ಬಲಾಢ್ಯರು ಕಾನೂನಿನ ಬಲೆಯನ್ನು ಭೇದಿಸಿಕೊಂಡು ಬರುತ್ತಾರೆ

2 years ago

ಇತ್ತೀಚಿನ ದಿನಗಳಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಅನೇಕ ಪ್ರಮುಖರ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಬರುತ್ತಿರುವ ತೀರ್ಪುಗಳನ್ನ ಗಮನಿಸಿದಾಗ ದಾರ್ಶನಿಕರೊಬ್ಬರು ಹೇಳಿರುವ ಮಾತು ಸತ್ಯವಾಗಿದೆ. ಬಲಾಢ್ಯರು ಕಾನೂನಿನ ಬಲೆಯನ್ನು ಭೇದಿಸಿಕೊಂಡು ಬರುತ್ತಾರೆ ಬಡವರು ಕಾನೂನಿನ ಬಲೆಯಲ್ಲಿ ಸಿಲುಕಿ ಕೊಳ್ಳುತ್ತಾರೆ ಎನ್ನುವ ಮಾತು ನೂರಕ್ಕೆ ನೂರು ಸತ್ಯವಾದದ್ದಾಗಿದೆ.

ಚಪ್ಪಲಿ ಕದ್ದವರು, ಹಣ್ಣು ಕದ್ದವರು, ಸಣ್ಣಪುಟ್ಟ ಅಪರಾಧಿಗಳಿಗೆ ಕಠಿಣವಾದಂತಹ ರೀತಿಯಲ್ಲಿ ಶಿಕ್ಷೆಯನ್ನ ನೀಡಿ ಅವರನ್ನು ದೊಡ್ಡ ಅಪರಾಧಿಗಳಂತೆ ಮನಬಂದಂತೆ ತಳಿಸುತ್ತಾ ಅವರ ಸಣ್ಣಪುಟ್ಟ ಅಪರಾಧಗಳನ್ನು ವೈಭವೀಕರಿಸುವ ಸಂದರ್ಭದಲ್ಲಿಯೇ, ದೊಡ್ಡದೊಡ್ಡ ವ್ಯಕ್ತಿಗಳು ಎನಿಸಿಕೊಂಡವರು ಮಾಡುವಂತಹ ದೊಡ್ಡದೊಡ್ಡ ಮಟ್ಟದ ಅಪರಾಧಗಳಿಗೆ ನಡೆಯುತ್ತಿರುವಂತಹ ತನಿಖೆಯ ಕ್ರಮಗಳು ಮತ್ತು ಅಂತಹ ಮಹಾಪುರುಷರ ಪರವಾಗಿ ವಾದವನ್ನು ಮಾಡಲು ನ್ಯಾಯಾಲಯಗಳಲ್ಲಿ ಸಾಲುಗಟ್ಟಿ ನಿಂತಿರುವಂತಹ ವಕೀಲರ ಪಡೆ ಮತ್ತು ಇಂತಹವರ ಗೌರವವನ್ನು ಹೆಚ್ಚಿಸಲು ನಡೆದುಕೊಳ್ಳುವಂತಹ ಕ್ರಮಗಳು ಜೊತೆಗೆ ನ್ಯಾಯಾಲಯಗಳಲ್ಲಿ ಬರುತ್ತಿರುವಂತಹ ಅಭಿಪ್ರಾಯಗಳು ತೀರ್ಪುಗಳು ಮತ್ತೆ ಸ್ಪಷ್ಟಪಡಿಸುತ್ತಿದೆ.

ದೊಡ್ಡವರು ದೊಡ್ಡ ಮಟ್ಟದಲ್ಲಿ ಅಪರಾಧವನ್ನು ಮಾಡಿದರು ಸಹ ಅವರ ವಿಚಾರದಲ್ಲಿ ಎಲ್ಲಾ ಹಂತದಲ್ಲೂ ಎಲ್ಲ ರೀತಿಯ ಯೋಗ್ಯವಾದಂತಹ ಸೌಕರ್ಯ ಸೌಲಭ್ಯಗಳೊಂದಿಗೆ ಮೃದುವಾದ ಮಾತುಗಳೊಂದಿಗೆ ವಿಚಾರಣೆಯನ್ನು ಮಾಡಿ ಅವರುಗಳ ಮನಸ್ಸಿಗೆ ನೋವಾಗದ ರೀತಿಯಲ್ಲಿ ನಡೆದುಕೊಳ್ಳುವಂತಹ ಸಂಪ್ರದಾಯ ಚೆನ್ನಾಗಿ ಮುಂದುವರಿದಿದೆ.

ದೊಡ್ಡವರು ಒಂದಷ್ಟು ಮಂದಿ ತಮ್ಮ ಪ್ರಭಾವದಿಂದ ಎಲ್ಲಾ ಆಯಾಮಗಳಿಂದ ಪ್ರಕರಣಗಳಿಂದ ಹೊರಬರಲು ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಪುಣ್ಯಕ್ಕೆ ಇನ್ನೂ ದೇಶದಲ್ಲಿ ನ್ಯಾಯಾಲಯದಗಳ ಮೇಲೆ ನಂಬಿಕೆ ಮತ್ತು ಕೆಲವಷ್ಟು ನ್ಯಾಯಾಧೀಶರುಗುಳ ವಿಚಾರದಲ್ಲಿ ವಿಶ್ವಾಸ ಉಳಿದಿರುವುದರಿಂದ ದೊಡ್ಡವರು ಸಹ ಶಿಕ್ಷೆಗೆ ಗುರಿಯಾಗುತ್ತಾರೆ ಎನ್ನುವ ಸಣ್ಣದಾದ ಭರವಸೆ ಉಳಿದುಕೊಂಡಿದೆ. ಆದರೆ ಬಹಳಷ್ಟು ರಾಜಕಾರಣಿಗಳ ಮೇಲೆ ಯಾವುದೇ ರೀತಿಯ ಆರೋಪಗಳು ಬಂದ ತಕ್ಷಣ ಅವರ ನುಡಿಮುತ್ತುಗಳನ್ನು ನಾವು ಆಲಿಸಲು ಸಿದ್ಧರಿರಬೇಕು.

ಇದೆಲ್ಲವೂ ರಾಜಕೀಯ ಕುತಂತ್ರ, ಇದೊಂದು ಷಡ್ಯಂತ್ರ, ಪ್ರಭಾವವನ್ನ ಕುಗ್ಗಿಸಲು ಮಾಡುತ್ತಿರುವ ಹುನ್ನಾರ, ದ್ವೇಷದ ರಾಜಕಾರಣ, ಅಸೂಯೆಯ ಕ್ರಮಗಳು ಹೀಗೆ ಇವರ ನುಡಿಮುತ್ತುಗಳು ಮುಂದುವರಿಯುತ್ತಲೇ ಇರುತ್ತವೆ. ಯಾರೂ ಸಹ ತಮ್ಮ ಮೇಲೆ ಆರೋಪಗಳು ಬಂದಾಗ ನಾನು ಯಾವುದೇ ಪ್ರಭಾವವನ್ನ ಬಳಸದೆ ನ್ಯಾಯಾಲಯದಲ್ಲಿ ತನಿಖೆಯನ್ನ ಎದುರಿಸಿ ಸತ್ಯದಂತೆ ನಡೆಯುತ್ತೇನೆಂದು ಹೇಳುವುದಿಲ್ಲ. ಎಲ್ಲರ ಮಾತುಗಳು ಒಂದೇ ಆಗಿರುತ್ತವೆ. ಆಡುವ ಮಾತುಗಳು ಅದಲು ಬದಲಾಗಿರುತ್ತವೆ.

ಒಟ್ಟಾರೆಯಾಗಿ ಬಹಳಷ್ಟು ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು , ದಬ್ಬಾಳಿಕೆ, ಲೈಂಗಿಕ ಕಿರುಕುಳ ಇವೆಲ್ಲವೂ ಆಗುತ್ತಿದ್ದರೂ ಸಹ ಇಂತಹ ಪ್ರಕರಣದಲ್ಲಿ ಅಪರಾಧಿ ಸ್ಥಾನದಲ್ಲಿ ದೊಡ್ಡವರು ನಿಂತರೆ ಅವರಿಗೆ ಜಾತಿಯ ಜನರ ಬೆಂಬಲ ಮಠಾಧಿಪತಿಗಳ ಬೆಂಬಲ ಅವರ ಬಗ್ಗೆ ಅನುಕಂಪ ಅವರ ರಕ್ಷಣೆಗೆ ಅನೇಕ ಜನರ ನೆರವು ಎಲ್ಲವೂ ದೊರೆತು ಅಂತಿಮವಾಗಿ ಅನ್ಯಾಯಕ್ಕೆ ಗುರಿಯಾದಂತಹ ಮಹಿಳೆಯರಿಗೆ ಅನೇಕ ರೀತಿಯ ಪಟ್ಟಗಳನ್ನ ಕಟ್ಟಿ ತನಿಖೆಯ ಸಂದರ್ಭದಲ್ಲಿ ಅಪರಾಧಿಗಳು ಸತ್ಯಹರಿಶ್ಚಂದ್ರರು ಯಾವುದೇ ಕೃತ್ಯವನ್ನ ಎಸಗಿಲ್ಲ ಎನ್ನುವ ರೀತಿಯಲ್ಲಿ ಸುದ್ದಿಗಳು ಬಿತ್ತರವಾಗಿ ನೊಂದವರು ನಿರಾಶೆಯಿಂದ ಮನೆಗಳನ್ನು ಸೇರಿಕೊಳ್ಳುತ್ತಾರೆ.

ಹೆಸರಿಗೆ ಮಾತ್ರ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಂಘಟನೆಗಳು ಹೋರಾಟದ ಸಂದರ್ಭದಲ್ಲಿ ಅಪರಾಧಿಗಳು ಯಾರು, ಅವರ ಜಾತಿ ಯಾವುದು, ಅವ ರೆಷ್ಟು ದೊಡ್ಡವರು, ಅವರ ವಿರುದ್ಧ ಮಾತನಾಡಿದರೆ ತೊಂದರೆಗಳೇನು, ಸುಮ್ಮನಿದ್ದರೆ ಅನುಕೂಲತೆಗಳೇನು ಎಂಬ ಎಲ್ಲವನ್ನೂ ಲೆಕ್ಕಾಚಾರ ಹಾಕಿ ನಂತರವಷ್ಟೇ ರಸ್ತೆಗಿಳಿಯುವುದು. ಆದರೆ ಸಾಮಾನ್ಯ ನಾಗರಿಕರು ಕೃತ್ಯಗಳನ್ನ ಎಸೆಗಿದಾಗ ಕೂಡಲೇ ರಸ್ತೆ ಇಳಿದು ಹೋರಾಟ ಮಾಡಿ ಗಲ್ಲಿಗೇರಿಸಿ, ಗುಂಡಿಟ್ಟು ಕೊಲ್ಲಿರಿ ಎಂದೆಲ್ಲ ಅಬ್ಬರಿಸುವ ಧ್ವನಿಗಳು ದೊಡ್ಡವರ ವಿಚಾರ ಬಂದಾಗ ಸದ್ದು ಅಡಗಿ ಹೋಗುತ್ತವೆ.

ದೊಡ್ಡ ದೊಡ್ಡವರ ಅಪರಾಧಗಳಿಗೆ ನ್ಯಾಯಾಲಯಗಳಲ್ಲಿ ಶಿಕ್ಷೆಗಳಾಗುತ್ತದೋ ಇಲ್ಲವೋ ಕನಿಷ್ಠಪಕ್ಷ ದೇವರು ಎನ್ನುವವರು ಇದ್ದರೆ ಇವರಿಗೆ ಶಿಕ್ಷೆಯಾಗುತ್ತದೆಂಬ ನಂಬಿಕೆಯಿಂದ ಬದುಕಬೇಕಷ್ಟೇ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply