ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಹೊಗೆ ಸಮಸ್ಯೆ

2 years ago

ಸ್ವಚ್ಛ ನಗರಿ ಮೈಸೂರು ಎಂಬ ಹೆಸರಿಗೆ ಧಕ್ಕೆ

ವಾಯುಮಾಲಿನ್ಯದಲ್ಲಿ ದೆಹಲಿಯಂತಾಗುವ ಆತಂಕ

ಮೈಸೂರು: ಏಷ್ಯಾದಲ್ಲೇ ಅತ್ಯಂತ ದೊಡ್ಡ ಬಡಾವಣೆ ಎಂದು ಹೆಸರಾಗಿರುವ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ಕಸದ ಸಮಸ್ಯೆ ಬೃಹದಾಕಾರದಲ್ಲಿ ಬೆಳೆದಿದೆ. ಸುಮಾರು 15 – 20 ಕಿ.ಮೀ. ವ್ಯಾಪಿಸಿರುವ ಈ ಬಡಾವಣೆಯಲ್ಲಿ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜನಪ್ರತಿನಿಧಿಗಳು ಸದರಿ ಬಡಾವಣೆ ಕುರಿತು ದೊಡ್ಡದಾಗಿ ಮಾತಾಡುತ್ತಾರೆ. ಆದರೆ ಬಡಾವಣೆಯಲ್ಲಿ ಕಸ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಎದುರಾಗಿದೆ. ಸದರಿ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಾಕೃತಿಕ ಕಾಳಜಿಯುಳ್ಳ ಕೃಷ್ಣೇಗೌಡ, Hey, hi, can you help us keep Mysuru clean? With rising pollution levels and burning plastic waste in every corner of Mysore, we may become the Next Delhi in pollution levels ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ಕಸ ಸುರಿದಿರುವ ಪ್ರದೇಶ

ವಿಜಯನಗರ 4ನೇ ಹಂತದಲ್ಲಿ ಮುಡಾ ವತಿಯಿಂದ ಕಸ ಸಂಗ್ರಹಣೆ ಮಾಡಿ, ಖಾಲಿ ಜಾಗ, ರಿಂಗ್ ರಸ್ತೆ ಪಕ್ಕ ಮತ್ತು ಕೆರೆಯ ಪ್ರದೇಶದಲ್ಲಿ ಸುರಿಯಲಾಗುತ್ತದೆ. ಸುಮಾರು ಟ್ರ್ಯಾಕ್ಟರ್ ನಲ್ಲಿ 25 ಲೋಡ್ ನಷ್ಟು ಪ್ರತಿದಿನ ಇದೇ ಸ್ಥಳದಲ್ಲಿ ಕಸವನ್ನು ತಂದು ಸುರಿಯಲಾಗುತ್ತದೆ. ಮರುಬಳಕೆಯಾಗುವ ಕೆಲವು ವಸ್ತುಗಳನ್ನು ಆಯ್ದುಕೊಂಡು ಉಳಿದ ಕಸಕ್ಕೆ ಸ್ಥಳದಲ್ಲೇ ಬೆಂಕಿ ಹಚ್ಚಲಾಗುತ್ತದೆ.

ಹೀಗೆ ಬೆಂಕಿ ಹಚ್ಚುವುದರಿಂದ ಇಡೀ ಪ್ರದೇಶದಲ್ಲಿ ಹೊಗೆ ವ್ಯಾಪಕವಾಗಿ ಹರಡುತ್ತಿದ್ದು, ಸುತ್ತಮುತ್ತಲ ಪ್ರದೇಶದವರೂ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ವ್ಯರ್ಥ ಪದಾರ್ಥಗಳಿಗೆ ಬೆಂಕಿ ಹಚ್ಚುವುದರಿಂದ ವ್ಯಾಪಕವಾಗಿ ವಾಯುಮಾಲಿನ್ಯವಾಗುತ್ತಿದ್ದು, ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮಕ್ಕಳಿಗೆ ವಿಶೇಷವಾಗಿ ಇದರಿಂದ ತೊಂದರೆಯಾಗುತ್ತಿದೆ.

ಕಸಕ್ಕೆ ಬೆಂಕಿ ಹಂಚಿರುವ ದೃಶ್ಯ

ವಿಜಯನಗರ 4ನೇ ಬಡಾವಣೆ ಹೇಳಿಕೇಳಿ ಸಿರಿವಂತರು ನೆಲೆಸಿರುವ ಪ್ರದೇಶ. ಇದನ್ನು ವಿಜಯನಗರದ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದು, ಇದೇ ಪ್ರದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೈಸೂರನ್ನು ಅತ್ಯಂತ ಸ್ವಚ್ಛ ನಗರ, ಅರಮನೆ ನಗರ, ಸುಂದರ ನಗರ, ಪಾರಂಪರಿಕ ನಗರ ಎಂದೆಲ್ಲ ಕರೆಯಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ನೆಲೆಸಿರುವುದು ಕೂಡ ಮೈಸೂರಿನಲ್ಲಿ. ಮಾಜಿ ಸಂಸದ ಆರ್.ಧ್ರುವ ನಾರಾಯಣ್, ಹಾಲಿ ಶಾಸಕ ದರ್ಶನ್ ಧ್ರುವ ನಾರಾಯಣ್, ಹಾಲಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ದೊಡ್ಡ ರಾಜಕಾರಣಿಗಳ ಮನೆಗಳ ಆಸುಪಾಸಿನಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಮಾನ್ಯರೇ, ವಿಜಯನಗರ ೪ನೇ ಹಂತದ ನಿವಾಸಿಗಳಾದ ನಾವು ಈ ಮೂಲಕ ನಿಮಗೆ ತಿಳಿಸುವುದೇನೆಂದರೆ, “ಕನ್ನಡ ಸರ್ಕಲ್” ಬಳಿ ಕಸ ವಿಂಗಡಣೆ ಕಾರ್ಯ ನಡೆಸುತ್ತಿದ್ದು, ಅಲ್ಲಿ ಕಸಗಳಿಗೆ ಬೆಂಕಿ ಇಡುವುದರಿಂದ ಭಾರೀ ಕೆಟ್ಟ ಹೊಗೆ ಪೂರ್ತಿ ವಿಜಯನಗರದ ತುಂಬಾ ಹರಡಿಕೊಳ್ಳುತ್ತದೆ. ದಯಮಾಡಿ ಈ ಬಗ್ಗೆ ವಿಚಾರಣೆ ಮಾಡಿ ಸೂಕ್ತ ಪರಿಹಾರವನ್ನು ಕೊಡಿಸಬೇಕಾಗಿ ನಿಮ್ಮಲ್ಲಿ ನಮ್ಮ ಕಳಕಳಿಯ ಮನವಿ ಎಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮೇಯ್ಲ್ ಮೂಲಕ ದೂರು ನೀಡಿದ್ದಾರೆ.

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ, ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ, ಮುಡಾ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಈಮೇಯ್ಲ್ ಮೂಲಕ ದೂರು ಸಲ್ಲಿಸಲಾಗಿದೆ. ಆದರೆ ದೂರು ಸಲ್ಲಿಸಿ ನಾಲ್ಕೈದು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತ್ಯಾಜ್ಯದಲ್ಲಿ ಯಾವ ರೀತಿಯ ವ್ಯರ್ಥ ಪದಾರ್ಥಗಳಿವೆ ಎಂಬುದು ಗೊತ್ತಾಗುವುದಿಲ್ಲ. ಬಹುತೇಕ ವ್ಯರ್ಥ ಪದಾರ್ಥಗಳನ್ನು ಸುಟ್ಟಲ್ಲಿ ವಿಷಕಾರಿ ಅನಿಲಗಳು ಹೊರಸೂಸುತ್ತವೆ. ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕಾಗಿದೆ.

Leave a Reply