ಬೆಂಗಳೂರು: ರಾಜಾಜಿನಗರದಲ್ಲಿ ಡಾ.ಶಿವಕುಮಾರ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಜಾಜಿನಗರ ಪ್ರವೇಶ ದ್ವಾರದ ಬಳಿ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಲಾಯಿತು.
ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಾ ಸ್ವಾಮೀಜಿ, ಡಾ.ಶ್ರೀ ತೋಟಂದ ಸಿದ್ದರಾಮ ಸ್ವಾಮೀಜಿ, ಶಾಸಕ ಕೆ.ಗೋಪಾಲಯ್ಯ, ವಿ.ಸೋಮಣ್ಣ ಪ್ರತಿಷ್ಠಾನ ಅಧ್ಯಕ್ಷೆ ಶೈಲಜಾ ಸೋಮಣ್ಣ, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಸುಮಂಗಲಿ ಸೇವಾ ಆಶ್ರಮದ ಸುಶೀಲಮ್ಮ, ಮಾಜಿ ಉಪಮೇಯರ್ ರಂಗಣ್ಣ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್, ಅಧ್ಯಕ್ಷ ಟಿ.ವೆಂಕಟೇಶಗೌಡ, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಕೊಳಚೆ ಅಭಿವೃದ್ದಿ ಮಂಡಳಿ ಮಾಜಿ ನಿರ್ದೇಶಕ ಕ್ರಾಂತಿರಾಜು, ಹಿರಿಯ ವಿದ್ವಾಂಸ ಎಂ.ಜಿ.ನಾಗರಾಜ್ ಅವರು ಕಂಚಿನ ಪುತ್ಥಳಿ ಲೋಕಾರ್ಪಣೆ ಮಾಡಿದರು.
ಇದೇ ವೇಳೆ ಮಾತಾಡಿದ ಶ್ರೀ ಸಿದ್ದಲಿಂಗಾ ಸ್ವಾಮೀಜಿ, ನಾವೆಲ್ಲ ಭಾಗ್ಯವಂತರು, ಪುಣ್ಯವಂತರು ಶಿವಕುಮಾರಸ್ವಾಮೀಜಿರವರ ದರ್ಶನ ಭಾಗ್ಯ ಸಿಕ್ಕಿರುವುದೇ ಪುಣ್ಯ. ಶಿವಕುಮಾರ ಸ್ವಾಮೀಜಿರವರ ಬದುಕು ಸೇವೆಯಂದರೆ ಕಾಯಕ ದಾಸೋಹವಾಗಿತ್ತು.ಮಕ್ಕಳನ್ನು ದೇವರು ಎಂದು ಅವರು ನಂಬಿದ್ದರು ಎಂದರು.
ಶಿವಕುಮಾರ ಸ್ವಾಮೀಜಿರವರದು ತ್ಯಾಗದ ಬದುಕಾಗಿತ್ತು. ಪೂಜೆ, ಸೇವೆಯ ಪ್ರತಿಫಲದಿಂದ 111 ವರ್ಷ ಬದುಕಿದರು. ಶಿವಕುಮಾರಸ್ವಾಮೀಜಿ ಪ್ರತಿಯೊಂದು ಕೆಲಸವನ್ನು ಶ್ರದ್ದೆ, ಭಕ್ತಿಯಿಂದ ಮಾಡುತ್ತಿದ್ದರು.
ಗ್ರಾಮಾಂತರ ಮತ್ತು ಹಳ್ಳಿಯ ಮೂಲೆ, ಮೂಲೆಗಳಲ್ಲಿ ಶಾಲೆಗಳನ್ನು ಶಿವಕುಮಾರಸ್ವಾಮೀಜಿರವರು ಆರಂಭಿಸಿದರು. ಇದರ ಸಹಕಾರದಿಂದ ಪ್ರತಿಭಾವಂತ ವಿದ್ಯಾರ್ಥಿಗಳು ರೂಪುಗೊಂಡರು. ಜಾತಿ, ಮತ ಭೇದಬಾವ ನೋಡದೇ ಎಲ್ಲ ಜಾತಿಯ ಮಕ್ಕಳಿಗೆ ಆಶ್ರಯ ನೀಡಿದರು ಮತ್ತು ಸಂಸ್ಕೃತ ಭಾಷೆಯನ್ನು ಎಲ್ಲರಿಗೂ ಕಲಿಸಿದರು ಎಂದರು.
ಶಿವಕುಮಾರಸ್ವಾಮೀಜಿರವರು ಪದವಿ ಪ್ರಶಸ್ತಿಗಳಿಗೆ ಎಂದು ಆಸೆ ಪಡಲಿಲ್ಲ, ತಮ್ಮ ದೇಹವನ್ನು ಸವೆಸಿ ನಾಡಿಗೆ ಬೆಳಕಾದರು. ಬಸವ ಜಯಂತಿ ಅಚರಣೆಯಿಂದ ಬಸವತತ್ವಗಳನ್ನು ಪ್ರಚಾರ ಮಾಡಿದರು. ಶಿವಕುಮಾರಸ್ವಾಮೀಜಿ ರವರನ್ನು ಪಡೆದ ನಾಡು ಧನ್ಯವಾಗಿದೆ ಎಂದರು.
ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಬಸವಣ್ಣನೇ ನಮ್ಮ ತಂದೆ, ತಾಯಿ ದೇವರು. ಶಿವಕುಮಾರಸ್ವಾಮೀಜಿ ಪುತ್ಥಳಿ ಸ್ಥಾಪನೆ ಹಿಂದಿನ ಉದ್ದೇಶ ಅವರ ಬದುಕಿನ ಅರ್ಥ, ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಸಾರುವುದಾಗಿದೆ ಎಂದರು.
ಸಮಾನತೆ, ದಾಸೋಹ ಕುರಿತು 12ನೇ ಶತಮಾನದಲ್ಲಿ ಮಹತ್ವವಿತ್ತು, 21ನೇ ಶತಮಾನದಲ್ಲಿ ಶಿವಕುಮಾರಸ್ವಾಮೀಜಿ ಈ ತತ್ವಗಳನ್ನು ವಿಶ್ವಕ್ಕೆ ಸಾರಿದರು. ಮಕ್ಕಳು ತಂದೆ, ತಾಯಿಗಿಂತ ಹೆಚ್ಚಾಗಿ ಶಿವಕುಮಾರಸ್ವಾಮೀಜಿರವರನ್ನು ಪ್ರೀತಿ ಮಾಡುತ್ತಿದ್ದರು. ಸಿದ್ದಗಂಗಾ ಕ್ಷೇತ್ರ ಪ್ರೀತಿ, ವಾತ್ಸಲ್ಯ, ಮಮತಾಮಯಿ ಕ್ಷೇತ್ರವಾಗಿದೆ. ಶಿವಕುಮಾರ ಸ್ವಾಮೀಜಿಗಳು ಎಲ್ಲರನ್ನು ನಮ್ಮವರೆ ಎಂದು ಭಾವಿಸಿದರು, ವಿಶ್ವದಲ್ಲಿ ಇರುವವರು ಎಲ್ಲರು ನಮ್ಮ ಕುಟುಂಬದವರು ಎಂದು ಭಾವಿಸಿದರು. 111 ವರ್ಷದ ಆದರ್ಶ ಜೀವನ, ಸಮಾಜಮುಖಿಯಾಗಿ ಸೇವೆ ನಡೆದಾಡುವ ದೇವರು ಎಂದು ಕೀರ್ತಿಗಳಿಸಿದರು ಎಂದರು.
ಪದಾಧಿಕಾರಿಗಳಾದ ನಟರಾಜ್ ಬೊಮ್ಮಸಂದ್ರ, ಮೀಸೆ ಮಹೇಶ್, ಗಿರೀಶ್ ಕುಮಾರ್, ಮೇಲುಕೋಟೆ ಬೆಟ್ಟಸ್ವಾಮಿಗೌಡ, ದೇವರಾಜು, ಶ್ರೀನಿವಾಸ್ ಮೊದಲಾದವರು ಭಾಗವಹಿಸಿದ್ದರು.




