ಬೆಂಗಳೂರು: ಸದ್ಯ ರಾಜ್ಯದಲ್ಲೇ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ಜಿಲ್ಲೆಗಳು ಎಂದು ಪರಿಗಣಿಸಲ್ಪಟ್ಟಿರುವ ಬೆಳಗಾವಿ ಮತ್ತು ತುಮಕೂರು ಜಿಲ್ಲೆಯನ್ನು ಕ್ರಮವಾಗಿ ಮೂರು ಮತ್ತು ಎರಡು ಜಿಲ್ಲೆಗಳನ್ನಾಗಿ ವಿಭಜಿಸಲಾಗುತ್ತಿದೆ ಎಂಬ ಸುದ್ದಿಗಳು ದಟ್ಟವಾಗಿದ್ದು ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಇತ್ತೀಚೆಗೆ ಈ ಎರಡು ಜಿಲ್ಲೆಗಳ ಗಡಿ ಗುರುತು ಸಂಬಂಧ ಸಮೀಕ್ಷೆ ನಡೆಸಲು ಅಧಿಸೂಚನೆಯೊಂದನ್ನು ಹೊರಡಿಸಲಾಗಿತ್ತು. ಈ ಅಧಿಸೂಚನೆಯಲ್ಲಿ ಜಿಲ್ಲೆಗಳ ಗಡಿ ಗುರುತಿಸಲು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಗಳಿಗೆ ಸೂಚಿಸಿದ್ದರು.
ಈ ಅಧಿಸೂಚನೆಯನ್ನು ಜಿಲ್ಲೆ ವಿಭಜನೆಯ ಮೊದಲ ಹಂತ ಎಂದೇ ವ್ಯಾಖ್ಯಾನಿಸಲಾಗಿತ್ತು. ತುಮಕೂರು ಜಿಲ್ಲೆಯನ್ನು ವಿಭಜಿಸಿ ತುಮಕೂರು ಮತ್ತು ಮಧುಗಿರಿ ಎಂಬ ಎರಡು ಜಿಲ್ಲೆಗಳಾಗಿ ಮಾಡಲಾಗುವುದು. ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ವಿಭಜಿಸಲಾಗುವುದು. ಪ್ರಮುಖವಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಎರಡು ಜಿಲ್ಲಾ ಕೇಂದ್ರಗಳಾದರೆ ಮೂರನೆಯ ಜಿಲ್ಲಾ ಕೇಂದ್ರವಾಗಿ ಗೋಕಾಕ್ ಅಸ್ತಿತ್ವಕ್ಕೆ ಬರಲಿದೆ ಎಂಬ ಸುದ್ದಿಗಳು ಹಡಿದಾಡಿದ್ದವು.
ಇದರ ಬೆನ್ನಲ್ಲೇ ಗೋಕಾಕ್ ಅನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಶಾಸಕ ಮಹಂತೇಶ ಕೌಜಲಗಿ ಅವರು ಗೋಕಾಕ್ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವುದನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು.
ಈ ಬೆಳವಣಿಗೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿತ್ತು. ಬೆಳಗಾವಿ ಜಿಲ್ಲೆ ವಿಭಜನೆ ಎನ್ನುವುದು ಇಂದು ನಿನ್ನೆಯದಲ್ಲ. ಇದಕ್ಕೆ ಸುಮಾರು ಎರಡು ದಶಕಗಳ ಇತಿಹಾಸವಿದೆ. 1998ರಲ್ಲಿ ರಾಜ್ಯದಲ್ಲಿ ಹೊಸದಾಗಿ ಏಳು ಜಿಲ್ಲೆಗಳು ಅಸ್ತಿತ್ವಕ್ಕೆ ಬಂದವು .ಈ ವೇಳೆ ಬೆಳಗಾವಿಯನ್ನು ಕೂಡ ವಿಭಜಿಸಲು ಪ್ರಸ್ತಾವನೆ ಸಿದ್ಧಗೊಂಡಿತ್ತು. ಆದರೆ ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಎಂಬ ಭಾಷೆಯ ವಿಷಯ ಪ್ರಮುಖವಾಗಿ ಪ್ರಸ್ತಾವನೆಗೊಂಡು ಬೆಳಗಾವಿ ಜಿಲ್ಲೆ ವಿಭಜನೆ ನಿರ್ಧಾರ ಕೈಬಿಡಲಾಗಿತ್ತು.
ಇನ್ನು ಇತ್ತೀಚಿಎನ ಬೆಳವಣಿಗೆಗಳ ನಡುವೆ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸಲು ಸಿದ್ಧತೆಗಳು ನಡೆದಿವೆಯಾದರೂ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. ಈ ನಡುವೆ ಜಿಲ್ಲೆಯ ಕಡಿ ಗುರುತು ಸಂಬಂಧ ಹೊರಬಿದ್ದ ಅಧಿಸೂಚನೆ ಹೊಸ ಜಿಲ್ಲೆಯ ಘೋಷಣೆಗಾಗಿ ಕಾಯುತ್ತಿದ್ದ ಜನರಿಗೆ ಸಂತಸ ತಂದಿತ್ತು ಅದನ್ನು ಬೆಳಗಾವಿಯ ಜನತೆ ಜಿಲ್ಲೆ ವಿಭಜನೆಯಾಗಲಿದೆ ಎಂದು ಸಂಭ್ರಮಿಸಿದ್ದರು.
ಇದರ ಬೆನ್ನಲ್ಲೇ ಮೂರನೆಯ ಜಿಲ್ಲಾ ಕೇಂದ್ರವಾಗಿ ಗೋಕಾಕ್ ಮತ್ತು ಬೈಲಹೊಂಗಲವನ್ನು ಘೋಷಣೆ ಮಾಡಬೇಕು ಎಂಬ ವಿವಾದ ಸೃಷ್ಟಿಯಾಗಿತ್ತು. ಕೆಲವರು ಅಥಣಿಯನ್ನು ಕೂಡ ಜಿಲ್ಲೆ ಎಂದು ಘೋಷಿಸಲು ಕೆಲವರು ಒತ್ತಾಯಮಂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರನ್ನು ಭೇಟಿ ಮಾಡಿ ಜಿಲ್ಲೆ ವಿಭಜನೆ ಮತ್ತು ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ತಮ್ಮ ಅಹವಾಲು ತೋಡಿಕೊಂಡಿದ್ದರು.
ಈ ವೇಳೆ ಕೃಷ್ಣ ಭೈರೇಗೌಡ ಅವರು ಸದ್ಯ ಕಂದಾಯ ಇಲಾಖೆಯ ಮುಂದೆ ಯಾವುದೇ ಹೊಸ ಜಿಲ್ಲೆಯ ಘೋಷಣೆ ಮಾಡುವ ಕುರಿತಂತೆ ಪ್ರಸ್ತಾವನೆಗಳು ಇಲ್ಲ. ಹೊಸ ಜಿಲ್ಲೆ ಗಡಿ ಗುರುತು ಸಂಬಂಧ ಇಲಾಖೆ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಆಗ ಲಕ್ಷ್ಮಣ ಸವದಿ ಅವರು ಗಡಿ ಗುರುತು ಸಂಬಂಧ ಹೊರಬಿದ್ದಿರುವ ಅಧಿಸೂಚನೆ ಬಗ್ಗೆ ಪ್ರಸ್ತಾಪಿಸಿದ್ದು ಅದನ್ನು ಪರಿಶೀಲಿಸಿದ ಕೃಷ್ಣ ಬೈರೇಗೌಡ, ಈ ಅಧಿಸೂಚನೆಗೂ ಹೊಸ ಜಿಲ್ಲೆಯ ಘೋಷಣೆಗೂ ಯಾವುದೇ ಸಂಬಂಧವಿಲ್ಲ. ಇದು ರಾಜ್ಯದ ಎಲ್ಲ ಜಿಲ್ಲೆಗಳ ಗಡಿ ಗುರುತು ಸಂಬಂಧ ಹೊರಬಿದ್ದಿರುವ ಆದೇಶವಾಗಿದೆ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಲಕ್ಷ್ಮಣ ಸವದಿ ಅವರು ರಾಜ್ಯ ಪುನರ್ ವಿಂಗಡಣೆ ಸಮಯದಲ್ಲಿ ಬ್ರಿಟಿಷ್ ಅವಧಿಯಲ್ಲಿ ನಡೆದಿದ್ದ ಸಮೀಕ್ಷೆಯ ಮಾಹಿತಿ ಆಧರಿಸಿ ಗಡಿ ಗುರುತುಗಳು ನಿಗದಿಯಾಗಿವೆ. ಆದರೆ ಅದನ್ನು ದೃಢಪಡಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈಗ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದ ಎಲ್ಲಾ ಜಿಲ್ಲೆಗಳ ಗಡಿ ಗುರುತು ನಿಗದಿಪಡಿಸಿ, ಅದನ್ನು ದೃಢಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಗಳು ಎಂದು ಪರಿಗಣಿಸಲಾಗಿರುವ ಬೆಳಗಾವಿ ಮತ್ತು ತುಮಕೂರು ಜಿಲ್ಲೆಯನ್ನು ಪೈಲೆಟ್ ಯೋಜನೆಯಾಗಿ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
ಈ ಕುರಿತಂತೆ ಅಧಿ ಸೂಚನೆ ಹೊರಬಿದ್ದಿದ್ದು ಅದರ ಅನ್ವಯ ಎರಡು ಜಿಲ್ಲೆಗಳ ಗಡಿ ಗುರುತು ಮಾಡಿ ಅದನ್ನು ದೃಢಪಡಿಸಲಾಗುತ್ತಿದೆ. ಇದಕ್ಕೂ ಜಿಲ್ಲಾ ವಿಭಜನೆಗೂ ಯಾವುದೇ ಸಂಬಂಧ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಮಗೆ ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಗಡಿ ವಿಭಜನೆ ಕುರಿತಾಗಿ ಉಂಟಾಗಿದ್ದ ಗೊಂದಲ ಮತ್ತು ಸುದ್ದಿಗೆ ಹೊಸ ತಿರುವು ಸಿಕ್ಕಿದೆ.




