ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ
ಕೆಲಸದ ಸ್ಥಳದಲ್ಲಿ ಸುರಕ್ಷತೆಗೆ ಒತ್ತಾಯ
ಕಲಬುರ್ಗಿ: ಕಲಬುರ್ಗಿ ಹೊರವಲಯದ ತಾವರಗೇರಾ ಕ್ರಾಸ ಬಳಿ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಕರೆದೊಯ್ದ ಎರಡು ಜನ ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಿರುವ ಹೀನ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) (ಸಿಐಟಿಯು ) ಈ ಕೃತ್ಯದಲ್ಲಿ ಭಾಗಿಯಾದ ಆರೋಪಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿದೆ.
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
ಏಪ್ರಿಲ್ 7 ರಂದು ಕಲಬುರಗಿಯ ಗಂಜ್ ನಾಕಾದ ಬಳಿ ಕಟ್ಟಡ ಕಾರ್ಮಿಕರಾದ ಶರಣಮ್ಮ ಗಂಡ ಅಂಬಾದಾಸ್ ಕೇರಿ, ಸಾ: ಕೆರಿ ಅಂಬಲಗಾ ತಾ : ಆಳಂದ ಹಾಗೂ ಚಂದಮ್ಮ ಗಂಡ. ಬಾಬುರಾವ್ ತಾಜ ಸುಲ್ತಾನಪೂರ್ ಗ್ರಾಮದ ನಿವಾಸಿಯಗಿರುವ ಇಬ್ಬರು ಮಹಿಳೆಯರನ್ನು ಕೆಲ ಗುತ್ತಿಗೆದಾರರು ಹಾಗೂ ಮಾಲೀಕ ವೇಷಧಾರಿಗಳು ದಿನಗೂಲಿ ಲೆಕ್ಕದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ದುಷ್ಕರ್ಮಿಗಳು ಕಲಬುರ್ಗಿ ಹೊರವಲಯದಲ್ಲಿ ಈ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿ ಅವರ ಚಿನ್ನ-ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕೃತ್ಯ ನಡೆದು 03 ದಿನಗಳು ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವುದು ಅತ್ಯಂತ ಖಂಡನಾರ್ಹ ಸಂಗತಿಯಾಗಿದೆ.
ಕಲಬುರಗಿ ನಗರದ ಹೊರ ವಲಯದಲ್ಲಿ ನಡೆದಿರುವ ಈ ಕೃತ್ಯ ಅತ್ಯಂತ ಹೀನಾಯವಾಗಿದ್ದು, ಕಾರ್ಮಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಬರ ಮತ್ತು ಭೀಕರ ಬಿಸಿಲಿನ ನಡುವೆಯೂ ಒಂದೊತ್ತಿನ ಉಟಕ್ಕಾಗಿ ಕಷ್ಟ ಪಡುವ ಸಾವಿರಾರು ಕಾರ್ಮಿಕರ ಜೀವ ಹಾಗೂ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ನೊಂದ ಕುಟುಂಬಕ್ಕೆ ಸಾಂತ್ವನ ಹಾಗೂ ನ್ಯಾಯ ನೀಡಬೇಕಾದ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರು ಕೂಡ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ.
ರಾಜ್ಯದಲ್ಲಿ ಒಂದುಕಡೆ ಭೀಕರ ಬರ ಮತ್ತೊಂದು ಕಡೆ ಚುನಾವಣೆ ಬಿಸಿಯ ನಡುವೆ ದುಡಿಮೆ ಮಾಡುವ ಬಡಜನರ ಜೀವಗಳಿಗೆ ಮತ್ತು ಅವರ ಬದುಕಿಗೆ ಸೂಕ್ತ ರಕ್ಷಣೆ ನೀಡಬೇಕಿರುವುದು ಆಡಳಿತಶಾಹಿಯ ಕರ್ತವ್ಯವಾಗಿದೆ. ಚುನಾವಣೆ ಘೋಷಣೆಯಾಗಿರುವ ಈ ಹೊತ್ತಿನಲ್ಲಿ ಜನರಿಗೆ ಸೂಕ್ತ ರಕ್ಷಣೆ ಮತ್ತು ನ್ಯಾಯವನ್ನು ಒದಗಿಸುವ ಕರ್ತವ್ಯವನ್ನು ಚುನಾವಣಾ ಆಯೋಗ ಮತ್ತು ಅದರ ಅಧಿಕಾರಿಗಳೇ ಮಾಡಬೇಕೆಂದು ಫೆಡರೇಶನ್ ಆಗ್ರಹಿಸಿದೆ.
ಕೊಲೆಗೀಡಾದ ಇಬ್ಬರು ಮಹಿಳೆಯರು ನೈಜ ಕಾರ್ಮಿಕರಾಗಿ ಕಲ್ಯಾಣಮಂಡಳಿಯಲ್ಲಿ ಹಿಂದೆ ನೊಂದಣಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಂಡಳಿಯ ನಿಯಮಗಳನ್ವಯ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತಪಟ್ಟ ಮಹಿಳೆಯರ ಪ್ರತಿ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಕಲಬುರ್ಗಿಯೂ ಸೇರಿ ರಾಜ್ಯದ ಇತರೆಡೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಖಾತ್ರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಆಗ್ರಹಿಸಿದೆ.



