ಬೆಂಗಳೂರು: ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ನಮಗೆ ಮುಖ್ಯವಲ್ಲ, ನಮ್ಮ ರಾಜ್ಯದ ಜನರಿಗೆ ಅನುಕೂಲವಾಗಬೇಕು, ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾಡಿದ ಅವರು, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯು.ಪಿ.ಎ ಸರ್ಕಾರವಿದ್ದಾಗ ಗ್ಯಾಸ್ ಬೆಲೆ ರೂ.414 ಇತ್ತು, ಇಂದು ಗ್ಯಾಸ್ ಬೆಲೆ ರೂ.980 ಆಗಿದೆ. ಕೊರೊನಾದಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡ, ಮಧ್ಯಮ ವರ್ಗದ ಜನರು ಹೇಗೆ ಬದುಕಬೇಕು? ಎಂದು ಪ್ರಶ್ನಿಸಿದರು.
ಜನ ಬೀದಿಗಿಳಿಯದಿದ್ದರೂ ಜನರ ಪರವಾಗಿ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಮ್ಮೆ ಸಾಮಾಜಿಕ ಜಾಲತಾಣದ ಕಡೆಗೆ ಕಣ್ಣು ಹಾಯಿಸಿದ್ರೆ ಜನರ ಆಕ್ರೋಶ ಎಷ್ಟಿದೆ ಎಂಬುದು ಗೊತ್ತಾಗುತ್ತೆ ಎಂದರು.
1973ರಲ್ಲಿ ಪೆಟ್ರೋಲ್ ಬೆಲೆಯೇರಿಕೆ ವಿರೋಧಿಸಿ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಎತ್ತಿನಗಾಡಿ ಮೇಲೆ ಸಂಸತ್ ಭವನಕ್ಕೆ ಬಂದಿದ್ದರು. ಅಂದು ಜನ ವಾಜಪೇಯಿ ಅವರಿಗೆ ನೀವು ಹೋರಾಟ ಮಾಡಿ ಎಂದಿದ್ದರಾ? ಎಂದು ಅವರು ಪ್ರಶ್ನಿಸಿದರು.
ಗ್ಯಾಸ್ ಬೆಲೆಯೇರಿಕೆ ವಿರೋಧಿಸಿ ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತು ಪ್ರತಿಭಟಿಸುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಈಗೆಲ್ಲಿದ್ದಾರೆ? ಜನರಿಗೆ ಆಗುತ್ತಿರುವ ಅನ್ಯಾಯ ನೋಡಿಯೂ ಮಾತನಾಡಲಾಗದಂತ ಹುದ್ದೆಯಲ್ಲಿ ಅವರಿದ್ದರೆ ಆ ಹುದ್ದೆಯಲ್ಲಿ ಮುಂದುವರೆಯುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಕಿಡಿಕಾರಿದರು.




