ಲೋಕಸಭೆ ಟಿಕೆಟ್ ಹಂಚಿಕೆ: ಬಿಜೆಪಿಯಲ್ಲಿ ತಾರಕಕ್ಕೇರಿದ ಅಸಮಾಧಾನ

2 years ago

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು ಎಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿ ನಾಯಕತ್ವಕ್ಕೆ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲಾಗಿದೆ.

ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡುವ ಮುನ್ನವೇ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಮುಂದಾಗಿದ್ದ ಹೈಕಮಾಂಡ್ ಗೆ ರಾಜ್ಯದಲ್ಲಿ ತೀವ್ರಗೊಂಡಿರುವ  ಬಣ ರಾಜಕಾರಣ ದೊಡ್ಡ ಸಮಸ್ಯೆಯಾಗಿದೆ.

ನಾಲ್ಕೈದು ಬಣಗಳು ರಾಜ್ಯದಲ್ಲಿ ಸಕ್ರಿಯವಾಗಿದ್ದು ತಮ್ಮ ಅತ್ಯಾಪ್ತರಿಗೆ ಟಿಕೆಟ್ ಕೊಡಿಸಲು ಮುಂದಾಗಿವೆ. ಈ ಬಣ ರಾಜಕಾರಣದ ವಿರುದ್ಧ ಇದೀಗ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಇದೇ ರೀತಿಯ ಬಣ ರಾಜಕಾರಣ ವಿಜೃಂಭಿಸಿದ್ದರಿಂದ ಪಕ್ಷಕ್ಕೆ ಸೋಲಾಯಿತು. ಈ ಅನುಭವದಿಂದಲೂ ನಾಯಕರು ಪಾಠ ಕಲಿತಿಲ್ಲ ಎಂದು ಹೇಳಿರುವ ಕಾರ್ಯಕರ್ತರ ಪಡೆ ಹೈಕಮಾಂಡ್ ಗೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆಗೆ ನಿಗದಿಪಡಿಸಿದ ಸಭೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಇದೀಗ ಮತ್ತೆ ಬಿಜೆಪಿ ಸೇರಿದ್ದಾರೆ. ಅಷ್ಟೇ ಅಲ್ಲ ಲೋಕಸಭಾ ಚುನಾವಣೆ ಸ್ಪರ್ಧಿಸಲು ಉತ್ಸುಕರಾಗಿದ್ದು, ಬೆಳಗಾವಿ ಅಥವಾ ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.

ಹೈಕಮಾಂಡ್ ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುವ  ಲೆಕ್ಕಾಚಾರದಲ್ಲಿದೆ .ಹೀಗಾಗಿ ಅವರು ಬೆಳಗಾವಿಯತ್ತ ಗಮನ ಕೇಂದ್ರೀಕರಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜಗದೀಶ್ ಶೆಟ್ಟರ್‍ ಅವರಿಗೆ ಟಿಕೆಟ್ ನೀಡಲು ಜಿಲ್ಲಾ ಘಟಕ ವಿರೋಧ ವ್ಯಕ್ತಪಡಿಸಿದೆ. ಸ್ಥಳೀಯರಿಗೆ ಯಾರಿಗಾದರೂ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಗೆ ಮನವಿ ಮಾಡಿದೆ.

ಚಿಕ್ಕೋಡಿಯಲ್ಲಿ ಹಾಲಿ ಸಂಸದ ಅಣ್ಣಾ ಸಾಹೆಬ್ ಜೊಲ್ಲೆಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಅವರಿಗೆ ಟಿಕೆಟ್‍ನೀಡಬೇಕೆಂಬ ಬೇಡಿಕೆ ಇದೆ. ಅಣ್ಣಾ ಸಾಹೇಬ್ ಜೊಲ್ಲೆ ಪರವಾಗಿ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಲಾಬಿ ನಡೆಸಿದರೆ, ರಮೇಶ್ ಕತ್ತಿ ಪರವಾಗಿ ಯಡಿಯೂರಪ್ಪ ಲಾಬಿ ಮಾಡುತ್ತಿದ್ದಾರೆ.

ಬೀದರ್  ನಲ್ಲೂ ಸಚಿವ ಭಗವಂತ ಕೂಬಾಗೆ ಟಿಕೆಟ್ ನೀಡಲು ಸ್ವಪಕ್ಷಿಯವರಿಂದಲೇ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಅವರಿಗೆ ಟಿಕೆಟ್ ಕೊಟ್ಟರೆ ನೋಟಾಕ್ಕೆ ಮತ ಹಾಕುವುದಾಗಿ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿಯೂ ಕೂಬಾ ಪರವಾಗಿ ಯಡಿಯೂರಪ್ಪ ಲಾಬಿ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬೆಳವಣಿಗೆಯಿಂದ ಶಾಸಕರಾದ ಪ್ರಭು ಚವ್ಹಾಣ್, ಬಸವ ಕಲ್ಯಾಣ ಶಾಸಕ ಶರಣು ಸಲಗಾರ ಮತ್ತಿತರರು ಚುನಾವಣಾ ಚಟುವಟಿಕೆಗಳಿಂದ ದೂರ ಉಳಿಯುವ ಬೆದರಿಕೆ ಹಾಕಿದ್ದಾರೆ.

ಈ ಬಾರಿ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲು ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹೆಚ್ಚಾಗಿದೆ.

ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರನ್ನು ಪರೋಕ್ಷವಾಗಿ ಮಾಜಿ ಸಚಿವ ಸಿ.ಟಿ.ರವಿ ಎತ್ತಿ ಕಟ್ಟುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಆದರೆ ಇದೇ ಕ್ಷೇತ್ರದಿಂದ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲೇಬೇಕೆಂದು ದೆಹಲಿ ಮಟ್ಟದಲ್ಲೂ  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಲಾಬಿ ಮಾಡುತ್ತಿದ್ದಾರೆ.

ತುಮಕೂರಿನಲ್ಲೂ ಬಣ ರಾಜಕೀಯ ತಾರಕಕ್ಕೇರಿದೆ. ಈ ಕ್ಷೇತ್ರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೊಡಿಸಲು ಬಿಜೆಪಿಯ ನಿಷ್ಠಾವಂತ ಬಣ ಮುಂದಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧಿಸಿ ಸೋತಿದ್ದ ಸೋಮಣ್ಣನವರಿಗೆ ಟಿಕೆಟ್ ನೀಡಬೇಕೆಂಬುದು ಬಿಜೆಪಿಯ ಒಂದು ಬಣದ ವಾದವಾಗಿದೆ. ಇಲ್ಲಿ ಕೂಡ ಯಡಿಯೂರಪ್ಪನವರ ಮಧ್ಯಪ್ರವೇಶವಾಗಿದ್ದು, ತಮ್ಮ ಆಪ್ತ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ಇದರಿಂದ ತುಮಕೂರಿನಲ್ಲೂ ಬಿಜೆಪಿ ಎರಡು ಬಣವಾಗಿರುವುದು ಸ್ಪಷ್ಟವಾಗಿದೆ.

ಈವರೆಗೂ ಟಿಕೆಟ್ ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಲಾಗುತ್ತಿದ್ದ ಮೈಸೂರು-ಕೊಡುಗು ಸಂಸದ ಪ್ರತಾಪ್ ಸಿಂಹಗೆ ಎರಡು ದಿನಗಳಿಂದ ಟಿಕೆಟ್ ಕೈತಪ್ಪಲಿದೆ ಎಂಬ ವದಂತಿಗಳು ಬಲವಾಗಿ ಹಬ್ಬಿದೆ.

ರಾಜವಂಶಸ್ಥ ಯದುವೀರ ಒಡೆಯರ್ ಹೆಸರು ಏಕಾಏಕಿ ಮುನ್ನಲೆಗೆ ಬಂದಿದೆ. ಆದರೆ ಪ್ರತಾಪ್ ಸಿಂಹಗೆ ಟಿಕೆಟ್ ನೀಡಬೇಕೆಂದು ಶಾಸಕರಾದ ಜಿ.ಟಿ.ದೇವೆಗೌಡ, ಶ್ರೀವತ್ಸ ಸೇರಿದಂತೆ ಇಡೀ ಜಿಲ್ಲಾ ಬಿಜೆಪಿ ಘಟಕ ಅವರ ಬೆನ್ನಿಗೆ ನಿಂತಿದೆ. ಮೂಲಗಳ ಪ್ರಕಾರ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಿದ್ದೇ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಮೈಸೂರು ಜಿಲ್ಲಾ ಬಿಜೆಪಿ ಘಟಕದಲ್ಲೂ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಉಳಿದಂತೆ ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಬಣ ರಾಜಕೀಯ ಜೋರಾಗಿದೆ. ಒಂದು ಬಣ ಮಾಜಿ ಸಚಿವ ಡಾ.ಕೆ.ಸುಧಾಕರ್ ಪರವಾಗಿದ್ದರೆ, ಯಡಿಯೂರಪ್ಪ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್‍ಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ.

ಹೀಗೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಯ ಬಣ ರಾಜಕೀಯ ಬೀದಿಗೆ ಬಂದಿದ್ದು, ಅಭ್ಯರ್ಥಿಗಳ ಆಯ್ಕೆ ಮಾಡುವುದೇ ವರಿಷ್ಠರಿಗೆ ಕಗ್ಗಂಟಾಗಿ ಪರಿಣಮಿಸಿದೆ

ಮಧ್ಯ ಕರ್ನಾಟಕದ ರಾಜಧಾನಿ ಎನಿಸಿರುವ ದಾವಣಗೆರೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಬಾರದೆಂದು ಇಡೀ ಜಿಲ್ಲಾ ಬಿಜೆಪಿ ಘಟಕ ವಿರೋಧ ವ್ಯಕ್ತಪಡಿಸಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಯುವ ನಾಯಕ ಡಾ.ರವಿಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಯಡಿಯೂರಪ್ಪ ಸಿದ್ದೇಶ್ ಪರವಾಗಿ ನಿಂತರೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರೇಣುಕಾಚಾರ್ಯ ಪರವಾಗಿ ಲಾಬಿ ನಡೆಸಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ಇದೀಗ ಸಿದ್ದೇಶ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ ಹೆಸರು ಮುನ್ನಲೆಗೆ ಬಂದಿದೆ. ಇಲ್ಲೂ ಕೂಡ ಬಿಜೆಪಿ ಬಣ ಜಗಳ ಬೀದಿಗೆ ಬಂದಿರುವುದು ಸ್ಪಷ್ಟವಾಗಿ ಗೋಚರಿಸಿದೆ.

Leave a Reply