ಕಲೆಯನ್ನು ಪ್ರೀತಿಸುವವರು ಶಾಂತಿಯ ಪ್ರತಿಪಾದಕರಾಗಿರುತ್ತಾರೆ

2 years ago

ಚಾಮರಾಜನಗರ: ರಂಗಭೂಮಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಪಾಲ್ಗೊಳ್ಳುವುದರಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಕಲಾವಿದರಲ್ಲಿ ಮೂಡುತ್ತದೆ. ಆದುದರಿಂದ ಕಲೆಯನ್ನು ಪ್ರೀತಿಸುವವರು ಶಾಂತಿಯ ಪ್ರತಿಪಾದಕರಾಗಿರುತ್ತಾರೆ ಎಂದು ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಥಿಯೋಡರ್ ಲೂಥರ್ ಅಭಿಪ್ರಾಯಪಟ್ಟರು.

ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ರಂಗವಾಹಿನಿ ಕರ್ನಾಟಕ ರಂಗ ಪರಿಷತ್ತು ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಂಗಭೂಮಿಯು ಯುವ ಪೀಳಿಗೆಗೆ ಆತ್ಮವಿಶ್ವಾಸವನ್ನು ಗಳಿಸುವುದಕ್ಕೆ ಉತ್ತಮ ವೇದಿಕೆ. ಯುವ ಜನಾಂಗದವರಲ್ಲಿ ಸಂಕುಚಿತ ಮನೋಭಾವನೆಯನ್ನು ತೊಡೆದುಹಾಕಿ ಸಮಾಜಮುಖಿಯನ್ನಾಗಿರುವಂತೆ ರಂಗಭೂಮಿಯು ಪ್ರೇರೇಪಿಸುತ್ತದೆ. ಯುವ ಜನತೆಯಲ್ಲಿನ ಸೂಕ್ತ ಪ್ರತಿಭೆಯನ್ನು ಹೊರಹಾಕಲು ರಂಗಭೂಮಿ ಸಹಾಯ ಮಾಡುತ್ತದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಕಿರುಗಸೂರು ರಾಜಪ್ಪ ಮಾತನಾಡಿ, ರಂಗಭೂಮಿಯನ್ನೇ ನಂಬಿಕೊಂಡು ಬಂದಿರುವ ರಂಗ ಕಲಾವಿದರು ಇದೀಗ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪೌರಾಣಿಕ ರಂಗಭೂಮಿಯ ಬಹುತೇಕ ಕಲಾವಿದರಿಗಂತು ಜೀವನ ನಿರ್ವಹಣೆ ಕಷ್ಟವಾಗಿದೆ. ನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗ್ರಾಮೀಣ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕಲೆ ಮತ್ತು ಕಲಾವಿದರನ್ನು ಗೌರವಿಸುವುದರ ಜೊತೆಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಮಾತನಾಡಿ, ಕನ್ನಡ ನಾಡು ಮಾತ್ರ ಅಲ್ಲ ಇಡೀ ವಿಶ್ವವೇ ಕಂಡ ಅಪರೂಪದ ಕಲಾವಿದರಲ್ಲಿ ಡಾ. ರಾಜಕುಮಾರ್ ಪ್ರಮುಖರು. ಕನ್ನಡ ನಾಡು ನುಡಿಗೆ ಅವರು ಸಲ್ಲಿಸಿದ ಕೊಡುಗೆ ಅಪಾರವಾದದ್ದು. ಪೊಲೀಸನ ಮಗಳು ಖ್ಯಾತಿಯ ನಾಟಕಕಾರ ನಾದೇ ನರಸಿಂಹಮೂರ್ತಿ, ಸುಂದರ ಕೃಷ್ಣ ಅರಸ್ ಮೊದಲಾದವರು ಚಾಮರಾಜನಗರ ಜಿಲ್ಲೆಯವರೆಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಎನಿಸುತ್ತದೆ. ಜಾನಪದ ತವರೂರು ಎನಿಸಿರುವ ಚಾಮರಾಜನಗರದಲ್ಲಿ ಬುಡಕಟ್ಟು ಅಲೆಮಾರಿ ರಂಗಾಯಣವನ್ನು ಸ್ಥಾಪಿಸಿ ಆ ಮೂಲಕ ಬುಡಕಟ್ಟು ಅಲೆಮಾರಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಚಲನಚಿತ್ರ ಹಾಗೂ ರಂಗಭೂಮಿ ನಟ ಉಮ್ಮತ್ತೂರು ಬಸವರಾಜು ಅವರು ನಾರ್ವೆ ದೇಶದ ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಪೋಸ್ಸೇ ಅವರ ರಂಗ ಸಂದೇಶವನ್ನು ವಾಚನ ಮಾಡಿ, ರಂಗಭೂಮಿಯಲ್ಲಿ ತೊಡಗಿಸಿ ಕೊಂಡವರಿಗೆ ಸಂತಸದ ಜೀವನ ಕೊಡುವುದರ ಜೊತೆಗೆ ಬದುಕಿನಲ್ಲಿ ಧೈರ್ಯವನ್ನು ನೀಡುತ್ತದೆ. ಶಿಸ್ತು, ಸಂಯಮ ಹಾಗೂ ಸಮಯ ಪ್ರಜ್ಞೆಯನ್ನು ರಂಗಭೂಮಿಯು ಕಲಿಸಿ ಕೊಡುತ್ತದೆ ಎಂದರು.

ಗಾಯಕ ಅರುಣ್ ಕುಮಾರ್ ರಂಗಗೀತೆಗಳನ್ನು ಹಾಡಿ ರಂಜಿಸಿದರು. ಉಪನ್ಯಾಸಕರುಗಳಾದ ಮೂಕಳ್ಳಿ ಬಸವಣ್ಣ, ಮಧುಸೂದನ್, ಶಶಿಕಲಾ, ವಾಣಿ ,ಮಮತಾ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply