ವಿಧಾನಸೌಧ ಪ್ರವೇಶಕ್ಕೆ ಆನ್ಲೈನ್ ಪಾಸ್ ನಿಯಮದಿಂದ ನಾಗರೀಕರಿಗೆ ತೊಂದರೆ

2 years ago

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳಿಗೆ ವಿಧಾನಸೌಧ ಪ್ರವೇಶ ಸರಳವಾಗಿರಬೇಕು. ಈಗ ವಿಧಾನಸೌಧ ಪ್ರವೇಶಕ್ಕೆ ಆನ್ಲೈನ್ ಪಾಸ್ ವ್ಯವಸ್ಥೆಯನ್ನು ಮಾಡಿರುವುದು, ಸಾಮಾನ್ಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮೊಬೈಲ್ ಬಳಕೆಯ ಹೆಚ್ಚಿನ ತಿಳುವಳಿಕೆ ಇಲ್ಲದ ನಾಗರೀಕರಿಗೆ ಮತ್ತು ಸ್ಮಾರ್ಟ್ ಫೋನ್ ಗಳು ಇಲ್ಲದಂತಹ ಜನರಿಗೂ ಸಹ ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ರೀತಿಯಲ್ಲಿ ಆಧಾರ ಕಾರ್ಡಿನ ಪ್ರತಿಯನ್ನ ಪಡೆದುಕೊಂಡು ಪಾಸ್ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತನ್ನಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರ ಪ್ರಭುಗಳಿಗೆ ಸರ್ಕಾರಗಳು ಹತ್ತಿರವಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಿಗೆ ಭದ್ರತೆಯ ನೆಪದಲ್ಲಿ ಜನರಿಂದ ದೂರವನ್ನೇ ಮಾಡುತ್ತಿದ್ದೀರಿ. ಅಂಗರಕ್ಷಕರುಗಳು ನಾಗರಿಕರು ಹತ್ತಿರ ಬರಲು ಬಿಡುವುದಿಲ್ಲ. ಕೇವಲ ಹಿಂಬಾಲಕರುಗಳು ಮತ್ತು ಪ್ರಭಾವಿಗಳು ಮಾತ್ರ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳನ್ನು ಭೇಟಿ ಮಾಡಲು ಸಾಧ್ಯವಾಗಿರುತ್ತದೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿ ಪ್ರತಿದಿನವೂ ಪ್ರವಾಸವಿಲ್ಲದ ವೇಳೆಯಲ್ಲಿ 3:00 ಯಿಂದ 5:30ರ ತನಕ ಸಾರ್ವಜನಿಕರ ಬೇಟಿಗೆ ಅವಕಾಶ ನೀಡಬೇಕೆಂಬ ನಿಯಮವಿದೆ. ಆದರೆ ಇತ್ತೀಚಿನ ದಶಕಗಳಲ್ಲಿ ವಿಧಾನಸೌಧದ ಮೂರನೇ ಮಹಡಿ ಮತ್ತು ವಿಕಾಸ ಸೌಧದಲ್ಲಿ ಬಹಳಷ್ಟು ಮಂತ್ರಿಗಳು ಕಚೇರಿಗಳನ್ನು ತೆರೆದು ಅದೆಷ್ಟೋ ದಿನಗಳಾಗಿರುತ್ತದೆ.

ಇನ್ನು ಇವರ ವಸತಿ ಗೃಹಗಳಲ್ಲಿ ಭೇಟಿ ಮಾಡಲು ಸಾಧ್ಯವೇ ಇಲ್ಲ. ಬಹಳಷ್ಟು ಮಂತ್ರಿಗಳು ನಾಗರೀಕರನ್ನು ಭೇಟಿ ಮಾಡುವುದಕ್ಕಿಂತ ತಮ್ಮ ತಮ್ಮ ಕಡೆಯವರ ಭೇಟಿಗಳಿಗಾಗಿ ಪ್ರತ್ಯೇಕವಾದಂತಹ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ನಾಗರಿಕರಿಗೆ ತಮ್ಮ ದುಃಖವನ್ನು ಹೇಳಿಕೊಳ್ಳಲು ಮಂತ್ರಿಗಳು ದೊರೆಯುವುದೇ ಇಲ್ಲ. ಯಾರೋ ಒಂದಿಬ್ಬರು ಮಂತ್ರಿಗಳು ಮಾತ್ರ ಜನರಿಗೆ ಸಿಗುತ್ತಾರೆ. ಬಹಳಷ್ಟು ಮಂತ್ರಿಗಳ ಭೇಟಿ ಸಾಧ್ಯವೇ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಕಡೆಯ ಪಕ್ಷ ನಾಗರಿಕರು ತಮ್ಮ ಅರ್ಜಿಯನ್ನಾದರೂ ಮಂತ್ರಿಗಳು ಮತ್ತು ವಿಧಾನಸೌಧದ ಕಚೇರಿಗೆ ತಲುಪಿಸಲು ಇರುವಂತಹ ಅವಕಾಶವನ್ನು ಕಸಿದುಕೊಂಡರೆ ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುಗಳ ಹಕ್ಕುಗಳೆಲ್ಲವನ್ನು ಮಟುಗುಗೊಳಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಧಾನಸಭೆಯ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಮಧ್ಯಪ್ರವೇಶವನ್ನು ಮಾಡಿ ಹಾಲಿ ಆನ್ಲೈನ್ ಪಾಸ್ ವ್ಯವಸ್ಥೆಯನ್ನ ರದ್ದುಪಡಿಸಿ ಈ ಹಿಂದೆ ಇದ್ದ ರೀತಿಯಲ್ಲಿ ಆಧಾರ್ ಕಾರ್ಡ್ ಆಧಾರದ ಮೇಲೆ ಪ್ರವೇಶಕ್ಕೆ ಅನುಮತಿಯನ್ನು ನೀಡಿ.

ಜೊತೆಗೆ ಮಂತ್ರಿಗಳು ಕಡ್ಡಾಯವಾಗಿ ಪ್ರವಾಸವಿಲ್ಲದ ವೇಳೆಯಲ್ಲಿ ಮಧ್ಯಾಹ್ನದ ವೇಳೆಯಲ್ಲಿ ನಾಗರಿಕರನ್ನ ನೋಡಲು ಆದೇಶವನ್ನು ಹೊರಡಿಸಿ ಸ್ವತಹ ಮುಖ್ಯಮಂತ್ರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಸಾರ್ವಜನಿಕರು ತಮ್ಮನ್ನು ಭೇಟಿ ಮಾಡಲು ಆಗುತ್ತಿರುವ ತೊಂದರೆಗಳ ಬಗ್ಗೆಯೂ ಗಮನ ಹರಿಸಿ ಭದ್ರತಾ ಸಿಬ್ಬಂದಿಗಳಿಗೆ ಸೂಕ್ತವಾದಂತಹ ಆದೇಶವನ್ನು ನೀಡಿ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply