ನೀಟ್ ಪರೀಕ್ಷೆ ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರಕ್ಕೆ ತಲುಪಿಸಲಿ

2 years ago

ಭಾರತ ದೇಶದಲ್ಲಿ ಒಟ್ಟು 91,927 ಎಂ ಬಿ ಬಿ ಎಸ್ ಸೀಟುಗಳು ಮತ್ತು 26,949 ಡೆಂಟಲ್ ಸೀಟುಗಳು ಜೊತೆಗೆ 50,720 ಆಯುಷ್ಮಾನ್ ಸೀಟುಗಳು ಹಾಗೂ 525 ಪಶು ವೈದ್ಯಕೀಯ ಸೀಟುಗಳು ಲಭ್ಯವಿವೆ. ಒಟ್ಟಾರೆಯಾಗಿ 695 ಮೆಡಿಕಲ್ ಕಾಲೇಜುಗಳು ಸ್ಥಾಪನೆಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಸಂಖ್ಯೆ 79 ಆಗಿದ್ದು, ಇವುಗಳಿಂದ 9,845 ಸೀಟುಗಳು ಲಭ್ಯವಿವೆ.

    ಕೆಲ ವರ್ಷಗಳ ತನಕ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ರಾಜ್ಯ ಸರ್ಕಾರ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಯ ಪ್ರವೇಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಡಲಾಗುತ್ತಿತ್ತು. ಇತ್ತೀಚಿಗೆ ಕೇಂದ್ರ ಸರ್ಕಾರ ವೈದ್ಯಕೀಯ ಪದವಿಯ ಪ್ರವೇಶಕ್ಕೆ ಕೇಂದ್ರೀಕೃತವಾದ ನೀಟ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದರಿಂದಾಗಿ ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಸೀಟುಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ. ನಮ್ಮ ನಾಡಿನ ಮಕ್ಕಳಿಗೆ ಸೀಟುಗಳು ದೊರೆಯುತ್ತಿಲ್ಲ. ಇದು ಒಂದು ಕಡೆಯಲ್ಲಾದರೆ, ನೀಟ್ ಪರೀಕ್ಷಾ ಪದ್ಧತಿಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ಮತ್ತು ಲೋಪದಿಂದ ತುಂಬಿದೆ ಎಂಬುದು ಈಗ ಸಾಬೀತಾಗಿದೆ.

    ನೀಟ್ ಪರೀಕ್ಷೆಯಲ್ಲಿ ಉತ್ತರ ಭಾರತದ ಗುಜರಾತ್ ರಾಜ್ಯದವರು ಅನ್ಯಾಯದ ಮೂಲಕ ಬಹಳಷ್ಟು ರ್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡಿದ್ದಾರೆ. ಹಲವಾರು ಕೋಟಿ ರೂಪಾಯಿಗಳ ವ್ಯವಹಾರ ನಡೆದಿರುವುದು ಬಯಲಾಗುತ್ತಿದೆ. ಸ್ವತಹ ಕೇಂದ್ರದ ಮಾನವ ಸಂಪನ್ಮೂಲ ಸಚಿವರು ಇಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ.

    ಶಿಕ್ಷಣ ಎನ್ನುವುದು ರಾಜ್ಯಗಳ ವಿಚಾರವಾಗಿರುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವಂತಹ ಕೆಲಸ ನಿರಂತರವಾಗಿ ತೆರಿಗೆ ಮತ್ತು ಈಗ ಶಿಕ್ಷಣದ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರ ಸತತವಾಗಿ ಮಾಡುತ್ತ ಬಂದಿದೆ.

    ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮುಂದೆ ನಡೆಯುವಂತಹ ವಿಧಾನಸಭೆಯ ಅಧಿವೇಶನದಲ್ಲಿ ನಿರ್ಣಯವನ್ನು ಮಂಡಿಸಿ ನೀಟ್ ಪರೀಕ್ಷೆಯನ್ನ ರದ್ದುಪಡಿಸಿ ಎಂಬಿಬಿಎಸ್ ಪದವಿಯ ಪ್ರವೇಶವನ್ನು ನೀಡುವ ಅಧಿಕಾರವನ್ನು ರಾಜ್ಯಗಳಿಗೆ ನೀಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅನುಮೋದನೆಯನ್ನು ಪಡೆದು ಕೇಂದ್ರ ಸರ್ಕಾರಕ್ಕೆ ತಲುಪಿಸಲಿ. ಈ ಮೂಲಕ ಎಲ್ಲ ರಾಜ್ಯದವರು ತಮ್ಮ ಧ್ವನಿಯನ್ನ ತೆಗೆದು ನೀಟ್ ಪರೀಕ್ಷೆಯ ರಧ್ಯತೆಗೆ ಹೋರಾಟವನ್ನು ನಡೆಸಲಿ.

    ಆಸ್ಪತ್ರೆಗಳು ನಮ್ಮದು, ಸೌಕರ್ಯ ಸೌಲಭ್ಯಗಳು ನಮ್ಮದು. ಆದರೆ ಸೀಟುಗಳು ಮಾತ್ರ ಕೇಂದ್ರ ಸರ್ಕಾರದ ಅಧೀನದಲ್ಲಿರಬೇಕು ಎನ್ನುವುದು ಯಾವ ನ್ಯಾಯ? ನೀಟ್ ಪರೀಕ್ಷೆ ರದ್ದಾದರೆ ಎಲ್ಲ ಸ್ಥಾನಗಳು ನಮ್ಮ ರಾಜ್ಯದ ಮಕ್ಕಳಿಗೆ ದೊರೆಯುತ್ತವೆ. ಕನ್ನಡಿಗರು ಹೆಚ್ಚು ಜನ ವೈದ್ಯಕೀಯ ಪರೀಕ್ಷೆಯಲ್ಲಿ ಪ್ರವೇಶವನ್ನು ಪಡೆಯಲು ಅನುಕೂಲವಾಗುತ್ತದೆ.

    • ಕೆ ಎಸ್ ನಾಗರಾಜ್, ಬೆಂಗಳೂರು

    Leave a Reply