“ಫೋಟೋ” ಮನಕಲಕುವ ಸಿನಿಮಾ ಅಷ್ಟೇ ಅಲ್ಲ, ವ್ಯವಸ್ಥೆಯ ಅದ್ಭುತ ಸೆಟೈರ್

2 years ago

Please watch and support PHOTO movie
ಫೋಟೋ” ಮನಕಲಕುವ ಸಿನಿಮಾ ಅಷ್ಟೇ ಅಲ್ಲ, ವ್ಯವಸ್ಥೆಯ ಅದ್ಭುತ ಸೆಟೈರ್..

ಪೆಂಡಮಿಕ್ ಭೂತ ನರ್ತನ ನಡೆದುಹೋಯಿತು. ಅದು ಕಾಲದ ಸೃಷ್ಟಿಯೇ ಅಥವಾ ಮಾನವ ತಪ್ಪಿನ ಫಲವೇ.. ಅರಿಯುವುದು ತ್ರಾಸದಾಯಕ.

ಕೊರೊನಾ ಸಂದರ್ಭದ ಅಮಾನವೀಯ ನಡೆಗಳು, ಜನಸಾಮಾನ್ಯರ ಅಂಥ ಸಂಕಷ್ಟದ ಸಂದರ್ಭದಲ್ಲಿ ಇಂಡಿಯಾ ದೇಶದ ವ್ಯವಸ್ಥೆ ನಡೆದುಕೊಂಡ ರೀತಿ ಕರಾಳ ನೆನಪಾಗಿ ಮಾನವ ಜಗತ್ತನ್ನು ನಿರಂತರ ಕಾಡುವಂಥದು. ಇದು ಮಾನವ ಕೇಡಾಗಿ ಚರಿತ್ರೆಯಲ್ಲಿ ಉಳಿಯಲಿದೆ.

ಬಹುಪಾಲು ಜನ ಅಧಿಕಾರದ ಸೌಧಗಳಲ್ಲಿ ಮೆರೆಯುವ ಅಹಮಿಕೆಯ ಮತ್ತಿನ ನಾಯಕರ “ಫೋಟೋ” ಆರಾಧನೆಯಲ್ಲಿ ತೊಡಗಿಕೊಂಡಿದ್ದರಿಂದ ಪ್ರಜಾಪ್ರಭುತ್ವ ಎನ್ನುವುದು ನಗೆಪಾಟಲಿಗೀಡಾಗಿದೆ. ಜನ ಪ್ರಶ್ನಿಸುವ ಅಧಿಕಾರ ಕಳೆದುಕೊಂಡಿದ್ದು ಕಾಲದ ವ್ಯಂಗ್ಯ.

ಹಸಿವು, ಬಡತನ, ನಿರುದ್ಯೋಗ, ಸಾವು.. ಇವುಗಳ ಬಗ್ಗೆ ಎಲ್ಲೆಲ್ಲೂ ಬರಿಯ ಆತ್ಮಮರುಕತನದ ಮಾತುಗಳು.. ತುಂಬ ಜವಾಬ್ದಾರಿಯಿಂದ ವರ್ತಿಸಬೇಕಾದ ವ್ಯವಸ್ಥೆಯ ಯಾವ ಆಡಳಿತ ವಿಭಾಗದಲ್ಲೂ ಈಗ ಯಾವುದೇ ರೀತಿಯ ನೈತಿಕತೆ ಉಳಿದಿಲ್ಲ. ಒಟ್ಟಿನಲ್ಲಿ ಕೊಟ್ಟ ಮಾತು, ಆಣೆ, ಭಾಷೆ, ಪ್ರಮಾಣಗಳ ಖಬರಿಲ್ಲದ ಖಬರಗೇಡಿ ನಾಯಕತ್ವ!

ಬದಲಾವಣೆಯ ಭರವಸೆ ಮೂಡಿಸಿ 140 ಕೋಟಿ ಜನರಿಗೆ ಮಾತು ಕೊಟ್ಟು ವ್ಯವಸ್ಥೆ ಸೌಧ ಸೇರಿಕೊಂಡ ಪ್ರಭುವಿನ ಕಿವಿಗಳಿಗೆ ಬಂಡವಾಳಿಗರು ಸೀಸ ಹುಯ್ದು ಬಿಟ್ಟಿದ್ದಾರೆ. ಝಗ ಮಗ ಬಣ್ಣಗಳ ದಿರಿಸು, ಆಕಾಶಯಾನದಲ್ಲಿ ವಿಹಾರ, ಮಸೀಹಾ ಭ್ರಮೆಯಲ್ಲಿ ಮುಳುಗಿಸಿ ಕಣ್ಣುಗಳಿಗೆ ವಾಸ್ತವ ಗೋಚರಿಸದಂಥ ಚಾಳೀಸು ತೊಡಿಸಿ ಬಿಟ್ಟಿದ್ದಾರೆ!

ಇಂಥ ಉತ್ಸವ ಮೂರ್ತಿಗಳ ಸೌಧದ ಫೋಟೋ ದಿಟ್ಟಿಸುವ ಶಾಲಾ ಬಾಲಕನ ಪಾತ್ರದ ಮೂಲಕ ಕೊರೊನಾ ಕಾಲದ ಬದುಕಿನ ವಿಷಣ್ಣತೆಯನ್ನು ಅತ್ಯಂತ ಮೊನಚು ಸೆಟೈರ್ ಮೂಲಕ ಕಟ್ಟಿಕೊಟ್ಟ ಚಲನಚಿತ್ರ “ಫೊಟೋ”

ಪುಟ್ಟ ಶಾಲಾ ಬಾಲಕನಿಗೆ ವ್ಯವಸ್ಥೆಯ ಸೌಧ ನೋಡುವ, ಅದರ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಕನಸು. ಗೆಳೆಯರೊಟ್ಟಿಗೆ ಅದರ ಬಗ್ಗೆ ಹೇಳಿಕೊಳ್ಳುತ್ತಾನೆ. ಈ ಸೌಧಕ್ಕೆ ಹೋಗಿ ಬರುವುದಾಗಿ ಗೆಳೆಯರಿಗೆ ಮಾತು ಕೊಡುತ್ತಾನೆ. ಗಾರೆ ಕೆಲಸದ ಅಪ್ಪ ಬೆಂಗಳೂರಿನಲ್ಲಿ ಇರುವುದರಿಂದ ಹಟ ಮಾಡಿ ಅಪ್ಪನ ಸೇರಿಕೊಳ್ಳುತ್ತಾನೆ. ಮನದಲ್ಲಿ ಒಂದೇ ನಿರ್ಧಾರ, ಕನಸಿನ ಸೌಧ ನೋಡುವುದು. ಅಪ್ಪ ಕೂಡ ಮಾತು ಕೊಡುತ್ತಾನೆ. ಇಂದು, ನಾಳೆ ಎನ್ನುತ್ತ ಸಾಗಹಾಕುತ್ತಲೇ ಹೋಗುತ್ತಾನೆ. ಮಗನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಅಪ್ಪ ಸನ್ನದ್ದನಾಗುವಷ್ಟರಲ್ಲಿ ಜನತಾ ಕರ್ಫ್ಯೂ, ಲಾಕ್ ಡೌನ್ ಘೋಷಣೆ!

ಹಟ ಹಿಡಿದ ಮಗನ ಯಾಮಾರಿಸಿ ವಾಪಸ್ ಊರು ಸೇರಲು ಅಪ್ಪ-ಮಗ ತುಳಿವ ಹಾದಿ, ಪಟ್ಟ ಕಷ್ಟ ಹೃದಯ ವಿದ್ರಾವಕ. ಡಾಂಬರು, ಕಲ್ಲು, ಮಣ್ಣಿನ ರಸ್ತೆ, ಹಲವು ಬೇಲಿಗಳು, ಮುಳ್ಳುಗಳು, ಮೇಲೆ ಉರಿಬಿಸಿಲು. ಆ ಬಾಲಕನ ಮನದಲ್ಲಿ ವಿಧಾನಸೌಧ ನೋಡಲಾಗದ, ಅದರ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳಲಾಗದ ದೊಡ್ಡ ವಿಷಾದ. ಗೆಳೆಯರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ವಚನಭ್ರಷ್ಪ ಆದೇನಾ ಎಂಬ ಭೀತಿ!

ಇದಿಷ್ಟೇ ಪ್ಲಾಟ್ ಇಟ್ಟುಕೊಂಡು ಕ್ಯಾಮೆರಾಮ್ಯಾನ್ ಡಿಒಪಿ- ದಿವಾಕರನ್ ಮೂಲಕ ತೆರೆಯ ಮೇಲೆ ಅದ್ಭುತ ಇಲಸ್ಟ್ರೇಷನ್, ಕ್ಯಾರಿಕೇಚರ್ ಮೂಡಿಸಿದ ಯುವ ನಿರ್ದೇಶಕ ಉತ್ಸವ್ ಗೋನವಾರ್ ಗೆ ಬರಿ 23ರ ವಯಸ್ಸು. ಓದಿದ್ದು ಎಸ್ಎಸ್ಎಲ್ಸಿ! ಚಿತ್ರದುದ್ದಕ್ಕೂ ಅದ್ಭುತವಾದ ಪಾಲಿಟಿಕಲ್ ಸಟೈರ್ ಮೂಲಕ ನಮ್ಮನ್ನು ಜಾಗೃತಗೊಳಿಸುತ್ತಾನೆ. ಎಲ್ಲ ಮಾಧ್ಯಮಗಳು ಗಪ್ ಚಿಪ್ ಆದ ಕಾಲಘಟ್ಟದಲ್ಲಿ ವ್ಯವಸ್ಥೆಯ ಸೆಟೈರ್ ಕಟ್ಟಿಕೊಡುವ ಸಾಹಸ ಮಾಡಿದ ಯುವ ನಿರ್ದೇಶಕನ ದಿಟ್ಟತನ ಮೆಚ್ಚಲೇಬೇಕು.

ಒಬ್ಬ ಸಾಧಾರಣ ಶಾಲಾ ಬಾಲಕ ತಾನು ಸಹಪಾಠಿಗಳ ಬಳಿ ಮಾತು ಕೊಟ್ಟಿದ್ದನ್ನು ಅದೆಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ, ಈಡೇರಿಸಲು ಅದೆಷ್ಟು ಸರ್ಕಸ್ ಮಾಡುತ್ತಾನೆ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಎನ್ನುವ ಆ ಅರಿವು ಅವನನ್ನು ಅದೆಷ್ಟು ಆವರಿಸಿಕೊಂಡುಬಿಡುತ್ತದೆ.. ಅಬ್ಬಾ!

ಅಂದುಕೊಂಡದ್ದು ನಡೆಯದೇ ಹೋದುದರಲ್ಲಿ ಬಾಲಕನದೇನೂ ತಪ್ಪಿರುವುದಿಲ್ಲ. It was matter of time! ಆದರೂ ಕಾಲದ ಹೊಡೆತಕ್ಕೆ ತಾನು ವಚನಭ್ರಷ್ಟನಾದೆ ಎನ್ನುವ ಸಂಕಟ ಅವನನ್ನು ಒಳಗೇ ಹಿಂಡಿ ಹಾಕುತ್ತದೆ. ಕುಗ್ಗಿ ಹೋಗುತ್ತಾನೆ. ಊರ ದಾರಿ ನಡುವೆ ಸತ್ತೇ ಹೋಗುತ್ತಾನೆ.

ವಾಸ್ತವದಲ್ಲಿ ನಮ್ಮ ನಡುವಿನ ಮಾತು ಕೊಟ್ಟ ನಾಯಕರು, ಮಾತುಗಳಲ್ಲಿಯೇ ಯಾಮಾರಿಸುವ ಕಾಯಕ ಮುಂದುವರಿಸಿದ್ದನ್ನು ಗಮನಿಸಿದರೆ ಡೆಮಾಕ್ರಸಿಯ ವ್ಯಂಗ್ಯ ಅರ್ಥವಾಗುತ್ತದೆ.

ಚಿತ್ರದಲ್ಲಿ ಕುಗ್ರಾಮದ ಬರಡು ನೆಲದಲ್ಲಿ ಏದುಸಿರು ಬಿಡುತ್ತಾ ಆ ಶಾಲಾ ಬಾಲಕ ದಾರಿ ಹೆಣವಾಗುವ ಸ್ಥಿತಿ ಎಂಥವರನ್ನೂ ಕಲಕಿ ಬಿಡುತ್ತದೆ. ಕೊರೊನಾ ಕಾಲದಲ್ಲಿ ಯುಟ್ಯೂಬ್ ಚಾನೆಲ್, ವೆಬ್ ಸೈಟ್ ತುಂಬ, ಹೆದ್ದಾರಿ, ಬೀದಿಗಳಲ್ಲಿ ನಾವು ಕಂಡಿದ್ದು ಇಂಥದೇ ಸಂಕಟಗಳ ಚಿತ್ರಣ ಹೊತ್ತ “ಫೋಟೋ”ಗಳು..

ಒಂದಂತೂ ಒಪ್ಪಬಹುದಾದ ಮಾತು – ಇತ್ತೀಚಿನ ಸ್ಟೀರಿಯೊಟೈಪ್ ಸಿನಿಮಾಗಳಿಗಿಂತ ತುಂಬ ಭಿನ್ನವಾದ ಮತ್ತು ಸೆಟೈರಿಕ್ ಆಗುವುದರ ಜೊತೆಗೆ ತೀವ್ರವಾಗಿ ಮನ ಕಲಕಿದ ಚಿತ್ರ “ಫೋಟೋ”.

ಶಾಲಾ ಬಾಲಕನ ಪಾತ್ರ ನಿರ್ವಹಣೆ, ಮಹದೇವ ಹಡಪದ, ಜಹಾಂಗೀರ್, ಅರಕೇರಿ ಅವರದ್ದು ಕಾಡುವಂಥ ಪರ್ಫಾರ್ಮೆನ್ಸ್.

  • ದಿಲಾವರ್ ರಾಮದುರ್ಗ, ಹಿರಿಯ ಪತ್ರಕರ್ತರು

Leave a Reply