ಅರ್ಹತೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ದೇಶದಲ್ಲಿ ಜಾತಿ ಗಣತಿ ಅಗತ್ಯ: ರಾಮದಾಸ್‌ ಅಠವಳೆ

2 years ago

ಬೆಂಗಳೂರು: ಎಲ್ಲ ಸಮುದಾಯಗಳಿಗೂ ಅರ್ಹತೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಲು ದೇಶದಲ್ಲಿ ಜಾತಿ ಗಣತಿ ಅಗತ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್‌ ಅಠವಳೆ ಹೇಳಿದ್ದಾರೆ.

ಆರ್ ಪಿ ಐ ರಾಜ್ಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಬಲ ಜಾತಿಗಳೂ ಸೇರಿದಂತೆ ಎಲ್ಲ ಸಮುದಾಯಗಳೂ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸುತ್ತಲೇ ಇವೆ ಎಂದು ಹೇಳಿದರು.

ಆಯಾ ಜಾತಿಯ ಜನಸಂಖ್ಯೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರದಲ್ಲಿ ಮೀಸಲಾತಿ ಹೆಚ್ಚಳ ಮಾಡಿದಾಗ ಮಾತ್ರ ಎಲ್ಲ ಸಮುದಾಯಗಳಿಗೂ ನ್ಯಾಯ ದೊರಕಿಸಬಹುದು. ಜಾತಿ ಗಣತಿ ನಡೆಸಲು ಪ್ರಧಾನಿಗೂ ಮನಸ್ಸಿದೆ. ಆದರೆ, ಕೆಲ ತಾಂತ್ರಿಕ ಸಮಸ್ಯೆಗಳಿಂದ ಅದು ಸಾಧ್ಯವಾಗಿಲ್ಲ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನ ಸಂಖ್ಯೆಯೂ ಹೆಚ್ಚಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನೂ ಹೆಚ್ಚಿಸಬೇಕಿದೆ. ಮಹಾರಾಷ್ಟ್ರದಲ್ಲಿ ಮರಾಠರು, ಕರ್ನಾಟಕದಲ್ಲಿ ಲಿಂಗಾಯತರು ಸೇರಿದಂತೆ ಪ್ರಬಲ ಜಾತಿಗಳು ಮೀಸಲಾತಿಯ ಬೇಡಿಕೆ ಇಟ್ಟಿವೆ ಎಂದರು.

ಕೇಂದ್ರ ಸರ್ಕಾರ ಆರ್ಥಿಕ ದುರ್ಬಲ ವರ್ಗಗಳಿಗೆ ಈಗಾಗಲೇ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ. ಕೆಲ ಸಮುದಾಯಗಳನ್ನು ಸೇರಿಸುವ ಚಿಂತನೆಯೂ ಇದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಾತಿ ಗಣತಿ ಕುರಿತು ನಿರಂತರವಾಗಿ ಆಗ್ರಹ ಮಾಡುತ್ತಿದ್ದಾರೆ. ಅವರದೇ ಸರ್ಕಾರ 10 ವರ್ಷಗಳು ಆಡಳಿತ ನಡೆಸುವಾಗ ಏಕೆ ಸುಮ್ಮನಿದ್ದರು? ರಾಜಕೀಯ ಕಾರಣಗಳಿಗಾಗಿ ಧ್ವನಿ ಎತ್ತುವುದರಿಂದ ಸಾಮಾಜಿಕ ನ್ಯಾಯ ಕೊಡಿಸಲು ಸಾಧ್ಯವಿಲ್ಲ ಎಂದರು.

ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಯ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಉದ್ಯೋಗದಲ್ಲೂ ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತು ಚಿಂತನೆ ನಡೆಸಿದೆ. ಇಂತಹ ನಿರ್ಧಾರಗಳು ಮಹಿಳಾ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದರು.

Leave a Reply