಭರ್ತಿಮಾಡುವುದಕ್ಕೆ ಚುನಾವಣೆಯನ್ನು, ಆ ಸ್ಥಾನವು ಖಾಲಿಯಾದ ತರುವಾಯ ಸಾಧ್ಯವಾದಷ್ಟು ಬೇಗನೆ ಮತ್ತು ಯಾವುದೇ ಸಂದರ್ಭದಲ್ಲಿ ಸ್ಥಾನವು ಖಾಲಿಯಾದ ದಿನಾಂಕದಿಂದ ಆರು ತಿಂಗಳುಗಳಿಗೆ ಮೀರದಂತೆ ನಡೆಸತಕ್ಕದ್ದು; ಮತ್ತು ಖಾಲಿಸ್ಥಾನವನ್ನು ಭರ್ತಿಮಾಡುವುದಕ್ಕೆ ಚುನಾಯಿತನಾದ ವ್ಯಕ್ತಿಯು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ, 56ನೆಯ ಅನುಚ್ಫೇದದ ಉಪಬಂಧಗಳಿಗೊಳಪಟ್ಟು ಐದು ವರ್ಷಗಳ ಪೂರ್ತಿ ಅವಧಿಯವರೆಗೆ ಪದಧಾರಣ ಮಾಡಲು ಹಕ್ಕುಳ್ಳವನಾಗತಕ್ಕದ್ದು.

63. ಭಾರತದ ಉಪರಾಷ್ಟ್ರಪತಿ: ಭಾರತಕ್ಕೆ ಒಬ್ಬ ಉಪರಾಷ್ಟ್ರಪತಿ ಇರತಕ್ಕದ್ದು.

64. ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು: ಉಪರಾಷ್ಟ್ರಪತಿಯು ರಾಜ್ಯಸಭೆಯ ಪದನಿಮಿತ್ತ ಸಭಾಪತಿಯಾಗಿರತಕ್ಕದ್ದು ಮತ್ತು ಅವನು ಮತ್ತಾವುದೇ ಲಾಭದಾಯಕ ಪದದಲ್ಲಿ ಇರತಕ್ಕದ್ದಲ್ಲ: ಪರಂತು, ಉಪರಾಷ್ಟ್ರಪತಿಯು 65ನೆಯ ಅನುಚ್ಫೇದದ ಮೇರೆಗೆ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಯಾವುದೇ ಅವಧಿಯಲ್ಲಿ, ರಾಜ್ಯಸಭೆಯ ಸಭಾಪತಿಯ ಪದದ ಕರ್ತವ್ಯಗಳನ್ನು ನೆರವೇರಿಸತಕ್ಕದ್ದಲ್ಲ ಮತ್ತು 97ನೆಯ ಅನುಚ್ಫೇದದ ಮೇರೆಗೆ ರಾಜ್ಯಸಭೆಯ ಸಭಾಪತಿಗೆ ಸಂದಾಯವಾಗಬೇಕಾದ ಯಾವುದೇ ವೇತನಕ್ಕಾಗಲಿ ಅಥವಾ ಭತ್ಯೆಗಾಗಲಿ ಹಕ್ಕುಳ್ಳವನಾಗಿರತಕ್ಕದ್ದಲ್ಲ.

65. ರಾಷ್ಟ್ರಪತಿಯ ಪದವು ಆಕಸ್ಮಿಕವಾಗಿ ಖಾಲಿಯಾದಲ್ಲಿ ಅಥವಾ ರಾಷ್ಟ್ರಪತಿಯ ಗೈರುಹಾಜರಿಯಲ್ಲಿ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವುದು ಅಥವಾ ಅವನ ಪ್ರಕಾರ್ಯಗಳನ್ನು ನಿರ್ವಹಿಸುವುದು:(1) ರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ ಅಥವಾ ಅವನನ್ನು ತೆಗೆದುಹಾಕುವುದರಿಂದ ಅಥವಾ ಅನ್ಯಥಾ ರಾಷ್ಟ್ರಪತಿಯ ಪದದಲ್ಲಿ ಯಾವುದೇ ಖಾಲಿಸ್ಥಾನ ಉಂಟಾದ ಸಂದರ್ಭದಲ್ಲಿ, ಅಂಥ ಖಾಲಿಸ್ಥಾನವನ್ನು ಭರ್ತಿ ಮಾಡುವುದಕ್ಕೆ ಈ ಅಧ್ಯಾಯದ ಉಪಬಂಧಗಳಿಗನುಸಾರವಾಗಿ ಚುನಾಯಿತನಾದ ಹೊಸ ರಾಷ್ಟ್ರಪತಿಯು, ತನ್ನ ಪದವನ್ನು ವಹಿಸಿಕೊಳ್ಳುವ ದಿನಾಂಕದವರೆಗೆ ಉಪರಾಷ್ಟ್ರಪತಿಯು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸತಕ್ಕದ್ದು. (2) ಗೈರುಹಾಜರಿಯಿಂದ, ಕಾಯಿಲೆಯಿಂದ ಅಥವಾ ಇತರ ಯಾವುದೇ ಕಾರಣದಿಂದ ರಾಷ್ಟ್ರಪತಿಯು ತನ್ನ ಪ್ರಕಾರ್ಯಗಳನ್ನು ನಿರ್ವಹಿಸಲು ಅಸಮರ್ಥನಾದಾಗ, ಅವನು ತನ್ನ ಕರ್ತವ್ಯಗಳನ್ನು ಮತ್ತೆ ವಹಿಸಿಕೊಳ್ಳುವ ದಿನಾಂಕದವರೆಗೆ ಉಪರಾಷ್ಟ್ರಪತಿಯು ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು. (3) ಉಪರಾಷ್ಟ್ರಪತಿಯು, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುವ ಅಥವಾ ರಾಷ್ಟ್ರಪತಿಯ ಪ್ರಕಾರ್ಯಗಳನ್ನು ನಿರ್ವಹಿಸುವ ಅವಧಿಯಲ್ಲಿ ಮತ್ತು ಆ ಅವಧಿಗೆ ಸಂಬಂಧಿಸಿದಂತೆ, ರಾಷ್ಟ್ರಪತಿಯ ಎಲ್ಲ ಅಧಿಕಾರಗಳನ್ನು ಮತ್ತು ಉನ್ಮುಕ್ತಿಗಳನ್ನು ಹೊಂದಿರತಕ್ಕದ್ದು ಮತ್ತು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾದಂಥ ಉಪಲಬ್ಧಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಮತ್ತು ಆ ಬಗ್ಗೆ ಹಾಗೆ ಉಪಬಂಧಿಸುವವರೆಗೆ ಎರಡನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವಂಥ ಉಪಲಬ್ಧಿಗಳಿಗೆ, ಭತ್ಯೆಗಳಿಗೆ ಮತ್ತು ವಿಶೇಷಾಧಿಕಾರಗಳಿಗೆ ಅವನು ಹಕ್ಕುಳ್ಳವನಾಗಿರತಕ್ಕದ್ದು.

66. ಉಪರಾಷ್ಟ್ರಪತಿಯ ಚುನಾವಣೆ: (1) [ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಒಳಗೊಂಡ ಒಂದು ಚುನಾಯಕ ಗಣದ ಸದಸ್ಯರುಗಳ] (1961ನೆಯ ಇಸವಿಯ ಸಂವಿಧಾನ (ಹನ್ನೊಂದನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ “ಸಂಯುಕ್ತ ಅಧಿವೇಶನದಲ್ಲಿ ಸಭೆ ಸೇರಿದ ಸಂಸತ್ತಿನ ಉಭಯ ಸದಸ್ಯರುಗಳಿಂದ” ಎಂಬ ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಮೂಲಕ ಏಕವರ್ಗಾವಣೀಯ ಮತದ ವಿಧಾನದ ಮೂಲಕ ಪ್ರಮಾಣಾನುಸಾರ ಪ್ರಾತಿನಿಧ್ಯ ಪದ್ಧತಿಗನುಸಾರವಾಗಿ ಉಪರಾಷ್ಟ್ರಪತಿಯು ಚುನಾಯಿತನಾಗತಕ್ಕದ್ದು ಮತ್ತು ಅಂಥ ಚುನಾವಣೆಯಲ್ಲಿ ಮತದಾನವು ರಹಸ್ಯ ಮತದಾನದ ಮೂಲಕ ನಡೆಯತಕ್ಕದ್ದು. (2) ಉಪರಾಷ್ಟ್ರಪತಿಯು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನಾಗಿರತಕ್ಕದ್ದಲ್ಲ ಮತ್ತು ಸಂಸತ್ತಿನ ಯಾವುದೇ ಸದನದ ಅಥವಾ ಯಾವುದೇ ರಾಜ್ಯದ ವಿಧಾನಮಂಡಲದ ಯಾವುದೇ ಸದನದ ಸದಸ್ಯನೊಬ್ಬನು ಉಪರಾಷ್ಟ್ರಪತಿಯಾಗಿ ಚುನಾಯಿತನಾದರೆ, ಅವನು ಉಪರಾಷ್ಟ್ರಪತಿಯಾಗಿ ಪದವನ್ನು ವಹಿಸಿಕೊಂಡ ದಿನಾಂಕದಂದು ಆ ಸದನದಲ್ಲಿನ ತನ್ನ ಸ್ಥಾನವನ್ನು ಖಾಲಿ ಮಾಡಿರುವುದಾಗಿ ಭಾವಿಸತಕ್ಕದ್ದು. (3) ಯಾರೇ ವ್ಯಕ್ತಿಯು,- (ಎ) ಅವನು ಭಾರತದ ನಾಗರಿಕನಾಗಿರುವ ಹೊರತು; (ಬಿ) ಅವನಿಗೆ ಮೂವತ್ತೈದು ವರ್ಷ ವಯಸ್ಸು ಪೂರ್ತಿಯಾಗಿರುವ ಹೊರತು; ಮತ್ತು (ಸಿ) ರಾಜ್ಯಸಭೆಯ ಸದಸ್ಯನಾಗಿ ಚುನಾಯಿತನಾಗಲು ಅವನಿಗೆ ಅರ್ಹತೆಯಿರುವ ಹೊರತು – ಉಪರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗತಕ್ಕದ್ದಲ್ಲ. (4) ಯಾರೇ ವ್ಯಕ್ತಿಯು, ಭಾರತ ಸರ್ಕಾರದ ಅಥವಾ ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿ ಅಥವಾ ಆ ಯಾವುದೇ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರುವ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿ ಯಾವುದೇ ಲಾಭದಾಯಕ ಪದವನ್ನು ಧಾರಣಮಾಡಿದ್ದರೆ ಅವನು ಉಪರಾಷ್ಟ್ರಪತಿಯಾಗಿ ಚುನಾಯಿತನಾಗಲು ಅರ್ಹನಾಗತಕ್ಕದ್ದಲ್ಲ.

ವಿವರಣೆ: ಈ ಅನುಚ್ಫೇದದ ಉದ್ದೇಶಗಳಿಗಾಗಿ, ಯಾರೇ ವ್ಯಕ್ತಿಯು, ಒಕ್ಕೂಟದ ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಅಥವಾ ಯಾವುದೇ ರಾಜ್ಯದ ರಾಜ್ಯಪಾಲನಾಗಿ (1956ನೇ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಮೂಲಕ ಮತ್ತು ಅನುಸೂಚಿಯ ಮೂಲಕ, “ಅಥವಾ ರಾಜಪ್ರಮುಖನಾಗಿ ಅಥವಾ ಉಪರಾಜ ಪ್ರಮುಖನಾಗಿ” ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.) ಅಥವಾ ಒಕ್ಕೂಟದ ಅಥವಾ ಯಾವುದೇ ರಾಜ್ಯದ ಮಂತ್ರಿಯಾಗಿ ಇರುವ ಕಾರಣ ಮಾತ್ರದಿಂದಲೇ ಅವನು ಲಾಭದಾಯಕ ಪದವನ್ನು ಧಾರಣಮಾಡಿರುವುದಾಗಿ ಭಾವಿಸತಕ್ಕದ್ದಲ್ಲ.

67. ಉಪರಾಷ್ಟ್ರಪತಿಯ ಪದಾವಧಿ: ಉಪರಾಷ್ಟ್ರಪತಿಯು, ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು: ಪರಂತು,- (ಎ) ಉಪರಾಷ್ಟ್ರಪತಿಯು ತಾನು ಸಹಿಮಾಡಿದ ಪತ್ರವನ್ನು ರಾಷ್ಟ್ರಪತಿಗೆ ಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು; (ಬಿ) ಉಪರಾಷ್ಟ್ರಪತಿಯನ್ನು ರಾಜ್ಯಸಭೆಯ ಆಗಿನ ಎಲ್ಲಾ ಸದಸ್ಯರ ಬಹುಮತದ ಮೂಲಕ ಅಂಗೀಕೃತವಾಗಿ ಲೋಕಸಭೆಯ ಒಪ್ಪಿಗೆ ಪಡೆದ ನಿರ್ಣಯದ ಮೂಲಕ ಅವನ ಪದದಿಂದ ತೆಗೆದು ಹಾಕಬಹುದು; ಆದರೆ, ಈ ಖಂಡದ ಉದ್ದೇಶಕ್ಕಾಗಿ ಯಾವುದೇ ನಿರ್ಣಯವನ್ನು ಮಂಡಿಸುವ ಉದ್ದೇಶದ ನೋಟೀಸನ್ನು ಕನಿಷ್ಠ ಪಕ್ಷ ಹದಿನಾಲ್ಕು ದಿನಗಳ ಮುಂಚಿತವಾಗಿ ಕೊಟ್ಟಿದ್ದ ಹೊರತು, ಅಂಥ ನಿರ್ಣಯವನ್ನು ಮಂಡಿಸತಕ್ಕದ್ದಲ್ಲ; (ಸಿ) ಉಪರಾಷ್ಟ್ರಪತಿಯ ಪದಾವಧಿಯು ಮುಕ್ತಾಯವಾಗಿದ್ದಾಗ್ಯೂ, ಅವನ ಉತ್ತರಾಧಿಕಾರಿಯು ಪದವನ್ನು ವಹಿಸಿಕೊಳ್ಳುವವರೆಗೆ ಅವನು ತನ್ನ ಪದದಲ್ಲಿ ಮುಂದುವರಿಯತಕ್ಕದ್ದು.

68. ಉಪರಾಷ್ಟ್ರಪತಿಯ ಪದವು ಖಾಲಿಯಾದಲ್ಲಿ ಅದನ್ನು ಭರ್ತಿಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿಸ್ಥಾನವನ್ನು ಭರ್ತಿಮಾಡಲು ಚುನಾಯಿತನಾದ ವ್ಯಕ್ತಿಯ ಪದಾವಧಿ: (1) ಉಪರಾಷ್ಟ್ರಪತಿಯ ಪದಾವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿಸ್ಥಾನವನ್ನು ಭರ್ತಿಮಾಡುವುದಕ್ಕೆ ನಡೆಸಬೇಕಾದ ಚುನಾವಣೆಯು ಆ ಅವಧಿಯು ಮುಕ್ತಾಯವಾಗುವುದರೊಳಗಾಗಿ ಪೂರ್ತಿಯಾಗತಕ್ಕದ್ದು. (2) ಉಪರಾಷ್ಟ್ರಪತಿಯ ಮರಣದಿಂದ, ರಾಜೀನಾಮೆಯಿಂದ ಅಥವಾ ಅವನನ್ನು ತೆಗೆದುಹಾಕುವುದರಿಂದ ಅಥವಾ ಅನ್ಯಥಾ ಉಂಟಾಗುವ ಉಪರಾಷ್ಟ್ರಪತಿಯ ಪದದಲ್ಲಿನ ಖಾಲಿಸ್ಥಾನವನ್ನು ಭರ್ತಿಮಾಡುವುದಕ್ಕೆ ಚುನಾವಣೆಯನ್ನು, ಸ್ಥಾನವು ಖಾಲಿಯಾದ ದಿನಾಂಕದ ತರುವಾಯ ಸಾಧ್ಯವಾದಷ್ಟು ಬೇಗನೆ ನಡೆಸತಕ್ಕದ್ದು ಮತ್ತು ಆ ಖಾಲಿಸ್ಥಾನವನ್ನು ಭರ್ತಿಮಾಡುವುದಕ್ಕೆ ಚುನಾಯಿತನಾದ ವ್ಯಕ್ತಿಯು ತನ್ನ ಪದವನ್ನು ವಹಿಸಿಕೊಂಡ ದಿನಾಂಕದಿದ 67ನೆಯ ಅನುಚ್ಛೇದದ ಉಪಬಂಧಗಳಿಗೊಳಪಟ್ಟು, ಐದು ವರ್ಷಗಳ ಪೂರ್ತಿ ಅವಧಿಯವರೆಗೆ ಪದಧಾರಣಮಾಡಲು ಹಕ್ಕುಳ್ಳವನಾಗಿರತಕ್ಕದ್ದು.

69. ಉಪರಾಷ್ಟ್ರಪತಿಯಿಂದ ಪ್ರಮಾಣ ವಚನ ಅಥವಾ ಪ್ರತಿಜ್ಞಾ ವಚನ: ಪ್ರತಿಯೊಬ್ಬ ಉಪರಾಷ್ಟ್ರಪತಿಯು ತನ್ನ ಪದವನ್ನು ವಹಿಸಿಕೊಳ್ಳುವುದಕ್ಕೆ ಮೊದಲು ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಿಸಿದ ಯಾರೇ ವ್ಯಕ್ತಿಯ ಮುಂದೆ ಈ ಕೆಳಕಂಡ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡತಕ್ಕದ್ದು ಮತ್ತು ತನ್ನ ರುಜು ಹಾಕತಕ್ಕದ್ದು, ಎಂದರೆ,- “………….. ಎಂಬ ಹೆಸರಿನ ನಾನು ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನಕ್ಕೆ ನಿಜವಾದ ಶ್ರದ್ಧೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದು ಮತ್ತು ಈಗ ನಾನು ವಹಿಸಿಕೊಳ್ಳಲಿರುವ ಕರ್ತವ್ಯವನ್ನು ನಿಷ್ಠಾಪೂರ್ವಕವಾಗಿ ನಿರ್ವಹಿಸುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.”

70. ಇತರ ಆಕಸ್ಮಿಕ ಸಂದರ್ಭಗಳಲ್ಲಿ ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆ: ಈ ಅಧ್ಯಾಯದಲ್ಲಿ ಉಪಬಂಧಿಸಿರದ ಯಾವುದೇ ಆಕಸ್ಮಿಕ ಸಂದರ್ಭದಲ್ಲಿ ಸಂಸತ್ತು ರಾಷ್ಟ್ರಪತಿಯ ಪ್ರಕಾರ್ಯಗಳ ನಿರ್ವಹಣೆಗಾಗಿ ತಾನು ಸೂಕ್ತವೆಂದು ಭಾವಿಸುವಂಥ ಉಪಬಂಧಗಳನ್ನು ಮಾಡಬಹುದು.

[71. ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬAಧಿಸಿದ ಅಥವಾ ಸೇರಿದ ವಿಷಯಗಳು:(71ನೇ ಅನುಚ್ಫೇದವನ್ನು 1975ನೇ ಇಸವಿಯ ಸಂವಿಧಾನ (ಮೂವತ್ತೊಂಭತ್ತನೆಯ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ (10-8-75ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿತ್ತು. ಆ ತರುವಾಯ 1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ)ಅಧಿನಿಯಮದ ಮೂಲಕ (20-6-79 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. ಆದನ್ನು ಮೇಲಿರುವಂತೆ ಓದಿಕೊಳ್ಳತಕ್ಕದ್ದು.) (1) ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಯಿಂದ ಉದ್ಭವಿಸುವ ಅಥವಾ ಅದಕ್ಕೆ ಸಂಬAಧಪಟ್ಟ ಎಲ್ಲ ಸಂದೇಹಗಳನ್ನು ಮತ್ತು ವಿವಾದಗಳನ್ನು ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ಮಾಡತಕ್ಕದ್ದು ಹಾಗೂ ತೀರ್ಮಾನಿಸತಕ್ಕದ್ದು ಮತ್ತು ಅದರ ತೀರ್ಮಾನವು ಅಂತಿಮವಾಗಿರತಕ್ಕದ್ದು. (2) ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಚುನಾಯಿತನಾದ ಯಾರೇ ವ್ಯಕ್ತಿಯ ಚುನಾವಣೆಯು ಅನೂರ್ಜಿತವಾಗಿದೆಯೆಂದು ಸರ್ವೋಚ್ಛ ನ್ಯಾಯಾಲಯವು ಘೋಷಿಸಿದಲ್ಲಿ, ಸರ್ವೋಚ್ಛ ನ್ಯಾಯಾಲಯದ ತೀರ್ಮಾನದ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ರಾಷ್ಟ್ರಪತಿಯ ಪದದ ಅಥವಾ ಸಂದರ್ಭಾನುಸಾರ ಉಪರಾಷ್ಟ್ರಪತಿಯ ಪದದ ಅಧಿಕಾರಗಳನ್ನು ಚಲಾಯಿಸುವಲ್ಲಿ ಮತ್ತು ಕರ್ತವ್ಯಗಳ ನೆರವೇರಿಕೆಯಲ್ಲಿ ಅವನು ಮಾಡಿರುವ ಕಾರ‍್ಯಗಳು ಆ ಘೋಷಣೆಯ ಕಾರಣದಿಂದಾಗಿ ಅಸಿಂಧುವಾಗತಕ್ಕದ್ದಲ್ಲ. (3) ಸಂಸತ್ತು ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು, ರಾಷ್ಟ್ರಪತಿಯ ಅಥವಾ ಉಪರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ಅಥವಾ ಸೇರಿದ ಯಾವುದೇ ವಿಷಯವನ್ನು ಕಾನೂನಿನ ಮೂಲಕ ವಿನಿಯಮಿಸಬಹುದು. (4) ಒಬ್ಬ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ಅಥವಾ ಉಪರಾಷ್ಟ್ರಪತಿಯಾಗಿ ಚುನಾಯಿಸಿರುವ ಚುನಾಯಕ ಗಣದ ಸದಸ್ಯರ ಪೈಕಿ ಯಾವುದೇ ಕಾರಣದಿಂದ ಯಾವುದೇ ಸ್ಥಾನವು ಖಾಲಿಯಿತ್ತೆಂಬ ಕಾರಣದ ಮೇಲೆ ಅಂಥ ವ್ಯಕ್ತಿಯ ಚುನಾವಣೆಯನ್ನು ಪ್ರಶ್ನಿಸತಕ್ಕದ್ದಲ್ಲ.]

72. ಕೆಲವು ಪ್ರಕರಣಗಳಲ್ಲಿ ಕ್ಷಮಾದಾನ ಮುಂತಾದವುಗಳನ್ನು ಮಾಡಲು, ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಯ ಅಧಿಕಾರ: (1) ಯಾವುದೇ ಅಪರಾಧದ ಬಗ್ಗೆ ಅಪರಾಧಿಯೆಂದು ನಿರ್ಣೀತನಾದ ಯಾರೇ ವ್ಯಕ್ತಿಗೆ,- (ಎ) ಸೇನಾ ನ್ಯಾಯಾಲಯವು ದಂಡನೆಯನ್ನು ಅಥವಾ ಶಿಕ್ಷೆಯನ್ನು ವಿಧಿಸಿದ ಎಲ್ಲ ಪ್ರಕರಣಗಳಲ್ಲಿ; (ಬಿ) ಒಕ್ಕೂಟದ ಕಾರ್ಯಾಂಗ ಅಧಿಕಾರವು ವಿಸ್ತೃತವಾಗುವ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂಥ ಯಾವುದೇ ಕಾನೂನಿನ ವಿರುದ್ಧವಾದ ಅಪರಾಧಕ್ಕಾಗಿ ದಂಡನೆಯನ್ನು ಅಥವಾ ಶಿಕ್ಷೆಯನ್ನು ವಿಧಿಸಿರುವ ಎಲ್ಲ ಪ್ರಕರಣಗಳಲ್ಲಿ; (ಸಿ) ಶಿಕ್ಷೆಯು ಮರಣದಂಡನೆಯ ಶಿಕ್ಷೆಯಾಗಿರುವ ಎಲ್ಲ ಪ್ರಕರಣಗಳಲ್ಲಿ – ವಿಧಿಸಿರುವ ದಂಡನೆಯ ಸಂಬಂಧದಲ್ಲಿ ಕ್ಷಮಾದಾನವನ್ನು, ಪ್ರವಿಲಂಬನವನ್ನು, ಮುಂದೂಡುವಿಕೆಯನ್ನು ಅಥವಾ ಮಾಫಿಯನ್ನು ಮಾಡಲು ಅಥವಾ ಶಿಕ್ಷೆಯನ್ನು ಅಮಾನತ್ತುಗೊಳಿಸಲು, ಮಾಫಿ ಮಾಡಲು ಅಥವಾ ಪರಿವರ್ತಿಸಲು ರಾಷ್ಟ್ರಪತಿಯು ಅಧಿಕಾರ ಹೊಂದಿರತಕ್ಕದ್ದು. (2) (1) ನೆಯ ಖಂಡದ (ಎ) ಉಪಖಂಡದಲ್ಲಿ ಇರುವುದು ಯಾವುದೂ, ಯಾವುದೇ ಸೇನಾ ನ್ಯಾಯಾಲಯವು ವಿಧಿಸಿರುವ ಶಿಕ್ಷೆಯನ್ನು ಅಮಾನತ್ತುಗೊಳಿಸಲು, ಮಾಫಿ ಮಾಡಲು ಅಥವಾ ಪರಿವರ್ತನೆ ಮಾಡಲು ಒಕ್ಕೂಟದ ಸಶಸ್ತ್ರ ಬಲಗಳ ಯಾರೇ ಅಧಿಕಾರಿಗೆ ಕಾನೂನಿನ ಮೂಲಕ ಪ್ರದಾನ ಮಾಡಲಾಗಿರುವ ಅಧಿಕಾರವನ್ನು ಬಾಧಕಗೊಳಿಸತಕ್ಕದ್ದಲ್ಲ. (3) (1) ನೆಯ ಖಂಡದ (ಸಿ) ಉಪಖಂಡದಲ್ಲಿ ಇರುವುದು ಯಾವುದೂ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಾಜ್ಯದ ರಾಜ್ಯಪಾಲನು (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಮೇರೆಗೆ ಮತ್ತು ಅನುಸೂಚಿಯ ಮೂಲಕ “ಅಥವಾ ರಾಜಪ್ರಮುಖ” ಎಂಬ ಪದಗಳನ್ನು ಬಿಟ್ಟುಬಿಡಲಾಗಿದೆ.) ಮರಣದಂಡನೆಯ ಶಿಕ್ಷೆಯನ್ನು ಅಮಾನತ್ತುಗೊಳಿಸಲು, ಮಾಫಿಮಾಡಲು, ಅಥವಾ ಪರಿವರ್ತನೆ ಮಾಡಲು ಚಲಾಯಿಸಬಹುದಾದ ಯಾವುದೇ ಅಧಿಕಾರವನ್ನು ಬಾಧಕಗೊಳಿಸತಕ್ಕದ್ದಲ್ಲ.

73. ಒಕ್ಕೂಟದ ಕಾರ್ಯಾಂಗ ಅಧಿಕಾರ ವ್ಯಾಪ್ತಿ:- (1) ಈ ಸಂವಿಧಾನದ ಉಪಬಂಧಗಳಿಗೆ ಒಳಪಟ್ಟು, ಒಕ್ಕೂಟದ ಕಾರ್ಯಾಂಗ ಅಧಿಕಾರವನ್ನು,- (ಎ) ಸಂಸತ್ತು ಕಾನೂನುಗಳನ್ನು ಮಾಡಲು ಅಧಿಕಾರವನ್ನು ಹೊಂದಿರತಕ್ಕ ವಿಷಯಗಳಿಗೆ; ಮತ್ತು (ಬಿ) ಯಾವುದೇ ಕೌಲಿನ ಅಥವಾ ಒಪ್ಪಂದದ ಕಾರಣದಿಂದಾಗಿ ಭಾರತ ಸರ್ಕಾರವು ಚಲಾಯಿಸಬಹುದಾದಂಥ ಹಕ್ಕುಗಳ, ಪ್ರಾಧಿಕಾರದ ಮತ್ತು ಅಧಿಕಾರ ವ್ಯಾಪ್ತಿಯ ಚಲಾವಣೆಗೆ – ವಿಸ್ತರಿಸತಕ್ಕದ್ದು: ಪರಂತು, ಈ ಸಂವಿಧಾನದಲ್ಲಿ ಅಥವಾ ಸಂಸತ್ತು ಮಾಡಿದ ಯಾವುದೇ ಕಾನೂನಿನಲ್ಲಿ ಸ್ಪಷ್ಟವಾಗಿ ಉಪಬಂಧಿಸಿರುವುದನ್ನು ಉಳಿದು (1956ನೆಯ ಇಸವಿ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೇರೆಗೆ “ಮೊದಲನೆಯ ಅನುಸೂಚಿಯ ಎ ಭಾಗದಲ್ಲಿ ಅಥವಾ ಬಿ ಭಾಗದಲ್ಲಿ ನಿರ್ದಿಷ್ಟಪಡಿಸಿರುವ” ಎಂಬ ಪದಗಳನ್ನು ಮತ್ತು ಅಕ್ಷರಗಳನ್ನು ಬಿಟ್ಟುಬಿಡಲಾಗಿದೆ.) ಯಾವುದೇ ರಾಜ್ಯದ ವಿಧಾನಮಂಡಲವು ಸಹ ಕಾನೂನುಗಳನ್ನು ಮಾಡಲು ಅಧಿಕಾರ ಹೊಂದಿರುವ ವಿಷಯಗಳಿಗೆ ಸಂಬಂಧಪಟ್ಟಂತೆ, ಆ ಯಾವುದೇ ರಾಜ್ಯಕ್ಕೆ (ಎ) ಉಪಖಂಡದಲ್ಲಿ ಉಲ್ಲೇಖಿತವಾಗಿರುವ ಕಾರ್ಯಾಂಗ ಅಧಿಕಾರವನ್ನು ವಿಸ್ತರಿಸತಕ್ಕದ್ದಲ್ಲ. (2) ಈ ಅನುಚ್ಫೇದದಲ್ಲಿ ಏನೇ ಇದ್ದಾಗ್ಯೂ, ಯಾವ ರಾಜ್ಯಕ್ಕಾಗಿ ಯಾವ ವಿಷಯಗಳ ಬಗ್ಗೆ ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿದೆಯೋ ಆ ವಿಷಯಗಳ ಬಗ್ಗೆ ಆ ರಾಜ್ಯವು ಮತ್ತು ಆ ರಾಜ್ಯದ ಯಾರೇ ಅಧಿಕಾರಿಯು ಅಥವಾ ಪ್ರಾಧಿಕಾರವು ಈ ಸಂವಿಧಾನವು ಆರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಚಲಾಯಿಸುತ್ತಿದ್ದ ಕಾರ್ಯಾಂಗ ಅಧಿಕಾರವನ್ನು ಅಥವಾ ಪ್ರಕಾರ್ಯಗಳನ್ನು ಚಲಾಯಿಸುವುದನ್ನು, ಸಂಸತ್ತು ಅನ್ಯಥಾ ಉಪಬಂಧಿಸುವವರೆಗೆ ಮುಂದುವರಿಸಿಕೊಂಡು ಹೋಗಬಹುದು.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 24 and 30

Leave a Reply