ತುಟಿಯ ಬಣ್ಣ ಬಳಕೆಗೆ ಬಂದದ್ದು ಹೇಗೆ? ತಯಾರಾದದ್ದು ಹೇಗೆ? ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಟ್ಟುಪಾಡುಗಳು ಸೃಷ್ಟಿಯಾದದ್ದು ಹೇಗೆ? ಸ್ತ್ರೀ ಶೋಷಣೆಯ ಸಂಕೇತವಾದ ತುಟಿಯ ರಂಗು ಸ್ತ್ರೀ ಬಿಡುಗಡೆಯ ಸಂಕೇತವಾದದ್ದು ಹೇಗೆ? ಎಂಬ ಇತಿಹಾಸ ಪಾರಂಪರಿಕ ಲಿಂಗ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ.
ಆಕರ್ಷಕವಾಗಿ ಕಾಣಬೇಕೆಂಬ ಬಯಕೆ ಎಲ್ಲರಲ್ಲಿಯೂ ಇರುತ್ತದೆ. ‘ಎದ್ದು ಕಾಣಬೇಕು’ ಎಂಬ ಮಾತು ಪದೇಪದೇ ಬಳಕೆಯಾಗುತ್ತದೆ. ಎಲ್ಲರ ನಡುವೆ ನಾನು ಮಾತ್ರ ಆಕರ್ಷಕವಾಗಿರಬೇಕು ಎಂಬ ಬಯಕೆ, ಎಲ್ಲರೂ ನನ್ನನ್ನೇ ನೋಡಬೇಕು ಎಂಬ ಆಸೆ ಇಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.
ಸೀಮಿತ ಗಡಿಯೊಳಗೆ ಮಾತ್ರ ಬಳಕೆಗೆ ಬಂದ ಕೆಲವು ಸೌಂದರ್ಯವರ್ಧಕಗಳು ಇಂದು ಎಲ್ಲಾ ಮನೆಯ ಹೆಣ್ಣು-ಗಂಡುಗಳ ಪಾಕೆಟ್ ಗಳಲ್ಲಿ ಸಾಮಾನ್ಯವಾಗಿಬಿಟ್ಟಿರುವ ಬೆಳವಣಿಗೆಗೆ ಶತಮಾನಗಳಷ್ಟು ಹಿಂದಿನ ನಡಿಗೆ ಇದೆ. ಸೌಂದರ್ಯವರ್ಧಕಗಳಲ್ಲಿ ತುಟಿಯ ಬಣ್ಣಕ್ಕೆ ಯಾವಾಗಲೂ ಅಗ್ರಸ್ಥಾನ. ಅಗ್ರಸ್ಥಾನ ಪಡೆದ ತುಟಿಯ ರಂಗು ಸಾಮಾಜಿಕವಾಗಿ ಅನೇಕ ಘಟ್ಟಗಳನ್ನು ದಾಟಿ ಬಂದಿದೆ. ನಕಾರಾತ್ಮಕ ಸಕಾರಾತ್ಮಕ ಎರಡೂ ಲೇಪನವನ್ನು ಈ ರಂಗು ಬಳಿದುಕೊಂಡಿದೆ.
ತುಟಿಯ ರಂಗಿನ ಇತಿಹಾಸ ಸುಮಾರು 5000 ವರ್ಷಗಳಷ್ಟು ಹಿಂದಿನದು. ಸುಮೇರಿಯನ್ ಗಂಡು, ಹೆಣ್ಣು ಇಬ್ಬರು ಲಿಪ್ಸ್ಟಿಕ್ ಬಳಸಿದ ಮೊದಲಿಗರು. ಕೆಲವು ರತ್ನಗಳನ್ನು ಪುಡಿಮಾಡಿ ಅದರ ಹೊಳಪನ್ನು ತಮ್ಮ ಮುಖ ಆಕರ್ಷಕವಾಗಿ ಕಾಣಲೆಂದು ಕಣ್ಣುಗಳ ಸುತ್ತ ಹಚ್ಚಲು ಪ್ರಾರಂಭಿಸಿದರು. ಮೇಣವನ್ನು ತುಟಿಗಳ ಮೇಲೆ ಸವರಿ ಈ ರತ್ನಗಳ ಹೊಳಪನ್ನು ಅದರ ಮೇಲೆ ಅಂಟಿಸಿಕೊಳ್ಳುತ್ತಿದ್ದರು. ಅಂದು ಇದು ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿ ಕೂಡ ಕಾರ್ಯ ನಿರ್ವಹಿಸುತ್ತಿತ್ತು.
ಇಂದಿನಂತೆ ಹಲವು ಬಗೆಯ ಬಣ್ಣಗಳನ್ನು ತುಟಿಗೆ ಅಂದು ಬಳಸುತ್ತಿರಲಿಲ್ಲ. ಕೆಂಪು ಬಣ್ಣವನ್ನು ಮಾತ್ರ ತುಟಿಯ ಹೊಳಪಿಗಾಗಿ ಬಳಸಲಾಗುತ್ತಿತ್ತು. ಈಜಿಪ್ಟಿಯನ್ನರು ಹಾಗೂ ಸಿಂಧೂ ಕಣಿವೆಯ ನಾಗರಿಕತೆಯ ಮಹಿಳೆಯರು ಕ್ರಿಸ್ತಪೂರ್ವ 3000 -1500ದವರೆಗೆ ತಮ್ಮ ಮುಖದ ಅಂದವನ್ನು ಹೆಚ್ಚಿಸಲು ಈ ಕೆಂಪು ಬಣ್ಣದ ರಂಗನ್ನು ಮಾತ್ರ ಬಳಸುತ್ತಿದ್ದರು.
ಚೀನಿಯರು ತಮ್ಮ ತುಟಿಯ ಚರ್ಮವನ್ನು ರಕ್ಷಿಸಲು ಜೇನುಮೇಣದಿಂದ ಲಿಪ್ಸ್ಟಿಕ್ ತಯಾರಿಸುತ್ತಿದ್ದರು. ಗಿಡಮೂಲಿಕೆಗಳು, ಚೆರ್ರಿ ಹಣ್ಣುಗಳು, ಹೂ, ಗೋರಂಟಿ ಎಲೆ, ಕೊಚಿನಿಯಲ್ ಮತ್ತು ಸ್ಕೇಲ್ ಕೀಟಗಳನ್ನು ಇಲ್ಲಿ ಬಳಸಲಾಗುತ್ತಿತ್ತು. ಈಜಿಪ್ಟಿಯನ್ನರು ಲಿಪ್ ಸ್ಟಿಕ್ ಪ್ರಿಯರು. ರಾಜಕುಮಾರಿ ಕ್ಲಿಯೋಪಾತ್ರ ಕೆಲವು ಜೀರುಂಡೆಗಳು ಮತ್ತು ಇರುವೆಗಳಿಂದ ತಯಾರಿಸಲ್ಪಟ್ಟ ಲಿಪ್ಸ್ಟಿಕ್ ಅನ್ನು ಬಳಸುತ್ತಿದ್ದಳೆಂಬ ಸಂಗತಿ ಇತಿಹಾಸದಿಂದ ತಿಳಿದುಬಂದಿದೆ. ಸೌಂದರ್ಯಕ್ಕೆ ಹೆಸರಾದ ಅವಳು ಬಳಸುತ್ತಿದ್ದ ಕೆಂಪು ಲಿಪ್ಸ್ಟಿಕ್ ಕೇವಲ ಸೌಂದರ್ಯವರ್ಧಕ ಉದ್ದೇಶಕ್ಕಾಗಿ ಅಲ್ಲ. ಮರುಭೂಮಿಯ ಹವಾಮಾನದಿಂದ ತನ್ನ ತುಟಿಯ ನೈಜತೆಯನ್ನು ರಕ್ಷಿಸುವುದಕ್ಕಾಗಿ.
ಲಿಪ್ಸ್ಟಿಕ್ ಬಳಕೆಯ ಹಿಂದಿನ ಕಾರಣಗಳು
1.ತುಟಿಯ ರಂಗು ಮತ್ತು ಮೃದುತ್ವವನ್ನು ಕಾಪಾಡಲು 2.ಚಾಂಗ್ ರಾಜವಂಶಸ್ಥರು (ಕ್ರಿಶ 618 ರಿಂದ 907) ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ಸುವಾಸಿತ ತೈಲಗಳನ್ನು ಸೇರಿಸಿದ ಲಿಪ್ಸ್ಟಿಕ್ ಬಳಕೆ ಪ್ರಾರಂಭಿಸಿದರು. 3.ರಾಣಿ ಎಲಿಜಬೆತ್ ಆಳ್ವಿಕೆಯಲ್ಲಿ ಅವರ ಬಿಳಿ ಬಣ್ಣದ ಚರ್ಮಕ್ಕೆ ಗಾಢ ಕೆಂಪು ಬಣ್ಣದ ಲಿಪ್ಸ್ಟಿಕ್ ಬಳಕೆ ಫ್ಯಾಷನ್ ಮತ್ತು ಪ್ರತಿಷ್ಠೆಯ ಸಂಗತಿಯಾಗಿ ಪರಿವರ್ತನೆಯಾಯಿತು.
ತುಟಿಯ ರಂಗು ಎದುರಿಸಿದ ಸಾಮಾಜಿಕ ಅಪಮಾನಗಳು
ಸೌಂದರ್ಯ ರಕ್ಷಕವಾಗಿದ್ದ ತುಟಿಯ ರಂಗು ಕಾಲಾಂತರದಲ್ಲಿ ಬೇರೆ ಬೇರೆ ಸಾಮಾಜಿಕ ಆಯಾಮಗಳನ್ನು ಪಡೆದುಕೊಂಡಿತು. ಗ್ರೀಕ್ ಸಾಮ್ರಾಜ್ಯದಲ್ಲಿ ವೇಶ್ಯಾವೃತ್ತಿ ಮಾಡುವ ಹೆಣ್ಣಿನ ತುಟಿಯ ರಂಗು ಪ್ರಮುಖ ಪಾತ್ರವಹಿಸುತ್ತಿತ್ತು. ಕಪ್ಪುಬಣ್ಣದ ತುಟಿಯ ಹೆಣ್ಣಿಗೆ ಗಾಢ ಕೆಂಪು ಬಣ್ಣದ ಲಿಪ್ ಸ್ಟಿಕ್ ಬಳಕೆ ಅನಿವಾರ್ಯವಾಗಿತ್ತು. ಕ್ರಿಶ್ಚಿಯನ್ ಧರ್ಮದ ಪ್ರಕಾರ ಚರ್ಚುಗಳು ಲಿಪ್ಸ್ಟಿಕ್ ಮತ್ತು ಮೇಕಪ್ ಬಳಕೆಯನ್ನು ಖಂಡಿಸಿದರು. ಲಿಪ್ಸ್ಟಿಕ್ ಬಳಸುವವರು ಮಾಂತ್ರಿಕರು ಮತ್ತು ಮಾಟಗಾತಿಯರು ಎಂದು ಶಂಕಿಸಲಾಗುತ್ತಿತ್ತು. ವೇಶ್ಯೆಯರನ್ನು ಹೊರತುಪಡಿಸಿ ಯಾವ ಹೆಣ್ಣುಗಳು ಲಿಪ್ ಸ್ಟಿಕ್ ಬಳಸಲು ಹಿಂಜರಿಯುತ್ತಿದ್ದರು.
ಕ್ರಿ.ಶ 650 ರವೇಳೆಗೆ ಬ್ರಿಟನ್ನಿನಲ್ಲಿ ಗೌರವಾನ್ವಿತ ಮಹಿಳೆಯರಿಗೆ ಲಿಪ್ ಸ್ಟಿಕ್ ಹಚ್ಚುವುದಕ್ಕೆ ಅವಕಾಶವಿರಲಿಲ್ಲ. ನಟಿಯರು ಮತ್ತು ವೇಶ್ಯೆಯರು ಮಾತ್ರ ಅದನ್ನು ಬಳಸಬೇಕೆಂಬ ಸಾಮಾಜಿಕ ನಿಲುವುಗಳು ಆಗಾಗಲೇ ಗಟ್ಟಿಯಾಗಿ ನೆಲೆ ನಿಂತಿದ್ದವು. ಕ್ರಿ.ಶ 1700ರ ವೇಳೆಗೆ ತುಟಿಯ ಬಣ್ಣ ಬಳಸುವವರು ಅಸಭ್ಯ, ಕೆಟ್ಟ ನಡವಳಿಕೆಯ, ನಾಚಿಕೆಗೆಟ್ಟ, ಗಂಡುಬೀರಿತನದ ಹೆಂಗಸರು ಎಂದು ತೀರ್ಮಾನಿಸಲಾಗಿತ್ತು. ಇದರ ಪರಿಣಾಮವಾಗಿ ಬ್ರಿಟನ್ ಸರ್ಕಾರ ಮಹಿಳೆಯರಿಗೆ ಕಾನೂನಾತ್ಮಕವಾಗಿ ಲಿಪ್ಸ್ಟಿಕ್ ಬಳಕೆ ನಿಷೇಧಿಸಿತ್ತು.
ಭಾರತದಂತಹ ದೇಶದಲ್ಲಿ ಬಣ್ಣಹಾಕುವ ವೃತ್ತಿಗಳನ್ನು ಕೀಳಾಗಿ ನೋಡುವ ಮನಸ್ಥಿತಿ ಇಂದಿಗೂ ಇದೆ. ಅದರಲ್ಲೂ ಬಣ್ಣ ಬಳಸುವ ನಟಿಯರ ಪರಿಸ್ಥಿತಿಯಂತೂ ಶೋಚನೀಯವಾಗಿದೆ. ‘ಬಣ್ಣದವಳು’ ‘ಬಣ್ಣ ಹಾಕುವವಳು’ ಎಂಬ ಮಾತುಗಳು ಸಮಾಜದ ದೃಷ್ಟಿಯಲ್ಲಿ ಹೆಣ್ಣಿನ ಸ್ಥಾನಮಾನವನ್ನು ತಿಳಿಸುತ್ತವೆ.
19ನೇ ಶತಮಾನದಲ್ಲಿ ಮಹಿಳಾ ಚಳುವಳಿ ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ, ಮಹಿಳೆಯರಿಗೆ ಮತದಾನದ ಹಕ್ಕು ದೊರೆತ ಮೇಲೆ ಕೆಂಪು ಲಿಪ್ಸ್ಟಿಕ್ ಅನ್ನು ಸ್ತ್ರೀವಾದದ ಸಂಕೇತವಾಗಿ ಬಳಕೆ ಮಾಡಲು ಪ್ರಾರಂಭಿಸಿದರು. ಸ್ತ್ರೀವಾದಿಗಳು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಅನೇಕ ಹೋರಾಟಗಳಲ್ಲಿ ಕೆಂಪು ಲಿಪ್ಸ್ಟಿಕ್ ಅನ್ನು ಸಾಮೂಹಿಕವಾಗಿ ಬಳಸಿದರು. ತಮ್ಮ ಬಟ್ಟೆ ಮತ್ತು ಮೇಕಪ್ ನಲ್ಲಿ ಕೆಂಪು ಬಣ್ಣವನ್ನು ತಮ್ಮ ಹಕ್ಕು ಸಾಧಿಸುವ ಸಂಕೇತವಾಗಿ ಬಳಸಲು ಕರೆನೀಡಿದರು. ಅಂದಿನಿಂದ ಕೆಂಪು ಲಿಪ್ಸ್ಟಿಕ್ ಸ್ತ್ರೀ ಸಬಲೀಕರಣದ ಮತ್ತು ಸ್ತ್ರೀ ಶಕ್ತಿಯ ಪ್ರಮುಖ ಸಂಕೇತವಾಯಿತು. ಕೆಂಪು ಬಣ್ಣದ ಈ ಕೋಲು ಪ್ರಪಂಚದಾದ್ಯಂತ ಮಹಿಳಾ ಹಕ್ಕುಗಳ ಚಳುವಳಿಯ ಶಕ್ತಿ ಮತ್ತು ಸಂಕೇತವಾಯಿತು.
– ಡಾ.ಚಂದ್ರಕಲಾ ಜಿ., ಸಂಶೋಧಕರು




