ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳಿಸಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಇದಕ್ಕೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದೊಂದು ಕ್ಷೇತ್ರಕ್ಕೂ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ. ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಕ್ಷೇತ್ರಕ್ಕೂ ಹೆಸರು ಅಂತಿಮಗೊಂಡಿಲ್ಲ. ಇದು ಹಾಲಿ ಸಂಸದರಿಗೂ ಅನ್ವಯವಾಗುತ್ತದೆ ಎಂದರು.
ರಾಜ್ಯ ಘಟಕ, ಸ್ಥಳೀಯ ಘಟಕಗಳು ಮತ್ತು ಕ್ಷೇತ್ರಗಳ ಉಸ್ತುವಾರಿಗಳಿಂದ ಪಟ್ಟಿ ವರದಿ ತರಿಸಿಕೊಂಡು ಸಂಭಾವ್ಯರ ಪಟ್ಟಿ ಸಿದ್ದಪಡಿಸಿದೆ. ಈ ಬಗ್ಗೆ ಹಿರಿಯ ನಾಯಕ ಅಮಿತ್ ಶಾ ಅವರ ಜೊತೆ ಚರ್ಚೆ ನಡೆಸಲಾಗುವುದು ಎಂದರು.
ತಿಂಗಳ 9 ಮತ್ತು 10ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 10ರಂದು ಅವರು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಕ್ಲಸ್ಟರ್ ಸಭೆ ನಡೆಸಲಿದ್ದಾರೆ. ನಾವು ರಾಜ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಇದನ್ನು ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಬಳಿಕವಷ್ಟೇ ಯಾರು ಎಲ್ಲಿಗೆ ಸ್ಪರ್ಧೆ ಎಂಬುದು ಅಂತಿಮವಾಗಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದೆ. ಜನರ ಮೂಗಿಗೆ ಗ್ಯಾರಂಟಿ ಎಂಬ ತುಪ್ಪ ಸವರಿ ಗೆದ್ದು ಬಂದಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಲಾಟರಿನೋ ಅಥವಾ ಬಂಪರೋ ಗೊತ್ತಾಗುತ್ತದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ಜನ ಮಾತ್ರವಲ್ಲ ಜಾನುವಾರುಗಳು ಸರ್ಕಾರಕ್ಕೆ ಶಾಪ ಹಾಕುತ್ತಿವೆ. ಜನರ ಕೋಪ ಮಾತ್ರವಲ್ಲ, ಜಾನುವಾರುಗಳ ಕೋಪಕ್ಕೆ ರಾಜ್ಯ ಸರ್ಕಾರ ಬಲಿಯಾಗಿದೆ ಎಂದರು.
ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದರು. ಅದರ ಪರಿಣಾಮ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ 80-85 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈ ಸರ್ಕಾರ 716 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದೆ. ಇದರ ಪರಿಣಾಮ 80-85 ಲಕ್ಷ ಲೀಟರ್ ಹಾಲು ಸಂಗ್ರಹಣೆ ಆಗುತ್ತಿತ್ತು. ಈಗ 10 ಲಕ್ಷ ಲೀಟರ್ ಗೆ ಇಳಿದಿದೆ ಎಂದರು.
ರೈತರ ಪ್ರೋತ್ಸಾಹ ಧನ ಉಳಿಸಿಕೊಂಡ ಪಾಪದ ಸರ್ಕಾರ ಇದು. ಮಾನ ಮಾರ್ಯಾದೆ ಇದ್ದರೇ ಬಾಕಿ ಉಳಿಸಿಕೊಂಡಿರುವ ಕೂಡಲೇ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂದರು.




