ಯಾವ ಪ್ರಶ್ನೆಗಳಿಗೂ ಉತ್ತರಿಸದೆ ಹತ್ತು ವರ್ಷಗಳನ್ನು ಪೂರೈಸಿದ ಕೇಂದ್ರ ಸರ್ಕಾರದ ಸಾಧನೆ!

2 years ago

2014ರಿಂದ 2024ರ ತನಕ ಕಳೆದ ಹತ್ತು ವರ್ಷದ ಅವಧಿಯಲ್ಲಿ ವಿರೋಧ ಪಕ್ಷದವರು ಮತ್ತು ಜನಸಾಮಾನ್ಯರು ಎತ್ತಿದಂತಹ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಕಡೆಗೆ ಗಮನವನ್ನೇ ಹರಿಸದೆ ವಿಷಯಾಂತರವನ್ನ ಮಾಡಿ ಜನರನ್ನ ನಂಬಿಸುವಂತಹ ಕೆಲಸವನ್ನ ಮಾಡುತ್ತಾ ಬಂದಿರುವುದೇ ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ.

2014ರಲ್ಲಿ 55 ಲಕ್ಷ ಕೋಟಿ ರೂಪಾಯಿಗಳ ಸಾಲದ ಮೊತ್ತ 2024ನೇ ಇಸವಿಗೆ 198 ಲಕ್ಷ ಕೋಟಿ ರೂಪಾಯಿಗಳವರೆಗೆ ಏರಿಕೆಯಾಗಿರುವ ಕಾರಣವನ್ನು ಇಲ್ಲಿಯ ತನಕ ಹೇಳಿರುವುದಿಲ್ಲ. ಇದಕ್ಕೆ ಸರಿಯಾದಂತಹ ಉತ್ತರವನ್ನು ನೀಡಿರುವುದಿಲ್ಲ.

ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದು ಇದರ ಬಗ್ಗೆಯೂ ಎಲ್ಲಿಯೂ ಮಾತನಾಡುವುದಿಲ್ಲ ಚಕಾರವೆತ್ತುವುದಿಲ್ಲ.

ಆಹಾರ ಪದಾರ್ಥಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ ಸಹ ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಬದಲಿಗೆ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಸಂಬಂಧವಿಲ್ಲದ ವಿಚಾರಗಳನ್ನು ಪ್ರಸ್ತಾಪಿಸುವುದು ಇವರ ಕಸುಬು ಆಗಿದೆ.

ನಿರುದ್ಯೋಗದ ಪ್ರಮಾಣವೂ ಸಹ ಹೆಚ್ಚಾಗಿದ್ದು ಲೆಕ್ಕವಿಲ್ಲದಷ್ಟು ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಬಹಳಷ್ಟು ಸಂಸ್ಥೆಗಳು ಮತ್ತು ಉದ್ಯಮಗಳನ್ನು ಮಾರಾಟ ಮಾಡಲಾಗಿದೆ. ಈ ವಿಚಾರದ ಬಗ್ಗೆಯೂ ಎಲ್ಲಿಯೂ ಮಾತನಾಡುವುದಿಲ್ಲ.

ಕಳೆದ ಹತ್ತು ವರ್ಷದ ಅವಧಿಯಲ್ಲಿ ಅನ್ಯ ಪಕ್ಷಗಳ ನೇತೃತ್ವದ ಸರ್ಕಾರಗಳನ್ನು ಅಸ್ಥಿರಗೊಳಿಸಿ, ಸಾಮೂಹಿಕ ಪಕ್ಷಾಂತರದ ಮೂಲಕ ಅಲ್ಲಿ ಬಿಜೆಪಿ ಸರ್ಕಾರವನ್ನ ಸ್ಥಾಪಿಸುವಂತಹ ಪ್ರಜಾಪ್ರಭುತ್ವವನ್ನ ಅಣಕಿಸುವಂತಹ ಹೀನ ಕೃತ್ಯವನ್ನು ಮಾಡುತ್ತಿದ್ದರು ಸಹ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ವೇದಿಕೆಗಳ ಮೇಲೆ ನಿಂತು ಉದ್ದದ ಭಾಷಣ ಮಾಡುವ ಇವರುಗಳು ಇಂತಹ ಕೃತ್ಯಗಳನ್ನು ಮಾಡುವ ಸಂದರ್ಭದಲ್ಲಿ ತಮ್ಮ ನೈತಿಕತೆ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆಗೆ ಉತ್ತರವನ್ನೇ ನೀಡುತ್ತಿಲ್ಲ.

ಬಿಜೆಪಿಯವರು ತಾವು ಬಲಿಷ್ಠ ವಾಗಿದ್ದರೆ ಕಳೆದ ಹತ್ತು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ನೂರಾರು ಚುನಾಯಿತ ಪ್ರತಿನಿಧಿಗಳನ್ನು ಶಾಸಕರು ಮತ್ತು ಲೋಕಸಭಾ ಸದಸ್ಯರನ್ನ ತಮ್ಮ ಪಕ್ಷಕ್ಕೆ ಹೆದರಿಸಿ ಇಲ್ಲವೇ ಅಧಿಕಾರದ ಆಸೆಯನ್ನು ತೋರಿಸಿ ಪಕ್ಷಾಂತರವನ್ನು ಮಾಡಿಸಿಕೊಂಡಂತಹ ವಿಚಾರದಲ್ಲಿ ಯಾವುದೇ ರೀತಿಯ ನಾಚಿಕೆಯು ಇಲ್ಲದೆ ಆಪರೇಷನ್ ಕಮಲ ಎನ್ನುವ ವಿನೂತನವಾದ ಕೀಳು ಸಂಸ್ಕೃತಿಯನ್ನು ಹುಟ್ಟು ಹಾಕಿರುವುದರ ಬಗ್ಗೆ ಪಶ್ಚಾತಾಪವೇ ಇಲ್ಲ.

ವಿರೋಧ ಪಕ್ಷದ ನಾಯಕರುಗಳ ಮೇಲೆ ತನಿಖಾ ಸಂಸ್ಥೆಗಳನ್ನ ಅಸ್ತ್ರವನ್ನಾಗಿ ಬಳಸಿಕೊಂಡು ಅವರನ್ನು ತೇಜೋವಧೆ ಮಾಡುವಂತಹ, ಅವರ ವ್ಯಕ್ತಿತ್ವವನ್ನು ಹಾಳು ಮಾಡುವಂತಹ ಕೀಳು ಮಟ್ಟದ ರಾಜಕಾರಣವನ್ನ ಮಾಡುತ್ತಿರುವುದರ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಸಹ ತಾವು ಪಕ್ಷಪಾತವಾದ ನಿಲುವುಗಳನ್ನ ತೆಗೆದುಕೊಳ್ಳುತ್ತಿರುವ ವಿಚಾರದಲ್ಲಿ ಎಲ್ಲಿಯೂ ಮಾತನಾಡುವುದಿಲ್ಲ.

ಕೇಂದ್ರ ಸರ್ಕಾರ ಅನೇಕ ಕಾನೂನುಗಳ ಮೂಲಕ ರಾಜ್ಯ ಸರ್ಕಾರ ಗಳಿಗಿರುವ ಹಲವಾರು ಹಕ್ಕುಗಳನ್ನು ಕಸಿದುಕೊಂಡು ಕೇಂದ್ರ ಸರ್ಕಾರದ ಗುಲಾಮರಂತೆ ರಾಜ್ಯ ಸರ್ಕಾರಗಳನ್ನ ನಡೆಸಿಕೊಳ್ಳುತ್ತಿರುವ ವಿಚಾರದಲ್ಲೂ ಎಲ್ಲಿಯೂ ಮಾತನಾಡುವುದಿಲ್ಲ.

ಕೆಲವು ದೃಶ್ಯ ಮಾಧ್ಯಮದವರನ್ನು ಮತ್ತು ಪತ್ರಿಕ ಮಾಧ್ಯಮದವರನ್ನು ಖರೀದಿಸಿಕೊಂಡು ಪ್ರತಿದಿನವೂ ಸುಳ್ಳು ಅಂಕಿ ಅಂಶಗಳೊಂದಿಗೆ ಕಲ್ಪನೆ ಮಾಡಿಕೊಂಡಂತಹ ಸಂಗತಿಗಳೊಂದಿಗೆ ಕಥೆಯನ್ನು ಹಿಡಿಯುತ್ತಾ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸುವಂತಹ ಕಾರ್ಯವನ್ನ ಮಾಡುವುದರ ಮೂಲಕ ಪತ್ರಿಕಾ ಧರ್ಮವನ್ನು ಹಾಳು ಮಾಡುತ್ತಿರುವಂತಹ ವಿಚಾರದಲ್ಲೂ ಎಲ್ಲಿಯೂ ಮಾತನಾಡುವುದಿಲ್ಲ.

ತಾವೊಬ್ಬ ಬಲಿಷ್ಠ ನಾಯಕ ವಿಶ್ವಮೆಚ್ಚಿದ ನಾಯಕ ಎಂದು ಹೊಗಳಿಸಿಕೊಳ್ಳುವ ಪ್ರಧಾನಿಗಳು 10 ವರ್ಷದ ಅವಧಿಯಲ್ಲಿ ವಿದೇಶಿ ನೆಲದಲ್ಲಾಗಲಿ ನಮ್ಮ ದೇಶದಲ್ಲಾಗಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಪತ್ರಕರ್ತರು ಕೇಳುವಂತಹ ಆ ಕ್ಷಣದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವಂತಹ ಧೈರ್ಯವನ್ನು ಮಾಡದಿದ್ದರೂ ಸಹ ಮಾಧ್ಯಮದವರು ಇವರನ್ನು ಈ ವಿಚಾರದಲ್ಲಿ ಪ್ರಶ್ನಿಸದೆ ಜಾಣ ಕಿವುಡನ್ನ ಪ್ರದರ್ಶಿಸುತ್ತಿರುವುದು ಪತ್ರಿಕಾ ಧರ್ಮವನ್ನ ಯಾವ ರೀತಿಯಲ್ಲಿ ನಿಯಂತ್ರಿಸಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.

ವಿರೋಧ ಪಕ್ಷದವರ ಸರ್ಕಾರದ ತಪ್ಪುಗಳ ವಿಚಾರದಲ್ಲಿ ಪ್ರಶ್ನೆಯನ್ನ ಮಾಡಿದರೆ ಸದನದಲ್ಲಿ ಆ ಸಂದರ್ಭದಲ್ಲಿ ಉತ್ತರಿಸದೆ ವಿರೋಧಪಕ್ಷದ ನಾಯಕರು ಇಲ್ಲದ ಸಂದರ್ಭದಲ್ಲಿ ಕಳೆದ ಹತ್ತು ವರ್ಷದಿಂದ ಒಂದೇ ರೀತಿಯ ಮಾತುಗಳನ್ನಾಡುತ್ತಾ ನೆಹರೂರವರನ್ನ ಇಂದಿರಾಗಾಂಧಿರವರನ್ನ ರಾಜೀವ್ ಗಾಂಧಿ ಅವರನ್ನು ಟೀಕಿಸುತ್ತಾ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಜಾಣತನವನ್ನು ಪ್ರವೇಶಿಸುತ್ತಿದ್ದರು ಸಹ ಯಾರು ಇವರ ಕೇಳಿದ್ದೇ ಹೇಳುವ ಇವರ ಮಾತುಗಳ ಬಗ್ಗೆ ಪ್ರಶ್ನೆಯನ್ನೇ ಮಾಡುತ್ತಿಲ್ಲ.

ಯಾರ ಪ್ರಶ್ನೆಗಳಿಗೂ ಉತ್ತರಿಸದೆ ಯಾವುದಕ್ಕೂ ಸಮರ್ಥನೆಯನ್ನ ನೀಡದೆ ಎಲ್ಲದಕ್ಕೂ ವಿರೋಧಪಕ್ಷದವರನ್ನು ಟೀಕಿಸುತ್ತ ಸತ್ತು ಎಷ್ಟೋ ದಶಕಗಳಾಗಿರುವ ನಾಯಕರುಗಳ ಅಂದಿನ ಆಡಳಿತವನ್ನೇ ಇಂದಿನ ವೈಫಲ್ಯಗಳಿಗೆ ಕಾರಣ ಎನ್ನುವಂತೆ ಬಿಂಬಿಸಿಕೊಂಡು ತಮ್ಮವರ ಮುಂದೆ ತಮ್ಮನ್ನು ತಾವೇ ಹೊಗಳಿಕೊಂಡು ತಮ್ಮವರಿಂದಲೇ ಚಪ್ಪಾಳೆಯನ್ನು ಹಾಕಿಸಿಕೊಂಡು ಸಂಭ್ರಮಿಸುತ್ತಿರುವಂತಹ ನಮ್ಮ ಇಂದಿನ ನಾಯಕರುಗಳ ನಡುವೆ ಪ್ರಜಾಪ್ರಭುತ್ವ ಎಲ್ಲಿ ಬಂದು ನಿಂತಿದೆ ಎಂದು ನೋಡಿದರೆ ನಾಚಿಕೆಯಾಗುತ್ತಿದೆ.

ಚುನಾವಣಾ ಆಯೋಗದ ಮೇಲೆ ಇವರ ಹಿಡಿತ, ತನಿಖಾ ಸಂಸ್ಥೆಗಳ ಮೇಲೆ ಇವರ ಹಿಡಿತ, ನ್ಯಾಯಾಂಗದಲ್ಲೂ ಹಸ್ತಕ್ಷೇಪದ ಸುದ್ದಿಗಳು. ಇನ್ನು ಮಾಧ್ಯಮಗಳಂತೂ ಇವರ ಅಂಗೈಲಿ ಅವಿತುಕೊಂಡಿವೆ.

ಈ ಹಿನ್ನೆಲೆಯಲ್ಲಿ ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಪ್ರಶ್ನಿಸುವ ನಾಯಕರುಗಳ ಆತ್ಮವಿಶ್ವಾಸವನ್ನ ಕುಗ್ಗಿಸುತ್ತಾ ಜನರ ದೃಷ್ಟಿಯಲ್ಲಿ ತಾವು ಮಾತ್ರ ಶ್ರೇಷ್ಠರು ತಾವು ಮಾತ್ರ ಸಜ್ಜನರು ತಾವು ಮಾತ್ರ ಪ್ರಾಮಾಣಿಕರು, ಉಳಿದ ಎಲ್ಲಾ ನಾಯಕರು ದೇಶದ್ರೋಹಿಗಳು, ದೇಶದ ಅಭಿವೃದ್ಧಿಯ ಕಂಟಕರು ಎಂಬ ರೀತಿಯಲ್ಲಿ ಬಿಂಬಿಸುತ್ತ ಇಡೀ ವ್ಯವಸ್ಥೆಯನ್ನು ಏಕವ್ಯಕ್ತಿಯನ್ನಾಗಿಸಿಕೊಂಡು ಸಾಗುತ್ತಿರುವುದು ನೋಡಿದರೆ ಚುನಾವಣೆಗಳು ನಡೆಸುವಂತಹ ಅವಶ್ಯಕತೆಯೇ ಬರುವುದಿಲ್ಲ.

ಏಕೆಂದರೆ ಈಗಾಗಲೇ ಎಲ್ಲ ಮಾಧ್ಯಮಗಳು ಚುನಾವಣೆಯೇ ಮತದಾನದ ಮುನ್ನವೇ ಫಲಿತಾಂಶವನ್ನು ನೀಡಿಬಿಟ್ಟಿವೆ. ಸ್ಥಾನಗಳನ್ನು ಹಂಚಿಬಿಟ್ಟಿವೆ. ಹೀಗಾಗಿ ಮುಂದೊಂದು ದಿನ ಚುನಾವಣೆ ನಡೆಯದೆ ಮತದಾನವನ್ನು ಮಾಡಿಸದೆ ಪ್ರಜಾಪ್ರಭುತ್ವವನ್ನ ಹಾಳು ಮಾಡುವಂತಹ ವ್ಯವಸ್ಥೆಯು ಬರಬಹುದು.

ದೇವರು ಧರ್ಮ ಮತ್ತು ಪ್ರಚೋದನಾಕಾರಿ ಸಂಗತಿಗಳನ್ನ ಪ್ರಸ್ತಾಪಿಸುತ್ತಾ, ಜನರ ಭಾವನೆಗಳೊಂದಿಗೆ ಆಟವಾಡುತ್ತಾ, ಬದುಕಿನ ವಿಚಾರಗಳನ್ನ ಮರೆಮಾಚುತ್ತಾ, ರಾಜಕಾರಣವನ್ನು ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜನತೆ ಜಾಗೃತಗೊಳ್ಳದಿದ್ದರೆ ಹಸಿದ ಹೊಟ್ಟೆಗಳಿಗೆ ಇವರ ಕನಸಿನ ಮಾತುಗಳಷ್ಟೇ ದೊರೆಯುತ್ತವೆ. ಹೊಟ್ಟೆ ತುಂಬಿದವರಿಗೆ ಮತ್ತಷ್ಟು ಸುಖದ ಬದುಕು ಅನಾಯಾಸವಾಗಿ ದೊರೆಯುತ್ತದೆ.

-ಕೆ ಎಸ್ ನಾಗರಾಜ್, ಬೆಂಗಳೂರು

Leave a Reply