ರೈತರತ್ನ ಸಿ ಬೈರೇಗೌಡರಿಗೆ 91ನೇ ಜನ್ಮ ಜಯಂತಿ

2 years ago

ಕನ್ನಡ ನಾಡು ಕಂಡಂತಹ ಅತ್ಯಂತ ಪ್ರಾಮಾಣಿಕವಾದ ಮತ್ತು ಶುದ್ಧವಾದ ಸಾರ್ವಜನಿಕ ಜೀವನವನ್ನು ನಡೆಸಿ ಯಾವುದೇ ರೀತಿಯ ಕಳಂಕವನ್ನ ಹೊರದೆ, ಹೊರಗೆ ಸಹಸ್ರಾರು ಜನರ ಪ್ರೀತಿಯ ಮತ್ತು ಅಭಿಮಾನದೊಂದಿಗೆ ತಮ್ಮ ಬದುಕನ್ನು ಮುಗಿಸಿದಂತಹ ನಾಡು ಕಂಡ ಶ್ರೇಷ್ಠ ರಾಜಕಾರಣಿ ಸಿ ಬೈರೇಗೌಡರು.

ಕಮ್ಯುನಿಸ್ಟ್ ಸಿದ್ದಾಂತದಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡು ಸಾರ್ವಜನಿಕ ಜೀವನಕ್ಕೆ ಸ್ಥಳೀಯ ಸಂಸ್ಥೆಯ ಮೂಲಕ ವೇಮಗಲ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ರಾಜಕೀಯವನ್ನು ಆರಂಭಿಸಿದ ಇವರು, 1972ರಲ್ಲಿ ಮತ್ತು 1983 ರಿಂದ ಸತತವಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರತಿಯೊಂದು ಚುನಾವಣೆಗೂ ಇವರ ಚುನಾವಣೆ ಬೇರೆ ಬೇರೆ ಆಗಿತ್ತು. ಆದರೂ ಸಹ ಇವರ ವ್ಯಕ್ತಿತ್ವ ಇವರ ಸೇವೆ ಇವರನ್ನು ಪ್ರತಿಯೊಂದು ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ.

1983ರಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಸಚಿವರಾಗಿ ತಮ್ಮ ಕಾರ್ಯವೈಖರಿಯನ್ನ ರಾಜ್ಯದ ಜನರಿಗೆ ಪರಿಚಯಿಸಿದರು. ಶ್ರೀ ಎಚ್ ಡಿ ದೇವೇಗೌಡರು ಮತ್ತು ಜೆ ಹೆಚ್ ಪಟೇಲ್ ರವರ ಸಂಪುಟದಲ್ಲಿ ಕೃಷಿ ಸಚಿವರಾಗಿ ರಾಜ್ಯದಲ್ಲಿ ಈ ಇಲಾಖೆಗೆ ಹೊಸ ಆಯಾಮವನ್ನು ತಂದರು.

ಕೃಷಿ ಇಲಾಖೆಯಲ್ಲಿ ನೇಮಕಾತಿಯಲ್ಲಿ ಇದ್ದಂತಹ ಪದ್ಧತಿಗಳನ್ನು ಬದಲಾಯಿಸಿ ಕೇವಲ ಮೆರಿಟ್ ಆಧಾರದ ಮೇಲೆ ಹುದ್ದೆಗಳನ್ನು ತುಂಬುವ ಯೋಜನೆಯನ್ನು ರೂಪಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು.

ಕೃಷಿ ನೀತಿಯನ್ನು ರೂಪಿಸಿದರು. ಕೃಷಿ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದರ ಮೂಲಕ ರೈತರಿಗೆ ನೆರವನ್ನ ನೀಡಿದರು. ಗೊಬ್ಬರ ಮತ್ತು ಬೀಜ ಮಾರಾಟ ಮಾಡುವ ಮಳಿಗೆಗಳ ಮೇಲೆ ಆಕಸ್ಮಿಕವಾಗಿ ಭೇಟಿಕೊಟ್ಟು ನಕಲಿ ಬೀಜ ಅಥವಾ ಗುಣಮಟ್ಟವಲ್ಲದ ರಸಗೊಬ್ಬರವನ್ನು ಮಾರಾಟ ಮಾಡುವ ಮಳಿಗೆಗಳ ಬಾಗಿಲು ಮುಚ್ಚಿಸಿ ಅವರುಗಳ ಮೇಲೆ ಕಾನೂನಿನ ಕ್ರಮ ಕೈಗೊಂಡರು.

ವಿಧಾನಸೌಧದ ಮುಂಭಾಗದಲ್ಲಿ ಅನ್ನದಾತರಿಗೆ ಕೃಷಿ ಪ್ರಶಸ್ತಿಯನ್ನು ನೀಡುವಂತಹ ಯೋಜನೆಯನ್ನು ರೂಪಿಸಿದರು. ಕೃಷಿ ಇಲಾಖೆಗೆ ಅನೇಕ ರೀತಿಯ ಬದಲಾವಣೆಗಳನ್ನು ತಂದು ಕೃಷಿ ಕ್ಷೇತ್ರವನ್ನು ಹೆಚ್ಚು ಉಪಯುಕ್ತ ಕ್ಷೇತ್ರವನ್ನಾಗಿಸಿದರು.

ತಾವು ಉಸ್ತುವಾರಿಯಾಗಿದ್ದ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸರ್ಕಾರಿ ಕಚೇರಿಗಳು ಬಸ್ ನಿಲ್ದಾಣಗಳು ಆಸ್ಪತ್ರೆಗಳು ಶಾಲೆಗಳು ಇಲ್ಲಿಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು. ಕಚೇರಿಗೆ ಗೈರು ಹಾಜರಾದವರ ನೌಕರರ ಮೇಲೆ ಕ್ರಮ ಕೈಗೊಳ್ಳುತ್ತಿದ್ದರು.

ಸಿ ಬೈರೇಗೌಡರು ಎಂದರೆ ಕರ್ನಾಟಕದಲ್ಲಿ ಇಂದಿಗೂ ಕೃಷಿ ಸಚಿವರು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎನ್ನುವುದಕ್ಕೆ ಒಂದು ಮಾದರಿಯಾಗಿದ್ದಾರೆ. ಇವರು ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ನಿಧನರಾದ ನಂತರ ಇವರ ಸುಪುತ್ರ ಕೃಷ್ಣ ಭೈರೇಗೌಡರು ಉಪಚುನಾವಣೆಯಲ್ಲಿ ಆಯ್ಕೆಯಾದರೂ 2004 ರಲ್ಲೂ ಸಹ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆಯ ಹಿನ್ನೆಲೆಯಲ್ಲಿ 2008ರಲ್ಲಿ ವೇಮಗಲ್ ವಿಧಾನಸಭಾ ಕ್ಷೇತ್ರ ಮಾಯವಾದ ಕಾರಣದಿಂದ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಇವರು ಸಹ 2013 ರಿಂದ 18ರ ಅವಧಿಯಲ್ಲಿ ಕೃಷಿ ಸಚಿವರಾಗಿ ಕೃಷಿಹೊಂಡ ಯೋಜನೆಯ ಜಾರಿಗೆ ತಂದರು.

ಸಿ ಬೈರೇಗೌಡರು ಸಚಿವರಾಗಿ ಮಾಡಿದಂತಹ ಕಾರ್ಯಗಳನ್ನು ಗುರುತಿಸಿ ಭತ್ತದ ತಳಿಗೆ ಇವರ ಹೆಸರನ್ನು ನಾಮಕರಣ ಮಾಡಿರುತ್ತಾರೆ. ಇವರ ಹೆಸರಿನಲ್ಲಿ ರೈತರಿಗೆ ಪ್ರಶಸ್ತಿಯನ್ನು ಸಹ ಸ್ಥಾಪಿಸಲಾಗಿದೆ.

ಬೈರೇಗೌಡರ ವ್ಯಕ್ತಿತ್ವ ಅವರ ಸಾವಿನ ಸಂದರ್ಭದಲ್ಲಿ ರಾಜ್ಯದ ಜನರಿಗೆ ಪರಿಚಯವಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಇವರ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಪಾಲ್ಗೊಂಡು ತಾವು ಮೆಚ್ಚಿಕೊಂಡ ನಾಯಕನಿಗೆ ನಮನವನ್ನು ಸಲ್ಲಿಸಿದರು.

ಮೇ 12ರಂದು 1934ರಲ್ಲಿ ಹುಟ್ಟಿದ ಇವರಿಗೆ 91ನೇ ಜನ್ಮ ಜಯಂತಿ ಆಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply