ಬೆಂಗಳೂರು: ಬಾಕಿ ಪೋಡಿ ಹಾಗೂ ದುರಸ್ಥಿ ಪ್ರರಣಗಳು ಹೆಚ್ಚಿರುವ ಕಾರಣ ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪ್ರಸ್ತುತ ಸರ್ವೇ ಇಲಾಖೆಯ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯ ನಡುವೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬಾಕಿ ಪೋಡಿ ಹಾಗೂ ದುರಸ್ಥಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್ ಬಂದ್ ಮಾಹಿತಿ ಪಡೆಯಬೇಕು. ನಿಖರವಾದ ಆಕಾರ್ ಬಂದ್ ಇಲ್ಲದೆ ಆರ್ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಮುಂದಿನ ಎರಡು ತಿಂಗಳಲ್ಲಿ 65 ಲಕ್ಷ ಆಕಾರ್ ಬಂದ್ ಡಿಜಿಟಲೈಸ್ಗೊಳಿಸಲು ಸೂಚಿಸಲಾಗಿದೆ ಎಂದರು.
ರಾಜ್ಯಾದ್ಯಂತ 66,000 ಸರ್ವೇ ನಂಬರ್ನಲ್ಲಿ ಜನರಿಗೆ ಭೂ ಮಂಜೂರು ಮಾಡಲಾಗಿದ್ದು, ದುರಸ್ಥಿಗೆ ಲಕ್ಷಾಂತರ ಪ್ರಕರಣ ಬಾಕಿ ಇದೆ. ಈ ಪೈಕಿ 2000 ಸರ್ವೇ ನಂಬರ್ನಲ್ಲಿ ಮಂಜೂರುದಾರರಿಗೆ 1 ರಿಂದ 5 ದಾಖಲೆ ಮಾಡಿ ಹೊಸ ಸರ್ವೇ ನಂಬರ್ ನೀಡಲು ಎಡಿಎಲ್ಆರ್-ಡಿಡಿಎಲ್ಆರ್ಗಳಿಗೆ ಸೂಚಿಸಲಾಗಿದೆ. ಇದರ ಮೂಲಕ 20-30ವರ್ಷಕ್ಕೂ ಅಧಿಕ ಸಮಯದಿಂದ ಬಗೆಹರಿಸಲಾಗದ ಸಮಸ್ಯೆಯ ಸುಳಿಗೆ ಸಿಲುಕಿದ್ದ ರೈತರಿಗೆ ಪರಿಹಾರ ನೀಡುವ ದಿಕ್ಕಿನಲ್ಲಿ ನಮ್ಮ ಮೊದಲ ಹೆಜ್ಜೆ ಎಂದರು.
ಸರ್ವೇ ಇಲಾಖೆ ಕಾರ್ಯ ಕ್ಷಮತೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಸಲುವಾಗಿ ಮಾನವ ಸಂಪನ್ಮೂಲವನ್ನು ಅಧಿಕಗೊಳಿಸಲು ನಿಶ್ಚಯಿಸಿದ್ದು, ಇನ್ನೂ ಒಂದು ವಾರದಲ್ಲಿ 991 ಪರವಾನಗಿ ಸರ್ವೇಯರ್ ಗಳನ್ನು ಎಲ್ಲಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುವುದು. 364 ಸರ್ಕಾರಿ ಸರ್ವೇಯರ್ ನೇಮಕಾತಿಗೆ ಕೆಪಿಎಸ್ಸಿ ಕಡೆಯಿಂದಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದರು.
ಇದರ ಜೊತೆಗೆ ಸರ್ವೇ ಕೆಲಸದ ಮೇಲುಸ್ತುವಾರಿಗೆ (ಎಡಿಎಲ್ಆರ್) 27 ಸರ್ವೇ ಅಸಿಸ್ಟೆಂಟ್ ಲ್ಯಾಂಡ್ ರೆಕಾರ್ಡ್ಸ್ಗಳ ನೇಮಕ ಮಾಡುತ್ತಿದ್ದೇವೆ. ಸರ್ವೇ ಕೆಲಸವನ್ನು ವೇಗವಾಗಿ ಮುಗಿಸುವ ನಿಟ್ಟಿನಲ್ಲಿ ಆಧುನಿಕ “ಸರ್ವೇ ರೋವರ್” ಉಪಕರಣಗಳ ಖರೀದಿಗೆ ಮುಂದಾಗಲಾಗಿದೆ. ರೂ. 18 ಕೋಟಿ ವೆಚ್ಚದಲ್ಲಿ ಎಲ್ಲಾ ತಾಲೂಕುಗಳಿಗೂ 372 ಸರ್ವೇ ರೋವರ್ ಒದಗಿಸಲು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದರು.



